ಗೋವಿನ ಹಾಡು

5

ನಾನು ಈ ಹಾಡಿನ ಸಾಹಿತ್ಯಕ್ಕಾಗಿ ಸರಿ ಸುಮಾರು ಎಲ್ಲ ಅಂತರ್ಜಾಲ ಕೊಂಡಿಗಳನು ತಡಕಿ ನೋಡಿದಾಗ, ಪ್ರತಿಯೊಂದರಲ್ಲಿಯೂ ಒಂದೊಂದು ಆವೃತ್ತಿ ಸಿಗುತ್ತದೆ, ಕೆಲವಲ್ಲಿ ಕೆಲವು ಪದ್ಯಗಳೇ ಇಲ್ಲ, ಇನ್ನೂ ಕೆಲವು ಕಥೆಗಿಂತ ವಿಬಿನ್ನವಾಗಿವೆ, ಎಲ್ಲವನ್ನು ಕ್ರೂಡೀಕರಿಸಿ, ಕಥೆಗೆ ಹಾಗು ಛಂದಸ್ಸಿಗೆ ಬಂಗ ಬರದ ರೀತಿ ಸಂಪದದಲ್ಲಿ ಟೈಪಿಸಿದ್ದೇನೆ, ದಯಮಾಡಿ ತಪ್ಪಿದ್ದರೆ ತಿಳಿಸಿ, ಸರಿಮಾಡಿ ಪುನಹ ಪ್ರಕಟಿಸುತ್ತೇನೆ.


 


ಎಂತಹ ಕಲ್ಲು ಹೃದಯದವರನ್ನೂ ಒಂದು ಕ್ಷಣ ಮನ ಕರಗುವಂತೆ ಮಾಡುವ ಕನ್ನಡಕ್ಕೇ ಹೆಮ್ಮೆ ಎನಿಸುವ, ಕನ್ನಡದ ಪ್ರತಿಯೊಂದು ಮಕ್ಕಳಿಗೂ ಇಷ್ಟವಾಗುವ ಮತ್ತು ಬಾಯಿಪಾಠಮಾಡಿರಲೇಬೇಕಾದ ಅಪರೂಪದ ಜಾನಪದ ಕಾವ್ಯ.


 


ಈ ಹಾಡನ್ನು ಕೇಳಲು ಇಚ್ಚಿಸುವವರು ಕನ್ನಡಆಡಿಯೋ.ಕಾಂ ನ ಈ ಕೊಂಡಿಯನ್ನಿ ಕ್ಲಿಕ್ಕಿಸಿ :  http://www.kannadaaudio.com/Songs/Children/home/GovinaHaadu.php


 


ಗೋವಿನ ಹಾಡು:


 


ಧರಣಿಮಂಡಲ ಮಧ್ಯದೊಳಗೆ


ಮೆರೆಯುತಿಹ ಕರ್ನಾಟ ದೇಶದೊಳ್


ಳಿರುವ ಕಾಳಿಂಗನೆಂಬ ಗೊಲ್ಲನ


ಪರಿಯ ನಾನೆಂತು ಪೇಳ್ವೆನು || ೧ ||


 


ಗಿರಿಗಳೆಡೆಯಲಿ ಅಡವಿ ನಡುವೆ


ತುರುವ ದೊಡ್ಡಿಯ ಮಾಡಿಕೊಂಡು


ಮೆರೆವ ಕಾಳಿಂಗನೆಂಬ ಗೊಲ್ಲನ


ಪರಿಯ ನಾನೆಂತು ಪೇಳ್ವೆನು ||೨||


 


ಗೊಲ್ಲದೊಡ್ಡಿಯೊಲಿರುವ ಹಸುಗಳು


ಎಲ್ಲ ಬೆಟ್ಟದ ಮೇಲೆ ಮೇಯುತ


ಹುಲ್ಲು ಒಳ್ಳೆಯ ನೀರ ಕುಡಿಯುತ


ಅಲ್ಲಿ ಮೆರೆದವರನ್ಯದಿ ||೩||


 


