ಗೌಡಪ್ಪನ ಪಾಸ್ ಪೋರ್ಟ್ ಪ್ರಹಸನ...

ಗೌಡಪ್ಪನ ಪಾಸ್ ಪೋರ್ಟ್ ಪ್ರಹಸನ...

ಬರಹ

ಗೌಡಪ್ಪನ ಪಾಸ್ ಪೋರ್ಟ್ ಪ್ರಹಸನ...


 


ತಿರುಪತಿಯಲ್ಲಿ ಗುಂಡು ಹೊಡೆಸಿದ ಪರಿಣಾಮವಾಗಿ ಸುಬ್ಬ,ಕಿಸ್ನ, ಸೀನ,ರಾಮ ಎಲ್ಲರ ತಲೆಗಳು ಸೂರ್ಯನ ಬಿಸಿಲಿನ ತಾಪಕ್ಕೆ ತಾಮ್ರದ ಚೊಂಬಿನ ಹಾಗೆ ಫಳ ಫಳ ಹೊಳೆಯುತ್ತಿತ್ತು...ಎಲ್ರಲಾ ತಿರುಪತಿಯಿಂದ ಬಂದಾಗಿಂದ ನಮ್ ಗೌಡನ್ನ ನೋಡಲೇ ಇಲ್ಲ...ಎ ಬ್ಯಾಡ ಸುಮ್ಕಿರಲ ಬಂದ್ರೆ ತಿರುಪತಿ ಕಾಸು ಕೊಡು ಅಂತಾನೆ ಅಂದ ಕಿಸ್ನ...ಅಷ್ಟರಲ್ಲಿ ಗೌಡ ಕೂಲಿಂಗ್ ಗ್ಲಾಸ್ ಹಾಕೊಂಡು ಬರ್ತಿದ್ದ...ಥೇಟ್ ಫೈಟರ್ ಶೆಟ್ಟಿ ಇದ್ದಂಗೆ ಇದ್ದ...ಏನ್ರಿ ಗೌಡ್ರೆ ಇದು ಹೊಸ ಅವತಾರ.....ಹೂ ಕಲಾ ಹೆಂಗಿದೆಲಾ ಸ್ಟೈಲು ಅಂತ ಪೋಸ್ ಕೊಡ್ತಾ ನಿಂತಿದ್ದ...ಎ ಕೊಡ್ರಿ ಇಲ್ಲಿ ಒಂದಪಾ ಹಾಕೊಂಡು ಕೊಡ್ತೀನಿ ಅಂತು ಕೋಮಲ್...ಎ ಇದು ಯಾರಿಗೂ  ಕೊಡಲ್ಲ ಅಂದ...ಎಲ್ರು ಬಲವಂತ ಮಾಡಿದ ಮ್ಯಾಕೆ ವಿಸ್ಯ ಆಚೆ ಬುಟ್ಟ...ಲೇ ಸ್ಟೈಲು ಇಲ್ಲ ಎಂತದು ಇಲ್ಲ ಕಲಾ ಮದ್ರಾಸ್ ಐ ಬಂದೈತೆ ಕಲಾ ಅಂದ...ಏ ಥೂ....ಅದು ಹೆಂಗ್ರಿ ಬಂತು ನಿಮಗೆ...ಮೊನ್ನೆ ತಿರುಪತಿ ಇಂದ ಬಸ್ಸಲ್ಲಿ ಬಂದವಲ್ಲ ಆಗ ಪಕ್ಕದಾಗೆ ಒಬ್ಬ ಕುಂತಿದ್ದ ಕಲಾ...ಆ ವಯ್ಯಂದು ಕಣ್ಣು ಕೆಂಪಗೆ ಇತ್ತು ಕಲಾ....ನಾನು ಆ ವಯ್ಯನ ಕಣ್ಣನ್ನೇ ನೋಡ್ತಾ ಇದ್ದೆ ಕಲಾ...ಆಮೇಲೆ ಆ ವಯ್ಯ ಹೇಳ್ದಾ ಅದಿ ಮದ್ರಾಸ್ ಐ ಅಲಾ ಚೂಡಕಂಡಿ ಅಂದ ಕಲಾ...ಇಲ್ಲಿಗೆ ಬಂದ್ ಮ್ಯಾಕೆ ನಂಗು ಸುರುವಾಗೈತೆ ಕಲಾ ಅಂದ...


