`ಗೋವಿಂದಾ... ನಾರಾಯಣಾ... ಶ್ರೀಹರಿ...!'

`ಗೋವಿಂದಾ... ನಾರಾಯಣಾ... ಶ್ರೀಹರಿ...!'

ಬರಹ

`ಗೋವಿಂದಾ... ನಾರಾಯಣಾ... ಶ್ರೀಹರಿ...!'

-ಹೀಗೊಂದು ಕೂಗು ಕೇಳಿಬಂದಾಗ ಗಾಬರಿಯಿಂದ ಹಿಂತಿರುಗಿ ನೋಡಿದೆ. ಸುಮಾರು 40-50 ವಯಸ್ಸಿನ ಹಿರಿಯ ನಾಗರಿಕರೊಬ್ಬರನ್ನು ಒಂದು ಬಜಾಜ್ ಸ್ಕೂಟರ್ ಹೊತ್ತುಕೊಂಡು ಬರುತ್ತಿತ್ತು. ಬಜಾಜ್ ಸ್ಕೂಟರ್ನ ಸದ್ದನ್ನೂ ಕೆಳಕ್ಕೆ ತಳ್ಳಿ ಇವರ ಬಾಯಿಂದ ಹೊರಟ `ಗೋವಿಂದಾ... ನಾರಾಯಣಾ...' ಆ ಪ್ರದೇಶವಿಡೀ ವ್ಯಾಪಿಸಿಬಿಟ್ಟಿತ್ತು. ಅರೆರೆ! ಇದೇನು ದೇವರ ಜಪವೋ ಅಥವಾ ದಾರಿ ಬಿಡಿ ಎನ್ನುವ ಹಾರ್ನೋ ಎಂಬ ಯೋಚನೆ ಕಾಡಿತು. ಆದರೆ ಅವರ ಈ ಜಪ ತಪವನ್ನು ಕೇಳಿಸಿಕೊಂಡ ಉಳಿದವರ್ಯಾರೂ ಈ ಬಗ್ಗೆ ನನ್ನಂತೆ ತಲೆಕೆಡಿಸಿಕೊಳ್ಳದೇ, ಯಾವುದೇ ಭಾವನೆಗಳನ್ನೂ ತೋರ್ಪಡಿಸದೆ ಸುಮ್ಮನಿದ್ದರು. ನನಗೆ ತುಸು ತಮಾಷೆ ಎನಿಸಿತು. ಇದು ನಡೆದಿದ್ದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ. ಪಕ್ಕದ ಅಂಗಡಿಯಲ್ಲಿ ಏನೋ ಕೊಳ್ಳುವುದಿದ್ದಿದ್ದರಿಂದ ಅಲ್ಲಿಗೆ ಹೋದವನು ಆ ಅಂಗಡಿಯಾತನ ಬಳಿ ಈ ಬಗ್ಗೆ ವಿಚಾರಿಸಿದೆ. ಆತ ನಗುತ್ತಾ ಹೇಳಿದ: `ಏನಿಲ್ಲ ಸಾರ್, ಅವರಿಗೆ ಆ್ಯಕ್ಸಿಡೆಂಟ್ ಭಯ. ಅದಕ್ಕೆ ಗಾಡಿ ಓಡಿಸುವಾಗ ಹಾಗೆ ಗೋವಿಂದ, ನಾರಾಯಣ, ಶ್ರೀಹರಿಯರನ್ನೆಲ್ಲ ಕರೆಯುತ್ತಾರೆ...!' ಅವನ ಮಾತಿಗೆ ನನಗೂ ನಗು ಬಂದರೂ ಅದು ಬೆಂಗಳೂರಿನ ಸಂಚಾರ ದಟ್ಟಣೆಯ ಮತ್ತೊಂದು ಮುಖವನ್ನು, ಮನುಷ್ಯನ ಅಂತರಾಳದಲ್ಲಿ ಹುದುಗಿರುವ ಭಯದ ತೀವ್ರತೆಯನ್ನು ತೆರೆದಿಟ್ಟಿದ್ದನ್ನೂ ಅರಗಿಸಿಕೊಂಡೆ.

