ಗೇರು ಬೆಳೆಯಲ್ಲಿ ಕಾಂಡಕೊರಕ ಹುಳುವಿನ ಪತ್ತೆ ಮತ್ತು ನಿಯಂತ್ರಣ
ಗೇರು ಬೆಳೆಯುವವರ ತೋಟದಲ್ಲಿ ಮಳೆಗಾಲ ಬಂದಾಗ ಕೆಲವು ಸಸಿಗಳ ಹಾಗೂ ಮರಗಳ ಎಲೆ ಹಳದಿಯಾಗಲು ಪ್ರಾರಂಭವಾಗುತ್ತವೆ. ಮಳೆ ಬಂದಾಕ್ಷಣ ಎಲೆಗಳು ಹಸಿರಾಗುವ ಬದಲು ಹಳದಿಯಾಗುವ ಚಿನ್ಹೆ ಉಂಟಾಗಲು ಕಾರಣ ಮರದ ಕಾಂಡಕ್ಕೆ ಬಾಧಿಸುವ ಕಾಂಡ ಕೊರಕ ಹುಳು. ಗೇರು ಬೆಳೆ ಬೆಳೆಯಲು ತುಂಬಾ ಸುಲಭವೆಂದು ಕಂಡರೂ ವಾಸ್ತವ ಹಾಗಿಲ್ಲ. ಅದಕ್ಕೆ ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆಯನ್ನು ಮಾಡುತ್ತಲೇ ಇರಬೇಕು. ಆಗ ಮಾತ್ರ ಅದರಲ್ಲಿ ಗರಿಷ್ಟ ಇಳುವರಿ ಪಡೆಯಲು ಸಾಧ್ಯ. ನಿರ್ಮಹಣೆ ಸರಿಯಾಗಿ ಮಾಡದೇ ಹೋದರೆ ಗುಡ್ದೆಯಲ್ಲಿ, ರಸ್ತೆ ಬದಿಗಳಲ್ಲಿ ಬೆಳೆದ ಗೇರು ಮರದಂತೆ ಇಳುವರಿ ಇರುವುದಿಲ್ಲ.
ಸಾಮಾನ್ಯವಾಗಿ ಕೆಲವೊಂದು ಮರಮಟ್ಟುಗಳಿಗೆ ಕಾಂಡ ಮತ್ತು ಬೇರನ್ನು ಕೊರೆಯುವ ಹುಳದ ಉಪಟಳ ಇರುತ್ತದೆ. ಅದೇ ರೀತಿ ಬೆಳೆಯಾಗಿ ಬೆಳೆಸಲ್ಪಡುವ ಗೇರುವಿಗೂ ಇದೆ. ಇದು ಮರವನ್ನೇ ಕೊಲ್ಲುವಂತಹ ಅಧಿಕ ಹಾನಿ ಮಾಡುವ ಕೀಟವಾಗಿದೆ. ಅನೇಕ ಪ್ರಭೇದಗಳ ಬೇರು ಮತ್ತು ಕಾಂಡ ಕೊರೆಯುವ ಹುಳುಗಳು ಬೇರಿಗೆ- ಕಾಂಡಕ್ಕೆ ತೊಂದರೆ ಮಾಡುತ್ತವೆಯಾದರೂ ಅದರಲ್ಲಿ ಪ್ಲೋಸಿಡಿರಸ್ ಫೆರುಜಿನಿಯಸ್ ಪ್ರಬೇಧಕ್ಕೆ ಸೇರಿದ ಕೀಟ ಹೆಚ್ಚು ಹಾನಿ ಮಾಡುವಂತದ್ದು. ಇದರಿಂದಾಗಿ ಒಟ್ಟಾರೆ ಗೇರು ತೋಟದಲ್ಲಿ ಶೇ.೧೦ -೧೫ ರಷ್ಟು ಹಾನಿ ಎನ್ನಬಹುದಾದರೂ, ಫಲ ಕೊಡುತ್ತಿರುವ ಮರವೇ ಸಾಯುವ ಕಾರಣ ಇದು ದೊಡ್ಡ ಪ್ರಮಾಣದ ನಷ್ಟ ಎನ್ನಬಹುದು.
