ಗೋಲ್ ಮಾಲ್ ಟಿವಿ ರಿಪೋರ್ಟರ್ ಗೋವಿಂದ

ಗೋಲ್ ಮಾಲ್ ಟಿವಿ ರಿಪೋರ್ಟರ್ ಗೋವಿಂದ

     ಎಂದಿನಂತೆ ಮಂಕ, ಮೂಢರು ಸಂಜೆ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮಡ್ಡಿ ಮತ್ತು ಮುಠ್ಠಾಳರು ಮೆಟ್ಟಿಲ ಮೇಲೆ ಕುಳಿತು ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದುದನ್ನು ಕಂಡು ಇವರೂ ಸೇರಿಕೊಂಡರು. ಸರ್ಕಾರಿ ಶಾಲೆಯೊಂದರ ಶಿಕ್ಷಕನಾಗಿದ್ದ ಮುಠ್ಠಾಳ ಹೆಡ್ ಮಾಸ್ಟರನ ಕಿರಿಕಿರಿ ಬಗ್ಗೆ ಕೊರಗುಟ್ಟುತ್ತಿದ್ದ. ರಜಾ ಕೇಳಿದರೆ ಕೊಡಲ್ಲ, ಲೇಟಾಗಿ ಬಂದರೆ ಸಿ.ಎಲ್. ಕಟ್ ಮಾಡ್ತಾನೆ, ಹಾಗೆ, ಹೀಗೆ ಅಂತ ಅಲವತ್ತುಕೊಳ್ಳುತ್ತಿದ್ದ.

ಮುಠ್ಠಾಳ: ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ ಕಣ್ರೋ. ಬೇರೆ ಸ್ಕೂಲಿಗೆ ಟ್ರಾನ್ಸ್‌ಫರ್ ಮಾಡಿಸ್ಕೊಳ್ಳೋಕೂ ನೋಡಿದೆ ಕಣೋ, ಅದಕ್ಕೂ ಕಲ್ಲು ಹಾಕಿದ ಕಣೋ. ಅವನಿಗೊಂದು ಗತಿ ಕಾಣಿಸ್ಬೇಕು.

ಮಂಕ:  ಶಿಕ್ಷಣಾಧಿಕಾರಿ ಹತ್ರ ಮಾತಾಡಬೇಕಿತ್ತು.

ಮುಠ್ಠಾಳ; ಅಯ್ಯೋ, ಅವನು ಅವರೆಲ್ಲರ ಹತ್ರ ಚೆನ್ನಾಗಿದಾನೆ. ನಾನು ಅವರ ಆಫೀಸಿನಲ್ಲಿ ಏನು ಮಾತಾಡಿದರೂ ಅವನಿಗೆ ಗೊತ್ತಾಗಿಹೋಗುತ್ತೆ. ಅವನು ಬಂದು ಕಡ್ಡಿ ಆಡಿಸಿ ಹೋಗ್ತಾನೆ. ನಾಲ್ಕು ತದುಕಿಬಿಡೋಣ ಅಂದರೆ ಅದೂ ಎಡವಟ್ಟಾಗುತ್ತೆ. ಏನಾದರೂ ದಾರಿ ಇದ್ರೆ ಹೇಳ್ರೋ.

     ಹಲ್ಲು ಕಡಿಯುತ್ತಾ ಧುಮುಗುಟ್ಟುತ್ತಿದ್ದ ಮುಠ್ಠಾಳನನ್ನು ಕಂಡು ಸ್ನೇಹಿತರಿಗೆ ಕನಿಕರವಾಯಿತು. ಏನೋ ಹೊಳೆದವನಂತೆ ಮಡ್ಡಿ ಪ್ರಕಾಶಮಾನನಾದ.

ಮಡ್ಡಿ:  ಸರ್ವ ರೋಗಕ್ಕೆ ಸಾರಾಯಿ ಮದ್ದು ಅನ್ನೋ ಹಾಗೆ ಸರ್ವಸಮಸ್ಯೆಗೆ ಪರಿಹಾರ ಕೊಡೋ ಗೋವಿಂದ ಇದಾನೆ. ಅವನ ಹತ್ರ ಹೋಗೋಣ. 

