ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೨

ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೨

ಬರಹ

ಗಲಾಟೆ ಪ್ರಾರಂಭವಾಗುವ ಯಾವ ಮುನ್ಸೂಚನೆಯೂ ಅಂದು ಇರಲಿಲ್ಲ.

ಎಂದಿನಂತೆ ಶಾಂತವಾದ ಬೆಳಗು. ಆಗ ತಾನೇ ಕಾಲೇಜುಗಳು ಪ್ರಾರಂಭವಾಗಿದ್ದರಿಂದ, ಕಪ್ಪಡರಿದ ರಸ್ತೆಗಳ ತುಂಬ ಬಣ್ಣದ ಚಿಟ್ಟೆಗಳಂತೆ ಹೊರಟ ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಧಾರವಾಡದಲ್ಲಿ ಬಹುತೇಕ ಚಳುವಳಿಗಳು ಹುಟ್ಟಿವೆ. ಬೆಳೆದಿವೆ. ಪ್ರಸಿದ್ಧ ಗೋಕಾಕ್‌ ಚಳುವಳಿ ಕೂಡ ಹುಟ್ಟಿದ್ದು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಪುಟ್ಟ ಆವರಣದಿಂದ. ಹೀಗಾಗಿ, ಸಿಬಿಟಿ ಹತ್ತಿರದ ಗೊಬ್ಬರ-ಬೀಜದಂಗಡಿಗಳ ಸುತ್ತಮುತ್ತ ನೆರೆದಿದ್ದ ರೈತರು ಯಾರನ್ನೂ ಅಷ್ಟಾಗಿ ಆಕರ್ಷಿಸಲಿಲ್ಲ. ಬಿತ್ತನೆ ಸೀಸನ್‌ ಆಗಿದ್ದರಿಂದ, ರೈತರು ಗುಂಪಾಗಿ ನಿಂತಿರುವ ದೃಶ್ಯವೂ ಸಾಮಾನ್ಯವಾಗಿತ್ತು.

ಅಲ್ಲಿಯವರೆಗೆ ಗಾಳಿಯಲ್ಲಿ ಕೂಡ ಗದ್ದಲದ ವಾಸನೆ ಇರಲಿಲ್ಲ. ಎಂದಿನಂತೆ ರೈತರು ಗೊಬ್ಬರದ ಅಂಗಡಿ ಮುಂದೆ ಗುಂಪಾಗಿ ನಿಂತಿದ್ದರು. ಈ ಸಲ ಗೊಬ್ಬರ ಸಿಗುತ್ತದೋ ಇಲ್ಲವೋ, ಅಷ್ಟರಲ್ಲಿ ಮಳೆ ಬಂದರೆ ಹೇಗೆ? ಎಂಬ ಚಿಂತೆಯ ಮಾತುಗಳು ಕೇಳಿ ಬರುತ್ತಿದ್ದವು. ಅವತ್ತು ಸುಭಾಷ್‌ ರಸ್ತೆಯಲ್ಲಿ ಪುಸ್ತಕ ಕೊಳ್ಳಲು ಹೋಗಿದ್ದವಳಿಗೆ, ಇನ್ನು ಕೆಲ ಗಂಟೆಗಳಲ್ಲಿ ಧಾರವಾಡ ಹೊತ್ತಿ ಉರಿಯಲಿದೆ ಎಂಬ ಸಣ್ಣ ಸೂಚನೆಯೂ ಇರಲಿಲ್ಲ.

ಸ್ಕೂಟಿಯನ್ನು ಅಂಗಡಿ ಮುಂದೆ ನಿಲ್ಲಿಸಿ ಪುಸ್ತಕ ಹುಡುಕುತ್ತಿದ್ದೆ. ಒಂದಿಷ್ಟು ಹೊಸ ಪುಸ್ತಕಗಳು ಬಂದಿದ್ದವು. ರವಿ ಬೆಳಗೆರೆ ಅವರ ದಂಗೆಯ ದಿನಗಳು (ಅನುವಾದ), ತುಂಬ ದಿನಗಳಿಂದ ಹುಡುಕುತ್ತಿದ್ದ ಬಿ.ಎಂ.ಶ್ರೀ. ಅವರ ’ಕನ್ನಡ ಬಾವುಟ’, ತರುಣ್‌ ತೇಜ್‌ಪಾಲ್‌ ಅವರ ’Alchemy of desire' ಕಾದಂಬರಿ ಕಂಡು ಖುಷಿಯಾಗಿದ್ದೆ. ಆಗ ಇದ್ದಕ್ಕಿದ್ದಂತೆ ಜನ ಕೂಗಾಡುವ ಶಬ್ದ ಮಂಕಾಗಿ ಕೇಳಿಸಿತು.

