ಗೋಧಿ ರಫ್ತಿನ ಗೊಂದಲ - ಭಾರತದ ಪುರಾತನ ವ್ಯವಸ್ಥೆಯ ಅವಾಂತರ

ಗೋಧಿ ರಫ್ತಿನ ಗೊಂದಲ - ಭಾರತದ ಪುರಾತನ ವ್ಯವಸ್ಥೆಯ ಅವಾಂತರ

ಯುಕ್ರೈನ್ ದೇಶದ ಮೇಲೆ ಫೆಬ್ರವರಿ 2022ರ ಕೊನೆಯಲ್ಲಿ ರಷ್ಯಾ ಆಕ್ರಮಣ ಮಾಡಿ ಆರಂಭಿಸಿದ ಯುದ್ಧ ಇನ್ನೂ ಮುಗಿದಿಲ್ಲ. ಈ ಯುದ್ಧದಿಂದಾಗಿ ಜಾಗತಿಕ ಗೋಧಿ ರಫ್ತು ಮತ್ತು ಆಮದಿನ ವಹಿವಾಟಿನಲ್ಲಿ ಅಲ್ಲೋಲಕಲ್ಲೋಲವಾಗಿದೆ.

ಯಾಕೆಂದರೆ, ಜಗತ್ತಿನಲ್ಲಿ ಗೋಧಿ ರಫ್ತಿನಲ್ಲಿ ರಷ್ಯಾ, ಯು.ಎಸ್.ಎ., ಮತ್ತು ಆಸ್ಟ್ರೇಲಿಯಾ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇವುಗಳು ವರುಷದಲ್ಲಿ ರಫ್ತು ಮಾಡುವ ಗೋಧಿಯ ಮೌಲ್ಯ ತಲಾ ಏಳು ಬಿಲಿಯನ್ ಡಾಲರ್. ಗೋಧಿ ರಫ್ತಿನಲ್ಲಿ ಕೆನಡಾದ ನಂತರ ನಾಲ್ಕನೇ ಸ್ಥಾನ ಯುಕ್ರೈನ್ ದೇಶದ್ದು. ಆ ಯುದ್ಧದಿಂದಾಗಿ, ಯುಕ್ರೈನ್ ಮತ್ತು ಅತ್ಯಧಿಕ ಗೋಧಿ ಉತ್ಪಾದಿಸುವ ರಷ್ಯಾದಿಂದ (36.27 ಮಿಲಿಯ ಟನ್) ಗೋಧಿಯ ರಫ್ತು ನಿಂತು ಹೋಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಗಗನಕ್ಕೇರಿತು. ಮೇ ತಿಂಗಳಿನಲ್ಲಿ ಗೋಧಿಯ ಬೆಲೆಯಲ್ಲಿ ಶೇಕಡಾ 56ರಷ್ಟು ಹೆಚ್ಚಳವಾಯಿತೆಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಭಾರತದ ಆಹಾರ ಮತ್ತು ವಾಣಿಜ್ಯ ಸಚಿವರು ಎಪ್ರಿಲ್ 2022ರ 2ನೇ ವಾರದಲ್ಲಿ ಭರ್ಜರಿ 10-15 ಮಿಲಿಯ ಟನ್ ಗೋಧಿ ರಫ್ತು ಬಗ್ಗೆ ಘೋಷಿಸಿದರು. ಆದರೆ, ಅದಾಗಿ ಒಂದು ತಿಂಗಳೊಳಗೆ ಭಾರತ ಗೋಧಿ ರಫ್ತು ನಿಷೇಧಿಸಿತು!

ಈ ಅವಾಂತರಕ್ಕೆ ಕಾರಣವೇನು? ಫೆಬ್ರವರಿ 2022ರ ಎರಡನೇ ವಾರದಲ್ಲಿ, ಕೃಷಿ ಮಂತ್ರಾಲಯವು ಆಹಾರಧಾನ್ಯಗಳ ವಾರ್ಷಿಕ ಉತ್ಪಾದನೆ 111.3 ಮಿಲಿಯನ್ ಟನ್ ಎಂದು ಅಂದಾಜಿಸಿತ್ತು. ಅದನ್ನು ನಂಬಿ ಆಹಾರ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯಗಳು, ಗೋಧಿ ರಫ್ತಿನ ಸಹಿತ, ಮುಖ್ಯವಾದ ಧೋರಣಾತ್ಮಕ ನಿರ್ಧಾರಗಳನ್ನು ಕೈಗೊಂಡವು. ಆದರೆ, ಆಹಾರಧಾನ್ಯ ಉತ್ಪಾದನೆಯ ಅಂದಾಜಿನ ಆ ಅಂಕೆಸಂಖ್ಯೆ ನಂಬಲರ್ಹವಾಗಿರಲಿಲ್ಲ ಎಂಬುದು ಈಗ ನಮಗೆ ತಿಳಿದಿದೆ.

ಈ ನಿಟ್ಟಿನಲ್ಲಿ, ಅಂತರರಾಷ್ಟ್ರೀಯ ಸರಕು ವಹಿವಾಟು ಘಟಕದ ಅಧಿಕಾರಿಯೊಬ್ಬರು ತಿಳಿಸುವ ಮಾಹಿತಿ: ಆಹಾರಧಾನ್ಯ ಮತ್ತು ಇತರ ಕೃಷಿ ಬೆಳೆಗಳ ಫಸಲಿನ ಉತ್ಪಾದನೆ ಅಂದಾಜಿಸಲು ಭಾರತ ಈಗಲೂ ಪುರಾತನ ಪದ್ಧತಿಯೊಂದನ್ನು ಬಳಸುತ್ತಿದೆ. ಅದು, ಮೊಘಲ ಮಹಾರಾಜ ಅಕ್ಬರನ ಹಣಕಾಸಿನ ಮಂತ್ರಿಯಾಗಿದ್ದ ರಾಜಾ ತೋಡರ ಮಲ್ ರೂಪಿಸಿದ, 450 ವರುಷ ಹಳೆಯ ಪದ್ಧತಿ! ಗ್ರಾಮ ಮಟ್ಟದ ರೆವಿನ್ಯೂ ಅಧಿಕಾರಿಗಳು ತಿಳಿಸುವ ಫಸಲಿನ ಅಂದಾಜನ್ನು ಆಧರಿಸಿದ ಪದ್ಧತಿ.

ಭಾರತ ಸರಕಾರದ “ಆಹಾರ ಭದ್ರತೆಯ ಯೋಜನೆ”ಗಳಿಗಾಗಿ (ಪಡಿತರ ವ್ಯವಸ್ಥೆ ಸಹಿತ) ಈ ವರುಷ ಆಹಾರ ಮಂತ್ರಾಲಯ ಖರೀದಿಸಿದ ಗೋಧಿಯ ಪರಿಮಾಣ ಕುಸಿದಿತ್ತು - ಖರೀದಿಯ ಗುರಿಗೆ ಹೋಲಿಸಿದಾಗ 25 ಮಿಲಿಯ ಟನ್ ಕೊರತೆ. ಆದ್ದರಿಂದ 13 ಮೇ 2022ರಂದು ಭಾರತ ಸರಕಾರ ಗೋಧಿ ರಫ್ತನ್ನು ನಿಷೇಧಿಸಿತು. ಈ ನಿಷೇಧದ ಉದ್ದೇಶ: ಏರುತ್ತಿರುವ ಆಹಾರದ ಹಣದುಬ್ಬರ ಕಡಿಮೆ ಮಾಡುವುದು (ಎಪ್ರಿಲ್ 2021ರಿಂದ ಎಪ್ರಿಲ್ 2022ಕ್ಕೆ ಆಹಾರದ ಹಣದುಬ್ಬರ ಶೇ.8.4 ಏರಿತ್ತು.)

ಈ ಅವಾಂತರದ ಬಗ್ಗೆ ಆಹಾರ ಮಂತ್ರಾಲಯದ ನಿವೃತ್ತ ಕಾರ್ಯದರ್ಶಿ ಟಿ. ನಂದಕುಮಾರ್ ಹೀಗೆನ್ನುತ್ತಾರೆ: “ಕೃಷಿ ಬೆಳೆಗಳ ಫಸಲು ಉತ್ಪಾದನೆ ಅಂದಾಜಿಸಲು ಅಗತ್ಯವಾದ ಎಲ್ಲವೂ ಭಾರತದಲ್ಲಿವೆ - ಡ್ರೋನ್‌ಗಳು, ದೂರಸಂವೇದಿ ತಂತ್ರಜ್ನಾನ, ಕೃತಕ ಬುದ್ಧಿಮತ್ತೆ, ಮೆಷೀನ್ ಲರ್ನಿಂಗ್. ಆದರೆ, ಇವತ್ತಿಗೂ ಗ್ರಾಮಮಟ್ಟದ ರೆವೆನ್ಯೂ ಅಧಿಕಾರಿಗಳು ಒದಗಿಸುವ ನಂಬಲರ್ಹವಲ್ಲದ ಅಂಕೆಸಂಖ್ಯೆಗಳನ್ನು ಅವಲಂಬಿಸುವುದೇ ಸಮಸ್ಯೆಯ ಮೂಲ ಕಾರಣ. ಅವರು ರೈತರ ಜಮೀನಿಗೆ ಹೋಗದೆ, ತಮ್ಮ ಕಚೇರಿಗಳಲ್ಲಿ ಕುಳಿತು ಅಂಕೆಸಂಖ್ಯೆ ವರದಿ ಮಾಡುವುದು ಸರ್ವೇಸಾಮಾನ್ಯ. ಈಗಲೂ ನಮ್ಮ ದೇಶದಲ್ಲಿ ವರದಿ ಮಾಡಲಾಗುವ ಒಟ್ಟು “ಬೆಳೆ ಕೊಯ್ಲು ಪರೀಕ್ಷೆ”ಗಳಲ್ಲಿ ಎಲ್ಲೋ ಕೆಲವು ಪರೀಕ್ಷೆಗಳನ್ನು ಮಾತ್ರ ನಿಜವಾಗಿ ನಡೆಸಲಾಗಿರುತ್ತದೆ.” (ಗಮನಿಸಿ: ಬೆಳೆ ಕೊಯ್ಲು ಪರೀಕ್ಷೆಗಳನ್ನು ಆಯ್ದ ಪ್ರದೇಶಗಳಲ್ಲಿ ನಿರ್ದಿಷ್ಟ ವಿಸ್ತೀರ್ಣದ ರೈತರ ಹೊಲಗಳ ಫಸಲು ಕೊಯ್ಲು ಮಾಡಿ, ಇಳುವರಿ ಅಂದಾಜಿಸಲಿಕ್ಕಾಗಿ ನಡೆಸಲಾಗುತ್ತದೆ.)