***

ಆ ಹಿರಿಯ ವ್ಯಕ್ತಿಯ ಯಾಚನೆಯ ಉದ್ಗಾರಕ್ಕೂ ನನ್ನ ಬಾಲ್ಯದ `ಭಯ'ದ ದಿನಗಳಿಗೂ ಸಾಮ್ಯವಿದೆ. ಚಿಕ್ಕವನಿದ್ದಾಗ ಅಕಸ್ಮಾತ್ ರಾತ್ರಿ ಎಲ್ಲಾದರೂ ಹೋಗಲು ಭಯವಾದಾಗ ನಮ್ಮ ಆಯಿ (ಅಜ್ಜಿ) ಹೇಳುತ್ತಿದ್ದುದು- `ರಾಮ ನಾಮ ಜಪಿಸು'. ಆಗೆಲ್ಲ ಕತ್ತಲೆಗೆ ನಾನೆಷ್ಟು ಹೆದರುತ್ತಿದ್ದೆ ಅಂದರೆ ಜೊತೆಯಲ್ಲಿ ಯಾರಾದರೂ ಇದ್ದರೂ ಕೂಡ ರಾತ್ರಿ ಹೊತ್ತು ನಡೆದುಕೊಂಡು ಹೋಗುವಾಗ ಆಯಿ ಹೇಳಿದಂತೆ `ರಾಮ... ರಾಮ... ರಾಮ...' ಎಂದು ಜಪಿಸುತ್ತಾ ನಡೆಯುತ್ತಿದ್ದೆ. ಹೀಗೆ ಹೇಳುತ್ತಿದ್ದ `ರಾಮ ರಾಮ' ನಾಮ ಯಾವುದೋ ಒಂದು ಕ್ಷಣದಲ್ಲಿ `ಮರ ಮರ ಮರ' ಎಂದು ಬದಲಾಗಿ ಕೊನೆಗೆ `ಮರ'ಕ್ಕೇ ನಿಂತುಹೋಗುತ್ತಿದ್ದ ತಮಾಷೆಯೂ ಘಟಿಸಿಬಿಡುತ್ತಿತ್ತು!

