ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ
ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ
ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ
ಏಪಲ್ನ ಹೊಸ ಸಾಧನ ಐಪ್ಯಾಡ್ಗೆ ಸ್ಪರ್ಧೆ ನೀಡಲು ಸ್ಯಾಮ್ಸಂಗ್ ಗ್ಯಾಲಕ್ಸಿಯನ್ನು ಬಿಡುಗಡೆಗೊಳಿಸಿದೆ.ಸ್ಯಾಮ್ಸಂಗ್ ಕಂಪೆನಿಯು ಗ್ಯಾಲಕ್ಸಿ ಎನ್ನುವ ಆಂಡ್ರಾಯಿಡ್ ಸೆಲ್ಫೋನನ್ನೂ ತಯಾರಿಸುತ್ತಿದ್ದು;ಗ್ಯಾಲಕ್ಸಿ ಪ್ಯಾಡ್, ಐಪ್ಯಾಡ್ಗೆ ಹೋಲಿಸಿದರೆ ತುಸು ಕಿರಿದು,ಗ್ಯಾಲಕ್ಸಿ ಫೋನಿಗೆ ಹೋಲಿಸಿದರೆ ತುಸು ದೊಡ್ಡದು.ನಿಸ್ತಂತು ಜಾಲಕ್ಕೆ ಸಂಪರ್ಕದೊಂದಿಗೆ ಬರುವ ಅಮೆರಿಕನ್ ಮಾರುಕಟ್ಟೆಯಲ್ಲಿ ಬೆಲೆ ನಾಲ್ಕುನೂರು ಡಾಲರುಗಳು.ಐಪ್ಯಾಡ್ ನಿಗದಿತ ನಿಸ್ತಂತು ಜಾಲಗಳವರ ಸೇವೆ ತೆಗೆದುಕೊಳ್ಳಬೇಕಾದ ಹಂಗಿಲ್ಲದೆ ಸಿಗುತ್ತದೆ.ಆದ್ದರಿಂದ ದುಬಾರಿ.ಸಾಮಾನ್ಯ ಐಪ್ಯಾಡ್ ಆದರೆ ಬೆಲೆಯಲ್ಲಿ ವ್ಯತ್ಯಾಸ ನೂರು ಡಾಲರು,ಮೂರು-ಜಿ ಸೇವೆ ಬೇಕಿದ್ದರೆ ಇನ್ನೂರು ಡಾಲರು ಅಧಿಕ ಬೆಲೆ ತೆರಬೇಕು.ಗ್ಯಾಲಕ್ಸಿಯಲ್ಲಿ ತೆರೆ ಏಳು ಇಂಚಿನದ್ದಾದರೆ,ಐಪ್ಯಾಡಿನಲ್ಲಿ ಹತ್ತು ಇಂಚಿನ ತೆರೆಯಿದೆ.ಓದಲು,ಆಟಗಳನ್ನು ಆಡಲು ಮತ್ತು ಚಲನಚಿತ್ರ ವೀಕ್ಷಣೆಗಿಂತ ಸೆಲ್ಪೋನ್ಗಳಿಗಿಂತ ಪ್ಯಾಡುಗಳೇ ಸೂಕ್ತ-ಕಾರಣ ದೊಡ್ದದಾದ ತೆರೆ.ಐಪ್ಯಾಡ್ ತೂಕ ಜಾಸ್ತಿ.ಇ-ಪುಸ್ತಕ ಓದುವಾಗ ಗ್ಯಾಲಕ್ಸಿಯ ಬ್ಯಾಟರಿ ಐಪ್ಯಾಡಿಗಿಂತ ಬೇಗ ಮುಗಿಯುತ್ತದೆ.ಗ್ಯಾಲಕ್ಸಿಯಲ್ಲಿ ಎರಡು ಕ್ಯಾಮರಾಗಳಿದ್ದು,ವಿಡಿಯೋ ಕಾನ್ಫರೆನ್ಸ್ಗೆ ಅನುಕೂಲತೆಯಿದೆ.
