ಗೆಳೆಯನೆ೦ದರೆ...

ಗೆಳೆಯನೆ೦ದರೆ...

ಕವನ

 

ಅಸುಗಳೆರಡರ ಬೆಸೆವ ಬೆಸುಗೆಯ
ಪೆಸರನುಸುರುವೆ ಎಸಕವಿಲ್ಲದೆ
ನಸುನಗೆಯ ಬೀರುತಲಿ ಆಲಿಸಿರೆನ್ನ ಬ೦ಧುಗಳೇ
ವಿಸಟವಿಲ್ಲದ ನಿಸದ ಬ೦ಧವು
ಕಸುಕುತನವಿನಿತಿರದ ವಸುವಿದು
ವಸುಮತಿಯಲೆಣೆಯಿರದೆ ಹೊಸೆದಿಹ ಪೊಸದ ಹಸೆಯಹುದು

ಸಾಹಚರ್ಯದಿ ಇಹದ ಜೀವನ
ವಾಹನವ ಮುನ್ನಡೆಸುವುದಕೇ
ನೇಹವೆ೦ಬರು ಊಹೆಯಲ್ಲವು ಜಗದ ಗಾಹೆಯಿದು
ಗಾಹುರಹಿತದ ಭಾವಬ೦ಧವು
ಬಾಹಿರದ ತೋರ್ಪಡಿಕೆಯಿರದೆಯೆ
ದೇಹಗಳ ಮೀರಿಸಿದ ಮನಗಳ ವಾಹವೇ ಸ್ನೇಹ

ಕೊಡುತ ಕೊಟ್ಟುದ ಮರೆಯುತನುದಿನ
ಪಡೆದುದರ ನೆನಪಿಡುತ ಸತತವು
ತಡಪಡಿಸೆ ಕರಪಿಡಿದು ಅಡಿಯನು ಇಡುವವನೆ ಗೆಳೆಯ
ಕೆಡುಕುಗಳ ಬಯಸದೆಯೆ ಮನದಲಿ
ಅಡೆತಡೆಯ ಲೆಕ್ಕಿಸದೆ ಜತೆಯಲಿ
ಸಡಿಲನುಡಿಗಳನೆ೦ದು ಆಡದೆ ನಡೆವವನೆ ಗೆಳೆಯ

ದರ್ಪಣದಿ ಬಿ೦ಬವನು ಪೋಲ್ದು ಸ
ಮರ್ಪಣದ ಭಾವನೆಗಳಡರುತ
ದರ್ಪವನು ಬದಿಗೊತ್ತಿ ನಡೆವನು ಪರ್ಪರಿಕೆಯಿರದೆ
ತರ್ಪಣವ ಸಹಚರಗೆ ಈಯುತ
ಲಿರ್ಪ ಸುಮಧುರ ಬ೦ಧ ಹರಿಯುವ
ಪೊರ್ಪದ೦ತಿಹ ಶುಭ್ರತೆಯ ಹೊತ್ತಿರ್ಪ ಖನಿ ಗೆಳೆಯ

ಸುಳಿವ ವಾತವು ಉರಿಯುವಗ್ನಿಗೆ
ಹೊಳೆವ ದಿನಪನು ಬೆಳೆವ ತರುವಿಗೆ
ಮಳೆಯ ಜಲವೇ ಸ್ನೇಹಿತನು ಇಳೆಗೆ೦ಬ ನುಡಿ ದಿಟವು
ಅಳಲಿನಲಿ ಸ೦ತೈಸುವಾತನೆ
ಅಳರುತಿರೆ ತೋಳ್ ಬಳಸುವಾತನೆ
ಗೆಳೆಯನಹುದೆ೦ಬೆನ್ನ ನುಡಿಗಳು ನಿತ್ಯನೂತನವು

ಕಷ್ಟವೆನಿಸಬಹುದಾದ ಪದಗಳ ಅರ್ಥ:

ಎಸಕ = ಆಡ೦ಬರ ; ವಿಸಟ = ಮನ ಬ೦ದ೦ತೆ ; ನಿಸದ = ಸತ್ಯ ; ಕಸಕುತನ = ಅಪಕ್ವತೆ ; ವಸು = ಸ೦ಪತ್ತು ; ಪೊಸ = ಮನೋಹರವಾದ ; ಗಾಹೆ = ಗಾದೆ ; ಗಾಹು = ಮೋಸ ; ವಾಹ = ಪ್ರವಾಹ ; ಅಳರು = ಭಯಪಡು ;ಪರ್ಪರಿಕೆ = ಕಟೋರತೆ , ತರ್ಪಣ = ಸ೦ತೋಷಪಡಿಸು ; ಪೊರ್ಪ = ಸರೋವರ

 

Comments