ಆಹಾರ ಮಂತ್ರಾಲಯದ ಆರ್ಥಿಕ ಮತ್ತು ಅಂಕೆಸಂಖ್ಯಾ ವಿಭಾಗದ ಅನುಸಾರ, 2016-17ರಲ್ಲಿ ರಾಜ್ಯ ಸರಕಾರಗಳು 1.4 ಮಿಲಿಯ ಬೆಳೆ ಕೊಯ್ಲು ಪರೀಕ್ಷೆಗಳನ್ನು ಜರಗಿಸಿದ್ದವು - ಆಹಾರಧಾನ್ಯ ಮತ್ತು ದ್ವಿದಳ ಧಾನ್ಯ ಬೆಳೆಗಳ ಫಸಲಿನ ಪರಿಮಾಣ ಅಂದಾಜಿಸಲಿಕ್ಕಾಗಿ. ಇವುಗಳಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಸ್ಯಾಂಪಲ್ ಚೆಕ್‌ಗಳನ್ನು ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ ಒದಗಿಸಿತ್ತು.

ಈಗ, ಗೋಧಿಯ ಉತ್ಪಾದನೆಯ ಅಂದಾಜಿನಲ್ಲಿ ಆದ ಅವಾಂತರ ಸುದ್ದಿಯಲ್ಲಿದೆ. ಹತ್ತಿ ಉತ್ಪಾದನೆಯ ಅಂದಾಜಿನಲ್ಲಿಯೂ ಇಂತಹದೇ ಅವಾಂತರ ಆಗಿದೆ. ಕೃಷಿ ಮಂತ್ರಾಲಯ ಹತ್ತಿ ಬೆಳೆ ಪ್ರದೇಶವನ್ನು ತಪ್ಪಾಗಿ ವರದಿ ಮಾಡಿತ್ತು. ಕೊನೆಗೆ, ಮಾರುಕಟ್ಟೆಗೆ ಬಂದ ಫಸಲು ತೀರಾ ಕಡಿಮೆಯಾದ ಕಾರಣ ಹತ್ತಿಯ ಬೆಲೆ ಏರಿತು.

ಬೆಳೆ ಕೊಯ್ಲು ಪರೀಕ್ಷೆ ನಡೆಸಲಿಕ್ಕಾಗಿ ನಿಗದಿ ಪಡಿಸುವ “ವೆಚ್ಚ" ತೀರಾ ಕಡಿಮೆ; ಆದ್ದರಿಂದ ರೆವೆನ್ಯೂ ಅಧಿಕಾರಿಗಳು ಆ ಪರೀಕ್ಷೆ ನಡೆಸಲಿಕ್ಕಾಗಿ ರೈತರ ಜಮೀನಿಗೆ ಹೋಗೋದೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ, ಕೃಷಿ ಮಂತ್ರಾಲಯ ಅವರು ವರದಿ ಮಾಡುವ ಅಂಕೆಸಂಖ್ಯೆಗಳನ್ನೇ ಅವಲಂಬಿಸುತ್ತದೆ. ಉಪಗ್ರಹಗಳ ಮಾಹಿತಿ ಮತ್ತು ದೂರಸಂವೇದಿ ತಂತ್ರಜ್ನಾನ ಬಳಸುವ ಇರಾದೆಯೇ ಅಧಿಕಾರಿಗಳಿಗೆ ಇಲ್ಲ.