ಕರುಗಳನು ನೆನೆನೆನೆದು ಹಸುಗಳು


ಕೊರಳ ಘಂಟೆ ಢಣಿರು ಢಣಿರನೆ


ಪರಿದು ಲಂಘಿಸಿ ಚಿಮ್ಮಿ ನೆಗೆಯುತ


ಮರಳಿ ಬಂದವು ದೊಡ್ಡಿಗೆ ||೪||


 


ತಮ್ಮ ತಾಯನು ಕಂದು ಕರುಗಳು


ಅಮ್ಮಾ ಎಂದು ಕೂಗಿ ನಲಿಯುತ


ಸುಮ್ಮಾನದೊಳು ಮೊಲೆಯನುಂಡು


ನಿರ್ಮಲದೊಳು ಇದ್ದವು ||೫||


 


ಉದಯ ಕಾಲದೊಳೆದ್ದು ಗೊಲ್ಲನು


ನದಿಯ ಸ್ನಾನವ ಮಾಡಿಕೊಂಡು


ಮುದದಿ ತಿಲಕವ ಹಣೆಯೊಳಿಟ್ಟು


ಚದುರ ಶಿಖೆಯನು ಹಾಕಿದ ||೬||


 


ಎಳೆಯ ಮಾವಿನ ಮರದ ಕೆಳೆಗೆ


ಕೊಳನೂದುತ ಗೊಲ್ಲಗೌಡನು


ಬಳಸಿನಿಂದು ತುರುಗಳನ್ನು


ಬಳಿಗೆ ಕರೆದನು ಹರುಶದಿ ||೭||


 


ಗಂಗೆ ಬಾರೆ ಗೌರಿ ಬಾರೆ


ತುಂಗಭದ್ರೆ ತಾಯಿ ಬಾರೆ


ಕಾಮಧೇನು ನೀನುಬಾರೆಂದು


ಪ್ರೇಮದಲಿ ಗೊಲ್ಲಕರೆದನು ||೮||


 


ಗೊಲ್ಲ ಕರೆದ ದ್ವನಿಯ ಕೇಳಿ


ಎಲ್ಲ ಹಸುಗಳು ಬಂದು ನಿಂತು


ಚಲ್ಲಿ ಸೂಸಿ ಹಾಲು ಕರೆಯಲು


ಅಲ್ಲಿ ತುಂಬಿತು ಬಿಂದಿಗೆ ||೯||


 


ಹಬ್ಬಿದಾ ಮಲೆ ಮಧ್ಯದೊಳಗೆ


ಅರ್ಭುದಾನೆಂದೆಂಬ ವ್ಯಾಘ್ರನು


ಅಬ್ಬರಿಸಿ ಹಸಿ ಹಸಿದು ಬೆಟ್ಟದ


ಕಿಬ್ಬಿಯೊಲು ತಾನಿದ್ದನು ||೧೦|


 


ಸಿಡಿದು ರೊಷದಿ ಮೊರೆಯುತಾ ಹುಲಿ


ಘುಡುಘುಡಿಸಿ ಬೋರಿಡುತ ಛಂಗನೆ


ತುಡುಕಲೆರಗಿದ ರಭಸಕಂಜಿ


ಚದುರಿ ಹೋದವು ಹಸುಗಳು ||೧೧||


 


ಪುಣ್ಯಕೋಟಿ ಎಂಬ ಹಸುವು


ತನ್ನ ಕಂದನ ನೆನೆದುಕೊಂಡು


ಮುನ್ನ ಹಾಲನು ಕೊಡುವೆ


ನೆನುತ ಚಂದದಿ ತಾ ಬರುತಿರೆ ||೧೨||


 