ಮೂಢ: ಆ ಗೋಲ್ ಮಾಲ್ ಚಾನೆಲ್ ರಿಪೋರ್ಟರ್ ಗೋವಿಂದಾನಾ? ನಿನ್ನ ದೂರದ ನೆಂಟ? ಅವನೇನು ಮಾಡ್ತಾನೋ?

ಮಡ್ಡಿ:  ಹೂಂ, ಅವನೇ. ಅವನು ಬಂದ ಅಂದರೆ ಆ ಹೆಡ್ ಮಾಸ್ಟರನಿಗೆ ಒಂದು ಗತಿ ಕಾಣಿಸ್ತಾನೆ. ಎಲ್ಲರೂ ಹೋದರೆ ಕೆಲಸ ಕೆಡುತ್ತೆ. ನಾನು ಮುಠ್ಠಾಳ ಇಬ್ರೇ ಹೋಗಿಬರ್ತೀವಿ. ಅವನಿಗೆ ಪುರುಸೊತ್ತೇ ಇರಲ್ಲ. ಅಪಾಯಿಂಟ್ ಮೆಂಟ್ ತೆಗೆದುಕೊಂಡೇ ಹೋಗಬೇಕು.

     ಪರಿಹಾರ ಕಂಡ ಖುಷಿಯಲ್ಲಿ ಅವತ್ತಿನ ಸಂಜೆಯ ತಿಂಡಿ, ಕಾಫಿಯ ಖರ್ಚನ್ನು ಮುಠ್ಠಾಳನೇ ವಹಿಸಿಕೊಂಡ. ಫೋನು ಮಾಡಿ ವಿಚಾರಿಸಿದಾಗ ಮೂರು ದಿನದ ನಂತರ ಮಧ್ಯಾಹ್ನ 4 ಘಂಟೆಗೆ ಅಪಾಯಿಂಟ್ ಮೆಂಟ್ ಸಿಕ್ಕಿತು. ಬೇರೆ ರಿಪೋರ್ಟರುಗಳು ಸುದ್ದಿಗಾಗಿ ಓಡಾಡುತ್ತಿದ್ದರೆ ಸುದ್ದಿಗಳೇ ತನ್ನಲ್ಲಿಗೆ ಬರುತ್ತವೆ ಎಂದು ಗೋವಿಂದ ಜಂಬದಿಂದ ಹೇಳುತ್ತಿದ್ದ. ಸಮಯಕ್ಕೆ ಸರಿಯಾಗಿ ಮಡ್ಡಿ, ಮುಠ್ಠಾಳರು ಗೋವಿಂದನ ಮನೆಗೆ ಹೋದರು. ಕೆಲವೇ ವರ್ಷಗಳ ಹಿಂದೆ ಒಂದು ಸಣ್ಣ ಮಂಗಳೂರು ಹೆಂಚಿನ ಬಾಡಿಗೆ ಮನೆಯಲ್ಲಿದ್ದ ಗೋವಿಂದ ಈಗ ಒಂದು ದೊಡ್ಡ ಬಂಗಲೆಯ ಒಡೆಯ. ವರಾಂಡಾದಲ್ಲಿ ಹಾಕಿದ್ದ ಸಾಲು ಕುರ್ಚಿಗಳಲ್ಲಿ ಏಳೆಂಟು ಜನ ಕುಳಿತಿದ್ದರು. ಟಿವಿಎಸ್ ಮೊಪೆಡ್ಡಿನಲ್ಲಿ ಓಡಾಡುತ್ತಿದ್ದವನು ಇಂದು ಇನೋವಾ ಕಾರಿನ ಮಾಲಿಕ. ಮಡ್ಡಿ, ಮುಠ್ಠಾಳರು ಗೋವಿಂದನನ್ನು ಕಂಡು ನಮಸ್ಕರಿಸಿದಾಗ ಅವನು ನೆಂಟ ಮಡ್ಡಿಯನ್ನು ಕುರಿತು, 'ಆರಾಮವಾಗಿ ಮಾತಾಡೋಣ, ಕೂತ್ಕೊಳಿ. ಬಂದಿರೋರನ್ನ ಬೇಗ ಕಳಿಸಿಬಿಡ್ತೀನಿ' ಅಂದು ಹೊರಗಿದ್ದವರನ್ನು ಒಬ್ಬೊಬ್ಬರಾಗಿ ಕರೆಸಿ ಅವರುಗಳಿಗೆ ಪರಿಹಾರ ಹೇಳಿ ಕಳಿಸಿದ.