ಮಾರುಕಟ್ಟೆ ಪ್ರದೇಶವಾಗಿದ್ದರಿಂದ ಜನ ಕೂಗಾಡುವುದು ಸಾಮಾನ್ಯ. ಆದರೆ, ಈ ಕೂಗು ಅಸಹಜವಾಗಿತ್ತು. ಇದ್ದಕ್ಕಿದ್ದಂತೆ ಕೂಗಿನ ಪ್ರಮಾಣ ಜೋರಾಯಿತು. ಅಂಗಡಿಯಲ್ಲಿದ್ದ ತುಂಬ ಜನ ಹೊರ ಬಂದು ಆಚೀಚೆ ನೋಡುತ್ತಿದ್ದುದನ್ನು ಕಂಡು ಕುತೂಹಲದಿಂದ ನಾನೂ ಹೊರಬಂದೆ. ಒಂದಿಷ್ಟು ಯುವಕರು ಉದ್ರಿಕ್ತರಾಗಿ ಆಚೀಚೆ ಓಡಾಡುತ್ತಿದ್ದರು. ಗಲಾಟೆ ನಡೆಯುತ್ತಿದೆ ಎಂದು ಗಾಬರಿಯಾದ ಅಂಗಡಿಯವರು, ಪುಸ್ತಕಗಳನ್ನು ಎತ್ತಿಟ್ಟಿರುತ್ತೇನೆ. ಇನ್ನೊಮ್ಮೆ ಬಂದಾಗ ಒಯ್ಯಿರಿ ಮೇಡಂ ಎಂದು ಅವಸರದಿಂದ ಷಟರ್‌ ಎಳೆದ.

ಹೀಗಾಗಿ ಸ್ಕೂಟಿ ಹತ್ತಿಕೊಂಡು ರೂಢಿಯಂತೆ ಕಾಲೇಜ್‌ ರಸ್ತೆಯ ಮೂಲಕ ಮನೆ ಕಡೆ ಹೊರಟಾಗ, ಲಕ್ಷ್ಮೀ ಥೇಟರ್‌ ಹತ್ತಿರ ಗಲಾಟೆಯಾಗುತ್ತಿದೆ ಎಂಬ ಸುದ್ದಿ ಬಂದಿತು. ನಾನು ಅಲ್ಲಿ ನಿಲ್ಲಲು ಹೋಗಲಿಲ್ಲ. ವಾಪಸ್‌ ಬಂದುಬಿಟ್ಟೆ.

ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಪೂರ್ತಿ ಬದಲಾಗಿ ಹೋಯಿತು. ಎಲ್ಲಾ ಕನ್ನಡ ಚಾನೆಲ್‌ಗಳಲ್ಲಿ ಧಾರವಾಡದ ಗಲಾಟೆಯದೇ ಸುದ್ದಿ. ರಸಗೊಬ್ಬರಕ್ಕಾಗಿ ಆಗ್ರಹಿಸಿ ರೈತರು ಹಿಂಸೆಗೆ ಇಳಿದಿದ್ದಾರೆ ಎಂಬ ಹೆಡ್‌ಲೈನ್‌ಗಳು. ಅಷ್ಟೊತ್ತಿಗೆ ಮೊದಲ ಬಸ್‌ ಬೆಂಕಿಗೆ ಆಹುತಿಯಾಗಿತ್ತು.

ನನಗೆ ಪರಿಸ್ಥಿತಿಯನ್ನು ನಂಬಲು ಆಗಲೇ ಇಲ್ಲ.

(ಮುಂದುವರೆಯುವುದು)

- ಪಲ್ಲವಿ ಎಸ್‌.