ಗೇರು ಹೂವು ಒಣಗಲು ಕಾರಣವೇನು?

ಗೇರು ಹೂವು ಒಣಗಲು ಕಾರಣವೇನು?

ಸಾಮಾನ್ಯವಾಗಿ ಎಲ್ಲರೂ ಈ ಕಾಲದಲ್ಲಿ ಮೋಡ ಉಂಟಾದರೆ ಮಾವಿನ- ಗೇರಿನ ಹೂವು ಕರಟುವುದಕ್ಕೇ ಆಗಿದೆ ಎಂದು ಮಾತಾಡಿಕೊಳ್ಳುತ್ತಾರೆ. ವಾಸ್ತವವಾಗಿ ಮೋಡದಿಂದ ಹೂವು ಕರಟುವುದಲ್ಲ. ಮೋಡ ಕವಿದ ವಾತಾವರಣದಲ್ಲಿ ತೊಂದರೆ ಕೊಡುವ ಕೀಟ ಮತ್ತು ರೋಗ ಕಾರಕಗಳು ಹೆಚ್ಚು ಕ್ರಿಯಾತ್ಮಕವಾಗುವ ಕಾರಣ ಮೋಡ ಬಂದ ಸಮಯದಲ್ಲಿ ಹೂವು ಕಾಯಿಕಚ್ಚದೆ ಒಣಗಿಹೋಗುತ್ತದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಗೇರು ಹೂವು ಬಿಡಲು ಪ್ರಾರಂಭವಾಗುತ್ತದೆ. ಈಗೀಗ ಚಳಿಗಾಲ ತಡವಾಗಿ ಪ್ರಾರಂಭವಾಗುತ್ತಿದೆ. ಚಳಿ ಬಿದ್ದ ನಂತರ ಹೂವು ಬಿಡುವಿಕೆಗೆ ಅನುಕೂಲವಾಗಿದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಚಳಿ ವಾತಾವರಣ ಇದ್ದರೆ ಹೆಚ್ಚು ಹೂವು ಬಿಡಲು ಅನುಕೂಲವಾಗುತ್ತದೆ. 

ಗೇರು ಬೆಳೆಗೆ ಹೂ ಬಿಡುವ ಸಮಯದಲ್ಲಿ ಹೂ ಒಣಗಿ ಹೋಗುವುದು ದೊಡ್ಡ ನಷ್ಟ. ಸಾಮಾನ್ಯವಾಗಿ ಒಂದು ಹೂ ಗೊಂಚಲಿನಲ್ಲಿ ೧೦೦ ಕ್ಕೂ ಹೆಚ್ಚು ಹೂವು ಇದ್ದರೂ, ಅದರಲ್ಲಿ ಗರಿಷ್ಟ ೧೦% ಮಾತ್ರ ಕಾಯಿಯಾಗುತ್ತದೆ. ಕೆಲವೆಡೆ ಅದು ೨-೩ % ಆಗುವುದೂ ಇದೆ. ಹೂವು ಅರಳುವ ಸಮಯ, ಮೋಡ ಕವಿದ ವಾತಾವರಣ ಜೊತೆ ಸೇರಿದರೆ ರಸ ಹೀರುವ ಟಿ- ಸೊಳ್ಳೆಯ ಚಟುವಟಿಕೆಗೆ ಅನುಕೂಲವಾಗಿ ಹೂವು ಫಲಿತಗೊಳ್ಳದೆ ಒಣಗುತ್ತದೆ. ಟಿ ಸೊಳ್ಳೆಯ ನಿಯಂತ್ರಣಕ್ಕೆ ಆ ಸಮಯದಲ್ಲೇ ಕ್ರಮ ಕೈಗೊಂಡರೆ ಫಲಿತಾಂಶ ಉತ್ತಮವಾಗುತ್ತದೆ. ಯಾವಾಗಲೂ ಕೀಟಗಳಿಗೆ ಔಷಧಿ ಸಿಂಪರಣೆ  ಮಾಡುವಾಗ ಅವುಗಳು ಹೆಚ್ಚಿನ  ಚಟುವಟಿಕೆಯಲ್ಲಿರುವಾಗ ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ. 

