ಗ್ರಹವೀಕ್ಷಣೆ ಕುಱಿತು

ಗ್ರಹವೀಕ್ಷಣೆ ಕುಱಿತು

ಬರಹ

ಗ್ರಹವೀಕ್ಷಣೆ ಮಾಡುವ ಹವ್ಯಾಸ ಹಲವರಿಗೆ. ನಾನು ಈ ಹಿಂದೆ ಬಱಿಗಣ್ಣಿಗೆ ಕಾಣುವ ಗ್ರಹಗಳ ಬಗ್ಗೆ ಬರೆದಿದ್ದೆ. ಯಾರಾದರೂ ಗ್ರಹವೀಕ್ಷಣೆಯ ಬಗ್ಗೆ ಹೇೞುವಾಗ ಗ್ರಹಯುತಿ, ಒಂದು ಗ್ರಹ ಇನ್ನೊಂದು ಗ್ರಹ ಮಱೆಮಾಡುವುದು (ಗ್ರಹಣ ಅಥವಾ occultation) ಇವನ್ನೆಲ್ಲ ನೋಡಲು ಸಿಗುವ ಅವಕಾಶ ಕಡಿಮೆಯೆಂದೇ ಹೇೞಬಹುದು. ಯಾರಾದರೂ ಒಮ್ಮೆ ಗ್ರಹಗಳು ಒಟ್ಟಿಗೆ ಒಂದೇ ರಾಶಿಯಲ್ಲಿ ಕೂಡುತ್ತವೆ. ಹಾಗೆಯೇ ಒಂದು ಗ್ರಹ ಇನ್ನೊಂದು ಗ್ರಹಕ್ಕೆ ತೀರಾ ಹತ್ತಿರದಲ್ಲಿ ಬರುತ್ತದೆಯೆಂದು ತಿಳಿಸಿದಾಗ ಆ ಒಂದು ಸುಸಂದರ್ಭವನ್ನು ಕಾದು ನೋಡುವುದೇ ಒಳ್ಳೆಯದು. ಯಾಕೆಂದರೆ ಆ ತೆಱನಾದ ಸಂದರ್ಭ ದಶಮಾನದಲ್ಲೋ ಅಥವಾ ಶತಮಾನದಲ್ಲೋ ಒಮ್ಮೆ ಬರಬಹುದು. ಇದಕ್ಕೆ ಕಾರಣ ಸೌರಮಂಡಲದ ಎಲ್ಲಾ ಗ್ರಹಗಳು ನಕ್ಷತ್ರಗಳಿಗೆ ಹೋಲಿಸಿದರೆ ತೀರಾ ಹತ್ತಿರದಲ್ಲಿದ್ದರೂ ಅವುಗಳು ಸೂರ್ಯನನ್ನು ಸುತ್ತುವ ಕಕ್ಷೆ ಒಂದೇ ಪಾತಳಿಯಲ್ಲಿಲ್ಲ. ಹಾಗಾಗಿ ಒಂದು ಗ್ರಹ ಇನ್ನೊಂದು ಗ್ರಹವನ್ನು ಮಱೆಮಾಡಬೇಕೆಂದರೆ ಕಕ್ಷೆಗಳ ಪಾತಳಿಗಳು ಸಂಧಿಸುವ ಬಿಂದುಗಳಲ್ಲಿ ಬಂದಾಗ ಸಾಧ್ಯವಾಗುತ್ತದೆ. ಹಾಗಾಗಿ ನೀವು ಒಮ್ಮೆ ನೋಡಿದ ಗ್ರಹಗಳ ಯುತಿ ಮತ್ತೊಮ್ಮೆ ಅದೇ ತೆಱನಾಗಿರುವುದಿಲ್ಲ. ಗ್ರಹಯುತಿಗಳಾಗುವಾಗ ಒಂದು ಗ್ರಹ ಇನ್ನೊಂದು ಗ್ರಹದ ಎಡಗಡೆಗೆ ಬಂದರೆ ಇನ್ನೊಮ್ಮೆ ಬಲಕ್ಕೆ ಬರಬಹುದು. ಕೆಲವು ವೇಳೆ ನಮಗೆ ನೋಡುವ ಭಾಗ್ಯವಿದ್ದರೆ ಎರಡೂ ಗ್ರಹಗಳು ಒಂದನ್ನೊಂದು ಆಚ್ಛಾದಿಸಬಹುದು. ಇದೇ ತರ್ಕವನ್ನು ನಾವು ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣ ಹಾಗೂ ಪ್ರತಿ ಅಮಾವಾಸ್ಯೆಗೆ ಸೂರ್ಯಗ್ರಹಣ ಯಾಕಾಗದೆಂಬುವುದಕ್ಕೂ ಅನ್ವಯಿಸಬಹುದು. ಪಂಚಾಂಗದಲ್ಲಿ ನೀವು ನೋಡಿರಬಹುದು. ರಾಹು ಅಥವಾ ಕೇತುವಿನೊಟ್ಟಿಗೆ ಸೂರ್ಯ ಅಥವಾ ಚಂದ್ರ ಒಂದೇ ರಾಶಿಯಲ್ಲಿ ಬಂದಾಗ ಗ್ರಹಣವಾಗುತ್ತದೆ. ಈ ರಾಹು ಕೇತುಗಳು ಗ್ರಹಗಳಾಗಿರದೆ ಸೂರ್ಯನ ಸುತ್ತ ಭೂಮಿಯ ಕಕ್ಷೆ ಹಾಗೂ ಭೂಮಿಯ ಸುತ್ತ ಚಂದ್ರನ ಕಕ್ಷೆಯ ಪಾತಳಿಗಳು ಸಂಧಿಸುವ ಬಿಂದುಗಳಾಗಿದ್ದು ಅವೆರಡೂ ವಿರುದ್ಧ ದಿಕ್ಕಿನಲ್ಲಿರುವುದಱಿಂದ ಯಾವಾಗಲೂ ರಾಹು ಕೇತುಗಳು (ನವಾಂಶದಿಂದಲೂ ಕೂಡ) ಎದುರುಬದುರಾಗಿರುತ್ತವೆ. ಅಲ್ಲದೆ ಈ ಬಿಂದುಗಳು ಸಂಧಿಸುವ ಬಿಂದುಗಳು ಸ್ಥಿರವಾಗಿರದೆ ಅವುಗಳು ಈ ಭೂಮಿ ಮತ್ತು ಚಂದ್ರರು ಚಲಿಸುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ. ಹಾಗಾಗಿ ರಾಹು ಮತ್ತು ಕೇತುಗಳಿಗೆ ಯಾವಾಗಲೂ ಹಿಂದೆ ಹಿಂದೆ ಚಲಿಸುವ ವಕ್ರಗತಿ(retrograde motion). ಅಂದರೆ ಸೂರ್ಯ ಅಥವಾ ಚಂದ್ರ ಈ ಬಿಂದುಗಳಲ್ಲಿ ಸಂಧಿಸಿದಾಗ ಮಾತ್ರ ಭೂಮಿ ಚಂದ್ರನನ್ನೂ ಅಥವಾ ಚಂದ್ರ ಸೂರ್ಯನನ್ನು ಮಱೆಮಾಡುವುದಱಿಂದ ಕ್ರಮವಾಗಿ ಚಂದ್ರಗ್ರಹಣ ಅಥವಾ ಸೂರ್ಯಗ್ರಹಣಗಳು ಕಾಣುತ್ತವೆ.
ಇದೇ ರೀತಿ ಗ್ರಹಗಳ ಪಾತಳಿಗಳು ಸಂಧಿಸುವ ಬಿಂದುಗಳು ಎಷ್ಟು ಹತ್ತಿರ ಬರುತ್ತವೆ ಎನ್ನುವುದನ್ನು ಅನುಸರಿಸಿ ಗ್ರಹಗಳ ಯುತಿಯಾಗುವಾಗ ಅವುಗಳ ದೂರ ನಿರ್ಧಾರವಾಗುತ್ತದೆ. ಹಾಗಾಗಿ ಗ್ರಹವೀಕ್ಷಣೆ ಮಾಡುವವರು ಸುಂದರ ಕ್ಷಣಗಳನ್ನು ಕಾಣಬೇಕೆಂದರೆ ಈ ಕ್ಷಣಗಳನ್ನು ಕಳೆದುಕೊಳ್ಳಬಾರದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet