ಗೋವಿನ ಹಾಡು ಮೂಡಿಸಿದ ಚಿಂತನೆಗಳು
’ಗೋವಿನ ಹಾಡು’ ಕರ್ನಾಟಕದ ಜನತೆಗೆ ಬಹುಪರಿಚಿತವಾದ ಕಥನ ಗೀತೆ. ಈ ಹಾಡನ್ನು ಕೇಳದವರು, ಅಥವಾ ಕೇಳಿ ಕಂಬನಿ ಸುರಿಸದವರು ಬಹು ವಿರಳ. ಭಾವನಾತ್ಮಕವಾಗಿ ಕನ್ನಡಿಗರನ್ನು ಒಲಿಸಿಕೊಂಡ ಹಲವು ಗೀತೆಗಳಲ್ಲಿ ಗೋವಿನ ಹಾಡು ತನ್ನದೇ ವಿಶಿಷ್ಠ ಸ್ಥಾನವನ್ನು ಗಳಿಸಿದೆ.
ಗೋವಿನ ಹಾಡನ್ನು ಪ್ರತಿಸಲ ಕೇಳುವಾಗಲೂ, ನನ್ನ ಕಣ್ಣುಗಳು ತೇವವಾಗುತ್ತವೆ. ಯಾವುದೋ ವಿದ್ಯಾರ್ಥಿ ಈ ಹಾಡನ್ನು ಉರುಹೊಡೆಯುತ್ತಿರುವುದು ಅಪ್ರಯತ್ನವಾಗಿ ಕಿವಿಗೆ ಬಿದ್ದರೂ ಕರುಳು ಕತ್ತರಿಸುತ್ತದೆ. ಈ ಹಾಡಿಗೆ ನಾನು ಪ್ರತಿಸಲವೂ ಹೀಗೆ ಭಾವನಾತ್ಮಕವಾಗಿ ಸ್ಪಂದಿಸುವುದು ನನಗೇ ಅಚ್ಚರಿಯುಂಟು ಮಾಡುತ್ತದೆ. ನಾನೊಬ್ಬ ಸಾಧಾರಣ ವ್ಯಕ್ತಿ ಮತ್ತು ನನ್ನ ಚಿಂತನೆಗಳಲ್ಲಿ ವಸ್ತುನಿಷ್ಠತೆಗೇ ನಾನು ಮಣೆ ಹಾಕುವುದು. ಗೋವಿನ ಹಾಡಿನ ಕಥೆಯನ್ನು ಪ್ರತಿಸಲ ನನ್ನ ಮನದಲ್ಲಿ ವಿಮರ್ಶಿಸಿದಾಗಲೂ, ಪ್ರಾಣಿಗಳಲ್ಲಿಯೂ ಸಂವೇದನಶೀಲತೆ ಇರಲು ಸಾಧ್ಯವೇ, ಹುಲಿಯಂತಹ ಕ್ರೂರ ಪ್ರಾಣಿಗೆ ಪಾಪ ಪುಣ್ಯಗಳ ವಿವೇಚನೆ ಇರಲು ಸಾಧ್ಯವೇ ಎಂಬಂತಹ ಮೂಲ ಸಂದೇಹಗಳಿಂದ ಮುಂದುವರೆದು, ಹಾಗೆ ಸಂವೇದನಾಶೀಲತೆ ಮತ್ತು ವಿವೇಚನೆ ಇರಬಹುದೆಂದು ಒಪ್ಪಿಕೊಂಡರೂ, ಈ ರೀತಿ ಹುಲಿ ಪ್ರತಿಸಲವೂ ’ಹಸಿದ ವೇಳೆಗೆ ಸಿಕ್ಕಿದೊಡವೆಯ’ ಬಿಟ್ಟುಕೊಟ್ಟಲ್ಲಿ ಅದರ ಹೊಟ್ಟೆಪಾಡೇನು? ಅದು ಬೇಟೆಯಾಡಿ ತಮಗೆ ಆಹಾರ ತರುವುದನ್ನೇ ಕಾದು ಕುಳಿತಿರುವ ಹುಲಿಮರಿಗಳ ಪಾಡೇನು? ಪುಣ್ಯಕೋಟಿ ಮತ್ತು ಇತರ ಜೀವಿಗಳಿಗೆ ಈ ಜಗತ್ತಿನಲ್ಲಿರಲು ಜೀವಿಸಿರುವಷ್ಟೇ ಹಕ್ಕು ಹುಲಿಗೂ ಇದೆಯಲ್ಲವೇ? ಎಂಬ ಪ್ರಶ್ನೆಗಳು ನನ್ನನ್ನು ಬಾಧಿಸುತ್ತವೆ. ಎಲ್ಲಕ್ಕಿಂತಲೂ ನನ್ನ ತಕರಾರಿರುವುದು, ’ಹಾರಿ ಆಕಾಶಕ್ಕೆ ನೆಗೆದು ಮೀರಿ ಪ್ರಾಣವ ಬಿಟ್ಟಿತು’ ನುಡಿಗೆ. ಹುಲಿ ಏತಕ್ಕೆ ಸಾಯಬೇಕಿತ್ತು?
