ಗ್ರಾಮದೇವತೆಗೆ ಹುಲಿ ವೇಷದ ಕಾಣಿಕೆ ಸಲ್ಲಿಸಿದ ಹೇಮಂತ್

ಗ್ರಾಮದೇವತೆಗೆ ಹುಲಿ ವೇಷದ ಕಾಣಿಕೆ ಸಲ್ಲಿಸಿದ ಹೇಮಂತ್

ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಭಿನ್ನ, ಆತನ ಚಟುವಟಿಕೆಗಳೂ ಭಿನ್ನ ಭಿನ್ನ. ದೇವರ ಮೇಲಿನ ಶೃದ್ಧೆ, ಭಯ-ಭಕ್ತಿಯಿಂದ ಹಲವಾರು ಮಂದಿ ತಮಗೆ ತೋಚಿದ ಹರಕೆ, ಕಾಣಿಕೆಗಳನ್ನು ನೀಡುತ್ತಾರೆ. ಕೆಲವರು ಬಂಗಾರದ ಆಭರಣ ಕೊಡುವ ಮೂಲಕ ಹರಕೆ ಸಲ್ಲಿಸಿದರೆ, ಇನ್ನು ಕೆಲವರು ನೂರಾರು ಕಿಲೋ ಮೀಟರ್ ನಡೆದುಕೊಂಡೇ ದೇವಸ್ಥಾನಕ್ಕೆ ಹೋಗಿ ಕಾಣಿಕೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ದೇವರ ಹೆಸರಿನಲ್ಲಿ ಸಾವಿರಾರು ಜನರಿಗೆ ಊಟ ಹಾಕಿಸುತ್ತಾರೆ. ನವರಾತ್ರಿ, ಕೃಷ್ಣ ಅಷ್ಟಮಿ, ಗಣೇಶೋತ್ಸವ ಸಮಯದಲ್ಲಿ ವೇಷ ಹಾಕಿ, ಸಂಗ್ರಹವಾದ ಹಣವನ್ನು ಅದರ ಅವಶ್ಯಕತೆ ಇದ್ದ ಅಸಹಾಯಕರಿಗೆ ನೀಡುವ ಜನರೂ ಸಾಕಷ್ಟು ಮಂದಿ ಇದ್ದಾರೆ. 

ಉಡುಪಿ ಜಿಲ್ಲೆಯ ರವಿ ಕಟಪಾಡಿ ಎಂಬ ಯುವಕನ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇದೆ. ಅವರು ಹಲವಾರು ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಅನಾರೋಗ್ಯ ಪೀಡಿತ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಚಿತ್ರ-ವಿಚಿತ್ರ ವೇಷಗಳನ್ನು ಧರಿಸಿ ಹಣ ಸಂಗ್ರಹ ಮಾಡಿದ್ದು ಅಭಿನಂದನಾರ್ಹ ಸಂಗತಿ ಅಲ್ಲವೇ? ಇಷ್ಟೆಲ್ಲಾ ಪೀಠಿಕೆ ಏಕೆ ಅಂತೀರಾ? ಇಲ್ಲೊಬ್ಬರಿದ್ದಾರೆ ಅವರು ತಮ್ಮ ಗ್ರಾಮ ದೇವತೆಗಾಗಿ ಮೂರು ವರ್ಷಗಳ ಕಾಲ ಪ್ರತಿಫಲಾಪೇಕ್ಷೆ ಇಲ್ಲದೇ ಹುಲಿ ವೇಷ ಹಾಕಿಸುವ (ಇಳಿಸುವ) ನಿರ್ಧಾರ ಮಾಡಿಕೊಂಡಿದ್ದಾರೆ. ಅವರೇ ಹೇಮಂತ್ ಚಂದ್ಕೂರು

