ಗ್ರಾಮೀಣ ಆರೋಗ್ಯಕ್ಕೆ ಒತ್ತು ನೀಡುವ ಉತ್ತಮ ಯೋಜನೆ
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಗೆ ಗೃಹ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನೆಗೇ ಆರೋಗ್ಯ ಕಾರ್ಯಕರ್ತರ ತಂಡ ಭೇಟಿ ನೀಡಿ, ೩೦ ವರ್ಷ ಮೇಲ್ಪಟ್ಟ ಎಲ್ಲಾ ಜನರ ಆರೋಗ್ಯ ತಪಾಸಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಿದು. ಇದರಡಿ ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತಪಾಸಣೆಯನ್ನು ಮನೆಯಲ್ಲೇ ಮಾಡಲಾಗುತ್ತದೆ. ಮಧುಮೇಹ ಮತ್ತು ಬಿ ಪಿ ಪತ್ತೆಯಾದರೆ ವೈದ್ಯರ ಸಲಹೆಯಂತೆ ಉಚಿತ ಔಷಧ ನೀಡಲಾಗುತ್ತದೆ. ಇನ್ನುಳಿದ ಗಂಭೀರ ರೋಗಗಳು ಪತ್ತೆಯಾದರೆ ಮುಂದಿನ ಚಿಕಿತ್ಸೆಯ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ, ನಿರಂತರವಾಗಿ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಿ ಅಕಾಲಿಕ ಮರಣವನ್ನು ತಪ್ಪಿಸುವುದು ಯೋಜನೆಯ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ. ಇದು ಉತ್ತಮ ಪರಿಕಲ್ಪನೆಯ, ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರುವ, ಸದುದ್ಡೇಶದ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮರ್ಪಕವಾಗಿ ಜಾರಿಗೆ ಬಂದರೆ ಸಾಕಷ್ಟು ಜೀವನಗಳನ್ನು ಉಳಿಸಲಿದೆ.
ಹಳ್ಳಿಗರು ಸಾಮಾನ್ಯವಾಗಿ ಆರೋಗ್ಯ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಬಿಪಿಯನ್ನು ನಿರ್ಲಕ್ಷಿಸಿದರೆ ಹೃದಯಾಘಾತವಾಗಬಹುದು. ಮಧುಮೇಹ ನಿರ್ಲಕ್ಷಿಸಿದರೆ ನಾನಾ ರೋಗಗಳಿಗೆ ಕಾರಣವಾಗಬಹುದು. ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಗಳಿಗಂತೂ ಯಾರೂ ಸ್ವಯಂಪ್ರೇರಿತರಾಗಿ ತಪಾಸಣೆಗೆ ಹೋಗುವುದಿಲ್ಲ. ಇವು ತಡವಾಗಿ ಪತ್ತೆಯಾದರೆ ಜೀವವೇ ಹೋಗಬಹುದು. ಮಾನಸಿಕ ಆರೋಗ್ಯ ಕೂಡಾ ನಿರ್ಲಕ್ಷ್ಯಕ್ಕೆ ಒಳಗಾದ ಸಮಸ್ಯೆ. ಹೀಗಾಗಿ ಸರ್ಕಾರದಿಂದಲೇ ಉಚಿತವಾಗಿ ಮತ್ತು ಮನೆಮನೆಗಳಿಗೆ ಭೇಟಿ ನೀಡಿ ಇವುಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಕಾರ್ಯಕ್ರಮ ಸೂಕ್ತವಾಗಿದೆ. ನಂತರ ಔಷಧವನ್ನೂ ಉಚಿತವಾಗಿ ನೀಡುವುದರಿಂದ ಜನರು ಈ ಯೋಜನೆಯ ಲಾಭವನ್ನು ಖಂಡಿತವಾಗಿಯೂ ಪಡೆದುಕೊಳ್ಳಲು ಉತ್ಸುಕರಾಗಿರುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಇಂತಹ ಯೋಜನೆಯ ಅಗತ್ಯವಿದೆ. ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಇಂತಹ ಯೋಜನೆಯನ್ನು ಈಗಾಗಲೇ ತರಲಾಗಿದ್ದರೂ, ಅವು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ಗೃಹ ಆರೋಗ್ಯವನ್ನು ನಗರ ಪ್ರದೇಶಗಳಿಗೂ ವಿಸ್ತರಿಸಿ, ರಾಜ್ಯಾದ್ಯಂತ ಮಾದರಿ ರೀತಿಯಲ್ಲಿ ಜಾರಿಗೊಳಿಸಿ, ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಲು ಸರ್ಕಾರಕ್ಕೆ ಅವಕಾಶಗಳಿವೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೫-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