ಹೂ ಒಣಗುವುದು ಎಲ್ಲವೂ ಟಿ-ಸೊಳ್ಳೆಯೆಂಬ ಕೀಟದ ಉಪಟಳದಿಂದಲ್ಲ. ಹೂ ಗೊಂಚಲಿನಲ್ಲಿ ಗಂಡು ಮತ್ತು ದ್ವಿಲಿಂಗ ಹೂವುಗಳಿದ್ದು, ಅದರ ಆನುಪಾತ  ಸುಮಾರಾಗಿ ೯೦:೧೦ ರಷ್ಟು ಇರುತ್ತದೆ. ದ್ವಿಲಿಂಗ ಹೂವುಗಳು ಮಾತ್ರ ಫಲಿತವಾಗಿ ಕಾಯಿ ಕಟ್ಟುತ್ತದೆ. ಗಂಡು ಹೂವುಗಳು ಒಣಗುತ್ತವೆ. ಹೆಣ್ಣು + ಗಂಡು ಹೂವುಗಳ ಪ್ರಮಾಣ ಹೆಚ್ಚು ಇದ್ದಷ್ಟು ಕಾಯಿ ಕಚ್ಚುವಿಕೆ ಪ್ರಮಾಣ ಹೆಚ್ಚು. ಗೇರಿನಲ್ಲಿ ಹೆಣ್ಣು ಹೂವು ಎಂದರೆ ದ್ವಿಲಿಂಗ ಹೂವು. ಇದರಲ್ಲಿ ಗಂಡು ಹೆಣ್ಣು (ಪರಾಗ ಮತ್ತು ಶಲಾಕಾಗ್ರ) ಗಳೆರಡೂ ಇರುತ್ತವೆ. ಆದರೆ ಅದಾಗಿ ಅದು ಕಾಯಿ ಕಚ್ಚಿಕೊಳ್ಳುವುದಿಲ್ಲ. ಪ್ರಕೃತಿಯ ವೈಚಿತ್ರ್ಯವೆಂದರೆ ದ್ವಿಲಿಂಗ ಹೂವಿನಲ್ಲಿ ಗಂಡು ಭಾಗ ಕೆಳಗೂ, ಹೆಣ್ಣು ಭಾಗ (ಶಲಾಕಾಗ್ರ) ಮೇಲೂ ಇರುತ್ತದೆ. ಮೇಲೆ ಇರುವ ಶಲಾಕಾಗ್ರಕ್ಕೆ ಗಂಡು ಭಾಗದ ಪರಾಗ ಕಣ ಸ್ವಾಭಾವಿಕವಾಗಿ ಸ್ಪರ್ಶವಾಗುವುದಿಲ್ಲ. ಅದಕ್ಕೆ ಬೇರೆ ಗಂಡು ಹೂವಿನ ಪರಾಗ ಮಿಶ್ರ ಪರಾಗಸ್ಪರ್ಷದ ಮೂಲಕ ತಗಲಲೇ ಬೇಕು. ಪರಾಗಸ್ಪರ್ಶದ ನಂತರ ಗಂಡು ಹೂವು ಒಣಗುತ್ತದೆ. ದ್ವಿಲಿಂಗ ಹೂವುಗಳಲ್ಲಿ ಕಾಯಿಯಾಗುತ್ತದೆ. ದ್ವಿಲಿಂಗ ಹೂವು ಇಲ್ಲದಿರುವ ಪಕ್ಷದಲ್ಲಿ ಹೂ ಗೊಂಚಲೇ ಒಣಗುತ್ತದೆ.  

ಕೆಲವು ತಳಿಗಳಲ್ಲಿ ಗಂಡು ಹೂವುಗಳ ಪ್ರಮಾಣ ಜಾಸ್ತಿ ಇರಬಹುದು. ತಳಿ ಗುಣವಲ್ಲದೆ ಮರದ ಆರೋಗ್ಯದ ಮೇಲೂ ಗಂಡು ಹೆಣ್ಣು ಹೂವುಗಳ ಅನುಪಾತ ಹೆಚ್ಚು ಕಡಿಮೆ ಆಗುತ್ತದೆ. ಫಲವತ್ತತೆ ಹೊಂದಿರುವ ಮಣ್ಣಿನಲ್ಲಿ ಬೆಳೆದ ಮರದಲ್ಲಿ ಹೆಣ್ಣು ಹೂವುಗಳ ಪ್ರಮಾಣ ಸ್ವಲ್ಪ ಅಧಿಕ ಇರುತ್ತದೆ. ಏನೇನೂ ಪೊಷಕಾಂಶ ಇಲ್ಲದ ಮಣ್ಣಿನಲ್ಲಿ ಬೆಳೆದ ಮರದ ಹೂ ಗೊಂಚಲಿನಲ್ಲಿ ಗಂಡು ಹೂವುಗಳ ಪ್ರಮಾಣವೇ ಅಧಿಕ ಇರುವುದೂ ಇದೆ.

