ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ

ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ

ಬರಹ

ಗೋವಿನ ಹಾಡು ಪದ್ಯ ಚಿಕ್ಕದೊಂದು ಕತೆಯನ್ನು ನೇರವಾಗಿ ಹೇಳುತ್ತದೆ. ಇದರ ಪಾಠಾಂತರಗಳು ಅನೇಕ. ೨೯ ರಿಂದ ೧೫೦ ರವರೆಗೂ ಚೌಪದಿಗಳನ್ನು ಈ ಪಾಠಾಂತರಗಳು ಹೊಂದಿವೆ. ಇಲ್ಲಿನ ಚಿಕ್ಕ ಸರಳ ನೇರ ಕಥನ , ಜಾನಪದ ಶೈಲಿ , ಪ್ರಾಣಿಗಳೇ ಪಾತ್ರವಾಗಿರುವದು ಹಾಗೂ 'ಸತ್ಯವೇ ನಮ್ಮ ತಾಯಿ ತಂದೆ ' ಇತ್ಯಾದಿ ನೇರ ನೀತಿ ಸಂದೇಶದಂತೆ ತೋರುವ ಸಾಲುಗಳು ನಮ್ಮ ದಾರಿ ತಪ್ಪಿಸುತ್ತವೆ. ಇದನ್ನು ನಾವು ಒಂದು ಸರಳ ನೀತಿ ಪದ್ಯ , ಮಕ್ಕಳ ಪದ್ಯ ಎಂದು ಪರಿಗಣಿಸಿಬಿಡುತ್ತೇವೆ. ಆದರೆ 'ಗೋವಿನ ಹಾಡು ' ಅಂತಹ ಸುಲಭ ನೀತಿ ಕತೆಯಲ್ಲ .
ಇಡೀ ಕತೆಯು ಚಲನಚಿತ್ರದ ಹಾಗೆ ನಾಲ್ಕೇ ಅತಿ ಸಂಕ್ಷಿಪ್ತ ದೃಶ್ಯಗಳಲ್ಲಿ ಖಚಿತವಾಗಿ ನಿಚ್ಚಳವಾಗಿ ಕಣ್ಣಿಗೆ ಕಟ್ಟುತ್ತದೆ . ಸೊಂಪು ನೆಮ್ಮದಿಗಳಲ್ಲಿ ಹಾಲು ಚೆಲ್ಲಿ ಸೂಸುತ್ತಿರುವಂತೆ ಪ್ರಾರಂಭವಾದ ಕಥೆಯು ಸಿಡಿದ ಸಿಡಿಲಿನಂತಹ ಆಘಾತದಲ್ಲಿ ತಲ್ಲಣಿಸುತ್ತದೆ. ಶೋಕದ ಮಡುವಿನಲ್ಲಿ ಮುಳುಗಿ ಹೋಗುತ್ತದೆ .ಅಂತಿಮವಾಗಿ ಪ್ರೀತಿಯು ಚೆಲ್ಲಿ ಸೂಸುತ್ತಿರುವ ಶಾಂತಿಯಲ್ಲಿ ಮುಕ್ತಾಯಗೊಳ್ಳುತ್ತದೆ.
ದುಷ್ಟ ಶಿಕ್ಷಣ , ಶಿಷ್ಟ ರಕ್ಷಣ ಮನುಕುಲದ ಎಲ್ಲ ಸಮುದಾಯಗಳಲ್ಲೂ ವೀರರ ಹಾಗು ರಾಜರ ಪ್ರಥಮ ಕರ್ತವ್ಯವಾಗಿದೆ. ಬದುಕನ್ನು ಅರಿಯಬೇಕಾದರೆ ದುಷ್ಟತನ , ಕೇಡು , ಪಾಪದ ಸ್ವರೂಪವನ್ನು ತಿಳಿಯಬೇಕು. ಜಗತ್ತಿನ ಎಲ್ಲ ಚಿಂತಕರೂ ಈ ದುಷ್ಟತನ , ಕೇಡು , ಪಾಪಗಳ ಬಗ್ಗೆ ಚಿಂತಿಸಿದ್ದಾರೆ . ಲೋಕ ಚರಿತದ ಮೂಲಕ ಬದುಕನ್ನು ಶೋದಿಸಿಕೊಳ್ಳಬೇಕೆನ್ನುವ ಕಾವ್ಯವು ಬದುಕಿನಲ್ಲಿ ಬೆರೆತುಕೊಂಡಿರುವ ಕೇಡಿನ ಬಗ್ಗೆ ಚಿಂತಿಸಬೇಕಾದ್ದು ಅನಿವಾರ್ಯ. ಹಿಂಸೆಯನ್ನು ಹಿಂಸೆಯಿಂದ ಕೊಲ್ಲುವ ಕ್ಷಾತ್ರಪಂಥದ ಬದಲು ಹಿಂಸೆಯನ್ನು ಅಹಿಂಸೆಯಿಂದ ಗೆಲ್ಲುವ ಸಾತ್ವಿಕ ಪ್ರಯತ್ನಗಳ ಬಗ್ಗೆ ಮಾನವಕುಲವು ಎಲ್ಲ ದೇಶಕಾಲಗಳಲ್ಲು ಆಕರ್ಷಿತವಾಗಿದೆ.
