ಗೊಬ್ಬರವಾಗಿ ಮೂತ್ರದ ಬಳಕೆ ವಿಧಾನ
ಬೆಳೆಗಳ ಇಳುವರಿ ಹೆಚ್ಚಳಕ್ಕಾಗಿ ಮಾನವ ಮೂತ್ರ ಗೊಬ್ಬರವನ್ನು ಕೆಲವೆಡೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ - ನೇಪಾಳದ ರಾಜಧಾನಿ ಕಾಠ್ಮಂಡು ಹತ್ತಿರದ ಸಿದ್ಧಿಪುರ್ ಹಳ್ಳಿಯಲ್ಲಿ, ತಮಿಳ್ನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮುಸಿರಿ ಹಳ್ಳಿಯಲ್ಲಿ.
ಕೇವಲ ಮೂತ್ರ-ಗೊಬ್ಬರವನ್ನೇ ಹಾಕಿದರೆ, ಸಸ್ಯಗಳಿಗೆ ಪೋಷಕಾಂಶ ಕಡಿಮೆಯಾದೀತು ಅಥವಾ ಹೆಚ್ಚಾದೀತು. ಎಮ್. ಸುಬ್ಬುರಾಮನ್ ತಿರುಚಿರಾಪಳ್ಳಿ ಪ್ರಯೋಗದ ಸಹಯೋಗಿ ಸಂಸ್ಥೆ ಸ್ಕೋಪ್‌ನ ನಿರ್ದೇಶಕರು. ಅವರ ಅನುಸಾರ, ಸಸ್ಯಗಳಿಗೆ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶ ಒದಗಿಸುವ ಸೂತ್ರ ಕಂಡು ಹಿಡಿಯುವುದು ಅತ್ಯಗತ್ಯ. ಪ್ರತಿ ಹಂಗಾಮಿನಲ್ಲಿ ಒಂದು ಬಾಳೆಗಿಡಕ್ಕೆ ಅವಶ್ಯವಾದ ಪೋಷಕಾಂಶಗಳು ಮತ್ತು ಮೂತ್ರ-ಗೊಬ್ಬರ ಒದಗಿಸುವ ಪೋಷಕಾಂಶಗಳನ್ನು ಪರೀಕ್ಷೆ ಮಾಡಿ ಸೂತ್ರವೊಂದನ್ನು ರೂಪಿಸಲು ಅವರ ಅಧ್ಯಯನ ತಂಡಕ್ಕೆ ಸಾಧ್ಯವಾಯಿತು.
ಪ್ರತಿ ಹಂಗಾಮಿನಲ್ಲಿ ಒಂದು ಬಾಳೆಗಿಡಕ್ಕೆ ಸಾರಜನಕ 200 ಗ್ರಾಮ್, ರಂಜಕ 30 ಗ್ರಾಮ್ ಮತ್ತು ಪೊಟಾಷಿಯಮ್ 400 ಗ್ರಾಮ್ ಬೇಕಾಗುತ್ತದೆ. ಒಂದು ಲೀಟರ್ ಮಾನವ ಮೂತ್ರದಲ್ಲಿ ಇದ್ದ ಅವುಗಳ ಪ್ರಮಾಣ ಅನುಕ್ರಮವಾಗಿ 4.6 ಗ್ರಾಮ್, 0.6 ಗ್ರಾಮ್ ಮತ್ತು 2.2 ಗ್ರಾಮ್.
ತಮ್ಮ ಅಧ್ಯಯನ ತಂಡದ ಪ್ರಯೋಗದ ಫಲಿತಾಂಶವನ್ನು ಸುಬ್ಬುರಾಮನ್ ಹೀಗೆ ವಿವರಿಸುತ್ತಾರೆ, "ಬಾಳೆಗಿಡಕ್ಕೆ ಅಗತ್ಯವಾದ ಸಾರಜನಕ ಮತ್ತು ರಂಜಕವನ್ನು ಮೂತ್ರ-ಗೊಬ್ಬರ ಒದಗಿಸುತ್ತಿತ್ತು. ಆದರೆ ಅದರಲ್ಲಿರುವ ಪೊಟಾಷಿಯಮ್ ಪ್ರಮಾಣ ಬಾಳೆಗಿಡಕ್ಕೆ ಸಾಕಾಗುತ್ತಿರಲಿಲ್ಲ. ಇದರಿಂದಾಗಿ ಬಾಳೆಗಿಡದ ಎತ್ತರ ಮತ್ತು ಕಾಂಡದ ವ್ಯಾಸ ಕಡಿಮೆಯಾಗುತ್ತಿತ್ತು.” ಇದಕ್ಕೆ ಅವರ ತಂಡದವರು ಸೂಚಿಸಿದ ಪರಿಹಾರ: ಬಾಳೆಗಿಡಕ್ಕೆ ತಜ್ನರು ಶಿಫಾರಸ್ ಮಾಡಿದ ಪೊಟಾಷಿಯಮಿನ ಪ್ರಮಾಣದ ಶೇಕಡಾ 75ನ್ನು ಬೇರೆ ಗೊಬ್ಬರದ ರೂಪದಲ್ಲಿ ಮೂತ್ರ-ಗೊಬ್ಬರದೊಂದಿಗೆ ಒದಗಿಸುವುದು. ಈ ಹೊಂದಾಣಿಕೆಯಿಂದಾಗಿ, ಅತ್ಯಧಿಕ ತೂಕದ ಬಾಳೆಗೊನೆಗಳನ್ನು ಪಡೆಯಲು ಅವರ ತಂಡದವರಿಗೆ ಸಾಧ್ಯವಾಯಿತು.