ಹೇಮಂತ್ ನ ಸೇವೆಯ ಬಗ್ಗೆ ತಿಳಿದುಕೊಳ್ಳುವ ಮೊದಲು ಚಂದ್ಕೂರಿನ ಶ್ರೀ ದುರ್ಗಾ ಮರಮೇಶ್ವರೀ ಅಮ್ಮನವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ. ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾದ ಗಜ ಗಾಂಭೀರ್ಯ ಭರಿತವಾದ ಗಡಾಯಿಕಲ್ ತಪ್ಪಲಿನಲ್ಲಿ ಇರುವ ಚಂದದೂರು ಚಂದ್ಕೂರು. ಇಲ್ಲಿರುವ ದುರ್ಗಾ ಪರಮೇಶ್ವರೀ ಅಮ್ಮನವರ ದೇವಸ್ಥಾನವು ಮಂಗಳೂರಿನಿಂದ ೬೫ ಕಿ ಮೀ ಹಾಗೂ ಬೆಳ್ತಂಗಡಿಯಿಂದ ೬ ಕಿ ಮೀ ದೂರದಲ್ಲಿದೆ. ಇಲ್ಲಿರುವ ದೇವಸ್ಥಾನದಲ್ಲಿ ಸುಮಾರು ೧೨೦೦ ವರ್ಷದ ಇತಿಹಾಸವಿರುವ ಶ್ರೀ ದುರ್ಗಾ ಪರಮೇಶ್ವರಿಯ ಭವ್ಯವಾದ ಸುಂದರ ವಿಗ್ರಹವಿದೆ. ಈ ದುರ್ಗಾ ಮಾತೆಯ ದೇಗುಲಕ್ಕೆ ೮೦೦ ವರ್ಷಗಳು ತುಂಬಿವೆ ಎಂದು ಊರ ಹಿರಿಯರು ಅಭಿಪ್ರಾಯ ಪಡುತ್ತಾರೆ. ಈ ದೇಗುಲದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಶಿಲಾಶಾಸನಗಳಿವೆ. ಈ ಕಾರಣದಿಂದ ವಿಜಯ ನಗರದ ಅರಸರು ಈ ದೇವಿಯನ್ನು ಪೂಜಿಸುತ್ತಿದ್ದರು ಎಂದು ತಿಳಿದುಕೊಳ್ಳಬಹುದಾಗಿದೆ. ದೇಗುಲದಲ್ಲಿ ಬ್ರಹ್ಮ ಕಲಶೋತ್ಸವ ನಡೆದ ಬಳಿಕ ಹಂಚಿನ ಚಾವಣಿಯನ್ನು ನವೀಕರಿಸಲಾಗಿದೆ. ದೇವಿಯ ವಿಗ್ರಹವು ಸುಮಾರು ಮೂರುವರೆ ಅಡಿ ಎತ್ತರವಿದೆ. ದೇವಿಯ ವಿಗ್ರಹವು ಚತುರ್ಭುಜಗಳನ್ನು ಹೊಂದಿದ್ದು ಶಿರದಲ್ಲಿ ಕರಂಡಕ ಮುಕುಟವಿದೆ. ಈ ಅಮ್ಮನವರನ್ನು ನಂಬಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಎನ್ನುತ್ತಾರೆ ಭಕ್ತಾದಿಗಳು. 

ಇಂತಹ ಇತಿಹಾಸ ಪ್ರಸಿದ್ಧಿಯ ದುರ್ಗಾ ಮಾತೆಗೆ ಅತ್ಯಂತ ಪ್ರಿಯವಾದ ಹುಲಿ ಕುಣಿತವನ್ನು ಕೇವಲ ಅಮ್ಮನ ಮೇಲಿನ ಭಕ್ತಿಯಿಂದ ಊರ ಮಕ್ಕಳು, ಯುವಕರನ್ನೆಲ್ಲಾ ಸೇರಿಸಿ ಹರಕೆ ರೂಪದಲ್ಲಿ ನಡೆಸುವ ಸಂಕಲ್ಪವನ್ನು ಹೊತ್ತುಕೊಂಡವರೇ ಹೇಮಂತ್ ಚಂದ್ಕೂರು ಎಂಬ ಯುವಕ. ಬೆಳ್ತಂಗಡಿ ತಾಲೂಕಿನ ಲಾಯ್ಲದ ಚಂದ್ಕೂರು ಎಂಬ ಗ್ರಾಮದ ಯುವಕ ಹೇಮಂತ್ ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದರೂ ಅವರಿಗೆ ಊರಿನ ಬಗ್ಗೆ ತುಡಿತ. ತಮ್ಮ ಗ್ರಾಮದ ದೇವತೆಯಾದ ಶ್ರೀ ದುರ್ಗಾ ಪರಮೇಶ್ವರೀ ದೇವಿಗೆ ಏನಾದರೂ ಸೇವೆ ಸಲ್ಲಿಸಬೇಕು ಎನ್ನುವ ಆಸೆ. ಈ ಬಗ್ಗೆ ಅವರು ತಮ್ಮ ಗೆಳೆಯರ ಜೊತೆ ಸಮಾಲೋಚಿಸಿದಾಗ ಹುಲಿ ವೇಷ ಹಾಕಿಸುವ ಬಗ್ಗೆ ಯೋಜನೆ ಹುಟ್ಟಿಕೊಂಡಿತು. 