ಇದರ ಪ್ರೌಢ ಕೀಟಗಳು ಗಾಢ ಕಂದು ಬಣ್ಣಕ್ಕಿರುತ್ತವೆ. ಇದರ ಮೀಸೆಗಳು ದೇಹದಷ್ಟು ಉದ್ದವಾಗಿರುತ್ತದೆ. ಸಾಮಾನ್ಯವಾಗಿ ದುಂಬಿಗಳು ಕಾಣಲು ಸಿಗುವುದಿಲ್ಲ. ರಾತ್ರೆಯ ವೇಳೆ ಹೆಣ್ಣು ಕೀಟಗಳು ಗೇರಿನ ಕಾಂಡದ ಮೇಲೆ ಒಂದು ಮೀಟರು ಎತ್ತರದವರೆಗೂ ತೊಗಟೆಯ ಸಂದುಗಳ ಎಡೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಮಾಸಲು ಬಿಳಿ ಬಣ್ಣದಲ್ಲಿದ್ದು ಅನ್ನದ ಅಗಳಿನಂತಿರುತ್ತದೆ. ಬರೇ ಕಾಂಡ ಅಲ್ಲದೇ ನೆಲದಿಂದ ಮೇಲೆ ಬಂದ ಬೇರಿನ ತೊಗಟೆ ಸಂದುಗಳಲ್ಲೂ ಮೊಟ್ಟೆ ಇಡುತ್ತವೆ. ಪ್ರೌಢ ಕೀಟಗಳು ನೇರವಾಗಿ ಬೆಳೆಯನ್ನು ಹಾನಿ ಮಾಡುವುದಿಲ್ಲ. ಆದರೆ ಮೊಟ್ಟೆಯಿಂದ ಹೊರಬರುವ ಮರಿ ಕೀಟಗಳು ತೊಗಟೆಯ ಕೆಳಗೆ ಅಡ್ಡಾದಿಡ್ಡಿಯಾಗಿ ಸುರಂಗಗಳನ್ನು (ತೂತು) ಕೊರೆದು ಅಂಗಾಂಶವನ್ನು ತಿನ್ನುತ್ತವೆ. ಇದರಿಂದ ಬಾಧೆಗೊಳಗಾದ ಮರದ ಕೆಳಭಾಗದ ಕಾಂಡ ಮತ್ತು ಬುಡದ ಭಾಗದಲ್ಲಿ ಕೆಲವೊಮ್ಮೆ ಮೇಲೆ ಕಾಣಿಸುವ ಬೇರಿನ ಮೇಲೂ ಕಂದು ಬಣ್ಣದ ಅಂಟು ದ್ರವ ಮತ್ತು ಮರದ ಹುಡಿ ಹೊರ ಬೀಳುತ್ತಿರುತ್ತದೆ. ಬಾಧೆ ತೀವ್ರವಾದಾಗ ಬುಡ ಭಾಗದ ತೊಗಟೆಯೂ ಸಹ ಕಾಂಡದಿಂದ ಬೇರ್ಪಟ್ಟಂತೆ ಕಾಣುತ್ತದೆ. ಇದರಿಂದಾಗಿ ಮರದ ಎಲೆ ಮತ್ತು ಮೇಲಿನ ಭಾಗಕ್ಕೆ ಆಹಾರ ಮತ್ತು ನೀರು ಪೂರೈಕೆ ಕಡಿಮೆಯಾಗಿ ಎಲೆ ಹಳದಿಯಾಗಿ ಉದುರಲು ಪ್ರಾರಂಭವಾಗುತ್ತದೆ. ಬೆಳೆದ ಮರಿ ಕೀಟಗಳು (ಗ್ರಬ್) ಮುಖ್ಯ ಕಾಂಡವನ್ನು ಕೊರೆದು ಪ್ರವೇಶ ಮಾಡಿ ಅಲ್ಲಿನ ಅಂಗಾಂಶಗಳನ್ನು ಕೊರೆದು ಸುರಂಗವನ್ನು ಮಾಡುತ್ತವೆ. ಇದರಿಂದ ನೀರು, ಪೋಷಕಾಂಶ ಕಡಿಮೆಯಾಗಿ ಮರ ಸೊರಗುತ್ತದೆ. ಮರದ ರೆಂಬೆಗಳು ಒಣಗುತ್ತಾ ಕೊನೆಗೆ ಮಳೆ ಗಾಳಿಗೆ ಮರ ಉರುಳಿ ಬೀಳುತ್ತದೆ. ಮರಕ್ಕೆ ಹುಳದ ಪ್ರವೇಶ ಆದ ನಂತರ ಅದರಲ್ಲಿ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ.
ಕೀಟ ಪ್ರವೇಶವಾಗಿ ಅದು ವರ್ಷವಿಡೀ ಮರದ ಒಳಗಡೆ ಇರುತ್ತದೆಯಾದರೂ ಮಳೆಗಾಲದ ಪೂರ್ವದಲ್ಲಿ ಎಪ್ರಿಲ್- ಮೇ ತಿಂಗಳಲ್ಲಿ ತನ್ನ ಚಟುವಟಿಕೆಯನ್ನು ತೀವ್ರಗೊಳಿಸುತ್ತವೆ. ಮಳೆಗಾಲ ಪ್ರಾರಂಭಕ್ಕೆ ಮುನ್ನ ಕಾಂಡದ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಮಳೆಗಾಲ ಬಂದಾಕ್ಷಣ ಮರದಲ್ಲಿ ಎಲೆಗಳು ಹಚ್ಚ ಹಸಿರಾಗುವ ಬದಲು ಹಳದಿಯಾಗುತ್ತಾ ಬರುತ್ತದೆ.
