ಗೊಂದಲ ಬಗೆಹರಿಸಿ

ಗೊಂದಲ ಬಗೆಹರಿಸಿ

ಕಂದಾಯ ಇಲಾಖೆಯ ಗೊಂದಲ, ಸಮಸ್ಯೆಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ‘ಜನರಿಗೆ ಉತ್ತಮ ಸೇವೆ ಒದಗಿಸುತ್ತೇವೆ' ಎಂಬ ಇಲಾಖೆಯ ಆಶ್ವಾಸನೆ ಈಡೇರುವುದಂತೂ ದೂರದ ಮಾತು; ಬದಲಿಗೆ ಇಲಾಖೆಯ ಕಾರ್ಯವೈಖರಿಯಿಂದ ಜನರ ತೊಂದರೆಗಳು ಮತ್ತಷ್ಟು ಹೆಚ್ಚುತ್ತಿವೆ. ನ್ಯಾಯಾಲಯದ ಸೂಚನೆ ಬಂದರೂ ೧೧ಇ ನಕ್ಷೆಯ ಗೊಂದಲ ಮುಗಿಯುತ್ತಿಲ್ಲ. ಕೃಷಿ ಜಮೀನು ಕ್ರಯ, ದಾನ, ವಿಲ್ ಇನ್ನಿತರ ವರ್ಗಾವಣೆ ಪತ್ರಗಳ ನೋಂದಣಿ ವೇಳೆ ೧೧ಇ ನಕ್ಷೆಗೆ ವಿನಾಯಿತಿ ನೀಡಿ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ನಿರ್ದೇಶನ ನೀಡಿವೆ. ಹಾಗಾಗಿ, ಇನ್ನಾದರೂ ಈ ತೊಂದರೆಯಿಂದ ಮುಕ್ತಿ ದೊರೆಯಬಹುದು ಎಂದು ಜನಸಾಮಾನ್ಯರು ಭಾವಿಸಿದ್ದರು. ಆದರೆ, ೧೧ಇ ನಕ್ಷೆ ಇಲ್ಲದೆ ನೋಂದಣಿ ನಡೆಯುವುದಿಲ್ಲ ಎಂದು ಸರ್ಕಾರ ಹೇಳಿರುವುದು ಗೊಂದಲ ಹೆಚ್ಚಿಸಿದೆ. ಅಲ್ಲದೆ, ಮೇಲ್ಮನವಿ ಮೂಲಕ ನ್ಯಾಯಾಲಯದ ಆದೇಶ ಪ್ರಶ್ನಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ೧೧ಇ ನಕ್ಷೆಗೆ ಸಂಬಂಧಿಸಿ ಸಾವಿರಾರು ಅರ್ಜಿಗಳು ನೆನೆಗುದಿಗೆ ಬಿದ್ದಿವೆ. ಲಂಚ ಕೊಟ್ಟವರಿಗೆ ಪೋಡಿ ಮತ್ತು ೧೧ಇ ನಕ್ಷೆ ಸೌಲಭ್ಯ ದೊರೆಯುತ್ತಿದೆ ಎಂಬ ಗಂಭೀರ ಆರೋಪವೂ ಜನರಿಂದ ಕೇಳಿಬರುತ್ತಿದೆ. ಸರ್ವೆ ಸೌಲಭ್ಯವೂ ಸಿಗದೆ, ಹಲವಾರು ಜನರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಜನರ ಸಮಯ, ಶ್ರಮ, ಹಣವನ್ನು ಇಲಾಖೆ ಹೇಗೆ ಹಾಳು ಮಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. 

