ಗೌರಮ್ಮ ತಿಳಿದ ರಹಸ್ಯ

ಗೌರಮ್ಮ ತಿಳಿದ ರಹಸ್ಯ

ಸರಯೂ ನದಿ ತೀರದಲ್ಲಿದ್ದ ಒಬ್ಬ ಪಂಡಿತರು ಸಾಕಷ್ಟು ಶಾಸ್ತ್ರ ಗ್ರಂಥಗಳ ಸಾರವನ್ನು ಆಕರ್ಷಕವಾಗಿ ಜನರಿಗೆ ಪ್ರವಚದ ಮೂಲಕ ತಿಳಿಹೇಳುತ್ತಿದ್ದರು. ನದಿಯ ಇನ್ನೊಂದು ದಡದಲ್ಲಿ ವಾಸಿಸುತ್ತಿದ್ದ ಒಬ್ಬ ಕೃಷಿಕನು ಪಂಡಿತರ ಮಾತುಗಳನ್ನು ಕೇಳಿ, ಅವರ ಮೇಲೆ ಬಹಳ ಭಕ್ತಿಯನ್ನು, ಗೌರವವನ್ನು ಇಟ್ಟುಕೊಂಡು, ಪ್ರತಿ ದಿನ ಹಾಲನ್ನು ಅವರಿಗೆ ಕಳುಹಿಸಿಕೊಡುತ್ತಿದ್ದನು. ಬೆಳಿಗ್ಗೆ ಬೇಗನೆ ಆ ಕೃಷಿಕನ ಮನೆಯಿಂದ ಪಂಡಿತರಿಗೆ ಹಾಲನ್ನು ತಂದುಕೊಡುತ್ತಿದ್ದವಳು ಗೌರಮ್ಮ ಎಂಬ ಹುಡುಗಿ. ಆಕೆ ಬಡವಳೂ, ಅಶಿಕ್ಷಿತಳೂ ಆಗಿದ್ದರೂ ಆಕೆಗೆ ಪಂಡಿತರ ಮಾತೆಂದರೆ ವೇದವಾಕ್ಯವಾಗಿತ್ತು.

ಒಂದು ದಿನ ಹಾಲನ್ನು ತೆಗೆದುಕೊಂಡ ನಂತರ ಪಂಡಿತರು ಅವಳೊಂದಿಗೆ ‘ಗೌರಮ್ಮಾ, ನಾಳೆಯಿಂದ ನಮ್ಮ ಮನೆಯಲ್ಲಿ ಬೆಳಗ್ಗೆ ಬೇಗನೆ ಪೂಜೆ ಇದೆ. ಆದ್ದರಿಂದ ಹೊತ್ತು ಮೂಡುವ ಮುಂಚೆಯೇ ಹಾಲನ್ನು ತಂದುಕೊಡುತ್ತೀಯಾ? ಈ ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯ ತನಕ ಪೂಜೆ ಇರುತ್ತೆ' ಎಂದರು.

‘ಖಂಡಿತಾ ಸ್ವಾಮಿ, ನಿಮ್ಮ ಪೂಜೆಗೆ ಬೇಗ ಹಾಲು ತಂದು ಕೊಡುತ್ತೇನೆ. ನನಗೂ ಸ್ವಲ್ಪ ಪುಣ್ಯ ಬರಲಿ' ಎಂದು ಅವರಿಗೆ ನಮಸ್ಕರಿಸಿದಳು.

