ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
ಲಿನಕ್ಸ್ ಹಬ್ಬ ಮಾಡ್ತೀವಿ ಬನ್ನಿ ಅಂದದ್ದೇ ತಡ ಎಲ್ಲೆಡೆಯಿಂದ ಅದರ ಉಪಯೋಗ ಪಡೀಲಿಕ್ಕೆ, ಹಬ್ಬ ಮಾಡಬೇಕು ಅಂದ್ಕೊಂಡ ನಮ್ಮೆಲ್ಲರಿಗೆ ಸಹಾಯ ಮಾಡಲಿಕ್ಕೆ ಎಲ್ಲೆಡೆಯಿಂದ ಸಂದೇಶಗಳು ನಮಗೆ ಬರಲಾರಂಬಿಸಿದವು. ನಾವಂದು ಕೊಂಡದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕ್ರಮದ ಸುದ್ದಿಗೆ ಸ್ವಂದಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.
ಕಾರ್ಯಕ್ರಮ ನಾವು ಅಂದುಕೊಂಡಂತೆ ಇಂದು ಬೆಳಗ್ಗೆ ೧೦:೩೦ ಕ್ಕೆ ಸುಂದರ ಐ.ಐ.ಎಸ್.ಸಿ ಕ್ಯಾಂಪಸ್ಸಿನ ಸೂಪರ್ ಕಂಪ್ಯೂಟರ್ ವಿಭಾಗದ ಕಟ್ಟಡದ ೨೦೨ ನೇ ಕೊಠಡಿಯಲ್ಲಿ ಶುರು ಆಯಿತು. ಮುಂಜಾವಿನಲ್ಲೇ ಬಂದ ಸಂಪದ ಬಳಗದ ಗೆಳೆಯರಿಗೆ ಎಲ್ಲರನ್ನ ಬರಮಾಡಿಕೊಂಡು ಅವರಿಗೆ ಲಿನಕ್ಸ್ ಔತಣ ಬಡಿಸಲಿಕ್ಕೆ ಆತುರ ಮತ್ತು ಕಾತುರ. ಬಂದ ತಕ್ಷಣ ಗ್ನೂ/ಲಿನಕ್ಸ್ ಹಬ್ಬದ ಶುಬ್ರ ಟಿ-ಶರ್ಟ್ ಹಾಕಿಕೊಂಡು ಹೇಗೆ ಎಲ್ಲವನ್ನ ನಿಭಾಯಿಸ ಬೇಕು ಅನ್ನೋದನ್ನ ಪಟ ಪಟನೆ ಎಲ್ಲರಿಗೆ ಅರುಹಿದ ಹರಿ ಮತ್ತೆ ಕೆಲವರು ರೆಜಸ್ಟ್ರೇಷನ್ ಡೆಸ್ಕ್ ನ ಕಡೆ, ಐ.ಐ.ಎಸ್.ಸಿ ಗೇಟಿನ ಕಡೆ ಕಾಲು ಹಾಕಿದರು. ಉಳಿದ ನಾವೆಲ್ಲ, ರೆಜಿಸ್ಟ್ರೇಷನ್ ಕಿಟ್, ನೆಟ್ವರ್ಕ್, ಎಲೆಕ್ಟ್ರಿಸಿಟಿ, ಪ್ರೊಜೆಕ್ಟರ್, ಸಿ.ಡಿ ಅಂತ ಒಂದೊಂದೇ ಕೆಲಸಗಳನ್ನಹಂಚಿ ಕೊಂಡು ತಯಾರಗುತ್ತಿರುವಷ್ಟರಲ್ಲೆ, ಹೊತ್ತು ಕಳೆದು ಹಬ್ಬಕ್ಕೆ ಬಂಧುಗಳು ಆಗಮಿಸಲಿಕ್ಕೆ ಶುರುಮಾಡಿದರು. ನಮ್ಮ ಕೆಲಸ ಶುರು.
