ಗೆಳೆಯ ಹೇಳಿದ ರಜನಿ ಕತೆಗಳು...
ರಜನಿ ಗೆಳೆಯರ ಬಳಗ ದೊಡ್ಡದು. ಬಾಲ್ಯದ ಗೆಳೆಯರ ದಂಡು ಚಿಕ್ಕದೇನಲ್ಲ. ಬಾಲ್ಯದ ಬೆಂಗಳೂರು ದಿನಗಳು ಅದ್ಭುತ. ಗೆಳೆಯ ಚಂದ್ರಶೇಖರ್ ಆ ದಿನಗಳ ಬಾಲ್ಯದ ಗೆಳೆಯ. ಹುಲಿ ಬಂದು ಹುಲಿ ಚಿತ್ರ ಮಾಡಿದ್ದ ಈ ಚಂದ್ರು, ಹುಲಿ ಚಂದ್ರಶೇಖರ ಅಂತಲೇ ಹೆಸರುವಾಸಿ. ಗಾಂಧಿನಗರದ ಮಂದಿಗೆ ಚಂದ್ರು, ಹುಲಿ ಚಂದ್ರಶೇಖರ್ ಅಂತಲೇ ಪರಿಚಿತ. ಇನ್ನು ಇವರನ್ನ ಸಂದರ್ಶಿಸೋ ಅವಕಾಶ ನನಗೂ ಒದಗಿ ಬಂದಿತ್ತು. ಡಿಸೆಂಬರ್ 12ಕ್ಕೆ ರಜನಿಕಾಂತ್ ಹುಟ್ಟುಹಬ್ಬ. ಅದರ ಪ್ರಯುಕ್ತ, ರಜನಿ ಗೆಳೆಯರಾದ ಚಂದ್ರು ಅವರನ್ನ ಸಂದರ್ಶಿಸಿದ್ದೆ. ಆಗ ಹೊರ ಬಂದ ಒಂದಷ್ಟು ರೋಚಕ ಕತೆಗಳು ಮನಸ್ಸಿಗೆ ತುಂಬಾ ಹಿಡಿಸಿದವು. ಅವುಗಳನ್ನ ಗೆಳೆಯರ ಮುಂದೆ ಹೇಳಿದೆ. ಈಗ ಬರೆಯಬೇಕು ಅನಿಸಿತು. ಅದಕ್ಕೇನೆ ಇಲ್ಲಿ ಬರೆಯುತ್ತಿದ್ದೇನೆ. ನಿಮಗೂ ಇಷ್ಟವಾಗಬಹುದು. ಒಂದೊಂದಾಗಿ ಇಲ್ಲಿ ಬರೀತಾ ಹೋಗುತ್ತೇನೆ. ನೀವೂ ಓದುತ್ತಾ ಹೋಗಿ...
1.ರಜನಿ ಮತ್ತು ರಜನಿ ಸ್ಟೈಲ್...
ರಜನಿಕಾಂತ್ ಮೂಲ ಹೆಸ್ರು ಶಿವಾಜಿ. ಅಡ್ಡ ಹೆಸ್ರು ಗಾಯಕವಾಡ್. ಎಲ್ಲರಿಗೂ ಈ ಸಂಗತಿ ತಿಳಿದಿರೋದೇ. ಆದ್ರೆ, ಈ ಶಿವಾಜಿಯ ಈಗಿನ ಸ್ಟೈಲ್ ಆಗಲೆ ಮೈಗೂಡಿಕೊಂಡಿತ್ತು. ಅದನ್ನ ಹುಲಿ ಚಂದ್ರ ಶೇಖರ್ ತುಂಬಾ ಚೆನ್ನಾಗಿ ವರ್ಣಿಸಿದ್ದರು. ಒಮ್ಮೆ ನಾಯ್ಡು ಬಾರ್ ನಲ್ಲಿ ಶಿವಾಜಿ ಹಾಗೂ ಹುಲಿ ಚಂದ್ರು ಮಾತನಾಡುತ್ತ ಕುಳಿತ್ತದ್ದರು. ಆಗ ಶಿವಾಜಿ ಸಿಗರೇಟನ್ನ ಸ್ಟೈಲ್ ಆಗಿ ತುಟಿಗಿಟ್ಟುಕೊಂಡ್ರು. ಅದೇ ವೇಳೆ ಕಡ್ಡಿ ಗೀರಬೇಕಲ್ಲ. ಅದನ್ನೂ ಅಷ್ಟೇ ಗತ್ತಿನಲ್ಲಿ ಸ್ಟೈಲ್ ಆಗಿಯೇ ಮಾಡಿದ್ರು. ಇದನ್ನ ದಿನವೂ ನೋಡುತ್ತಿದ್ದ ಚಂದ್ರು, ಇದರಿಂದ ಏನೂ ಉಪಯೋಗವಿಲ್ಲ, ಬಿಟ್ಟು ಬಿಡು. ಸಿನಿಮಾದಲ್ಲಿ ಕೆಲಸ ಮಾಡೋದಾದ್ರೆ, ಇದು ಉಪಯೋಗಕ್ಕೆ ಬರೋದಿಲ್ಲ ಅಂತ ಶೆರಾ ಬರೆದು ಬಿಟ್ಟರು. ಆದ್ರೆ, ಇದೇ ಈಗ ರಜನಿ ಬ್ರ್ಯಾಂಡ್ ಆಗಿದೆ..
2.ರಜನಿ ಕಳೆದುಕೊಂಡ ಮೊದಲ ಅವಕಾಶ...