ಆದರೆ, ಮರುದಿನ ಆಕೆ ಹಾಲು ತಂದಾಗ ಅದಾಗಲೇ ಹೊತ್ತು ಮೂಡಿತ್ತು. ‘ಸ್ವಾಮಿ, ಕ್ಷಮಿಸಬೇಕು. ಬೇಗ ಬರೋದಿಕ್ಕೆ ಆಗಲಿಲ್ಲ. ನಾನು ಕತ್ತಲಿದ್ದಾಗಲೇ ಬಂದೆ, ಆದರೆ ನದಿ ದಾಟಿಸುವ ಅಂಬಿಗ ಬೇಗ ಬರಲೇ ಇಲ್ಲ! ನಿನ್ನೆ ಹೋಗುವಾಗಲೇ ಹೇಳಿದ್ದೆ, ಸ್ವಾಮಿಯವರಿಗೆ ಹೊತ್ತು ಮೂಡುವ ಮುಂಚೆಯೇ ಹಾಲು ಕೊಡಬೇಕು. ಬೇಗ ಬಾ ಎಂದು. ಅವನ್ಯಾಕೋ ಮರೆತೇ ಬಿಟ್ಟ. ಹೊಟ್ಟೆಗೆ ಹಾಕಿಕೊಳ್ಳಿ ‘ ಎಂದು ನಮಸ್ಕರಿಸಿದಳು.

‘ಅಯ್ಯೋ ಗೌರಮ್ಮಾ, ನಾನು ಈ ಹಾಲನ್ನು ಹೊಟ್ಟೆಗೆ ಹಾಕಿಕೊಳ್ಳೋದಕ್ಕೆ ಆಗೋಲ್ಲ, ಇದು ಪೂಜೆಗೆ ಬೇಕು !’ ಎಂದು ಪಂಡಿತರು ಹಾಸ್ಯ ಮಾಡಿ ನಕ್ಕರು.

ಮುಂದುವರೆದು, ‘ನದಿ ದಾಟಲು ಅಂಬಿಗನ ಸಹಾಯ ಇಲ್ಲದೇ ಆಗಲಿಲ್ಲವೇ! ವೇದಾಂತದಲ್ಲಿ ಎಷ್ಟು ಚೆನ್ನಾಗಿ ಹೇಳಿದ್ದಾರೆ. ಈ ಜೀವನವೆಂಬ ಸಾಗರವನ್ನು ದಾಟಲು ಭಗವಂತನ ನಾಮ ಸ್ಮರಣೆ ಮಾಡಿದರೆ ಸಾಕು ಎಂದು' ಎಂದರು ಪಂಡಿತರು.

‘ಅದೇನು ಒಸಿ ಹೇಳಿ ಸ್ವಾಮಿ' ಎಂದಳು ಗೌರಮ್ಮ.

‘ಅದೆಂಗೆ ಹೇಳಕಾಯ್ತದೆ! ಅದೊಂದು ರಹಸ್ಯ...ಇರಲಿ ನೀನು ಕೇಳ್ತಿ ಅಂತ ಹೇಳ್ತೇನೆ. ಶಿವ ಶಿವ ಎಂದು ದೇವರ ನಾಮ ಹೇಳುತ್ತಾ ಸಂಸಾರ ಸಾಗರವನ್ನು ದಾಟಬೇಕೆಂದು ಯೋಗಿಗಳು ಹೇಳಿದ್ದಾರೆ’ ಎಂದರು ಪಂಡಿತರು.

‘ಇವತ್ತು ಒಂದೊಳ್ಳೆ ವೇದಾಂತದ ರಹಸ್ಯ ನನಗೆ ತಿಳಿಸಿದಿರಿ. ನಾಳೆಯಿಂದ ಸರಿಯಾದ ಸಮಯಕ್ಕೆ ಬರುತ್ತೇನೆ.’ ಎಂದಳು ಗೌರಮ್ಮ.

ಮರುದಿನದಿಂದ ಇನ್ನೂ ಕತ್ತಲೆಯಿರುವಾಗಲೇ ಆಕೆ ಹಾಲನ್ನು ತಂದುಕೊಟ್ಟಳು. ಪಂಡಿತರ ಪೂಜೆ ಸಾಂಗವಾಗಿ ನಡೆಯಿತು. ಒಂದು ತಿಂಗಳಾದ ನಂತರ ‘ಗೌರಮ್ಮಾ, ಪೂಜೆ ಮುಗಿಯಿತು. ನಾಳೆಯಿಂದ ಹಿಂದಿನಂತೆ ಸ್ವಲ್ಪ ತಡವಾಗಿಯಾದರೂ ಪರವಾಗಿಲ್ಲ. ಹಾಗೆಯೇ ಆ ದೋಣಿಯವನಿಗೂ ನನ್ನ ನಮಸ್ಕಾರಗಳನ್ನು ತಿಳಿಸು' ಎಂದರು ಪಂಡಿತರು.