ಎಲ್ಲರಿಗೂ ನಾವುಗಳು ಸಿದ್ದ ಪಡಿಸಿದ ಸಿ.ಡಿ ಕೊಟ್ಟು, ಎಲ್ಲರನ್ನ ಲಿನಕ್ಸ್ ಇನ್ಸ್ಟಾಲೇಷನ್ ಗೆ ಅಣಿ ಪಡಿಸೋ ಹೊತ್ತಿಗೆ, ನಮ್ಮ ಹರಿ ಮತ್ತು ಶಶಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಏತಕ್ಕೆ ಗ್ನು/ಲಿನಕ್ಸ್ ಹಬ್ಬ ಆಚರಿಸುತ್ತಿದ್ದೇವೆ ಅನ್ನೋದನ್ನ ಎಲ್ಲರ ಮುಂದೆ ಬಿಡಿಸಿ ಹೇಳಿದರು. ಹಬ್ಬದ ಸಲಹೆಯನ್ನ ಮುಂದಿಟ್ಟ ಶ್ರೀನಿಧಿ ಮಾತನಾಡಿ, ಬಸ್ ನಲ್ಲಿ ನಿದ್ದೆ ಮಾಡುವ ಸಮಯದಲ್ಲಿ ಅದು ತಮಗೆ ಹೊಳೆದ ಬಗೆಯನ್ನ ವಿವರಿಸಿ ಹೇಗೆ ಇದು ಎಲ್ಲರಿಗೆ ತಂತ್ರಾಂಶವನ್ನ, ತಂತ್ರಜ್ಞಾನ ಜನ ಸಾಮಾನ್ಯನ ಹತ್ತಿರ ಹೇಗೆ ತರಬಲ್ಲದು ಅನ್ನೋದನ್ನ ವಿವರಿಸಿದರು. ನಂತರ ಇನ್ಸ್ತಾಲೇಷನ್ ಹ್ಯಾಗೆ ಮಾಡೋದು ಅನ್ನೂದನ್ನ ಎಲ್ಲರಿಗೆ ವಿವರಿಸಿದರು.
ಹತ್ತು ಹಲವು ಬಗೆಯ ಲ್ಯಾಪ್ ಟಾಪ್ ಗಳು, ಒಂದೆರಡು ಡೆಸ್ಕ್ಟಾಪ್ ಗಳೂ ಕೂಡ ಐ.ಐ.ಎಸ್.ಸಿ ಯ ಮೆಟ್ಟಿಲನ್ನ ಹತ್ತಿದವು. ಇಲ್ಲಿ ಆಲ್ಲಿ ಕಾಣಿಸಿ ಕೊಂಡ ಕೆಲವು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ತೊಂದರೆಗಳನ್ನ ಬಿಟ್ಟರೆ ಮತ್ತೆಲ್ಲರೂ ಕನ್ನಡವನ್ನ ಹಲವು ತಂತ್ರಾಂಶಗಳ ಮೇಲೆ ಉಪಯೋಗಿಸಿ ತಲೆದೂಗಿಸಿದರು. "ಹೇ! ಕನ್ನಡ. ನನಗೆ ಇನ್ಸ್ರಿಪ್ಟ್ ಬೇಕು, KGP ಬೇಕು, ನುಡಿ ತರ ಟೈಪ್ ಮಾಡಬೇಕು' ಅನ್ನೋದು ಕೇಳಿ ಬಂದ್ರೆ, "ಓಕೆ! ಇದೋ ನೋಡಿ ಈಗಾಗಲೇ ಅದನ್ನ ನಿಮ್ಮ ಕಂಪ್ಯೂಟರಿನಲ್ಲಿ ಅದು ಇದೆ" ಅಂತ ಎಲ್ಲರಿಗೆ ತಿಳಿಸಿ ಉಪಯೋಗಿಸಲಿಕ್ಕೆ ಎಲ್ಲರನ್ನು ಹುರಿದುಂಬಿಸಿತು ತಂಡ. ಕೆಲವರು ಮೊದಲ ಬಾರಿಗೆ ಕನ್ನಡವನ್ನ ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಕೊಳ್ಳಲು ಕಲಿತು ಖುಶಿ ಪಟ್ಟರು.