ಗೋವಿಂದ:  ಈಗ ಹೇಳು ಮಡ್ಡಿ. ನಿಮ್ಮ ಸ್ನೇಹಿತರದೇನು ಸಮಸ್ಯೆ?

     ಮುಠ್ಠಾಳ ಪುನಃ ಮೊದಲಿನಿಂದ ಪೂರ್ಣವಾಗಿ ವರದಿ ಒಪ್ಪಿಸಿದ. ಕೇಳಿಕೊಂಡ ಗೋವಿಂದ ಐದು ನಿಮಿಷ ಸೀಲಿಂಗ್ ಫ್ಯಾನ್ ನೋಡುತ್ತಾ ಏನೋ ಲೆಕ್ಕ ಹಾಕುತ್ತಿದ್ದ. ಕೊನೆಗೆ ಬಾಯಿಬಿಟ್ಟ.

ಗೋವಿಂದ: ಇದು ಬಹಳ ಖರ್ಚಿನ ಬಾಬತ್ತು. ನಿಮ್ಮ ಹೆಸರು ಹೊರಗೆ ಬರದಂತೆ ನೋಡಿಕೊಳ್ಳಬೇಕು. ಜನರನ್ನು ಸೇರಿಸಬೇಕು. ನಮ್ಮ ಸಂಪಾದಕರನ್ನೂ ನೋಡಿಕೊಳ್ಳಬೇಕು. ನಿಮ್ಮ ಕೈಲಿ ಆಗಲಾರದು, ಬಿಡಿ.

ಮುಠ್ಠಾಳ:  ಎಷ್ಟು ಖರ್ಚಾದರೂ ಪರವಾಗಿಲ್ಲ. ಸಾಲ ಮಾಡಿಯಾದರೂ ಕೊಡುತ್ತೇನೆ. ಅವನು ತಲೆ ಮೇಲೆತ್ತಬಾರದು, ಹಾಗಾಗಬೇಕು.

ಗೋವಿಂದ: ಸರಿ ಹಾಗಾದರೆ ಈಗ ಇಪ್ಪತ್ತು ಸಾವಿರ ಅಡ್ವಾನ್ಸ್ ಕೊಡಿ. ಒಟ್ಟು ಎಷ್ಟು ಕೊಡಬೇಕು ಅನ್ನೋದನ್ನು ನಮ್ಮ ಸಂಪಾದಕರನ್ನು ಕೇಳಿ ಹೇಳ್ತೀನಿ. ಕೆಲಸ ಆಗೋ ದಿವಸ ಉಳಿದ ದುಡ್ಡು ಕೊಟ್ಟ ನಂತರವೇ ನಮ್ಮ ಕೆಲಸ ಶುರು ಆಗುತ್ತೆ. ಕೊಡಲಿಲ್ಲ ಅಂದರೆ ಕೆಲಸ ಆಗಲ್ಲ. ನಿಮ್ಮ ಅಡ್ವಾನ್ಸ್ ಹಣಾನೂ ವಾಪಸು ಸಿಗಲ್ಲ.

ಮುಠ್ಠಾಳ: ಈಗ ಹತ್ತು ಸಾವಿರ ಇದೆ. ಉಳಿದದ್ದು ಖಂಡಿತಾ ಕೊಡ್ತೀನಿ. ಕೆಲಸ ಮಾಡಿಕೊಡಿ. ಏನು ಮಾಡಬೇಕೂ ಅಂತ ಇದೀರಿ?