-----------------------
ಡಿಸ್ಕವರಿ:ತೂತು
ಡಿಸ್ಕವರಿ ಸ್ಪೇಸ್ ಶಟಲ್ದ ಜಲಜನಕ ಇಂಧನ ಕೋಶದಲ್ಲಿ ತೂತು ಪತ್ತೆಯಾಗಿರುವುದರಿಂದ ಅದರ ಯಾನವನ್ನು ನಾಸಾ ಕನಿಷ್ಠ ಈ ತಿಂಗಳ ಕೊನೆಯ ವರೆಗೆ ಮುಂದೂಡಿದೆ.ಡಿಸ್ಕವರಿಯ ಯಾನ ಕಳೆದ ವಾರದಲ್ಲಿ ನಿಗದಿಯಾಗಿತ್ತು.ಇಪ್ಪತ್ತು ಇಂಚು ಉದ್ದದ ಸೀಳನ್ನು ಇಂಧನ ಕೋಶದಲ್ಲಿ ಕೆಲಸಗಾರರು ಪತ್ತೆ ಮಾಡಿದರು.ಉಡಾವಣಾ ವೇದಿಕೆಯಲ್ಲಿರುವ ಡಿಸ್ಕವರಿಯನ್ನು ರಿಪೇರಿ ಮಾಡುವುದು ಹೇಗೆಂದು ನಾಸಾ ಇಂಜಿನಿಯರುಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.
---------------------------------------------
ಗೂಗಲ್ ಟಿವಿಗೆ ವಿರೋಧ
ಗೂಗಲ್ ಟಿವಿ ಮತ್ತು ಅಂತರ್ಜಾಲ ಬೆಸೆಯಲು ಮಾಡಿರುವ ಗೂಗಲ್ ಟಿವಿ ಪ್ರಯತ್ನದ ಬಗ್ಗೆ ನಿಮಗೆ ಗೊತ್ತಿರಬಹುದು.ಟಿವಿಯಲ್ಲೇ ಅಂತರ್ಜಾಲ ಮೂಲಕ ಚಾನೆಲ್ಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿಸುವುದು ಗೂಗಲ್ನ ಉಪಾಯ. ಇದಕ್ಕೆ ಅಗತ್ಯವಾದ ಸೆಟ್ ಟಾಪ್ ಪೆಟ್ಟಿಗೆಗಳನ್ನು ಲಾಜಿಟೆಕ್ ಕಂಪೆನಿಯು ಒದಗಿಸುತ್ತಿದೆ.ಆದರೆ ಈ ಪ್ರಯತ್ನಕ್ಕೆ ಟಿವಿ ಚಾನೆಲುಗಳವರು ತಣ್ಣೀರು ಎರಚಿದ್ದಾರೆ. ಅವರುಗಳಿಗೆ ಅಂತರ್ಜಾಲ ಮೂಲಕ ಟಿವಿ ತೋರಿಸುವುದರಲ್ಲಿ ಉತ್ಸಾಹವಿಲ್ಲ. ಇದಕ್ಕೆ ಪ್ರಮುಖ ಕಾರಣ,ಅಂತರ್ಜಾಲ ಜಾಹೀರಾತಿಗಿಂತ ಟಿವಿ ಜಾಹೀರಾತುಗಳೇ ಹೆಚ್ಚು ಲಾಭದಾಯಕ.ಹೀಗೆ ಮಾಡುತ್ತಿರುವ ಚಾನೆಲುಗಳ ಪೈಕಿ,ಅಮೆರಿಕಾದ ಎನ್ಬಿಸಿ,ಸಿಬಿಸಿ,ಏಬಿಸಿ ನಂತರ ಇದೀಗ ಫಾಕ್ಸ್ ಟಿವಿಯ ಸರದಿ.ಅವುಗಳು ತಮ್ಮ ಟಿವಿ ಶೋಗಳನ್ನು ಪೂರ್ತಿಯಾಗಿ ಗೂಗಲ್ ಟಿವಿಯಲ್ಲಿ ತೋರಿಸಲು ಒಲ್ಲೆಯೆಂದಿವೆ.ಗೂಗಲ್ ಈ ನಕಾರದಿಂದ ಪೇಚಿಗೀಡಾಗಿದ್ದರೂ,ಇದರಿಂದ ತನ್ನ ಯೋಜನೆಗೆ ಬಾಧಕವಿಲ್ಲ ಎಂದು ಹೇಳಿಕೊಂಡಿದೆ.
------------------------------------
ವೆಬ್ಸೈಟ್ಗೆ ಉಚಿತ ವೆಬ್ಹೋಸ್ಟಿಂಗ್ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ನಿಮ್ಮ ಅಂತರ್ಜಾಲ ತಾಣಕ್ಕೆ ಒಂದು ವರ್ಷದ ಉಚಿತ ಆಶ್ರಯ ಗಿಟ್ಟಿಸಿಕೊಳ್ಳಿ.ಬಹುಮಾನ ಪ್ರಾಯೋಜಿಸಿದವರು ಲಿನಕ್ಸಾಯಣ.ನೆಟ್
*ಲೀನಕ್ಸ್ನ "ಜನಕ" ಯಾರು?