ಇಷ್ಟಕ್ಕೂ ನಾನೇಕೆ ರಾತ್ರಿ ಹೊತ್ತು ಅಷ್ಟು ಭಯಪಡುತ್ತಿದ್ದೆ ಅಂದರೆ, ಆಗ ಶಿರಸಿ ಎಂಬ ಮಲೆನಾಡಿನಲ್ಲಿ ಹರಡಿಕೊಂಡಿದ್ದ ಭಯಂಕರ ಕಾಡುಗಳು. ಹುಟ್ಟಿದಾರಭ್ಯ ಕುಂದಾಪುರದ ಕಡಲ ತೀರದಲ್ಲಿ, ಒಟ್ಟೊಟ್ಟಿಗೆ ಇರುತ್ತಿದ್ದ ಮನೆಗಳ ಎದುರಿನಲ್ಲಿ, ಹೇಮಾಮಾಲಿನಿಯ ಕೆನ್ನೆಯಂಥ ನುಣುಪಿನ ಹೈವೇಯಲ್ಲಿ 12 ವರ್ಷ ಓಡಾಡಿಕೊಂಡಿದ್ದ ನನಗೆ, ಆನಂತರ ಅನಿವಾರ್ಯವಾಗಿ ಶಿರಸಿ ಎಂಬ ಘಟ್ಟವನ್ನು ಹತ್ತಬೇಕಾಗಿ ಬಂತು. ಇಲ್ಲೋ ಒಂದೆರಡು ಕಿಲೋಮೀಟರ್ಗೊಂದು ಮನೆ, ನಡು ನಡುವೆ ಹಗಲಿನಲ್ಲೂ ಕತ್ತಲೆಯಾದಂಥ ಭ್ರಮೆ ಹುಟ್ಟಿಸುವ ದಟ್ಟ ಕಾಡುಗಳು, ಕೊರಕಲು ಹಾದಿ. ಶಿರಸಿಗೆ ಬಂದು ಹೊಸ ಶಾಲೆಗೆ ಸೇರಿದ ಮೊದಲ ದಿನ ಈ ದಟ್ಟ ಕಾಡುಗಳ ಮಧ್ಯದ ಪುಟ್ಟ ದಾರಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದಾಗ ಅಷ್ಟರವರೆಗೂ ನಾನು ನೋಡಿರದಿದ್ದ, ಅಗೋಚರವಾಗಿದ್ದ ಕಪ್ಪು ಮೂತಿಯ ವಾನರವೊಂದು (ಸ್ಥಳೀಯ ಭಾಷೆಯಲ್ಲಿ ಇದನ್ನು ಕರೆಯುವುದು `ಕರ್ಚೇ ಮಂಗ' ಎಂದು!) `ಗೂಕ್... ಗೂಕ್' ಎಂದು ಕೂಗಿದ್ದು ನನ್ನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತ್ತು. ಅದರ ಕೂಗಿಗೆ ನಾನೆಷ್ಟು ಹೆದರಿದ್ದೆ ಎಂದರೆ ಆ ಮರುದಿನದಿಂದ ಒಂದಿಷ್ಟು ದಿನಗಳ ಕಾಲ ನನ್ನ ಶಾಲೆಗೇ ಬರುತ್ತಿದ್ದ ಪಕ್ಕದೂರಿನ ಮೂರ್ನಾಲ್ಕು ಹುಡುಗರು ಬೆಳಿಗ್ಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು ಮತ್ತು ವಾಪಾಸ್ ಬರುವಾಗ ಮನೆವರೆಗೂ ಜೊತೆಯಾಗುತ್ತಿದ್ದರು. ಆಗ ಅವರೆಲ್ಲ ಹೇಳುತ್ತಿದ್ದ ಸುಳ್ಳು ಸುಳ್ಳೇ ಕತೆಯಿಂದ ನನ್ನ ಭಯ ಇಮ್ಮಡಿಸಿತ್ತು: ನಾವು ಹೋಗುತ್ತಿದ್ದ ದಾರಿಯಲ್ಲಿ ಬೈಲಾಕಟ್ಟೆ ಕೆರೆ ಎಂಬ ಜಾಗವಿದ್ದು, ಅಲ್ಲಿ ದೆವ್ವಗಳು ವಾಸಿಸುತ್ತವೆ, ರಾತ್ರಿ ಹೊತ್ತು ದೂರದಿಂದ ಪುಟ್ಟ ಬೆಂಕಿಯ ಕಿಡಿ ಕಾಣಿಸುತ್ತದೆ, ಹತ್ತಿರ ಹೋದರೆ ಅದರ ಕುರುಹೂ ಇರುವುದಿಲ್ಲ ಇತ್ಯಾದಿ ಇತ್ಯಾದಿ. ಇದಕ್ಕೆ ಪೂರಕವಾಗಿ ಯಾವಾಗಲೂ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದ ನನ್ನ ಇಬ್ಬರು ಅಕ್ಕಂದಿರು ಈ ಬೈಲಾಕಟ್ಟೆ ಕೆರೆ ಬಳಿ ಬಂದಾಗ ಯಾರೋ ಹಿಂದಿನಿಂದ ಇಬ್ಬರ ಹೆಗಲ ಮೇಲೆ ಕೈಹಾಕಿದಂತೆ ಭಾಸವಾಗಿ, ಹಿಂದಿರುಗಿ ನೋಡಿದರೆ ಯಾರೂ ಇಲ್ಲವಾಗಿ, ಇದು ಭೂತ ಚೇಷ್ಟೆಯೇ ಸರಿ ಎಂದು ನಮ್ಮಜ್ಜ ಅದಕ್ಕೊಂದು ಫುಲ್ಸ್ಟಾಪ್ ಕೊಟ್ಟಾಗಿ...!

ಭೂತ, ಪ್ರೇತಗಳ ಕತೆಯ ಹೊರತಾಗಿ ಅವರು ಹೇಳುತ್ತಿದ್ದುದು ಹಿಂದಿನ ಕಾಲದಲ್ಲಿ ನಿಜವಾಗಿ ನಡೆದ ಕಾಡುಪ್ರಾಣಿಗಳ ಕುರಿತಾದದ್ದು. ಊರಿಗೆ ಅಪರಾತ್ರಿ ಹುಲಿ ಬಂದಿದ್ದು, ಗಂಟೆ, ಜಾಗಟೆ, ಬಟ್ಟಲು, ಲೋಟ- ಹೀಗೆ ಕಂಡಿದ್ದನ್ನೆಲ್ಲ ಕರ್ಕಶವಾಗಿ ಬಡಿದು ಅದನ್ನು ಓಡಿಸಿದ್ದು, ಹುಲಿ ದಾಳಿ ಮಾಡಿದ ಪಳೆಯುಳಿಕೆಯೋ ಎಂಬಂತೆ ಪಕ್ಕದೂರಿನಲ್ಲಿ ಕೈ ಕಳೆದುಕೊಂಡ ಒಬ್ಬ ವ್ಯಕ್ತಿ ಇದ್ದಿದ್ದು, ಮುಸ್ಸಂಜೆ ತೋಟಕ್ಕೆ ಹೋಗಿದ್ದ ನಮ್ಮ ಆಯಿ ತೋಟದಲ್ಲಿ ಮೇಯುತ್ತಿದ್ದ ಗಮಯವನ್ನು ಎಮ್ಮೆ ಎಂದುಕೊಂಡು ಓಡಿಸಲು ಹೋಗಿ ಅದು ಗಮಯ ಎಂದು ಅರಿವಾದಾಕ್ಷಣ ಎದ್ದೆನೋ ಬಿದ್ದೆನೋ ಎಂಬಂತೆ ಓಡಿಬಂದಿದ್ದು...