ಆದ ಕಾರಣ ಹೂ ಒಣಗುವುದಕ್ಕೆ ಟಿ- ಸೊಳ್ಳೆ ಒಂದೇ ಕಾರಣ ಅಲ್ಲ. ಗೇರಿನಲ್ಲಿ ಕಾಯಿ ಉಳಿಯಲು ಕೀಟನಾಶಕ ಸಿಂಪರಣೆ ತೀರಾ ಅಗತ್ಯವೂ ಅಲ್ಲ. ಹೂವುಗಳ ಅನುಪಾತ, ಪೊಷಕಾಂಶ, ಸೂರ್ಯನ ಬೆಳಕು, ಅದರ ದಿಕ್ಕು, ಗಾಳಿ, ಉತ್ತಮ ಕಾಯಿಕಚ್ಚುವಿಕೆಗೆ ಮತ್ತು ಪರಾಗ ಸ್ಪರ್ಶಕ್ಕೆ  ಅನುಕೂಲಕರ ಅಂಶಗಳು ಕೂಡಿದಾಗ ಕೀಟನಾಶಕ ಸಿಂಪರಣೆ ಮಾಡದೆಯೂ ಫಸಲು ಪಡೆಯಬಹುದು. ವ್ಯವಸ್ಥಿತವಾಗಿ ಗೊಬ್ಬರ ಕೊಟ್ಟು, ನೀರಾವರಿ ಮಾಡಿ, ಬೆಳೆದ ಮರದಲ್ಲಿ ಹೆಣ್ಣು ಹೂವುಗಳು ಹೆಚ್ಚಳವಾಗಿ ಅಧಿಕ ಕಾಯಿ ಕಚ್ಚುವಿಕೆ ಇರುತ್ತದೆ, ಮಿಡಿ ಹೆಚ್ಚಾದರೆ ಅದಕ್ಕನುಗುಣವಾಗಿ ಪೋಷಕಾಂಶಗಳು ಲಭ್ಯವಾದರೆ ಆ ಮಿಡಿಗಳು ಪುಷ್ಟಿಯಾಗಿ ಬೆಳೆಯುತ್ತವೆ. ಇಲ್ಲವಾದರೆ ಬೀಜಗಳು ಪೊಳ್ಳಾಗುತ್ತವೆ. ಒಂದು ಮಳೆ ಸಿಂಚನವಾದರೆ ಕಾಯಿ ಹೆಚ್ಚು ಕಟ್ಟಿಕೊಳ್ಳುತ್ತದೆ ಎಂಬುದು ನಮಗೆಲ್ಲಾ ಗೊತ್ತು. ಕಾರಣ  ಮಳೆ ನೀರಿನಲ್ಲಿ ದೊರೆಯುವ ಪೋಷಕಾಂಶ ಇದಕ್ಕೆ ಕಾರಣ. ಪೋಷಕಾಂಶ, ನೀರು ಎಲ್ಲದರ ಕೊರತೆ ಇರುವ ಕಡೆ ಕಾಯಿಗಳೂ ಸಮರ್ಪಕವಾಗಿ ಬೆಳೆಯದೆ, ಕೀಟ ಬಾಧೆಗೆ ಬೇಗ ತುತ್ತಾಗುತ್ತವೆ. ಗೇರು ಏನೂ ಕೊಡದೆ ಬೆಳೆಯುವ ಬೆಳೆ ಎಂದು ತಿಳಿಯದಿರಿ. ಅದಕ್ಕೆ ಪೋಷಕಾಂಶ ಬೇಕು. ಹೂವಾಗುವ ಮುನ್ನವೇ ನೀರಾವರಿ - ಪೋಷಕಾಂಶ ಪೂರೈಕೆ ಮಾಡಿ, ಕಾಯಿ ಕೊಯಿಲಿನವರೆಗೂ ಮುಂದುವರಿಸುವುದರಿಂದ ಅಧಿಕ ಮತ್ತು ಗುಣಮಟ್ಟದ ಇಳುವರಿ ಪಡೆಯಬಹುದು. ಕೀಟದ ತೊಂದರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಪತ್ರ ಸಿಂಚನದ ಮೂಲಕ ಗೊಬ್ಬರ ಪೂರೈಕೆ ತುಂಬಾ ಪ್ರಯೋಜನಕಾರಿ. 

ಮಾಹಿತಿ: ರಾಧಾಕೃಷ್ಣ  ಹೊಳ್ಳ