ಅಷ್ಟರಲ್ಲಿ ನಾಲ್ಕು ಜನ ಪೋಲಿಸ್ ಅವ್ರು ಬಂದು ಗೌಡನ್ ತಾವ ರೀ ಇಲ್ಲಿ ಗೌಡ, ಕಿಸ್ನ, ರಾಮ, ಸೀತು, ಕೋಮಲ್,ಇಸ್ಮಾಯಿಲ್ಲು  ಅಂದ್ರೆ ಯಾರು ಅವರ ಮನೆಗಳು ಎಲ್ಲಿವೆ ಎಂದು ಕೇಳಿದ್ದಕ್ಕೆ...ಗೌಡಪ್ಪ ಹೆದರ್ಕೊಂಡು ಈ ಊರಲ್ಲಿ ಯಾರು ಅಂತ ಹೆಸರಿನವರು ಇಲ್ಲ ಅಂತ ಹೇಳ್ಬಿಟ್ಟ...ಅಷ್ಟರಲ್ಲಿ ಕೋಮಲ್ ರೀ ಗೌಡ್ರೆ ಇರ್ರಿ ಅವ್ರು ಏನಕ್ಕೆ ಬಂದಿದ್ದಾರೆ ಅಂತ ಕೇಳೋಣ ಅಂತು...ಸಾರ್ ಏನಕ್ಕೆ ಅವರನ್ನ ಕೇಳ್ತಿದಿರ ನೀವು ಅಂದಿದ್ದಕ್ಕೆ ನೋಡ್ರಿ ನಾವು ಪಾಸು ಪೋರ್ಟ್ enquiry  ಗೆ ಬಂದಿರೋದು...ಅವರೆಲ್ಲ ಈ ಊರಿಂದೆ ಅಡ್ರೆಸ್ಸ್ ಕೊಟ್ಟಿದ್ದರಲ್ಲ ಅಂದ ತಕ್ಷಣ ಗೌಡಪ್ಪ ಓ ನೀವು ಪಾಸು ಪೋರ್ಟ್ ಆಫೀಸ್ ಅವ್ರ..ನೀವು ಕೇಳಿದ ಎಲ್ರು ಇಲ್ಲೇ ಇದೀವಿ...ಅಂತ ಹೇಳಿದ ತಕ್ಷಣ ಪೋಲಿಸ್ ಅವ್ರು ಮುಖ ಮುಖ ನೋಡ್ಕೊಂಡು ನಡ್ರಲಾ ಎಲ್ರು ಸ್ಟೇಷನ್ ಗೆ ನೋಡಕ್ಕೆ ಟೆರರಿಸ್ಟ್ ಇದ್ದಂಗೆ ಇದ್ದೀರಾ ಸುಳ್ಳು ಹೇಳ್ತೀರಾ ಅಂತ ಎಲ್ರುನು ಕರ್ಕೊಂಡು ಹೋಗಿ ಬೇಜಾನ್ ರುಬ್ಬಿದ್ರು...ಅಷ್ಟರಲ್ಲಿ ಊರಿನ ಶಾಸಕರು ಬಂದು ಹೇಳಿದ್ ಮ್ಯಾಕೆ ಗೌಡಪ್ಪಂಗೆ ಕತ್ತೆ ವಯಸ್ಸು ಆದಂಗೆ ಆಗಿದೆ ಸುಳ್ಳು ಹೇಳ್ತಿಯ ಅಂತ ಬೈದು ಕಳಿಸಿಕೊಟ್ರು ..


ಅದಾಗಿ ಹತ್ತು ದಿನಗಳ ನಂತರ ಎಲ್ಲರಿಗು ಪಾಸು ಪೋರ್ಟ್ ಬಂತು...ಏ ಕೋಮಲ್ಲು ನಮ್ ದುಬೈ ಮಂಜಣ್ಣಗೆ ಒಂದ್ ಕಿತಾ ಫೋನ್ ಮಾಡಿ ಹೇಳಲಾ ಎಲ್ರಿಗೂ ಪಾಸು ಪೋರ್ಟ್ ಬಂದೈತೆ ಇನ್ನೇನು ಸ್ವಲ್ಪ ದಿನದಲ್ಲೇ ಹೊರಡ್ತಿವಿ ಅಂತ...ಏ ಇಲ್ಲ ಕಣ್ರೀ ಆವಯ್ಯ ಇಲ್ಲೇ ಬೆಂಗಳೂರ್ ನಾಗೆ ಅವ್ರೆ....ನಾವು ಬೆಂಗಳೂರ್ ಗೆ ಹೋಗೆ ಫೋನ್ ಮಾಡಿದ್ರೆ ಅವ್ರೆ ಬಂದು ಕರ್ಕೊಂಡು ಹೋಗ್ತಾರೆ...ಅಂಗೆ ಸಂಪದ ಅವರಿಗೂ ಹೇಳಿವ್ನಿ ಯಾರ್ಯಾರು ಬರ್ತಾರೋ ಎಲ್ರು ಒಟ್ಟಿಗೆ ಸೇರಿ ಹೋಗೋಣ ಅಂತು ಕೋಮಲ್...ಸರಿ ಕಲಾ ಅಂಗಾದ್ರೆ ನಡೀಲ ಯಡೂರಪ್ಪನ ತಾವ ಹೋಗಿ ದುಡ್ಡು ಇಸ್ಕೊಂಡು ಅಂಗೆ ಬತ್ತಾ...ಬಸ್ಸೋ ಇಲ್ಲ ರೈಲ್ ನಾಗೋ ದುಬೈ ಗೆ reservation ಮಾಡಿಸ್ಕೊಂಡು ಬರೋಣ ಅಂದಿದ್ದಕ್ಕೆ...ಏ ಥೂ ಉಗೀರಿ ನಿಮ್ಮಕ್ಕೆ ಅದೇನ್ ತಿರುಪತಿ ನಾ ರೈಲು ಇಲ್ಲ ಬಸ್ ನಾಗೆ ಓಗಕ್ಕೆ ವಿಮಾನದಾಗೆ ಹೋಗ್ಬೇಕು....ಅಂತು ಕೋಮಲ್...


ಮೊದಲನೇ ಕಂತು : http://sampada.net/article/28600


ಎರಡನೇ ಕಂತು   : http://sampada.net/article/28617