ಗೋವಿಂದ:  ಅದು ಪ್ರೊಫೆಶನಲ್ ಸೀಕ್ರೆಟ್. ಈಗ ಹೇಳಲ್ಲ. ಒಟ್ಟಿನಲ್ಲಿ ಅವನು ಇನ್ನುಮುಂದೆ ನಿಮ್ಮ ತಂಟೆಗೆ ಇರಲಿ, ಬೇರೆ ಯಾರ ತಂಟೆಗೂ ಹೋಗಕ್ಕಾಗಬಾರದು ಹಾಗೆ ಮಾಡ್ತೀವಿ.

ಮುಠ್ಠಾಳ: ನೀವು ಹೇಳೋ ಅಷ್ಟು ಹಣ ಕೊಡ್ತೀನಿ. ನಾಳೆ ನಾಡಿದ್ದರಲ್ಲಿ ಕೆಲಸ ಆಗಬೇಕು.

ಗೋವಿಂದ: ಇನ್ನು ಒಂದು ವಾರ ನಮಗೆ ಪುರುಸೊತ್ತಿಲ್ಲ. ಇಂದು ಸಂಜೆ ಲಾಯರ್ ಗುಂಡಣ್ಣನನ್ನು ಚಪ್ಪಲಿಯಲ್ಲಿ ಹೊಡೆಸುವ ಪ್ರೋಗ್ರಾಮ್ ಫಿಕ್ಸ್ ಆಗಿದೆ. ನಾಳೆ ತರಲಾಪುರದಲ್ಲಿ ಗಂಡ-ಹೆಂಡತಿ ಕಿತ್ತಾಟದ ರೆಕಾರ್ಡಿಂಗ್ ಇದೆ. ಸೋಮವಾರ ಗಲಾಟೆಹಳ್ಳಿಯಲ್ಲಿ ಜಮೀನು ವ್ಯವಹಾರಕ್ಕೆ ಅಪ್ಪ-ಮಕ್ಕಳ ಜಗಳಕ್ಕೆ ಡೇಟ್ ಫಿಕ್ಸ್ ಆಗಿದೆ. ಇನ್ನೂ ಮೂರು ಕೆಲಸಗಳಿಗೆ ಫೈನಲ್ ಟಚ್ ಕೊಡಬೇಕು. 23ನೆಯ ತಾರೀಕು ನಿಮ್ಮ ಕೆಲಸ ಆಗುತ್ತೆ. ಆಗುತ್ತಾ? ಅಷ್ಟು ಹೊತ್ತಿಗೆ ಹಣ ಹೊಂದಿಸಿಕೊಳ್ಳಿ.