*ನೆಟ್ ಬುಕ್ ಮತ್ತು ಲ್ಯಾಪ್ಟಾಪ್ಗೆ ವ್ಯತ್ಯಾಸ ಇದೆಯೇ?ಇದ್ದರೆ ಅದೇನು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ Linuxaayana.netಗೆ ಮಿಂಚಂಚೆ ಮಾಡಿ,ವಿಷಯ:NS5 ನಮೂದಿಸಿ contest@linuxaayana.net).
(
ಕಳೆದ ವಾರದ ಸರಿಯುತ್ತರಗಳು:
*32,128
*32 ಸ್ಥಾನಗಳನ್ನು ಬಳಸಿಕೊಂಡು ಸಿಗಬಹುದಾದ ಐಪಿ ವಿಳಾಸಗಳು ಅತ್ಯಧಿಕ ಬೇಡಿಕೆಯ ಕಾರಣ ಮುಗಿಯುತ್ತಿವೆ.ಪ್ರತಿ ಸಾಧನವನ್ನೂ ಅಂತರ್ಜಾಲಕ್ಕೆ ಸಂಪರ್ಕಿಸುವ ತವಕವೂ ಇದಕ್ಕೆ ಕಾರಣವಾಗುತ್ತಿದೆ.
ಬಹುಮಾನ ಗೆದ್ದ ಚೇತನ್ ಭಟ್,ಮಂಗಳೂರು ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಭಾರತದ ಜಿಡಿಪಿ ಶೇ.9% ವೃದ್ಧಿಯಾಗಿರಬಹುದು,ಆದರೆ ಭ್ರಷ್ಟಾಚಾರ ಶೇ.90000 ವೃದ್ಧಿಯಾಗಿದೆ.
*ಸಂಮೋಹಿನಿಗಾರನ ಇಷ್ಟದ ರಾಗ ಯಾವುದು?ರಾಗ ಸಂಮೋಹಿನಿ!
*ನರ್ಸ್:ಒಂದು ನಿಮಿಷ ನಿಮ್ಮ ಕೈಯನ್ನು ಹಿಡಿದು, ನಾಡಿಬಡಿತ ಸರಿಯಾಗಿರ ಬೇಕೆಂದು ನಿರೀಕ್ಷಿಸುವ ಬೆಡಗಿ :)
-------------------------------------------------
ಓದುಗರ ಪ್ರತಿಕ್ರಿಯೆಗಳು
*ಮೊಬೈಲಿನಲ್ಲಿ ಗೂಗಲ್ ಶೋಧ ತುಂಬಾ ಉಪಯುಕ್ತವಾಗಬಹುದು,ಪೂರ್ತಿ ಟೈಪು ಮಾಡುವ ಮೊದಲೇ ಬಂದ ಫಲಿತಾಂಶಗಳು,ನಿಮ್ಮ ನಿರೀಕ್ಷೆಗನುಗುಣವಾಗಿಲ್ಲವಾದರೆ,ಅವನ್ನು ಕಡೆಗಣಿಸಬೇಕಾದೀತು:ಪ್ರಸನ್ನ ಶಂಕರಪುರ
*ಕಸರತ್ತಿನ ಮೂಲಕ ಕಂಪ್ಯೂಟರ್ ನಿಯಂತ್ರಣ ಕುತೂಹಲಕಾರಿ,ಮುಂದೆ ಕಂಪ್ಯೂಟರುಗಳು ಏನೆಲ್ಲಾ ಮಾಡಬಹುದು ಎಂದು ಭಯವಾಗುತ್ತದೆ: ಮಹೇಶ್ ಭಟ್
----------------------------------------------
ಐದು ವರ್ಷ ಮುಗಿಸಿದ ಸಂಪದ