೧೧ಇ ನಕ್ಷೆ ಮತ್ತು ಇತರ ಸೇವೆಗಳ ಕುರಿತಂತೆ ದೂರು ಇದೇ ಮೊದಲೇನಲ್ಲ. ಜನರು ಕೆಲ ವರ್ಷಗಳಿಂದ ಸಕಾಲಕ್ಕೆ ಈ ಸೇವೆಗಳು ಸಿಗದೆ ಪರದಾಡುತ್ತಿದ್ದಾರೆ. ಆರಂಭದ ಹಂತದಲ್ಲೇ ಸಮಸ್ಯೆಯ ತೀವ್ರತೆಯನ್ನು ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಿದ್ದ ಕಂದಾಯ ಇಲಾಖೆ, ತನ್ನ ನಿರ್ಲಕ್ಷ್ಯತನದ ಧೋರಣೆಯಿಂದ ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ ಎಂಬುದು ದುರದೃಷ್ಟಕರ. ‘ಜನರ ಮನೆ ಬಾಗಿಲಿಗೆ ಸೇವೆ’ ಎಂಬ ಹೆಸರಿನಲ್ಲಿ ಇಲಾಖೆಯು ನೂತನ ಕ್ರಮಕ್ಕೆ ಮುಂದಾದಾಗ ಒಂದಷ್ಟು ಆಶಾವಾದ ಮೂಡಿದ್ದು ಸುಳ್ಳಲ್ಲ. ಇತರ ಇಲಾಖೆಗಳು ಸುಧಾರಣೆಗೆ ಒಡ್ಡಿಕೊಂಡು, ಕ್ಷಮತೆ ಹೆಚ್ಚಿಸಿಕೊಳ್ಳುತ್ತಿರುವಾಗ ಕಂದಾಯ ಇಲಾಖೆಯು ಆ ವೇಗಕ್ಕೆ ಜತೆಯಾಗಬೇಕು ಎಂಬ ಆಶಯಕ್ಕೆ ಈ ಕ್ರಮ ಪೂರಕವಾಗಿತ್ತು. ದುರದೃಷ್ಟವಶಾತ್, ಜನರ ಮನೆಬಾಗಿಲಿಗೆ ಸೇವೆ ಕಲ್ಪಿಸುವುದಿರಲಿ ಕಚೇರಿಗೆ ಹತ್ತಾರು ಬಾರಿ ಎಡತಾಕಿದರೂ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು, ಸಿಬ್ಬಂದಿ ಯಾವುದೋ ಕುಂಟುನೆಪ ಹೇಳಿ ಜನರ ಅರ್ಜಿಗಳು ವರ್ಷಾನುಗಟ್ಟಲೇ ವಿಲೇವಾರಿಯಾಗದಂತೆ ಮಾಡುತ್ತಿದ್ದಾರೆ. ಇದರಿಂದ ಜನರು ಇಲಾಖೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿ ಜಡತ್ವ ನಿವಾರಣೆ ಸೇರಿದಂತೆ ಸಮಗ್ರ ಸುಧಾರಣೆಯ ಅಗತ್ಯವಿದೆ. ತಂತ್ರಜ್ಞಾನ ಮತ್ತು ಇತರ ಸುಲಭ್ಯಗಳನ್ನು ಬಳಸಿಕೊಂಡು ಪ್ರಮುಖ ಶಹರಗಳಲ್ಲಿ ಮಾತ್ರವಲ್ಲ ಎರಡನೇ, ಮೂರನೇ ಹಂತದ ನಗರಗಳಲ್ಲೂ ಉತ್ತಮ ಸೇವೆ ಕಲ್ಪಿಸಬೇಕಿದೆ. ೧೧ಇ ನಕ್ಷೆ ಸೇರಿ ಅಗತ್ಯ ಸೇವೆಗಳು ಸಮರ್ಪಕವಾಗಿ, ಸಕಾಲಿಕವಾಗಿ ದೊರೆಯುವಂತೆ ಮಾಡಬೇಕಿದೆ. 

(ಕೃಪೆ-ವಿಜಯವಾಣಿ ಪತ್ರಿಕೆ, ಜನವರಿ ೧೭, ೨೦೨೨, ಸಂಪಾದಕೀಯ)