ಹಾಗಾಗಿ ಬಾಲ್ಯದಲ್ಲಿ ರಾತ್ರಿ ಹೊತ್ತು ತಿರುಗುವಾಗ ಭಯ ಓಡಿಸುವ ತಂತ್ರವಾಗಿ ಬಾಯಲ್ಲಿ `ರಾಮ'ನೋ `ಮರ'ವೋ ಒಂದು ಜಪ ಇದ್ದೇ ಇರುತ್ತಿತ್ತು! ಇಷ್ಟಾಗಿಯೂ ಒಂದು ದಿನ ಯಾರದ್ದೋ ಮದುವೆಗೆ ಅಂತ ಹೋದವನು ಹಿಂದಿರುಗುವಾಗ ರಾತ್ರಿಯಾಗಿ, ಮನೆಗೆ ಹೋಗಲೇಬೇಕಾದ ಅನಿವಾರ್ಯತೆಯಲ್ಲಿ ಒಬ್ಬನೇ ಭಂಡ ಧೈರ್ಯದಲ್ಲಿ ಹೊರಟೆ. ನಾಡನ್ನು ದಾಟಿ ಕಾಡಿನ ದಾರಿ ಹಿಡಿದು ಕಾಡು ದಾಟುವವರೆಗೂ ಅಂದುಕೊಂಡಿದ್ದು, ಅಂದುಕೊಳ್ಳದೇ ಇದ್ದಿದ್ದು ಯಾವುದೂ ಘಟಿಸದಿದ್ದಾಗ ಭೂತ, ಪ್ರೇತಗಳೆಲ್ಲ ಲೊಳಲೊಟ್ಟೆ ಎಂಬ ನಿರ್ಧಾರಕ್ಕೆ ನಿಧಾನವಾಗಿ ಮನಸ್ಸು ಜಾರಿತ್ತು.

***

ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆಯೇ ನಿದ್ರೆಯಲ್ಲಿ ಕೆಟ್ಟ ಕನಸೊಂದನ್ನು ಕಂಡು, ಮೂರು ಸಲ ವಿಕಾರವಾಗಿ ಕಿರುಚಿಕೊಂಡು, ಬೆಚ್ಚಿಬಿದ್ದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ನಿದ್ರೆಯೇ ಬಾರದೆ ಹೊರಳಾಡುತ್ತಿದ್ದಾಗ ಬಾಲ್ಯದ ಈ ದಿನಗಳ ಜೊತೆಗೆ ವಿದ್ಯಾರಣ್ಯಪುರದ `ಗೋವಿಂದ'ನೂ ನೆನಪಾದ. ನೀವು ನಗುತ್ತೀರೇನೋ, ಈಗಲೂ ಈ 28ರ ವಯಸ್ಸಿನಲ್ಲೂ ಶಿರಸಿಯ ಆ ಬೈಲಾಕಟ್ಟೆ ಕೆರೆ ಎಂಬ ಜಾಗದ ಮೂಲಕ ರಾತ್ರಿ ಹೊತ್ತು ಹಾದುಹೋಗುವಾಗ ಮನಸ್ಸು ಒಮ್ಮೆ ಅಂಜಿಬಿಡುತ್ತೆ. ಬೇಕೋ ಬೇಡವೋ ಒಂದು ಅನೈಚ್ಛಿಕ ಕ್ರಿಯೆ ಎಂಬಂತೆ ಬಾಯಿ `ರಾಮ'ನಾಮವನ್ನು ಜಪಿಸಲು ಶುರುಮಾಡುತ್ತೆ!