     ಗೋವಿಂದ ಡೈರಿಯಲ್ಲಿ ಗುರುತು ಹಾಕಿಕೊಂಡ ಮೇಲೆ ಗೆಳೆಯರಿಬ್ಬರು ಹಿಂತಿರುಗಿದರು. ಮುಠ್ಠಾಳ ದಿನ ಲೆಕ್ಕ ಹಾಕುತ್ತಾ 23ನೆಯ ತಾರೀಕು ಎಂದು ಬರುತ್ತದೋ ಎಂದು ಕಾಯುತ್ತಿದ್ದ ದಿನ ಕೊನೆಗೂ  ಬಂದೇಬಿಟ್ಟಿತು. ಶಾಲೆಯಲ್ಲಿ ಪಾಠ ಮಾಡುತ್ತಿದ್ದವನಿಗೆ ಅದರ ಮೇಲೆ ಗಮನವೇ ಇರಲಿಲ್ಲ. ಅನ್ಯಮನಸ್ಕನಾಗಿದ್ದ ಅವನಿಗೆ ಗಂಟೆ ಹನ್ನೆರಡಾದರೂ ಏನೂ ಆಗದಿದ್ದುದು ಕಂಡು ತನ್ನ ಹಣ ಹಳ್ಳ ಹತ್ತಿತೇ ಎಂಬ ಯೋಚನೆ ಶುರುವಾಯಿತು. ಅಷ್ಟು ಹೊತ್ತಿಗೆ ಶಾಲೆಯ ಹೊರಗೆ ಗದ್ದಲ ಆಗುತ್ತಿದ್ದುದು ಕೇಳಿಸಿತು. ಸುಮಾರು 25-30 ಜನರ ಗುಂಪು 'ಕಾಮುಕ ಶಿಂಗಣ್ಣನಿಗೆ ಧಿಕ್ಕಾರ' ಎಂದು ಗಂಟಲು ಹರಿಯುವಂತೆ ಕಿರುಚುತ್ತಿತ್ತು. ಏನು ಗಲಾಟೆ ಎಂದು ನೋಡಲು ಹೊರಬಂದ ಶಿಂಗಣ್ಣನನ್ನು 4-5 ಜನರು ಎಳೆದುಕೊಂಡು ಹಿಗ್ಗಾಮುಗ್ಗಾ ಹೊಡೆಯತೊಡಗಿದರು. ಟಿವಿಯ ಕ್ಯಾಮರಾ ಎಲ್ಲಾ ದೃಷ್ಯಗಳನ್ನು ಸೆರೆಹಿಡಿಯುತ್ತಿತ್ತು. ಏಕೆ, ಏನು ಎಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗಿದ್ದ ಶಿಂಗಣ್ಣನ ಮೂಗು ಒಡೆದು ರಕ್ತ ಬರುತ್ತಿತ್ತು. ಎಡಗಣ್ಣು ಕಪ್ಪುಗಟ್ಟಿತ್ತು. ಒಬ್ಬ ಹೆಣ್ಣು ಮಗಳು ಎದೆ ಬಡಿದುಕೊಳ್ಳುತ್ತಾ ತನ್ನ ಮಗಳಿಗೆ ಶಿಂಗಣ್ಣ ಹೇಗೆ ಹಿಂಸೆ ಕೊಟ್ಟಿದ್ದ ಎಂದು ಅಳುತ್ತಾ ಹೇಳಿದ್ದು ಸಹ ರೆಕಾರ್ಡ್ ಆಯಿತು. ಇದನ್ನೆಲ್ಲಾ ನೋಡುತ್ತಿದ್ದ ಸುತ್ತ ಮುತ್ತಲಿನ ಜನ ಸಹ ಶಿಂಗಣ್ಣನನ್ನು ಮತ್ತೆ ಬಡಿದರು. ಅಷ್ಟು ಹೊತ್ತಿಗೆ ಬಂದ ಪೋಲಿಸರು ಶಿಂಗಣ್ಣನನ್ನು ಜೀಪಿನಲ್ಲಿ ಕೂರಿಸಿಕೊಂಡು ಹೋದರು. ಬಂದ ಆರೋಪ, ಬಿದ್ದ ಪೆಟ್ಟುಗಳಿಂದ ದಂಗುಬಡಿದಿದ್ದ ಶಿಂಗಣ್ಣನಿಗೆ ಮಾತೇ ಹೊರಡುತ್ತಿರಲಿಲ್ಲ. ಟಿವಿಯಲ್ಲಿ ಬರುತ್ತಿದ್ದ ಲೈವ್ ಕಾರ್ಯಕ್ರಮ ನೋಡುತ್ತಿದ್ದವರು ಶಿಂಗಣ್ಣನನ್ನು ಶಪಿಸುತ್ತಿದ್ದರು. 