‘ಸ್ವಾಮಿ, ಆ ದೋಣಿ ದಾಟಿಸುವವ ಏನೂ ಮಾಡಲೇ ಇಲ್ಲ. ನಾನೇ ವ್ಯವಸ್ಥೆ ಮಾಡಿಕೊಂಡು ಪ್ರತಿ ದಿನ ಕತ್ತಲೆಯಿರುವಾಗಲೇ ಬಂದೆ' ಎಂದಳು ಗೌರಮ್ಮ.

‘ಅಷ್ಟು ಬೇಗ ನದಿ ದಾಟಿಸಲು ದೋಣಿ ಚಲಿಸಿದ್ದು ಯಾರು?’

ದೋಣಿ? ಇಲ್ಲಪ್ಪ. ನಾನು ಹಾಗೆಯೇ ಬಂದೆ.’ ಎಂದಳು ಗೌರಮ್ಮ.

'ಅದು ಹೇಗೆ? ‘ ಪಂಡಿತರು ಅಚ್ಚರಿಯಿಂದ ಕೇಳಿದರು.

‘ಸ್ವಾಮಿಗಳಿಗೆ ಮರೆವು ಜಾಸ್ತಿ. ನೀವೇ ಆ ದಿನ ರಹಸ್ಯ ಹೇಳಿದ್ದಿರಲ್ಲ. ಅದನ್ನು ಪಾಲಿಸಿದೆ.’

‘ಅಂದರೆ!’

‘ನೀವು ಹೇಳಿದ್ದಿರಲ್ಲ, ಶಿವ ಶಿವ ಎಂಬ ಮಂತ್ರ. ನಾನು ಹೊತ್ತಾರೆ ನದಿ ಹತ್ತಿರ ಬಂದು ಶಿವ ಶಿವ ಎನ್ನುತ್ತಾ ನದಿ ದಾಟಿದೆ. ಆಗ ಮೊಣಕಾಲು ತನಕ ನೀರಿರುತ್ತಿತ್ತು. ಅಷ್ಟೆಯಾ.' ಎಂದು ಪಂಡಿತನಿಗೆ ನಮಸ್ಕರಿಸಿ ತನ್ನ ಊರಿಗೆ ಹೊರಟಳು.

ಪಂಡಿತರಿಗೆ ಅಚ್ಚರಿಯಾಯಿತು. ಇನ್ನೂ ಬೆಳಕಾಗಿರಲಿಲ್ಲ. ಆಕೆ ಏನು ಹೇಳುತ್ತಿದ್ದಾಳೆ ಎಂದು ಪರಿಶೀಲಿಸಲು, ಗೌರಮ್ಮನ ಹಿಂದೆ ನಡೆದರು. ನದಿ ದಡಕ್ಕೆ ಬಂದ ಕೂಡಲೆ ಗೌರಮ್ಮನು ನದಿಗೆ ನಮಸ್ಕರಿಸಿ, ‘ಶಿವ, ಶಿವ' ಎಂದು ಜೋರಾಗಿ ಹೇಳಿಕೊಳ್ಳುತ್ತಾ ನೀರಿನ ಮೇಲೆ ನಡೆದಳು. ಪಂಡಿತರು ನೋಡನೋಡುತ್ತಿದ್ದಂತೆಯೇ ಆಚೆ ದಡ ತಲುಪಿದಳು. 

ಪಂಡಿತರು ನಿಬ್ಬೆರಗಾಗಿ ‘ಶಿವ, ಶಿವ, ಇದೆಂತಹ ಪವಾಡ!’ ಎಂದುಕೊಂಡು, ಮಾತು ಹೊರಡದೇ ಮೂಕರಾಗಿ ನಿಂತರು.