ಮೂರುಮೂರ್ತಿಗೆ ಕೈಯಮುಗಿದು
ಸೇರಿ ಎಂಟು ದಿಕ್ಕು ನೋಡಿ
ಹಾರಿ ಆಕಾಶಕ್ಕೆ ನೆಗೆದು
ಮೀರಿ ಪ್ರಾಣವ ಬಿಟ್ಟಿತು
ಹಾಗಾಗಿ ನನಗನಿಸುತ್ತದೆ, ಕೊನೆಯ ಚೌಪದಿಯನ್ನು ಹೀಗೆ ಬದಲಿಸಿದರೆ ಹೇಗೆ? ,
ಸತ್ಯವಚನದಿ ನಡೆವ ನಿನಗೆ
ನಿತ್ಯ ಶುಭವ ಕೋರುವೆ
ಚಿತ್ತ ಬದಲಿಸಿ ನನ್ನ ಗುಹೆಗೆ
ಮತ್ತೆ ಹೋಗಿ ಸೇರುವೆ
ಹೀಗೆ ಮಾಡುವುದರಿಂದ ಕಥೆಗೆ ಯಾವ ಅಪಚಾರವೂ ಆಗದು. ಹುಲಿ ಸಾಯಬೇಕಿರಲಿಲ್ಲವೆಂಬುದು ಈ ಗೀತೆ ರಚಿಸಿದ ಕವಿಗೂ ಖಂಡಿತವಾಗಿಯೂ ಗೊತ್ತಿದೆ. ಆದರೂ ಅವನು ಕತೆಯನ್ನು ಹಾಗೆ ಅಂತ್ಯ ಮಾಡುವುದು ಓದುಗರ ಮತ್ತು ಕೇಳುಗರ ಭಾವನಾತ್ಮಕ ನೆಲೆಗೆ ಲಗ್ಗೆ ಹಾಕಲು. ಅದೇಕೋ, ಹುಲಿಯಂತಹ ಕ್ರೂರ ಮೃಗ ಸಾಯುವುದು
ನಮಗೆ ಆಪ್ಯಾಯಮಾನವಾಗಿ ಕಾಣುತ್ತದೆ. ಒಂದು ವೇಳೆ ನಾನು ಈ ಗೀತೆಯ ಕೊನೆಯ ಚೌಪದಿಯನ್ನು ಮೇಲೆ ಕಾಣಿಸಿದಂತೆ ಬದಲಿಸಿ ಪ್ರಕಟಿಸಿದರೆ, ಅದಕ್ಕೆ ಬರಬಹುದಾದ ವಿರೋಧವನ್ನು ನಾನು ಖಂಡಿತವಾಗಿ ಊಹಿಸಬಲ್ಲೆ. ನಾನು ಹಾಗೆ ಮಾಡುವುದಿಲ್ಲವೆಂದು ಪ್ರಮಾಣ ಮಾಡಿ ಮುಂದುವರೆಯುತ್ತೇನೆ. ಇದು ನನ್ನ ಮುಂದಿನ ಬರಹಕ್ಕೆ ಪೀಠಿಕೆ ಮಾತ್ರ.