     ನಂತರದ ಬೆಳವಣಿಗೆಯಲ್ಲಿ ಶಿಂಗಣ್ಣ ಸಸ್ಪೆಂಡ್ ಆದ, ಮುಠ್ಠಾಳನೇ ಇನ್ ಛಾರ್ಜ್ ಹೆಡ್ ಮಾಸ್ಟರ್ ಆದ. ಆದರೆ ಮುಠ್ಠಾಳನಿಗೆ ಶಾಂತಿಯಿರಲಿಲ್ಲ. ಹೆಡ್ ಮಾಸ್ಟರರಿಗೆ ಬುದ್ಧಿ ಕಲಿಸಬೇಕೆಂದು ಅವನಿಗೆ ಇತ್ತಾದರೂ ಈ ರೀತಿ ಆದದ್ದು ಸರಿ ಕಾಣಲಿಲ್ಲ. ಇನ್ನೇನು ಎರಡು ವರ್ಷಕ್ಕೆ ರಿಟೈರ್ ಆಗುತ್ತಿದ್ದ, ಮೊಮ್ಮಕ್ಕಳಿರುವ ಶಿಂಗಣ್ಣನಿಗೆ ಈ ಅಪವಾದ ಹೊರಿಸಬಾರದಿತ್ತು ಎಂದು ಹಳಹಳಿಸಿದ. ಶಿಂಗಣ್ಣ ಸ್ಟ್ರಿಕ್ಟ್ ಆಗಿದ್ದರೂ ಕಚ್ಚೆಹರುಕನಾಗಿರಲಿಲ್ಲ. ಯಾವ ವಿದ್ಯಾರ್ಥಿನಿ ಮೇಲೆ ಶಿಂಗಣ್ಣ ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಹೇಳಲಾಗಿತ್ತೋ ಆ ಹುಡುಗಿ ಬಡಹುಡುಗಿಯಾಗಿದ್ದು, ಅವಳ ಚಿಕ್ಕಮ್ಮನಿಗೆ ದುಡ್ಡು ಕೊಟ್ಟು ಆ ರೀತಿ ಹೇಳಿಸಿದ್ದು ಎಂದು ಗೋವಿಂದ ನಂತರ ಗುಟ್ಟಾಗಿ ಹೇಳಿದ್ದ. ಒಬ್ಬರಿಗೆ 200 ರೂ. ನಂತೆ ಕೊಟ್ಟು 25 ಜನರನ್ನು ಹೊಡೆಸಲು ಕರೆಸಲಾಗಿತ್ತಂತೆ. ಶಿಂಗಣ್ಣನ ಮೇಲೆ ಸುತ್ತಮುತ್ತಲಿನ ಜನರಿಗೆ ತುಂಬಾ ಒಳ್ಳೆಯ ಅಭಿಪ್ರಾಯವಿತ್ತು. ಅವರಿಗೆ ಶಿಂಗಣ್ಣ ಹೀಗೆ ಮಾಡಿದ್ದನೆಂದರೆ ನಂಬಿಕೆ ಬರುತ್ತಿರಲಿಲ್ಲ. ಮುಠ್ಠಾಳ ಗೋವಿಂದನಿಗೆ ದೂರವಾಣಿ ಮೂಲಕ ಹೀಗೆ ಮಾಡಬಾರದಿತ್ತೆಂದು ಆಕ್ಷೇಪಿಸಿದ್ದಕ್ಕೆ ರೇಗಿದ ಗೋವಿಂದ, ಸುಮ್ಮನಿರದಿದ್ದರೆ ಮುಠ್ಠಾಳನೂ ಮನೆಗೆ ಹೋಗಬೇಕಾಗುತ್ತದೆಂದು ಎಚ್ಚರಿಸಿ ಬಾಯಿ ಮುಚ್ಚಿಸಿದ. ಶಿಂಗಣ್ಣನ ಆಪ್ತರು ಮನನೊಂದು ನಿಜ ತಿಳಿಯಲು ಸಂಬಂಧಿಸಿದ ಬಾಲಕಿಯ ಮನೆ ಪತ್ತೆ ಹಚ್ಚಿ ವಿಚಾರಿಸಿದಾಗ ಬಾಲಕಿಯ ತಾಯಿ ಹೆದರಿ ಬಾಯಿ ಬಿಟ್ಟಿದ್ದಳು. ಅವಳಿಗೆ ಹತ್ತು ಸಾವಿರ ಕೊಡುವುದಾಗಿ ಹೇಳಿದ್ದ ಗೋವಿಂದ ಎರಡು ಸಾವಿರ ಮಾತ್ರ ಕೊಟ್ಟಿದ್ದನಂತೆ. ವಿಷಯ ಬಾಯಿಂದ ಬಾಯಿಗೆ ಹರಡಿ ಜನ ರೊಚ್ಚಿಗೆದ್ದರು. ಶಿಂಗಣ್ಣನ ಒಳ್ಳೆಯತನ ಅವನ ಸಹಾಯಕ್ಕೆ ಬಂದಿತು. ಗೋವಿಂದ ಮನೆಯಿಂದ ಹೊರಗೆ ಬರುತ್ತಿದ್ದುದನ್ನೇ ಕಾದಿದ್ದ 10-15 ಜನರ ಗುಂಪು ಅವನು ಹೊರಬರುತ್ತಿದ್ದಂತೆ, ಅವನನ್ನು ಕಾರಿನಿಂದ ಹೊರಗೆಳೆದು ಮನಸೋ ಇಚ್ಛೆ ಥಳಿಸಿ ಪರಾರಿಯಾಯಿತು. ಅವನ ಕೈಕಾಲುಗಳ ಮೂಳೆಗಳು ಮುರಿದಿದ್ದವು. ಆಸ್ಪತ್ರೆಯಲ್ಲಿ ಮೈಪೂರಾ ಬ್ಯಾಂಡೇಜ್ ಹಾಕಿಸಿಕೊಂಡು ಮಲಗಿದ್ದ ಗೋವಿಂದನ ಚಿತ್ರ ತೋರಿಸಿ 'ಗೋಲ್ ಮಾಲ್ ರಿಪೋರ್ಟರ್ ಮೇಲೆ ಅಮಾನುಷ ಹಲ್ಲೆ' ಎಂದು ಬ್ರೇಕಿಂಗ್ ನ್ಯೂಸ್ ದಿನವಿಡೀ ಬಿತ್ತರವಾಯಿತು. ಅದನ್ನು ಖಂಡಿಸುವ ಗಣ್ಯರುಗಳ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡಲಾಯಿತು. ಗುಂಪು ಚರ್ಚಾಗೋಷ್ಠಿಗೆ ಭಾಗವಹಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದ ಮಾಧ್ಯಮಗಳ ಮಾಮೂಲಿ ಬುದ್ಧಿವಂತ ಗಣ್ಯರು ಎಂದಿನಂತೆ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದು ಘಟನೆಯನ್ನು ಖಂಡಿಸತೊಡಗಿದರು. 