ಬದುಕಿನಲ್ಲಿ ಒಂದು ಆಶ್ಚರ್ಯಕರ ಸಂಗತಿ ಕಾಣುತ್ತದೆ. ಅದೆಂದರೆ - ಹುಲಿ ಹಿಂಸೆ ಕ್ರೌರ್ಯ ಕೇಡುಗಳು ಅನಾದಿಕಾಲದಿಂದ ಇರುತ್ತಲೇ ಬಂದಿದ್ದರೂ ಹಸು ಹುಲ್ಲೆಗಳ ಕುಲವು ನಾಶವಾಗದೆ ಊಲಿದು ಬಂದಿದೆಯಲ್ಲ ?. ಅಂದರೆ ಸಾವು ಕೇಡು ಕ್ರೌರ್ಯಗಳು ಬದುಕನ್ನು ವಿಚಲಿತಗೊಳಿಸಬಲ್ಲದೆ ಬದುಕಿನ ಸತ್ವವನ್ನು ನಾಶಗೊಳಿಸಲಾರವು. ಕ್ರೌರ್ಯವು ಪ್ರಾಣಿಯನ್ನು ಕೊಲ್ಲಬಲ್ಲುದಲ್ಲದೆ ಪ್ರಾಣವನ್ನು ಕೊಲ್ಲಲಾರದು. ಅಂದರೆ ಪ್ರಾಣವು ಪ್ರಕೃತಿ . ಸಾವು ಕೇಡು ಕ್ರೌರ್ಯಗಳು ವಿಕೃತಿ. ಹುಲಿ ಹಸುಗಳಲ್ಲಿರುವ ಪ್ರಾಣ ಒಂದೇ. ಈ ಅರಿವು ಪುಣ್ಯಕೋಟಿಗೆ ಇದೆ. ಈ ಅರಿವು ಪ್ರೀತಿಯ ಸೆಲೆಯಾಗಿದೆ. ಅದರಿಂದಾಗಿ ಹಿಂಸೆ ಕೇಡು ವಿಕಾರಗಳನ್ನು ನಿಯಂತ್ರಿಸಬಹುದು .
ಗೋವಿನ ಹಾಡಿನಲ್ಲಿ ಉಳಿದ ಹಸುಗಳು ಬೆದರಿ ಓಡಿ ಹೋದರೆ ಪುಣ್ಯಕೋಟಿಯು ನಿರ್‍ಭಯವಾಗಿ ತನಗಿರುವ ಅರಿವಿನಿಂದ ಹುಲಿಯನ್ನು ಎದುರಿಸುತ್ತದೆ; ಅದಕ್ಕೆ ಸತ್ಯದ ಮಾತನ್ನು ಹೇಳುತ್ತದೆ. ಇಲ್ಲಿ ಗೋವು ಹೇಳುವ ಸತ್ಯ ಯಾವುದೆಂದು ಸರಿಯಾಗಿ ಗಮನಿಸಬೇಕು . ಆಡಿದ ಮಾತಿಗೆ ತಪ್ಪಬಾರದು ಎಂದದ್ದೇ ಸತ್ಯವಲ್ಲ. ಅದು ಸತ್ಯದಿಂದ ಸೂಚಿತವಾದ ನೀತಿ ಮತ್ತು ಅದರ ಅರಿವಿನಿಂದ ಬರುವ ನಡಾವಳಿ. ಗೋವು ಕಂಡಿರುವ ಸತ್ಯ ಇದು- ಕ್ರೌರ್ಯ ಅಥವಾ ಸಾವು ಪ್ರಾಣದ ಅಸ್ತಿತ್ವವನ್ನು ನಾಶ ಮಾಡಲಾರದು ಎನ್ನುವದು.
ಹಸುವು ಮರಳಿ ಬಂದು ಹುಲಿಯೆದುರು ನಿಂತು 'ಕೋ' ಎಂದಾಗ ಹಸುವಿಗೆ ಈ ಸತ್ಯ ತಿಳಿದು ಈ ಹಸುವು ತನ್ನ ಒಡಹುಟ್ಟಕ್ಕ ಎಂಬ ಬೋಧೆಯಾಗುತ್ತದೆ. ಆಗಲೇ 'ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು . " ಪ್ರಾಣ ಪ್ರಾಣಗಳ ನಡುವೆ ಪರಸ್ಪರ 'ಅಭಿಜ್ಞಾನ' (ಗುರುತು) ಉಂಟಾದಾಗ ಕೇಡು ಕ್ರೌರ್ಯಗಳು ತಾನಾಗಿ ಸತ್ತು ಹೋಗುತ್ತವೆ. ಇಲ್ಲಿ ಹುಲಿ ಸಾಯಲಿಲ್ಲ , ಹುಲಿತನ ಸತ್ತಿದೆ.
ಈ ಹಾಡಿನಲ್ಲಿ ಕವಿಯು ಧರಣಿಮಂಡಲ ಮಧ್ಯದೊಳಗೆ ಕರ್ನಾಟಕವನ್ನೂ ಕನ್ನಡದ ಅರಿವನ್ನೂ ಸ್ಥಾಪಿಸಿದ ಹಾಗೆ ಕರ್ನಾಟಕವು ಈ ಹಾಡನ್ನು ತನ್ನ ಹೃದಯಮಧ್ಯದೊಳಗೆ ಸ್ಥಾಪಿಸಿಕೊಂಡಿದೆ.

-ಕೆ. ವಿ. ಸುಬ್ಬಣ್ಣ ಅವರ ಲೇಖನದಿಂದ ಸಂಗ್ರಹ