ನಮ್ಮ ಮಹಾಕಾವ್ಯಗಳಾದ "ರಾಮಾಯಣ" ಮತ್ತು "ಮಹಾಭಾರತ" ಗಳ ಮರುನಿರೂಪಣೆಯ ಅನೇಕ ಗ್ರಂಥಗಳು ಪ್ರಕಟವಾಗಿವೆ. ಈ ಗ್ರಂಥಗಳು ಆ ಮಹಾಕಾವ್ಯಗಳ ಅನುವಾದವಾಗಿಯೋ ಅಥವಾ ಓದುಗರಿಗೆ ಗ್ರಾಹ್ಯವಾಗುವಂತೆ ಸರಳವಾಗಿಯೋ ರಚಿತವಾದಾಗ ಅಂತಹ ಗ್ರಂಥಗಳಿಗೆ ಯಾವ ಆಕ್ಷೇಪಣೆಯೂ ಸಲ್ಲುವುದಿಲ್ಲ. ಆದರೆ, ತದನಂತರದ ದಿನಗಳಲ್ಲಿ, ಈ ಗ್ರಂಥಗಳನ್ನು ತಿದ್ದಿ ಬರೆದಂತಹ ಗ್ರಂಥಗಳು ಪ್ರಕಟವಾಗ ತೊಡಗಿದಾಗ ಒಂದು ಬಗೆಯ ಮುಜುಗರ ಉಂಟಾಯಿತೆನ್ನಬಹುದು. ಈ ಕಾವ್ಯಗಳಲ್ಲಿ ಬರುವ ಸೀತೆ, ಊರ್ಮಿಳಾ, ಕೈಕೇಯಿ, ಕುಂತಿ, ದ್ರೌಪದಿ ಮುಂತಾದ ಅನೇಕ ಪಾತ್ರಗಳಿಗೆ ನ್ಯಾಯ ಒದಗಿಸಿಕೊಡುವಂತೆ ತಿದ್ದಿ ಬರೆದಂತಹ ಅನೇಕ ಗ್ರಂಥಗಳು, ಸಣ್ಣ ಕತೆಗಳು ಪ್ರಕಟವಾಗತೊಡಗಿವೆ. ಇರಾವತಿ ಕರ್ವೆಯವರ ’ಯುಗಾಂತರ’ ದಿಂದ ಆರಂಭವಾಗಿ, ಎಲ್.ಎಸ್. ಭೈರಪ್ಪನವರ ’ಪರ್ವ’, ತೆಲುಗು ಬರಹಗಾರರೊಬ್ಬರ ’ಸೀತಾಯಣ’ ಕೃತಿಗಳಿಂದ ಆರಂಭವಾದ ಈ ಪ್ರವೃತ್ತಿ ಇತ್ತೀಚೆಗೆ ಭಾರತೀಯ ಇಂಗ್ಲೀಷ್ ಸಾಹಿತ್ಯದಲ್ಲಿ ಅನೇಕ ಕೃತಿಗಳು ಸಮೃದ್ಧಿಯಾಗಿ ಪ್ರಕಟವಾಗುತ್ತಿವೆ. ಈ ದಿಸೆಯಲ್ಲಿ ಹೆಸರಿಸಬಹುದಾದ ಕೆಲವು ಲೇಖಕರೆಂದರೆ, ದೇವದತ್ತ ಪಟ್ಟಾನಾಯಕ್, ಚಿತ್ರಾ ಬ್ಯಾನರ್ಜಿ ದಿವಾಕರೂನಿ, ಕವಿತಾ ಕಾಣೆ, ಆನಂದ ನೀಲಕಂಠನ್ ಮುಂತಾದವರು. ಸೀತೆ, ಊರ್ಮಿಳಾ, ದ್ರೌಪದಿ, ಕುಂತಿಯವರ ಪರವಾಗಿ ಸ್ತ್ರೀಪರ ಚಿಂತನೆಗಳನ್ನು ಬಹಳಷ್ಟು ಓದುಗರು ಒಪ್ಪಬಹುದಾದರೂ, ದುರ್ಯೋಧನ, ಕರ್ಣನ ಪರವಾಗಿ ಬರೆದಂತಹ ಕೃತಿಗಳು ಈ ಮಹಾಕಾವ್ಯಗಳನ್ನು ಮರುನಿರೂಪಿಸುವುದರಲ್ಲಿ ವಿಪರೀತ ಸ್ವಾತಂತ್ರ್ಯ ಪಡೆದಿವೆ ಎನಿಸುತ್ತದೆ. ಇವರನ್ನು ಧೀಮಂತ ವ್ಯಕ್ತಿಗಳನ್ನಾಗಿ ಚಿತ್ರಿಸಬೇಕೆಂಬ ಏಕೈಕ ಉದ್ದೇಶದಿಂದ ಸನ್ನಿವೇಶಗಳನ್ನು ಕಲ್ಪಿಸಿ ಬರೆದಂತಹ ಕೃತಿಗಳನ್ನು ಒಪ್ಪಬಹುದೇ?