ಹುಲಿ ವೇಷ ಹಾಕುವುದು ಅಥವಾ ಹಾಕಿಸುವುದು ಹಾಗೂ ಅದರ ಹಿಂದಿನ ವ್ಯವಸ್ಥೆಗಳು, ಇವೆಲ್ಲದರ ಕಷ್ಟ ಅಷ್ಟಿಷ್ಟಲ್ಲ... ನೋಡುವವರಿಗೆ ಬಹಳಷ್ಟು ಸುಂದರವಾಗಿ ಕಾಣುತ್ತದೆ. ಆದರೆ ಅದರ ಹಿಂದಿನ ಪರಿಶ್ರಮ, ತರಬೇತಿ, ತಯಾರಿಗಳು ಅದೆಷ್ಟೋ ತಿಂಗಳುಗಳಿಂದ ನಡೆಯಬೇಕಾಗಿರುತ್ತದೆ. ಬಹಳಷ್ಟು ಹಣಕಾಸಿನ ಅಗತ್ಯವೂ ಇರುತ್ತದೆ. 

ಆದರೆ ಹೇಮಂತ್ ಅವರು ತನ್ನ ಊರನ್ನು ಬಿಟ್ಟು ಬೇರೆ ಕಡೆ ಉದ್ಯೋಗವನ್ನು ಅರಸಿಕೊಂಡು ಹೋಗಿ ತಾನು ದುಡಿದು ಸಂಪಾದಿಸಿದ ಹಣದಲ್ಲಿ ಸ್ವಲ್ಪವನ್ನು ತನ್ನ ಊರಿನ ಗ್ರಾಮದೇವತೆ ಚಂದ್ಕೂರು ತಾಯಿಗೆ ಏನಾದರೂ ಸೇವೆ ನೀಡಬೇಕೆಂಬ ಹೆಬ್ಬಯಕೆ ಹೊಂದಿದ್ದರು. ಈ ಉದ್ದೇಶವನ್ನು ಪೂರೈಸಲು ಈ ಹುಲಿವೇಷ ಸೇವೆಗೆ ಮುಂದಡಿ ಇಟ್ಟಿದ್ದಾರೆ. ಮೊದಲೇ ಹೇಳಿದಂತೆ ಮೊದಲ ಮೂರು ವರ್ಷ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದೇವಿಯ ಸೇವೆ. ಯಾರ ಮನೆಗೂ, ಅಂಗಡಿಗೂ ಹೋಗಿ ಹುಲಿ ಕುಣಿತ ಮಾಡಿ ಹಣ ಸಂಗ್ರಹ ಮಾಡಲು ಇಲ್ಲ ಎಂಬ ನಿರ್ಧಾರ ಮಾಡಿಕೊಂಡಿದ್ದಾರೆ.

ಈ ಪ್ರಕಾರವಾಗಿ ಈ ವರ್ಷ ನವರಾತ್ರಿಯ ಸಮಯದಂದು ಮೊದಲೇ ಯೋಜನೆ ಹಾಕಿಕೊಂಡಂತೆ ನವರಾತ್ರಿಯ ಒಂಬತ್ತನೇ ದಿನ ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಯುವಕರೆಲ್ಲಾ ಸಾಂಪ್ರದಾಯಿಕ ಹುಲಿವೇಷ ಧರಿಸಿ ಕುಣಿತದ ಸೇವೆ ನೀಡಿದ್ದಾರೆ. ‘ಶಿವದುರ್ಗಾ ಫ್ರೆಂಡ್ಸ್' ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಯುವಕರೆಲ್ಲಾ ನೀಡಿದ ಈ ಸೇವೆ ಊರಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹುಲಿವೇಷ ಹಾಕಿದ ಎಲ್ಲಾ ಯುವಕರು ಹಣವನ್ನು ಪಡೆದುಕೊಳ್ಳದೇ ತಮ್ಮ ಸೇವೆಯನ್ನು ಸಲ್ಲಿಸಿರುವುದು ಅಭಿನಂದನೀಯ. 

