ಗೋಹತ್ಯೆ, ಗೋಹಿಂಸೆ ನಿಲ್ಲಿಸಿ

ಗೋಹತ್ಯೆ, ಗೋಹಿಂಸೆ ನಿಲ್ಲಿಸಿ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಚ್ಚಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಘನಘೋರ ಘಟನೆ ನಡೆದಿದೆ. ದುಷ್ಕರ್ಮಿಗಳು ಗರ್ಭಿಣಿ ಹಸುವೊಂದರ ತಲೆ ಮತು ಕಾಲು ಕಡಿದುಹಾಕಿದ್ದು ಮಾತ್ರವಲ್ಲದೆ, ಅದರ ಹೊಟ್ಟೆಯನ್ನೂ ಸೀಳಿ ಗರ್ಭಸ್ಥ ಕರುವನ್ನು ಹತ್ಯೆ ಮಾಡಿದ್ದಾರೆ. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರ ಹಸು ಇದು. ಶನಿವಾರ ಹಸುವನ್ನು ಮೇಯಲು ಬಿಟ್ಟಿದ್ದ ಅವರು, ರಾತ್ರಿ ಎಷ್ಟೊತ್ತಾದರೂ ಹಸು ವಾಪಾಸ್ ಮನೆಗೆ ಬಾರದ ಹಿನ್ನಲೆಯಲ್ಲಿ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಹಸು ಹತ್ಯೆಯಾಗಿರುವುದು ಮರುದಿನ ಭಾನುವಾರ  ಬೆಳಿಗ್ಗೆ ಗೊತ್ತಾಗಿದೆ. ಹತ್ಯೆ ಮಾಡಿದ ಸ್ಥಳದಲ್ಲಿ ಒಂದು ಕಡೆ ಹಸುವಿನ ತಲೆ, ಮತ್ತೊಂದು ಕಡೆ ಕಾಲುಗಳು ದೊರೆತಿವೆ. ಅದಲ್ಲದೆ, ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕೂಡ ದಾರುಣವಾಗಿ ಹತ್ಯೆ ಮಾಡಿ ಅದನ್ನು ಅಲ್ಲೇ ಎಸೆದು ಹಸುವಿನ ಮಾಂಸವನ್ನು ಮಾತ್ರ ದುಷ್ಕರ್ಮಿಗಳು ಕೊಂಡೊಯ್ದಿದ್ದಾರೆ. ಈ ವಿವರಗಳನ್ನೆಲ್ಲ ಗಮನಿಸಿದರೆ, ದುಷ್ಕರ್ಮಿಗಳು ಎಷ್ಟು ಕ್ರೂರತೆ ಮೆರೆದಿದ್ದಾರೆ ಎಂಬುದು ವೇದ್ಯವಾಗುತ್ತದೆ. ಆರಂಭದಲ್ಲಿ ಚಿರತೆಗಳು ಜಾನುವಾರುಗಳನ್ನು ಕೊಲ್ಲುತ್ತಿದ್ದವು. ಆದರೆ, ಈಗ ಕೆಲವು ದುಷ್ಕರ್ಮಿಗಳು ಮಾಂಸಕ್ಕಾಗಿ ಹಸುವನ್ನು ಹತ್ಯೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಗೋ ಹತ್ಯೆಯ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ರಾಜ್ಯ ಸರ್ಕಾರಕ್ಕೆ ತಿಳಿಯದ ವಿಷಯವೇನಲ್ಲ ಎಂಬುದಕ್ಕೆ ಸ್ವತಃ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸೋಮವಾರ ನೀಡಿರುವ ಹೇಳಿಕೆಯೇ ಸಾಕ್ಷಿಯಾಗಿದೆ. 

‘ರಾಜ್ಯದಲ್ಲಿ ಹೆಚ್ಚುತ್ತಿರುವ ಗೋಹತ್ಯೆ ಮತ್ತು ಗೋಹಿಂಸೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೋಲೀಸರಿಗೆ ಮತ್ತೊಮ್ಮೆ ಸೂಚನೆ ನೀಡಿದ್ದೇನೆ. ಹಸುಗಳನ್ನು ಕೊಲ್ಲುವ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕಾಗಿದೆ. ಈ ಕೃತ್ಯಗಳ ಹಿಂದೆ ಬೇರೆ ಯಾವುದಾದರೂ ವ್ಯಕ್ತಿಗಳ ಅಥವಾ ಸಂಘಟನೆಗಳ ಪ್ರಚೋದನೆ ಇದೆಯೇ? ಅಥವಾ ದುಷ್ಕರ್ಮಿಗಳು ವೈಯಕ್ತಿಕವಾಗಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆಯೇ ಎಂಬೆಲ್ಲಾ ವಿಚಾರಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಪೋಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಗೃಹ ಸಚಿವರು ರಾಜ್ಯದಲ್ಲಿ ಗೋಹತ್ಯೆ ಮತ್ತು ಗೋಹಿಂಸೆ ಪ್ರಕರಣಗಳು ಹೆಚ್ಚಾಗಿರುವುದನ್ನು ಒಪ್ಪಿಕೊಂಡಿರುವುದು ಮತ್ತು ಪೋಲೀಸರಿಗೆ ಸೂಕ್ತ ನಿರ್ದೇಶನ ನೀಡಿರುವುದು ಸ್ವಾಗತಾರ್ಹವಾಗಿದೆ. ಆದರೆ ತಪ್ಪಿತಸ್ಥರನ್ನು ತಕ್ಷಣವೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸದಿದ್ದರೆ ಪ್ರಯೋಜನವಾಗುವುದಿಲ್ಲ. ಕಳೆದೊಂದು ವರ್ಷದಲ್ಲಿ ೪೪೭ ಗೋವು ಕಳ್ಳತನ ಮತ್ತು ೬೫೭ ಗೋವು ಅಕ್ರಮ ಸಾಗಾಟ ಪ್ರಕರಣಗಳು ದಾಖಲಾಗಿವೆ. ಇನ್ನು ದಾಖಲಾಗದೇ ಇರುವ ಪ್ರಕರಣಗಳು ದಾಖಲಾಗಿವೆ. ಇನ್ನು ದಾಖಲಾಗದೇ ಇರುವ ಪ್ರಕರಣಗಳು ಎಷ್ಟೋ ಇವೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಗೋಮಾಂಸವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇದು ಪೋಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಜಾಣಮೌನಕ್ಕೆ ಶರಣಾಗುತ್ತಾರೆ. ತಪ್ಪಿತಸ್ಥರ ಬಗ್ಗೆಯೇ ಪೋಲೀಸರಿಗೆ ಭಯವೇ? ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೧-೦೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