     ಮರುದಿನ ಹುಳುಕೇಶನ ನೇತೃತ್ವದಲ್ಲಿ ಮಾಧ್ಯಮದ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಸುಮಾರು 50 ಜನ ಮಾಧ್ಯಮದವರು ಧರಣಿ ಕುಳಿತಿದ್ದರು. ವ್ಹೀಲ್ ಛೇರಿನಲ್ಲಿ ಗೋವಿಂದನನ್ನೂ ಕೂರಿಸಿ ಕರೆತಂದಿದ್ದರು. ಅವರುಗಳು ಧರಣಿ ಕುಳಿತು ಸುಮಾರು ಅರ್ಧ ಘಂಟೆಯಾಗಿರಬಹುದು. ನೂರಾರು ಜನರು ಮಾಧ್ಯಮದವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಬರುತ್ತಿದ್ದುದನ್ನು ಕಂಡು ಹುಳುಕೇಶನಾದಿಯಾಗಿ ಮಾದ್ಯಮದವರೆಲ್ಲರೂ ಕಾಲುಕಿತ್ತರು. ಓಡಲಾಗದ ಗೋವಿಂದನೊಬ್ಬ ರಕ್ಷಣೆಗಾಗಿ ಬಾಯಿ ಬಡಿದುಕೊಳ್ಳುತ್ತಿದ್ದ. ಇಬ್ಬರು ಪೋಲಿಸರು ಅಕ್ಕ ಪಕ್ಕ ನಿಂತಿದ್ದರೂ, ಸೇರಿದ್ದ ತನಗೆ ಜನ ಏನು ಮಾಡುತ್ತಾರೋ ಎಂದು ಅವನು ಹೆದರಿ ನಡುಗುತ್ತಿದ್ದ.  ಸಮಯ ಸರಿದಂತೆ ಪ್ರತಿಭಟಿಸುವ ಜನರ ಸಂಖ್ಯೆ ಬೆಳೆಯುತ್ತಾ ಹೋಯಿತು. ಜನರ ಒತ್ತಾಯಕ್ಕೆ ಮಣಿಯಲೇ ಬೇಕಾಗಿ ಬಂದ ಪೋಲಿಸರು ಗೋಲ್ ಮಾಲ್ ಚಾನೆಲ್ಲಿನ ರಿಪೋರ್ಟರ್ ಮತ್ತು ಸುದ್ದಿ ಸಂಪಾದಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡರು. ಗೋಲ್ ಮಾಲ್ ಚಾನೆಲ್ಲಿನ ಸುದ್ದಿ ಸಂಪಾದಕ ಸಂಪಾದಿಸಿದ್ದ ಅಕ್ರಮ ಸಂಪತ್ತಿನ ಬಗ್ಗೆ ಸಹ ವಿಚಾರಣೆ ನಡೆಸಲು ಲೋಕಾಯುಕ್ತರಿಗೆ ಜನಪರ ಹೋರಾಟಗಾರ ತಮ್ಮಣ್ಣ ದೂರು ಅರ್ಜಿ ಸಲ್ಲಿಸಿದ್ದನ್ನು ಕಂಡು ಇತರ ಮಾಧ್ಯಮಗಳವರು ಬೆಚ್ಚಿ ಬಿದ್ದರು. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಅಂದು ಮಧ್ಯಾಹ್ನ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಮಾಧ್ಯಮದವರು ಇನ್ನು ಮುಂದೆ ಸಾಂಸಾರಿಕ ಮತ್ತು ವೈಯಕ್ತಿಕ ವಿಷಯಗಳಿಗೆ ಮೂಗು ತೂರಿಸುವುದಿಲ್ಲವೆಂದು ಲಿಖಿತ ಮುಚ್ಚಳಿಕೆ ಬರೆದುಕೊಟ್ಟರು.