ಮೂತ್ರವನ್ನು ಹೇಗೆ ಗೊಬ್ಬರವಾಗಿ ಗಿಡಗಳಿಗೆ ಒದಗಿಸಬೇಕು? ಈ ಬಗ್ಗೆ ತಿರುಚಿರಾಪಳ್ಳಿ ಪ್ರಯೋಗ ನಡೆಸಿದ "ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ"ದ ನಿರ್ದೇಶಕರಾದ ಎಂ.ಎಂ. ಮುಸ್ತಾಫಾ ಅವರ ವಿವರಣೆ: ಮಣ್ಣು ಮತ್ತು ಬೆಳೆ ಅವಲಂಬಿಸಿ, ಮೂತ್ರವನ್ನು ಹಾಗೆಯೇ ಗಿಡಗಳಿಗೆ ಹಾಕಬಹುದು ಅಥವಾ ನೀರು ಬೆರಸಿ ಹಾಕಬಹುದು. ನೀರು ಬೆರಸಿ ಹಾಕಿದರೆ, ಮೂತ್ರದಿಂದಾಗಿ ಗಿಡಗಳು ಒಣಗುವ ಅಥವಾ ಅಧಿಕ ಪೋಷಕಾಂಶ ಉಣಿಸುವ ಅಪಾಯ ತಪ್ಪುತ್ತದೆ. “ಹತ್ತು ಲೀಟರ್ ಮೂತ್ರವನ್ನು ಒಂದು ನೂರು ಲೀಟರ್ ನೀರಿಗೆ ಬೆರಸಿ, ಈ ಮಿಶ್ರಣವನ್ನು ಪ್ರತಿಯೊಂದು ಬಾಳೆಗಿಡಕ್ಕೆ ವರುಷದಲ್ಲಿ ಐದು ಬಾರಿ ಹಾಕಿದಾಗ ನಮಗೆ ಅತ್ಯಧಿಕ ಇಳುವರಿ ಸಿಕ್ಕಿತು” ಎನ್ನುತ್ತಾರೆ ಅವರು.
ಅದಲ್ಲದೆ, ಮೂತ್ರದಲ್ಲಿರಬಹುದಾದ ಸೂಕ್ಷ್ಮಜೀವಿಗಳನ್ನು ಬೇರ್ಪಡಿಸಿ, ಮೂತ್ರವನ್ನು ಸುರಕ್ಷಿತವಾಗಿಸುವುದು ಬಹಳ ಮುಖ್ಯ. ಅದಕ್ಕಾಗಿ ತಿರುಚಿರಾಪಳ್ಳಿಯ ಮುಸಿರಿಯಲ್ಲಿ ಅನುಸರಿಸಲಾದ ವಿಧಾನ ಹೀಗಿದೆ: ಸಮುದಾಯ ಶೌಚಾಲಯದಲ್ಲಿ ಸಂಗ್ರಹವಾದ ಮೂತ್ರವನ್ನು ಮರಳು ಮತ್ತು ಇದ್ದಲಿನ ಸೋಸಕಗಳ ಮೂಲಕ ಹಾಯಿಸಿ, ಅನಂತರ ಟ್ಯಾಂಕಿಯಲ್ಲಿ ಒಂದು ವಾರ ಸಂಗ್ರಹಿಸಿಡುವುದು. ಇಕೊಸಾನ್ ಸಮುದಾಯ ಶೌಚಾಲಯಗಳಲ್ಲಿ ಸಂಗ್ರಹವಾದ ಮೂತ್ರವನ್ನು ಕನಿಷ್ಠ ಒಂದು ತಿಂಗಳ ಅವಧಿ ಟ್ಯಾಂಕಿಯಲ್ಲಿ ಸಂಗ್ರಹಿಸಿಟ್ಟ ಬಳಿಕ ಗೊಬ್ಬರವಾಗಿ ಬಳಸಬೇಕು.