ರಜನಿಯ ಇನ್ನೊಂದು ಪ್ರಸಂಗ ಚೆನ್ನಾಗಿದೆ. ರಜನಿ ನಮ್ಗೆ ಗೊತ್ತಿರೋ ಹಾಗೆ ಸ್ಟೈಲ್ ಕಿಂಗ್. ಇದೇ ಸ್ಟೈಲೇ ಮುಳುವಾದ ಸಂಗತಿ ಇದು. ಇದನ್ನ ಸ್ವತ: ಚಂದ್ರು ಹೇಳ್ತಾ ಹೋದ್ರು. ಒಮ್ಮೆ ಅದೇ ಬಾರ್ ನಲ್ಲಿ ಎಂದಿನಂತೆ ಶಿವಾಜಿ ಜೊತೆಗೆ ಕುಳಿತಿದ್ದರು. ತಟ್ಟನೇ ಒಂದು ಕತೆ ಹೇಳಿದ್ರು. ಮನುಷ್ಯರನ್ನ ತಿನ್ನೋ ಹುಲಿ ಕತೆ ಅದು. ಆ ಕತೆಯಲ್ಲಿ ಬರೋ ಬೇಟೆಯಾಡೋ ನಾಯಕ ನೀನೆ. ಆ ಚಿತ್ರಕ್ಕೆ ನೀನೇ ಹೀರೋ ಅಂದು ಬಿಟ್ಟರು...ಆ ಮೇಲೆ ಆದದ್ದು ಎಲ್ಲವೂ ಕತೆ ಮತ್ತು ವ್ಯಥೆ...
ಚಂದ್ರು ಕತೆ ಹೇಳಿದ ಬಳಿಕ ಶಿವಾಜಿನೇ ಹೀರೋ ಅಂದು ಕೊಂಡ್ರು. ಕಲ್ಪಿಸಿಕೊಂಡ್ರು. ದಿನವೂ ನೋಡುತ್ತಿದ್ದ ಸಿಗರೇಟ್ ಸ್ಟೈಲು, ಕಡ್ಡಗೀರೋ ಸ್ಟೈಲು, ತುಂಬಾನೇ ಹೆಚ್ಚಾಗುತ್ತಲೇ ಇತ್ತು. ಇದರಿಂದ ತಮ್ಮ ಕತೆಯ ಬೇಟೆಗಾರನ ಕತೆಗೆ ಶಿವಾಜಿ ಹೊಂದೋದಿಲ್ಲ ಅನ್ನೋ ಅನುಮಾನ ಚಂದ್ರು ಅವರನ್ನ ಕಾಡಲಾರಂಭಿಸಿತು. ಆಗ ತಟ್ಟನೇ ಮನಸ್ಸನ್ನು ಬದಲಿಸಿದ್ರು. ಆ ಜಾಗಕ್ಕೆ ರಾಮಕೃಷ್ಣ ಅವರನ್ನ ಬೇಟೆಗಾರನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡ್ರು. ಹೀಗೆ ಅತೀಯಾದ ರಜನಿ ಮ್ಯಾನರಿಸಂ ಆರಂಭದಲ್ಲಿಯೇ ಸರಿಯಾಗಿಯೇ ಕೈಕೊಟ್ಟಿತ್ತು...
3.ರಜನಿ ನಡೆಯೋ ಸ್ಟೈಲ್...
ರಜನಿಕಾಂತ್ ನಡೆದು ಬರೋ ಗತ್ತು ಆಗಲೇ ಇತ್ತು. ಯೌವ್ವನದಲ್ಲಿ ರಜನಿಕಾಂತ್ ಮನೆಯಿಂದ ಹೊರ ಬಂದ್ರೆ ಮುಗಿತು. ರೋಡ್ ನಲ್ಲಿ ಎಲ್ಲರೂ ಈ ರಜನಿಯನ್ನೆ ನೋಡಬೇಕು ಹಾಗಿತ್ತು ರಜನಿಯ ನಡೆದು ಬರೋ ಶೈಲಿ. ಒಮ್ಮೆ ಚಂದ್ರು ಅವ್ರ ಹತ್ತಿರ ರಜನಿ ನಡೆದು ಬರುತ್ತಿದ್ದರು. ಆಗ ರಜನಿಯ ಶರ್ಟ್ ನ ಮೇಲಿನ ಗುಂಡಿ ಓಪನ್ ಆಗಿದ್ದವು ಈಗ ನಾವು ಸಿನಿಮಾದಲ್ಲಿ ನೋಡೋ ಆ ವಕ್ರ ನಡಿಗೆಯ ಸ್ಟೈಲ್ ನಲ್ಲಿ ಚಂದ್ರು ಬಳಿ ರಜಿನಿ ಉರ್ಫು ಶಿವಾಜಿ ನಡೆದು ಬರುತ್ತಿದ್ದರು. ಆ ಮೇಲೆ ಏನೂ. ಅದು ಹಾಗೆ ಮುಂದುವರೆದಿತ್ತು. ಶಿವಾಜಿ ಅಂದ್ರೆ, ಇರೋದೇ ಹೀಗೆ ಅನ್ನೋ ಮಟ್ಟಿಗೆ ರಜನಿ ಬದುಕಿದ್ದರು..
-ರೇವನ್ ಪಿ.ಜೇವೂರ್
Comments
ರೇವನ್ ಪಿ.ಜೇವೂರ್,
In reply to ರೇವನ್ ಪಿ.ಜೇವೂರ್, by ಗಣೇಶ
ರೇವನ್ ಅವ್ರೆ-
ರಜನಿ ಕಥೆಗಳು ಚೆನ್ನಾಗಿವೆ.