ಈ ಹುಲಿವೇಷದ ಕುಣಿತದ ಸೇವೆಯಲ್ಲಿ ಅನಂತು ನಡ, ಅಶೋಕ್ ಚಂದ್ಕೂರು, ಸಚಿನ್ ನಡ, ಚಿದಾನಂದ ಚಂದ್ಕೂರು, ಗುರುಪ್ರಸಾದ್ ನಡ, ಅಶ್ವತ್ ಚಂದ್ಕೂರು, ನಿಮಿತ್ ಶೆಟ್ಟಿ ಚಂದ್ಕೂರು, ಸುದರ್ಶನ್ ಚಂದ್ಕೂರು, ನಿತಿನ್ ಶೆಟ್ಟಿ ಚಂದ್ಕೂರು, ಸಂತು ಚಂದ್ಕೂರು, ಸುನಿಲ್ ನಡ, ಕೇಶವ ಚಂದ್ಕೂರು, ರಂಜಿತ್ ಚಂದ್ಕೂರು, ಸುಮಂತ್ ಚಂದ್ಕೂರು, ದೀಕ್ಷಿತ್ ಶೆಟ್ಟಿ ಚಂದ್ಕೂರು, ವಿನೀತ್ ಚಂದ್ಕೂರು, ಚೇತನ್ ಚಂದ್ಕೂರು, ನಿಖಿಲ್ ಚಂದ್ಕೂರು, ಪ್ರಸಾದ್ ಆಚಾರ್ಯ ಚಂದ್ಕೂರು, ನವೀನ್ ಆಚಾರ್ಯ ಚಂದ್ಕೂರು, ಶಶಿ ಗೌಡ ಚಂದ್ಕೂರು, ಪ್ರಸನ್ನ ಧರ್ಮಸ್ಥಳ, ತೇಜು ಧರ್ಮಸ್ಥಳ ಹಾಗೂ ಪ್ರದೀಪ್ ಧರ್ಮಸ್ಥಳ ಮುಂತಾದವರು ತಮ್ಮನ್ನು ತೊಡಗಿಸಿಕೊಂಡು ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. 

ಮೆಚ್ಚ ಬೇಕಾದ ವಿಷಯವೆಂದರೆ ಹೇಮಂತ್ ಕೆಲಸದ ನಿಮಿತ್ತ ಊರಿನಲ್ಲಿ ಇರದೇ ವಿದೇಶದಲ್ಲೇ ಇದ್ದುಕೊಂಡು ಹುಲಿ ಕುಣಿತದ ಪ್ರದರ್ಶನಕ್ಕಾಗಿ ಅದೆಷ್ಟೋ ಸಮಯದಿಂದ ಎಲ್ಲವನ್ನು ದೂರವಾಣಿ, ವಾಟ್ಸಾಪ್ ಮೂಲಕ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ. ಹೇಮಂತ್ ಅವರು ಮುಂದಿನ ದಿನಗಳಲ್ಲಿ ತಮ್ಮ ಊರಿಗೆ ಹಾಗೂ ಊರಿನ ನಾಗರಿಕರಿಗೆ ಉಪಯೋಗವಾಗುವ ಕಾರ್ಯಗಳನ್ನು ನಡೆಸುವ ಮಹದಾಸೆಯನ್ನು ಹೊಂದಿದ್ದಾರೆ. ಶ್ರೀ ದೇವಿಯು ಅವರಿಗೆ ಮುಂದಿನ ವರ್ಷಗಳಲ್ಲೂ ಜನೋಪಯೋಗಿ ಸೇವೆಗಳನ್ನು ನಡೆಸುವ ಶಕ್ತಿ ನೀಡಲಿ ಎಂಬ ಹಾರೈಕೆ ಊರಿನ ಜನರದ್ದು.

ಚಿತ್ರದಲ್ಲಿ: ಹುಲಿವೇಷ ನಲಿಕೆಯ ತಂಡ ಹಾಗೂ ಅವರ ಹುಲಿ ಕುಣಿತದ ದೃಶ್ಯಗಳು ಮತ್ತು

ಗಡಾಯಿ ಕಲ್ಲಿನ ತಪ್ಪಲಿನಲ್ಲಿರುವ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಚಂದ್ಕೂರು.

ಮಾಹಿತಿ ಮತ್ತು ಫೋಟೋ ಸಂಗ್ರಹ : ಶ್ರೀಮತಿ ಚಂದ್ರಿಕಾ ಹೊಳ್ಳ, ಬೆಳ್ತಂಗಡಿ