ಇಂದೆನೆಗೆ ಆಹಾರ ಸಿಕ್ಕುತು


ಎಂದು ಬೇಗನೆ ದುಷ್ಟ ವ್ಯಾಘ್ರನು


ಬಂದು ಬಳಸಿ ಅಡ್ಡಗಟ್ಟಿ


ನಿಂದನಾ ಹುಲಿರಾಯನು ||೧೩||


 


ಮೇಲೆ ಬಿದ್ದು ನಿನ್ನನೀಗಲೆ


ಬೀಳ ಹೊಯ್ವೆನು ನಿನ್ನ ಹೊಟ್ಟೆಯ


ಸೀಳಿ ಬಿಡುವೆನು ಎನುತಕೋಪದಿ


ಖೂಳ ವ್ಯಾಘ್ರನು ಕೂಗಲು ||೧೪||


 


ಒಂದು ಬಿನ್ನಹ ಹುಲುಯೆ ಕೇಳು


ಕಂದನಿರುವನು ದೊಡ್ಡಿಯೊಳಗೆ


ಒಂದು ನಿಮಿಷದಿ ಮೊಲೆಯ ಕೊಟ್ಟು


ಬಂದು ಸೇರುವೆನಿಲ್ಲಿಗೆ ||೧೫||


 


ಹಸಿದ ವೇಳೆಗೆ ಸಿಕ್ಕಿದೊಡನೆಯೆ


ವಷವ ಮಾಡದೆ ಬಿಡಲು ನೀನು


ನುಸುಳಿ ಹೊಗುವೆ ಮತ್ತೆ ಬರುವೆಯಾ


ಹುಸಿಯನಾಡುವೆಯೆಂದಿತು ||೧೬||


 


ಸತ್ಯವೇ ನಮ್ಮ ತಾಯಿ ತಂದೆ


ಸತ್ಯವೇ ನಮ್ಮ ಬಂದು ಬಳಗ


ಸತ್ಯವಾಕ್ಯಕೆ ತಪ್ಪಿ ನಡೆದರೆ


ಮೆಚ್ಚನಾ ಪರಮಾತ್ಮನು ||೧೭||


 


ಕೊಂದು ತಿನ್ನುವ ಹುಲಿಗೆ


ಚಂದದಿಂದ ಭಾಷೆಯಿತ್ತು


ಕಂದ ನಿನ್ನನು ನೋಡಿಹೊಗುವೆ


ನೆಂದು ಬಂದೆನು ದೊಡ್ಡಿಗೆ ||೧೮||


 


ಅಮ್ಮ ನೀನು ಸಾಯಲೇಕೆ


ನನ್ನ ತಬ್ಬಲಿ ಮಾಡಲೇಕೆ


ಸುಮ್ಮ ನಿಲ್ಲೆಯೆ ನಿಲ್ಲೆನುತ್ತ


ಅಮ್ಮನಿಗೆ ಕರು ಹೇಳಲು ||೧೯||


 


ಕೊಟ್ಟ ಭಾಷೆಗೆ ತಪ್ಪಲಾರೆನು


ಕೆಟ್ಟಾ ಯೋಚನೆ ಮಾಡಲಾರೆನು


ನಿಷ್ಟೆಯಿಂದಲಿ ಪೋಪೆನಲ್ಲಿಗೆ


ಕಟ್ಟಕಡೆಗಿದು ಖಂಡಿತ ||೨೦||


 


ಆರ ಮೊಲೆಯನು ಕುಡಿಯಲಮ್ಮ


ಆರ ಸೇರಿ ಬದುಲಮ್ಮ


ಆರ ಬಳಿಯಲಿ ಮಲಗಲಮ್ಮ


ಆರು ನನಗೆ ಹಿತವರು ||೨೧||


 


ಅಮ್ಮಗಳಿರ ಅಕ್ಕಗಳಿರಾ


ನಮ್ಮ ತಾಯೊಡಹುಟ್ಟುಗಳಿರ


ನಿಮ್ಮ ಕಂದನೆಂದು ಕಾಣಿರಿ


ತಬ್ಬಲಿಯನೀ ಕರುವನು ||೨೨||


 