ಸಂಪದ.ನೆಟ್ ಸಮುದಾಯ ತಾಣವು ಆರಂಭವಾಗಿ ಐದು ವರ್ಷಗಳು ಕಳೆದುವು.ಕನ್ನಡದ ಪ್ರಮುಖ ಅಂತರ್ಜಾಲ ತಾಣವಾಗಿ ಮೂಡಿರುವ ಸಂಪದ,ಜಾಹೀರಾತಿನ ಹಂಗಿಗೆ ಬೀಳದೆ,ಜನ ಸಾಮಾನ್ಯರಿಗೆ ಕನ್ನಡದಲ್ಲಿ ಚರ್ಚಿಸಲು,ವಿಚಾರ ವಿನಿಮಯ ಮಾಡಿಕೊಳ್ಳಲು ಮುಕ್ತ ವೇದಿಕೆಯಾಗಿದೆ.ಸಂಪೂರ್ಣ ಕನ್ನಡ ಬಳಕೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ,ನೋಂದಾಯಿತ ಸದಸ್ಯರಿಗೆ ಯಾವುದೇ ನಿರ್ಬಂಧವಿಲ್ಲದೆ ಬರಹಗಳನ್ನು ಪ್ರಕಟಿಸುವ ಅವಕಾಶವನ್ನು ಸಂಪದ ನೀಡಿದೆ.ಸಮುದಾಯ ತಾಣವಾದರೂ ಇದರ ಅರ್ಥಿಕ ನಿರ್ವಹಣೆ ಬಹುತೇಕ ಏಕವ್ಯಕ್ತಿ ಪ್ರದರ್ಶನ ಆಗಿರುವುದು ವಿಪರ್ಯಾಸವೆ ಸರಿ. ತಂತ್ರಾಂಶ ಅಭಿವೃದ್ಧಿಕಾರ, ಕನ್ನಡಿಗ ಹರಿಪ್ರಸಾದ್ ನಾಡಿಗ್ ಸಂಪದ ತಾಣವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಈ ಪ್ರಯತ್ನಕ್ಕೆ ನೀವು ಕೈಜೋಡಿಸಲು ಬಯಸುವಿರಾದರೆ mail@sampada.netಗೆ ಮಿಂಚಂಚೆ ಮಾಡಿ.
---------------------------------------------
360 ಕೋನಗಳಿಂದ ವೀಕ್ಷಣೆ
http://www.p4panorama.com ಅಂತರ್ಜಾಲ ತಾಣದಿಂದ ಹಲವು ಪ್ರೇಕ್ಷಣೀಯ ಸ್ಥಳಗಳ ಮೂರು ಆಯಾಮದ ವೀಕ್ಷಣೆ ಸಾಧ್ಯವಿದೆ. ಕಂಪ್ಯೂಟರ್ ಪರದೆಯ ಮೇಲೆ ನಿಮ್ಮ ಮುಂದೆ ತಾಣದ ಮುನ್ನೂರರುವತ್ತು ಡಿಗ್ರಿ ಕೋನಗಳಿಂದಲೂ ವೀಕ್ಷಣೆ ಸಾಧ್ಯ.ಗೋಲ್ಕೊಂಡಾ ಕೋಟೆ,ಬೆಹರಿನ್ನನ ಮರ ಮತ್ತು ಆಭರಣ ಅಂಗಡಿ,ದುಬೈನ ಗ್ಲೋಬಲ್ ವಿಲೇಜ್ ಮುಂತಾದ ದೃಶ್ಯಗಳ ಮೂರು ಆಯಾಮದ ವೀಕ್ಷಣೆಗೆ ಇಲ್ಲಿ ಅವಕಾಶವಿದೆ.
----------------------------
ಲ್ಯಾಪ್ಟಾಪ್ ಮಾರಾಟ ಭಾರೀ ವೃದ್ಧಿ
ದೇಶದಲ್ಲಿ ಪಿಸಿಗಳ ಮಾರಾಟ ಭರಾಟೆಯಿಂದ ನಡೆದಿದೆ.ಕಳೆದ ವರ್ಷಕ್ಕೆ ಹೊಲಿಸಿದರೆ,ಈ ವೃದ್ಧಿ ಶೇಕಡಾ ಇಪ್ಪತ್ತೇಳು.ಲ್ಯಾಪಟ್ಯಾಪ್ಗಳು-ನೋಟ್ಬುಕ್ಗಳ ಮಾರಾಟ ಡೆಸ್ಕ್ಟಾಪ್ ಪಿಸಿಗಳ ಮೂರು ಪಟ್ಟಿನಷ್ಟು ಹೆಚ್ಚಿದೆ.ಆರ್ಥಿಕ ಚಟುವಟಿಕೆಯಲ್ಲಿ ವೃದ್ಧಿ ಕಂಪ್ಯೂಟರುಗಳಿಗೆ ಬೇಡಿಕೆ ಹೆಚ್ಚಿಸಿರುವುದು ಸ್ಪಷ್ಟ.ಡೆಲ್ ಕಂಪೆನಿ ಮಾರಾಟದಲ್ಲಿ ಮುಂದಿದೆ.ಎಚ್ಪಿ,ಏಸರ್ ಕಂಪೆನಿಗಳು ನಂತರದ ಸ್ಥಾನ ಪದೆದಿವೆ.
Udayavani Unicode
Udayavani
*ಅಶೋಕ್ಕುಮಾರ್ ಎ