-ಕ.ವೆಂ.ನಾಗರಾಜ್.  

Comments

Submitted by ಗಣೇಶ Wed, 02/20/2013 - 23:45

ಗೋವಿಂದಾ.... :).ಕವಿನಾಗರಾಜರೆ, ಎಲ್ಲಾ ಸೂಪರ್. ಆದರೆ ಕೊನೆಯಲ್ಲಿ >>>"ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಅಂದು ಮಧ್ಯಾಹ್ನ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಮಾಧ್ಯಮದವರು ಇನ್ನು ಮುಂದೆ ಸಾಂಸಾರಿಕ ಮತ್ತು ವೈಯಕ್ತಿಕ ವಿಷಯಗಳಿಗೆ ಮೂಗು ತೂರಿಸುವುದಿಲ್ಲವೆಂದು ಲಿಖಿತ ಮುಚ್ಚಳಿಕೆ ಬರೆದುಕೊಟ್ಟರು.">>>ಹೀಗಾಗಲು ಸಾಧ್ಯವಿಲ್ಲ!.ತಮ್ಮಣ್ಣ,ಜಿಲ್ಲಾಧಿಕಾರಿ...ಎಲ್ಲರ ನಡುವೆ ಅಡ್ಜಸ್ಟ್ಮೆಂಟ್ ನಡೆದು...ಗೋಲ್ ಮಾಲ್ ರಿಪೋರ್ಟರ್ ಇನ್ನಷ್ಟು ಜನಪ್ರಿಯನಾಗಿ ತನ್ನದೇ ಟಿವಿ ಚಾನಲ್ ಪ್ರಾರಂಭಿಸಿಯಾನು.:) ; ಚಿತ್ರವೂ ಸಹ ಸೂಪರ್.
Submitted by kavinagaraj Thu, 02/21/2013 - 12:18

In reply to by ಗಣೇಶ

ಧನ್ಯವಾದ, ಗಣೇಶರೆ. ನಿಮ್ಮ ಮೆಚ್ಚುಗೆಗೆ ಕೃತಜ್ಞ. ನೀವು ಹೇಳಿದಂತೆ ಕೊನೆಯ ಸಾಲು ಸಾಧ್ಯವಿಲ್ಲದಿರಬಹುದು. ಸಾಧ್ಯವಾಗಬೇಕೆಂಬ ಒಳ ಇಚ್ಛೆ ಹಾಗೆ ಬರೆಸಿದೆ. ಸಾಧ್ಯವಾಗುವ ಕಾಲ ಬರಬೇಕು! :)