ಮುಂದೆ ಬಂದರೆ ಹಾಯಬೇಡಿ


ಹಿಂದೆ ಬಂದರೆ ಹೊದೆಯಬೇಡಿ


ಕಂದ ನಿಮ್ಮವನೆಂದು ಕಾಣಿರಿ


ತಬ್ಬಲಿಯನೀ ಕರುವನು ||೨೩||


 


ಕಟ್ಟಕಡೆಯಲಿ ಮೇಯಬೇಡ


ಬೆಟ್ಟದೊತ್ತಿಗೆ ಹೋಗಬೇಡ


ದುಷ್ಟ ವ್ಯಾಘ್ರನು ಹೊಂಚುತಿರುವನು


ನಟ್ಟನಡುವಿರು ಕಂದನೆ ||೨೪||


 


ತಬ್ಬಲಿಯು ನೀನಾದೆ ಮಗನೆ


ಹುಬ್ಬುಲಿಯ ಬಾಯಿಗೆ ಹೊಗುವೆನು


ಇಬ್ಬರಾ ಋಣ ತೀರಿತೆಂದು


ತಬ್ಬಿಕೊಂಡಿತು ಕಂದನ ||೨೫||


 


ಗೋವು ಕರುವನು ಬಿಟ್ಟುಬಂದು


ಸಾವಕಾಶವ ಮಾಡದಂತೆ


ಗವಿಯ ಬಾಗಿಲ ಸೇರಿನಿಂತು


ತವಕದಲಿ ಹುಲಿಗೆಂದಿತ್ಯ್ ||೨೬||


 


ಖಂಡವಿದಕೋ ಮಾಂಸವಿದಕೋ


ಗುಂಡಿಗೆಯ ಬಿಸಿರಕ್ತವಿದಕೋ


ಚಂಡ ವ್ಯಾಗ್ರನೆ ನೀನಿದೆಲ್ಲವ


ನುಂಡು ಸಂತಸದಿಂದಿರು ||೨೭||


 


ಪುಣ್ಯಕೋಟಿಯ ಮಾತಕೇಳಿ


ಕಣ್ಣನೀರನು ಸುರಿಸಿನಿಂದು


ಕನ್ಯೆಯಿವಳನು ಕೊಂದು ತಿಂದರೆ


ಮೆಚ್ಚನಾ ಪರಮಾತ್ಮನು ||೨೮||


 


ಎನ್ನ ಹೊಡಹುಟ್ಟಕ್ಕ ನೀನು


ನಿನ್ನ ಕೊಂದು ಏನ ಪಡೆವೆನು


ಎನ್ನುತಾ ಹುಲಿ ಹಾರಿನೆಗೆದು


ತನ್ನ ಪ್ರಾಣವ ಬಿಟ್ಟಿತು ||೨೯||


 


ಪುಣ್ಯಕೋಟಿಯು ನಲಿದು ಕರುವಿಗೆ


ಉಣ್ಣೇಸೀತು ಮೊಲೆಯ ಬೇಗದಿ


ಚನ್ನ ಗೊಲ್ಲನ ಕರೆದು ತಾ


ಉನ್ನತ್ತಾ ಇಂತೆಂದಿತು ||೩೦||


 


ಎನ್ನ ವಂಶದ ಗೋವ್ಗಳೊಳಗೆ


ನಿನ್ನ ವಂಶದ ಗೊಲ್ಲರೊಳಗೆ


ಮುನ್ನ ಪ್ರತಿ ಸಂಕ್ರಾಂತಿಯೊಳಗೆ


ಚನ್ನ ಕೃಷ್ಣನ ಭಜಿಸಿರೈ ||೩೧||


 


ಈವನು ಸೌಭಾಗ್ಯಸಂಪದ ಭಾವದ ಪಿತ ಕೃಷ್ಣನು


 


ಸಂಗ್ರಹ : ಸತ್ಯನಾರಾಯಣ - ಹಾಸನ


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.