ಈ ನಿಟ್ಟಿನಲ್ಲಿ ನವದೆಹಲಿಯ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ರೀಸರ್ಚ್ ಫೆಲೋ ಅವಿನಾಶ್ ಕಿಶೋರ್ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಸುತ್ತಾರೆ: “ಭಾರತದ ಅಂಕೆಸಂಖ್ಯೆ ಸಂಗ್ರಹ ವಿಧಾನವು ಆಹಾರಧಾನ್ಯಗಳ ಮಾಹಿತಿ ಸಂಗ್ರಹಕ್ಕಾಗಿಯೇ ರೂಪಿಸಲ್ಪಟ್ಟಿದೆ. ಮೌಲ್ಯದ ದೃಷ್ಠಿಯಿಂದ, ತೋಟಗಾರಿಕಾ ಬೆಳೆಗಳು, ಹಾಲು ಮತ್ತು ಜಾನುವಾರು ಉತ್ಪನ್ನಗಳ ಮೌಲ್ಯ ಆಹಾರಧಾನ್ಯಗಳ ಮೌಲ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಆದರೆ ಇವುಗಳ ಬಗ್ಗೆ ಸಂಗ್ರಹಿಸುವ ಅಂಕೆಸಂಖ್ಯೆ ಬೇಕಾಬಿಟ್ಟಿ.”

ಅವರು ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ನೀಡುತ್ತಾರೆ: “ಕಡಿಮೆ ಕಾಲಾಂತರದಲ್ಲಿ ಕೊಯ್ಲು ಮಾಡುವ ಮಾವು, ಟೊಮೆಟೊ ಇಂತಹ ತೋಟಗಾರಿಕಾ ಬೆಳೆಗಳ ಫಸಲಿನ ಅಂದಾಜಿನಲ್ಲಿ ಬಹಳ ತಪ್ಪುಗಳು ಆಗುತ್ತವೆ. ಇದರಿಂದಾಗಿ, ರೈತರಿಗೂ ಗ್ರಾಹಕರಿಗೂ ಬೆಲೆಯ ಏರಿಳಿತ ನಿರಂತರ ತಲೆನೋವಾಗಿದೆ. ಉದಾಹರಣೆಗೆ, ಕಳೆದ ವರುಷಕ್ಕೆ ಹೋಲಿಸಿದಾಗ, 5 ಜೂನ್ 2022ರಂದು ಟೊಮೆಟೊದ ಸರಾಸರಿ ಬೆಲೆಯಲ್ಲಿ ಬರೋಬ್ಬರಿ ಶೇಕಡಾ 146 ಹೆಚ್ಚಳವಾಗಿದೆ! (ಇದು ಗ್ರಾಹಕ ವ್ಯವಹಾರಗಳ ಮಂತ್ರಾಲಯ ನೀಡಿರುವ ಮಾಹಿತಿ) ಇದರಿಂದಾಗಿ, ರೈತರು ಮುಂದಿನ ಹಂಗಾಮಿನಲ್ಲಿ ಜಾಸ್ತಿ ಪ್ರದೇಶದಲ್ಲಿ ಟೊಮೆಟೋ ಬೆಳೆಯುತ್ತಾರೆ. ಅದರ ಫಸಲು ಕೊಯ್ಲಿಗೆ ಬಂದಾಗ, ಬೆಲೆ ಕುಸಿಯುತ್ತದೆ; ಆಗ ರೈತರು ಚಿಕ್ಕಾಸಿನ ಬೆಲೆಯಿಲ್ಲದ ಟೊಮೆಟೊ ರಸ್ತೆಗೆಸೆಯುತ್ತಾರೆ.”

ಕೃಷಿ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ಮುಂಚೂಣಿಗೆ ಬರಬೇಕೆಂದಾದರೆ, ಮೊದಲು ಆಗಬೇಕಾದ ಕೆಲಸ: ಅವುಗಳ ಬಗೆಗಿನ ಕರಾರುವಾಕ್ ಅಂಕೆಸಂಖ್ಯೆ ಸಂಗ್ರಹಕ್ಕಾಗಿ ಆಧುನಿಕ ತಂತ್ರಜ್ನಾನ ಆಧಾರಿತ ವ್ಯವಸ್ಥೆಯನ್ನು ಬಳಕೆಗೆ ತರುವುದು.

ಫೋಟೋ: ಗೋಧಿ ತೆನೆಗಳು … ಕೃಪೆ: ಫ್ರೀಗ್ರೇಟ್ ಪಿಚ್ಚರ್ಸ್