ನಾನೊಬ್ಬ ಕೇವಲ ವೃತ್ತಿನಿರತ ವೈದ್ಯ. ಸಾಹಿತ್ಯಾಭಿಮಾನಿಯೇ ಹೊರತು, ಸಾಹಿತ್ಯ ವಿಮರ್ಶೆಗಿರಬೇಕಾದ ಕಿಂಚಿತ್ತೂ ಅರ್ಹತೆ ನನಗಿಲ್ಲ. ಆದ್ದರಿಂದ ನನ್ನ ಆಕ್ಷೇಪಣೆಗಳನ್ನು ಎಲ್ಲಿಯೂ ವ್ಯಕ್ತಪಡಿಸದೇ, ನನ್ನಲ್ಲಿಯೇ ಮುಚ್ಚಿಟ್ಟುಕೊಂಡಿದ್ದೆ. ಇತ್ತೀಚೆಗೆ ನನ್ನ ಮಿತ್ರರೊಬ್ಬರಿಂದ ಜಿ.ಎಸ್. ಶಿವರುದ್ರಪ್ಪನವರ ಕೃತಿ ’ಚದುರಿದ ಚಿಂತನೆಗಳು’ ದೊರಕಿತು. ಅದನ್ನೋದುತ್ತಿರುವಾಗ, ’ಅಭಿವ್ಯಕ್ತಿ ಸ್ವಾತಂತ್ರ’ ಎನ್ನುವ ಶೀರ್ಷಿಕೆಯ ಲೇಖನವನ್ನೋದುವಾಗ ಚಕಿತನಾದೆ. ನಾನಾಗಲೇ ಹೇಳಿದ ನನ್ನ ಆಕ್ಶೇಪಣೆಗೆ ಈ ಹಿರಿಯ ಕವಿಗಳಿಂದ ಪುಷ್ಠಿ ದೊರೆತಿತ್ತು. ಆ ಕೃತಿಯ ಪುಟ ೩೪ ರಿಂದ ಪುಟ ೩೬ ರವರೆಗಿನ ಲೇಖನಭಾಗದಲ್ಲಿ ಅವರು ವ್ಯಕ್ತಪಡಿಸಿರುವ ಚಿಂತನೆಗಳು ನನ್ನ ಆಕ್ಷೇಪಣೆಗೆ ಪೂರ್ಣ ಬೆಂಬಲ ನೀಡುತ್ತವೆ. ಅದರಲ್ಲಿ ಅವರು ಆನಂದವರ್ಧನನ "ಧ್ವನ್ಯಾಲೋಕ" ದಲ್ಲಿನ ಒಕ್ಕಣೆಯನ್ನು ನಮೂದಿಸಿದ್ದಾರೆ. "ರಾಮಾಯಣವೇ ಮೊದಲಾದ ಪ್ರಬಂಧಗಳ ರಸಗಳು ಸಿದ್ಧವಾಗಿವೆ. ಅವುಗಳನ್ನವಲಂಬಿಸಿ ಕಥೆಯನ್ನು ರಚಿಸುವಾಗ ರಸವಿರೋಧ ಬರುವಂತೆ ಮನಸ್ವಿಯಾಗಿ ಕಲ್ಪಿಸಿಕೊಳ್ಳಬಾರದು" ಎಂಬುದು ಆನಂದವರ್ಧನನ ವಿವರಣೆ. ಇದೇ ಕಾರಣದಿಂದ, ನನಗೆ ಎಷ್ಟೇ ಅಸಂಬದ್ಧವಾಗಿ ಕಂಡರೂ ಗೋವಿನ ಹಾಡನ್ನು ನಾನು ಮೇಲೆ ಕಾಣಿಸಿದಂತೆ ಬದಲಿಸಿವುದು ಖಂಡಿತವಾಗಿಯೂ ಸರಿಯಲ್ಲ. ಹಾಗೆ ಮಾಡಿದಲ್ಲಿ ಗೋವಿನ ಹಾಡು ಕವಿಗೆ ಅಪಚಾರ ಮಾಡಿದಂತೆ, ಅಲ್ಲಿಗೂ ನನ್ನ ಆಕ್ಷೇಪಗಳನ್ನು ಪ್ರಕಟಿಸಲೇ ಬೇಕೆಂದಿದ್ದರೆ, ನನಗೆ ಉಚಿತ ಕಂಡಂತೆ ಬದಲಾವಣೆಗಳನ್ನು ಮಾಡಿ ಗೋವಿನ ಹಾಡುವಿನಷ್ಟೇ ಮನೋವೇಧಕ ಹೃದಯಸ್ಪರ್ಶಿ ಗೀತೆಯನ್ನು