ಗೋಕುಲದ ಒಲವು
ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು
ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ
ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ
ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹಂಬಲದಿ||
ಮೈಮರೆಯಿತು ಮಥುರೆ ಕತ್ತಲ ಇರುಳಿನಲಿ ಬಂದಿಳಿಯಿತು ದೇವ ಕುಂಜರ
ಸದ್ದಿಲ್ಲದೇ ಮಾಯೆ ಹೊರಡಿಸಿತು ಗೋಕುಲಕೆ ವಸುದೇವನ ನಂದನನ
ಭೋರ್ಗರೆಯುವ ಯಮುನೆಯ ಹೊರಳಿನಲಿ ಹೊರಟಿತು ಗೋಕುಲಕೆ
ಮಮತಾಮಯಿ ಯಶೋಧೆಯ ತಾಯ ಮಡಿಲು ತುಂಬಿತು ವಸುದೇವನ ಕಂದನು||
ಬೆಣ್ಣೆ ಮೆದ್ದು ನಲಿಯುತ್ತಿತ್ತು ತರಲೆ ಮುದ್ದು ನಂದಗೋಪನ ಕೃಷ್ಣನು
ಗೋಪಿಕೆಯರ ಮನ ಸೆಳೆಯುತ್ತಿತ್ತು ಕೊಳಲನೂದುವ ಗೋಪಿಕೃಷ್ಣನು
ಗೋಪಿಕೆ-ರಾಧೆಯ ಸಂಗದಿಂದ ಹರಣವಾಯಿತು ಸಂಸಾರಬಂಧನವು
ಮಾಯೆ ಎನ್ನಲೋ! ಲೀಲೆ ಎನ್ನಲೋ! ನಲಿಯಿತು ಗೋಕುಲ ಅವನ ನೆರಳಲಿ||
ಬೆಣ್ಣೆ ಬಿಟ್ಟ ,ಸಂಗ ಬಿಟ್ಟ, ಬಂಧ ಬಿಟ್ಟ ಹೊರಟ ಲೋಕದ ನೆರವಿಗೆ
ಲೋಕ ಕಂಟಕ ಕಂಸನ ಸಂಹರಿಸಿ ಮಥುರೆಯ ಉದ್ಧರಿಸಿದ
ಹೊರಟನವನು ಕಾಲಕರೆದ ಕಡೆಗೆ ದ್ವಾರಕೆಯ ಸೃಜಿಸಿ ನಡೆದನು
ಪಾಂಡುನಂದನರ ಕಷ್ಟಗಳಿಗೆ ಹೆಗಲುಕೊಟ್ಟು ಉದ್ಧರಿಸಲು ನಿಂದನು।।
ಶಿಷ್ಟ ಜನರ ರಕ್ಷಿಸಿಸಲು ದುಷ್ಟ ಜನರ ಶಿಕ್ಷಿಸಲು ಶಸ್ತ್ರ ಹಿಡಿಯದೆ ನಿಂತನು
ಘೋರ ಯುದ್ಧ ಭೂಮಿಯಲ್ಲಿ ನಿಂದು ಸಖಗೆ ದೇವಗೀತೆಯ ಉಸುರಿದನು
ವೀರ ಮಹಾವೀರರ ಬಲಾಬಲಗಳು ಅವನ ಮುಂದೆ ಹುಡಿ ಪುಡಿಯಾದವು
ಯಾವುದು ಸತ್ಯವೋ! ಯಾವುದು ನಿತ್ಯವೋ! ಅವೇ ಅಲ್ಲಿ ನೆಲೆಗೊಂಡವು||