***

ಈ ಕಥೆಯನ್ನು ಬರೆದವರು ಶಶಾಂಕ್ ಮುದೂರಿ, ವಿಶ್ವವಾಣಿ ಪತ್ರಿಕೆಯ ‘ವೇದಾಂತಿ ಹೇಳಿದ ಕಥೆ' ಅಂಕಣದಲ್ಲಿ. ಅವರಿಗೆ ವಂದನೆಗಳನ್ನು ಸಲ್ಲಿಸುತ್ತಾ, ಈ ಕಥೆಯ ಒಳಾರ್ಥದ ಬಗ್ಗೆ ಸ್ವಲ್ಪ ಗಮನ ಹರಿಸುವ. ಇಲ್ಲಿ ಗೌರಮ್ಮನಿಗೆ ಇದ್ದದ್ದು ಪಂಡಿತರ ಮಾತಿನ ಮೇಲೆ ಅಚಲ ನಂಬಿಕೆ. ಅವರ ಮಾತಿನಂತೆಯೇ ಆಕೆ ಶಿವ ಶಿವ ಎನ್ನುತ್ತಾ ನದಿಯ ಮೇಲೆ ನಡೆದಳು. ನಂಬಿಕೆ ಎನ್ನುವ ಪದ ಬಹಳ ಮಹತ್ವದ್ದು. ಮಹಡಿಯ ಮೇಲಿರುವ ಮಗುವನ್ನು ಕೆಳಗಡೆ ನಿಂತ ತಂದೆ ‘ಕೆಳಕ್ಕೆ ಹಾರು' ಎಂದಾಗ ಆ ಮಗು ಹಿಂದೆ ಮುಂದೆ ಯೋಚಿಸದೇ ಹಾರಿ ಬಿಡುತ್ತದೆ. ಇದು ಆ ಮಗುವಿಗೆ ತಂದೆಯ ಮೇಲಿರುವ ಅಚಲ ನಂಬಿಕೆ. ತಂದೆ ತನ್ನನ್ನು ಖಂಡಿತಾ ಕೆಳಕ್ಕೆ ಬೀಳದಂತೆ ರಕ್ಷಿಸುತ್ತಾರೆ ಎಂಬ ನಂಬಿಕೆಯೇ ಆ ಮಗುವಿನ ಶಕ್ತಿ.

ಇಂತಹ ಹಲವಾರು ಬಗೆಯ ನಂಬಿಕೆಗಳು ನಮ್ಮ ಸಮಾಜದಲ್ಲಿದೆ. ಹೆಂಡತಿಗೆ ಗಂಡನ ಮೇಲೆ, ಪ್ರೇಯಸಿಗೆ ಪ್ರೇಮಿಯ ಮೇಲೆ, ತಾಯಿಗೆ ಮಗನ ಮೇಲೆ, ಜನರಿಗೆ ಪೋಲೀಸ್ ಮೇಲೆ, ರೈತರಿಗೆ ಗೊಬ್ಬರದ ಮೇಲೆ, ಮಾಲೀಕನಿಗೆ ತನ್ನ ನೌಕರನ ಮೇಲೆ ಹೀಗೆ ಸಾವಿರಾರು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಒಬ್ಬರು ನಮ್ಮ ಮೇಲಿರಿಸಿದ ನಂಬಿಕೆಯನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು. ಒಮ್ಮೆ ಅಪನಂಬಿಕೆ ಹುಟ್ಟಿಕೊಂಡರೆ ಮತ್ತೆ ಸರಿಯಾಗುವುದು ಕಷ್ಟ ಸಾಧ್ಯ. ನಂಬಿಕೆಯೇ ಜೀವಾಳ.

‘ವೇದಾಂತಿ ಹೇಳಿದ ಕಥೆ' ಯ ಕೃಪೆ: ವಿಶ್ವವಾಣಿ ಪತ್ರಿಕೆ

ಚಿತ್ರ ಕೃಪೆ: ಅಂತರ್ಜಾಲ ತಾಣ