ರಚಿಸಬಹುದು. ಅದೇ ರೀತಿ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳು ಇಂದಿನ ಪ್ರಗತಿಶೀಲ ಬರಹಗಾರರಿಗೆ ಅದೆಷ್ಟೇ ಅನುಚಿತವಾಗಿ ಕಂಡರೂ ಅವುಗಳನ್ನು ಅವರು ಸರಿಪಡಿಸಬೇಕೆಂಬ ಅಭಿಲಾಷೆ ಹೊಂದಿದ್ದರೆ, ಅವರೂ ಕೂಡಾ ರಾಮಾಯಣ ಮಹಾಭಾರತಗಳಷ್ಟೇ ಕಾವ್ಯಮಯ, ರಸಮಯ ಕಾವ್ಯಗಳನ್ನು, ತಮಗೆ ಉಚಿತ ಕಂಡ ಬದಲಾವಣೆಗಳೊಂದಿಗೆ ರಚಿಸ ಬಹುದು. ಅದರ ಬದಲು ರಸಹೀನವಾದ ಗದ್ಯದಲ್ಲಿ ತಮಗೆ ತೋಚಿದ ಬದಲಾವಣೆಗಳನ್ನು ಮಾಡಿ ಪ್ರಕಟಿಸುವುದು ಉಚಿತವೆನಿಸದು.
ನನ್ನ ವೈಯುಕ್ತಿಕ ಅಭಿಪ್ರಾಯದಲ್ಲಿ ಮಹಾಭಾರತ ಪ್ರಾಚೀನ ಕಾಲದಲ್ಲಿ ಒಂದು ರಾಜಕುಟುಂಬದಲ್ಲಿ ದಾಯಾದಿಗಳ ಮಧ್ಯೆ ನಡೆದ ಕಾಳಗದ ಪ್ರಸಂಗವನ್ನು ವೈಭವೀಕರಿಸಿ ಶತ ಶತಮಾನಗಳಲ್ಲಿ ಅನೇಕ ರೋಚಕ ಘಟನಾವಳಿಗಳನ್ನು ಸೇರಿಸಿ ಬರೆದಂತಹ ಕಾವ್ಯವಾಗಿರಬಹುದು. ನಾನು ಈ ರೀತಿ ಅದನ್ನು ಮನಸಾ ನಂಬಿದ್ದರೂ ಕೂಡಾ, ಗಮಕಿಯೊಬ್ಬರು, ಕುಮಾರ ವ್ಯಾಸನ ಭಾರತ ಕಥಾ ಮಂಜರಿಯಲ್ಲಿ, ದ್ರೌಪದಿ ವಸ್ತ್ರಾಪಹರಣದ ಭಾಗವನ್ನೋ, ಕರ್ಣನ ಅವಸಾನದ ಭಾಗವನ್ನೋ ಓದುವಾಗ ಕಣ್ಣುಗಳಲ್ಲಿ ಕಂಬನಿಯ ಕೋಡಿ ಹರಿಯುತ್ತದೆ. ಆ ಒಂದು ಪ್ರಭಾವ ಈ ರಸಕಾವ್ಯಗಳಿಗಿದೆಯೆಂದೇ, ಆ ಕಥೆಗಳ ಕಥಾವಸ್ತುವು ಎಷ್ಟೇ ಅಸಮಂಜಸವಾಗಿ ಕಂಡರೂ, ಅದನ್ನು ಪ್ರಶ್ನಿಸುವ ಮನೋಧರ್ಮವನ್ನು ಬಹಳಷ್ಟು ಕಾಲ ಯಾರೂ ತೋರಿರಲಿಲ್ಲ. ಹೀಗಾಗಿ, ಈ ಕಾವ್ಯಗಳನ್ನು ತಿದ್ದಿ ತಮ್ಮ ದೃಷ್ಟಿಕೋನಗಳ ನೇರಕ್ಕೆ ತಕ್ಕಂತೆ ನಿರೂಪಿಸುವಂತಹ ಪ್ರವೃತ್ತಿ ತರವಲ್ಲವೆನಿಸುತ್ತದೆ. ನನ್ನ ಈ ನಿಲುವು ಸರಿಯಲ್ಲವೆನ್ನುವವರ ವಾದವನ್ನು ನಾನು ಮನಸಾ ಸ್ವಾಗತಿಸುತ್ತೇನೆ.
+++