ಇದು ಸಾಮಾನ್ಯವಾಗಿ ೧೦ ವರ್ಷ ಮೇಲ್ಪಟ್ಟ ಮರಗಳಿಗೆ ಜಾಸ್ತಿ. ಕೆಲವು ಕಡೆ ಎಳೆ ಪ್ರಾಯದ ಮರಗಳಿಗೂ ಬಾಧಿಸುವುದುಂಟು. ಬಾಧೆಗೊಳಗಾದ ಮರಗಳ ಬುಡದ ಕಾಂಡವನ್ನು ಸೀಳಿದಾಗ ನೂರಕ್ಕೂ ಹೆಚ್ಚು ಮರಿ ಕೀಟಗಳು ಇರುವುದನ್ನು ಕಾಣಬಹುದು.
ಈ ಕೀಟದ ಹಾನಿ ಮರದ ಕಾಂಡ ಒಳಗೇ ಇರುವ ಕಾರಣ ಗೋಚರಕ್ಕೆ ಬರುವುದು ನಿಧಾನ. ಸಕಾಲದಲ್ಲಿ ಗುರುತಿಸಿದರೆ ಮಾತ್ರ ಯಶಸ್ವಿಯಾಗಿ ಚಿಕಿತ್ಸೆ ಮಾಡಬಹುದು. ಮುಂಜಾಗ್ರತೆ ಕ್ರಮಗಳಿಂದ ನಿವಾರಣೆ ಕೈಗೊಳ್ಳುವುದು ಉತ್ತಮ.
* ಗೇರು ಮರಗಳ ಕಾಂಡದ ಬುಡಕ್ಕೆ ಸುಮಾರು ೧ ಮೀಟರು ಎತ್ತರದವರೆಗೆ ಪ್ರತೀ ವರ್ಷ ೫೦ ಗ್ರಾಂ ಕಾರ್ಬಾರಿಲ್ ಅಥವಾ ಡೈಮಿಥೋಯೇಟ್ ಮತ್ತು ೫೦ ಗ್ರಾಂ ಕಾಪರ್ ಆಕ್ಸೀ ಕ್ಲೋರೈಡ್ ಸೇರಿಸಿ ಮಿಶ್ರಣ ಮಾಡಿ ಅದನ್ನು ಮರದ ಕಾಂಡ ಭಾಗಕ್ಕೆ ಲೇಪನ ಮಾಡಬೇಕು.
* ಗೇರು ಮರದ ಸುತ್ತ, ಹಲಸು, ಬೂರುಗ, ನುಗ್ಗೆ ಮುಂತಾದ ಕೀಟಕ್ಕೆ ಆಸರೆ ನೀಡುವ ಸಸ್ಯಗಳನ್ನು ಬೆಳೆಸಬಾರದು.
* ಗೇರು ತೋಟವನ್ನು ಯಾವಾಗಲೂ ಸ್ವಚ್ಚವಾಗಿಡಬೇಕು. ಸಮರ್ಪಕವಾಗಿ ಗೊಬ್ಬರ ಇತ್ಯಾದಿ ನೀಡುತ್ತಾ, ಟೀ - ಸೊಳ್ಳೆಗೆ ಔಷಧಿ ಸಿಂಪಡಿಸುವಾಗ ಬುಡ, ಕಾಂಡಕ್ಕೂ ಸಿಂಪರಣೆ ಮಾಡಬೇಕು.
* ಗೇರು ತೋಟದಲ್ಲಿ ಸಂಚರಿಸುವಾಗ ಮರದ ಎಲೆಯನ್ನು ಗಮನಿಸುವಾಗ ಬುಡವನ್ನೂ ಪರಿಶೀಲಿಸುತ್ತಿರಬೇಕು.
* ಗೇರು ತೋಟಗಳಲ್ಲಿ ಬಾಧೆಗೊಳಗಾದ ಮರವನ್ನು ಕಡಿದು ದೂರ ಸಾಗಿಸಿ ವಿಲೇವಾರಿ ಮಾಡಬೇಕು.
* ನೆಲದಲ್ಲಿ ಉಳಿಯುವ ಅದರ ಕಾಂಡವನ್ನು ಕೀಟನಾಶಕದ ಉಪಚಾರ ಮಾಡಿ ಅದರಲ್ಲಿ ಉಳಿದ ಹುಳಗಳನ್ನು ನಾಶಮಾಡುವುದು ತುಂಬಾ ಅಗತ್ಯ.
* ಗೇರು ಮರಗಳ ಬುಡಕ್ಕೆ ಫೋರೇಟ್ ಹರಳನ್ನು ಹಾಕುವುದರಿಂದ ಕೀಟ ಕಡಿಮೆಯಾಗುತ್ತದೆ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