ಇದೆಲ್ಲದರ ಮದ್ಯೆ ಸಮಯವನ್ನ ಮರೆತ ಎಲ್ಲರಿಗೆ ಹೊಟ್ಟೆ ಚುರುಗುಟ್ಟುವಷ್ಟರಲ್ಲಿ ಘಂಟೆ ೨. ಸಣ್ಣ ಸಣ್ಣ ಗುಂಪುಗಳಲ್ಲಿ ನಾವೂ ಕೂಡ ಹೊರ ಹೋಗಿ ಐ.ಐ.ಎಸ್.ಸಿ ನಲ್ಲಿನ ಸುಂದರವಾದ ಹೋಟೆಲ್ "ನೇಸರ" ದಲ್ಲಿ ಊಟ ಮಾಡಿದೆವು. ಆಗಲೂ ಏನಾಯ್ತು, ಹೇಗೆ ನಡೀತು, ಮುಂದೆ ಬರೋರಿಗೆ ಹೇಗೆ ಡೆಮೋ ಕೊಡ ಬೇಕು ಅನ್ನೋ ಚರ್ಚೆ. ತುಂಬಾ ಜನ ಬಂದದ್ದರಿಂದ ಇನ್ಸ್ಟಾಲೇಷನ್ನಲ್ಲಿ ಭಾಗವಹಿಸಲಿಕ್ಕೆ ಬಂದವರಿಗೆ
ಕಾರ್ಯಕ್ರಮದಲ್ಲಿ ಅನುವು ಮಾಡಿಕೊಟ್ಟಿದ್ದರಿಂದ ಕೆಲವರು ಹೊರನೆಡೆಯ ಬೇಕಾಯ್ತು ಕೂಡ,
ಇದೆಲ್ಲ ಒಳಗಿದ್ದ ನಮಗೆ ತಿಳಿಯುವುದರೊಳಗೆ ಮಧ್ಯಾನ ಕಳೆದಿತ್ತು. ಅವರೆಲ್ಲರೂ ನಮಗೆ
ಐ.ಐ.ಎಸ್.ಸಿ ಕಾರ್ಯಕ್ರಮ ನೆಡೆಸಲು ಕಲ್ಪಿಸಿದ್ದ ಸೀಮಿತ ಶಕ್ತಿಯನ್ನ ಅರ್ಥಸಿ ಕೊಂಡು
ನಮ್ಮೊಂಡನೆ ಸಹಕರಿಸಿದ್ದಾರೆ, ಅವರಿಗೂ ನಮ್ಮೆಲ್ಲರ ಧನ್ಯವಾದಗಳು. ಬೇಜಾರ್ ಮಾಡ್ಕೂಬೇಡಿ ನಿಮ್ಮನ್ನ ಮತ್ತೊಮ್ಮೆ ಹಬ್ಬಕ್ಕೇ ಕರೆದೇ ಕರೀತೀವಿ. ಹಾ! ನಿಮಗೆ ಸಿ.ಡಿ ತಲಿಪಿಸೋದನ್ನ ಮರೆಯೊಲ್ಲ.
ಸರ ಸರ ಹಿಂತಿರುಗಿ ನೆಡೆದು ಬಂದ ನಮಗೆ ಕಂಡಿದ್ದು ಬೆಳಗ್ಗೆ ಇದ್ದಕ್ಕಿಂತ ಹೆಚ್ಚಿದ್ದ ಜನ. ತನಂತಾನೆ ಎಲ್ಲರೂ ಕೆಲಸಕ್ಕೆ ಸಜ್ಜು, ಮತ್ತೊಂದು ಪ್ರೆಸೆಂಟೆಷನ್, ಪ್ರಶ್ನಾವಳಿ.
ಲಿನಕ್ಸ್ನಲ್ಲಿ ಯಾವ ಯಾವ ತಂತ್ರಾಂಶಗಳಿವೆ, ಹೇಗೆ, ಎಲ್ಲಿ ಅದನ್ನ ಪಡೀ ಬಹುದು ಅನ್ನೋದನ್ನ ತಿಳಿಸಿ ಕೊಟ್ವಿ. ನಿಮ್ಮವೆಬ್ ಕ್ಯಾಮರ, ಸ್ಪ್ರೆಡ್ ಶೀಟ್, ಡಾಕ್ಯುಮೆಂಟ್ ಎಡಿಟರ್, ವಿಡಿಯೋ ಎಡಿಟರ್, ಆಡಿಯೋ ಎಡಿಟರ್, ಮೈ ನವಿರೇಳಿಸುವ ವಿಂಡೋಸ್ ವಿಸ್ತಾ ಗಿಂತಲೂ ಮುಂಚೆಯೇ ಜಗತ್ತಿಗೆ ೩-ಡಿ ಆನಿಮೇಷನ್ಇರುವ ವಿಂಡೋಮ್ಯಾನೇಜರ್ ತಂದ ಕಾಂಪಿಜ್ ನ ಸಣ್ಣ ಡೆಮೋಎಲ್ಲರ ಮುಂದಿಡಲಾಯಿತು.
ಫೆಡೋರಾದ ಪ್ರಸಾದ್ ಅವರು, ಫೆಡೋರಾದಲ್ಲಿ ಈಗಾಗಲೇ ಕನ್ನಡದ ಬಗೆಗಾಗಿರುವ ಕೆಲಸಗಳನ್ನ, ಇಡೀ ಆಪರೇಟಿಂಗ್ ಸಿಸ್ಟಂ ನಲ್ಲಿ ಕನ್ನಡದಲ್ಲಿ ಹೇಗೆ ನೋಡೋದು ಅನ್ನೋದನ್ನ ತಿಳಿಸಿ ಕೊಟ್ಟು, ನಾವೆಲ್ಲ ಕೈಜೋಡಿಸಿದರೆ, ಎಲ್ಲ ಮೆನು ಮತ್ತು ವಿಂಡೋಗಳನ್ನ ಸಂಪೂರ್ಣ ಕನ್ನಡದಲ್ಲೇ ಬಹು ಬೇಗ ನೋಡ ಬಹುದು ಎಂದರು.
ಡೇಲ್ ನ ಪೀಟರ್ ಗೆ ಲಿನಕ್ಸ್ ಉಪಯೋಗಿಸೋರನ್ನ ಕಂಡರೆ ಎಲ್ಲಿಲ್ಲದ ಖುಶಿ, ಬೆಳಗ್ಗೆನೇ ಬಂದು ನಮ್ಮೆಲ್ಲರೊಂದಿಗೆ ಬೆರತ ಅವರು ಲಿನಕ್ಸ್ ತಮ್ಮ ಮನೆಯಲ್ಲಿ ತಮ್ಮ ಪತ್ನಿ, ಅಪ್ಪ ಅಮ್ಮ ಮತ್ತು ಮಕ್ಕಳು ಎಲ್ಲರಿಗೂ ಹೇಗೆ ಉಪಯುಕ್ತವಾಗಿದೆ ಅನ್ನೋದನ್ನ ಹೇಳಿದರು.
ಕೊನೆಗೆ, ಬಂದವರೆಲ್ಲಿ ಅನೇಕರು ಮಾತನಾಡಿ ಇಂತಹ ಕಾರ್ಯಕ್ರಮಗಳು ಕಾಲೇಜುಗಳಲ್ಲಿ, ಕೆಲ ಸರ್ಕಾರಿ ಕಚೇರಿಗಳಲ್ಲಿ, ಮತ್ತಿತರ ಸ್ಥಳಗಳಲ್ಲಾದರೆ ಮತ್ತೂ ಉತ್ತಮ ನಾವೂ ನಿಮ್ಮೊಡನೆ ಕೈ ಜೋಡಿಸ್ತೇವೆ ಎಂದದ್ದು ತಂಡದ ಎಲ್ಲರಿಗೂ ಮುಂದೆ ನಾವು ಮುಂದಿನ ಜವಾಬ್ದಾರಿಯನ್ನ ನೆನಪಿಸುವುದರೊಂದಿಗೆ, ಹುರಿದುಂಬಿಸಿತು. ಹಸನ್ಮುಖರಾಗಿ ಒಬ್ಬೊಬ್ಬರೆ ಎಲ್ಲರೊಂದಿಗೆ ಕೆಲಕ್ಷಣಗಳನ್ನ ಕಳೆದು, ತಮ್ಮ ಲ್ಯಾಪ್ಟಾಪ್ ಗಳಲ್ಲಿಲಿನಕ್ಸ್ ಇನ್ಸ್ಟಾಲ್ ಮಾಡಿಸಿ ಕೊಂಡು ಹೊರನೆಡೆದ ಎಲ್ಲರನ್ನ ನೋಡಿ ನಮಗೆಲ್ಲ ಸಂತಸವಾಯಿತು. ಹರಿ, ಎಲ್ಲರಿಗೆ, ಗುಂಪಾಗಿ ಹೋಗ್ಬೇಡಿ ಒಬ್ಬೊಬ್ಬರೇ ಹೋಗಿ ಅಂತ ಮೊದಲೇ ಹೇಳೋದನ್ನ ಮರೀಲಿಲ್ಲ