ನೇಪಾಳದ ಸಿದ್ಧಿಪುರದ ಕೃಷಿಕ ಜಿಬಾನ್ ಮಹರ್-ಜನ್ ಹಲವಾರು ವರುಷಗಳಿಂದ ಮೂತ್ರವನ್ನು ಗೊಬ್ಬರವಾಗಿ ಬಳಸುತ್ತಿದ್ದಾರೆ. ಅವರ ಅನುಸಾರ, ಬೀಜ ಬಿತ್ತುವುದಕ್ಕಿಂತ ಎರಡರಿಂದ ಮೂರು ವಾರಗಳ ಮುಂಚೆ ಮೂತ್ರ-ಗೊಬ್ಬರ ಹಾಕುವುದು ಅತ್ಯುತ್ತಮ. ಹೊಲದಲ್ಲಿ ಬೀಜ ಬಿತ್ತಲಿಕ್ಕಾಗಿ ಕುಣಿಗಳನ್ನು ಕೊರೆದು, ಅವಕ್ಕೆ (ನೀರು ಬೆರಸದ) ಮೂತ್ರ ಸುರಿದು, ನಂತರ ಸೆಗಣಿ-ಮಣ್ಣಿನ ಮಿಶ್ರಣದಿಂದ ಕುಣಿಗಳನ್ನು ಮುಚ್ಚುವುದು ಅವರ ಕ್ರಮ. ಆಲೂಗಡ್ದೆ ಬೆಳೆಗೆ ಹಾಕುವ ಮೂತ್ರ-ಗೊಬ್ಬರದ ಪ್ರಮಾಣ ಹೀಗಿದೆ: ಮೊದಲಾಗಿ, ಆರು ಅಡಿ ಉದ್ದದ ಕುಣಿಗೆ ಎರಡು ಲೀಟರ್ ಮೂತ್ರ-ಗೊಬ್ಬರ; ಅನಂತರ, ಬಳ್ಳಿಗಳು ಬೆಳೆಯುತ್ತಿರುವಾಗ, ಮೂರು ಬಾರಿ ಮೂತ್ರ ಗೊಬ್ಬರ (ಒಂದು ಲೀಟರ್ ಮೂತ್ರಕ್ಕೆ ಮೂರು ಲೀಟರ್ ನೀರು ಬೆರಸಿದ ಮಿಶ್ರಣವನ್ನು) ನೀಡುವುದು.
ಮೂತ್ರವನ್ನು ಬೆಳೆಗಳಿಗೆ ಗೊಬ್ಬರವಾಗಿ ಬಳಸುವಾಗ, ಮನೆಗಳಿಂದ ಹೊಲಕ್ಕೆ ಅದನ್ನು ಸಾಗಿಸುವುದೇ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ: ಮೂತ್ರವನ್ನು ಸ್ಟ್ರೂವೈಟ್ ಎಂಬ ಹುಡಿಯಾಗಿ ಪರಿವರ್ತಿಸುವುದು. ಈ ತಂತ್ರಜ್ನಾನವನ್ನು ಸ್ವಿಜರ್-ಲ್ಯಾಂಡಿನ ಸಂಸ್ಥೆಯೊಂದು ನೇಪಾಳದ ಸಿದ್ಧಿಪುರದಲ್ಲಿ ಪ್ರಥಮ ಬಾರಿ ಯಶಸ್ವಿಯಾಗಿ ಬಳಸಿದೆ. ಇದನ್ನು ಹೆಚ್ಚೆಚ್ಚು ಗ್ರಾಮಗಳಲ್ಲಿ ಅನುಸರಿಸಿದರೆ, ಕೃಷಿಯ ಗೊಬ್ಬರದ ಸಮಸ್ಯೆಗೆ ಪರಿಹಾರ ಸಿಕ್ಕೀತು, ಅಲ್ಲವೇ?
ಫೋಟೋಗಳು: ಬಾಳೆತೋಟ ಮತ್ತು ಹಣ್ಣಾದ ಬಾಳೆಗೊನೆ … ಕೃಪೆ: ಡ್ರೀಮ್ಸ್ ಟೈಮ್.ಕೋಮ್