ಹಬ್ಬದ ಪ್ರತಿಯೊಂದೂ ಕ್ಷಣಗಳನ್ನೂ ಲೇಖನವಾಗಿ ಬರೀ ಬಹುದು. ಅಷ್ಟೊಂದನ್ನ ಈ ಹಬ್ಬ ನಮ್ಮ ಮುಂದಿಟ್ಟಿದೆ, ಖುಷಿ ಕೊಟ್ಟಿದೆ, ಕಲಿಸಿದೆ. ಕಾರ್ರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ನಿಮಗೆ ಹಬ್ಬದ ಬಗ್ಗೆ ಏನೆನ್ನಿಸಿತು ಅಂತ ಬರೆದರೆ, ನಮಗೆಲ್ಲರಿಗೂ ಮುಂದಿನ ಬಾರಿ ಕಾರ್ಯಕ್ರಮ ಆಯೋಜಿಸೊದಕ್ಕೆ ತುಂಬಾ ಸಹಾಯವಾಗ್ತದೆ.
ಹಬ್ಬಕ್ಕೆ ಬಂದು, ನಮ್ಮೆಲ್ಲರೊಡನೆ ಬೆರೆತು ಕೊಂಚ ಕ್ಷಣಗಳನ್ನ ಕಳೆದೆ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ನಮಗೆ ಕಾರ್ಯಕ್ರಮ ನೆಡೆಸಲು ಅನುವು ಮಾಡಿಕೊಟ್ಟ ಐ.ಐ.ಎಸ್.ಸಿ ಯ ಆಡಳಿತ ಮಂಡಳಿಗೆ ಅಲ್ಲಿನ ಅಧಿಕಾರಿವರ್ಗದ ಎಲ್ಲರಿಗೂ ನಮ್ಮ ನುಡಿ ನಮನಗಳು. ಇದೆಲ್ಲದರ ನಡುವೆ ಕಾರ್ಯಕ್ರಮಕ್ಕೆ ಬೇಕಾದ ಹಣಕಾಸಿನ ಜವಾಬ್ದಾರಿಯನ್ನ ವಹಿಸಿಕೊಂಡು ಎಲ್ಲವೂ ಸುಲಭವಾಗಿ ನೆಡೆಯುವಂತೆ ಮಾಡಿದ ಡಾಟ ಲೈಫ್ ಸೈಕಲ್ ಕಂಪನಿಯ ಸಂಜಯ್ ಅವರಿಗೂ ತುಂಬು ಮನಸ್ಸಿನ ಧನ್ಯವಾದಗಳು.
ಹಬ್ಬ ಸಾಂಗವಾಗಿ ನೆಡೆಯಲು ಸಹಾಯಮಾಡಿದ ತಂಡದ ಎಲ್ಲರಿಗೂ ಅಭಿನಂದನೆಗಳು ಮತ್ತು ನನ್ನ ಆತ್ಮೀಯ ಧನ್ಯವಾದಗಳು ಕೂಡ. ಇದೇ ತಂಡ ಇನ್ನೂ ಅನೇಕ ಕಾರ್ಯಕ್ರಮಗಳನ್ನ ಸಂಪದಿಗರ ಮುಂದಿಡಲಿ ಎಂದು ಹಾರೈಸುತ್ತ.
ನಿಮ್ಮ,
ಓಂ ಶಿವಪ್ರಕಾಶ್.
ಕೆಲವು ಫೋಟೋಗಳು ಇಲ್ಲಿವೆ:
http://picasaweb.google.com/omshivaprakash/GnuLinuxHabba