ಗ್ರಾಮೀಣ ಬಡತನ ಇಳಿಕೆ

ಗ್ರಾಮೀಣ ಬಡತನ ಇಳಿಕೆ

ದೇಶದಲ್ಲಿ ಬಡತನ ಪ್ರಮಾಣ ಕಡಿಮೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನವು ಹೆಚ್ಚು ವೇಗವಾಗಿ ಕಡಿಮೆಯಾಗುತ್ತಿದೆ ಎಂಬುದಾಗಿ ವರದಿಯೊಂದು ತಿಳಿಸಿರುವುದು ಚೇತೋಹಾರಿ ವಿಷಯವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡೆಸಿರುವ ಸಮೀಕ್ಷೆಯೊಂದು ಈ ಅಂಶವನ್ನು ತಿಳಿಸಿದ್ದು, ೨೦೨೩-೨೪ರಲ್ಲಿ ಗ್ರಾಮೀಣ ಬಡತನವು ಶೇ. ೪.೮೬ ಕ್ಕೆ ಕುಸಿದಿದ್ದು, ಇದು ಅದಕ್ಕಿಂತ ಹಿಂದಿನ ವರ್ಷ ಶೇ. ೭.೨ ರಷ್ಟಿತ್ತು ಎಂಬುದಾಗಿ ತಿಳಿಸಿದೆ. ದಶಕದ ಹಿಂದೆ ಅಂದರೆ ೨೦೧೧-೧೨ ರಲ್ಲಿ ಗ್ರಾಮೀಣ ಬಡತನವು ಶೇ. ೨೫.೭ರಷ್ಟಿತ್ತು ಎಂಬುದನ್ನು ಗಮನಿಸಿದರೆ, ದೇಶವು ಅದೆಷ್ಟು ಮುಂದಕ್ಕೆ ಸಾಗಿ ಬಂದಿದೆ ಎಂಬುದರ ಅರಿವಾಗದೇ ಇರದು. ದೇಶದ ಆಡಳಿತದ ಬದಲಾವಣೆಯು ಇಂತಹುದೊಂದು ಸ್ಥಿತ್ಯಂತರಕ್ಕೆ ಕಾರಣೀಭೂತವಾಗಿದೆ ಎಂಬುದು ಕೂಡಾ ಸಮೀಕ್ಷೆಯಿಂದ ತಿಳಿದು ಬಂದ ಅಂಶವಾಗಿದೆ.

ಸಂಪತ್ತಿನ ಹಂಚಿಕೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರದ ಕುರಿತಂತೆ ಬಹುತೇಕವಾಗಿ ಹೇಳಲಾಗುತ್ತಿರುತ್ತದೆ. ನಗರಗಳಲ್ಲಿ ಬಡತನವು ಕಡಿಮೆಯಾಗುತ್ತಿದ್ದರೂ ಗ್ರಾಮೀಣ ಪ್ರದೇಶವು ಈ ವಿಚಾರದಲ್ಲಿ ಇನ್ನೂ ಹಿಂದೆ ಬಿದ್ದಿದೆ ಎಂದು ದೂರಲಾಗುತ್ತಿತ್ತು. ಆದರೀಗ ಇದೇ ಮೊಟ್ಟ ಮೊದಲಾಗಿ ಕಳೆದ ವರ್ಷ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲೇ ಬಡತನ ಪ್ರಮಾಣದ ಇಳಿಕೆಯು ವೇಗವಾಗಿರುವುದು ಗಮನಾರ್ಹವಾಗಿದೆ. ನಗರ ಪ್ರದೇಶದಲ್ಲಿ ಬಡತನವು ಕಳೆದ ವರ್ಷ ಶೇ.೪.೦೯ಗೆ ಇಳಿದಿದ್ದು, ಅದಕ್ಕಿಂತ ಹಿಂದಿನ ವರ್ಷ ಇದು ಶೇ. ೪.೬೦ ಆಗಿತ್ತು. ಇದಕ್ಕೆ ಹೋಲಿಸಿದರೆ ಗ್ರಾಮೀಣ ಬಡತನವು ತೀವ್ರ ಇಳಿಕೆ ಕಂಡಿದೆ. ಒಟ್ಟಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ಪ್ರಮಾಣವು ಶೇ. ೫ ಕ್ಕಿಂತ ಕೆಳಗೆ ಕುಸಿದಿರುವುದು ದೇಶದ ಪಾಲಿಗೆ ಉತ್ತಮ ಬೆಳವಣಿಗೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಾಸಿಕ ತಲಾ ಆದಾಯ ಅನುಭೋಈಗದ ಅಂತರ ಕೂಡಾ ತುಂಬಾ ಕಡಿಮೆಯಾಗಿದೆ ಎಂಬುದೂ ಬಹುಮುಖ್ಯ ವಿಚಾರ.

ಗ್ರಾಮೀಣ ಪ್ರದೇಶದಲ್ಲಿ ಬಡತನ ಪ್ರಮಾಣವು ಹೆಚ್ಚು ಇಳಿಕೆಯಾಗಲು ಸರಕಾರ ತೆಗೆದುಕೊಂಡ ಕ್ರಮಗಳೂ ಕಾರಣವೆಂದು ಸಮೀಕ್ಸೆಯು ಕಂಡುಕೊಂಡಿದೆ. ಗ್ರಾಮೀಣ ಮಂದಿಗೆ ಸೌಲಭ್ಯಗಳ ನೇರ ವರ್ಗಾವಣೆ, ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣರ ಜೀವನ ಮಟ್ಟ ಸುಧಾರಣೆಗೆ ತೆಗೆದುಕೊಂಡ ಕ್ರಮಗಳು ಇದಕ್ಕೆ ಕಾರಣವಾಗಿವೆ. ರೈತರ ಆದಾಯ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು ಇದಕ್ಕೆ ಕಾರಣವಾಗಿವೆ. ಗ್ರಾಮೀಣ ಪ್ರದೇಶವನ್ನು ಹೆಚ್ಚು ಸ್ವಾವಲಬಿಯಾಗಿಸುವ ಮತ್ತು ಸಬಲೀಕರಣಗೊಳಿಸುವ ಕೇಂದ್ರ ಸರಕಾರದ ಉದ್ದೇಶವು ಸಫಲವಾಗುತ್ತಿರುವುದರ ಸಂಕೇತವಿದು ಎಂಬುದಾಗಿ ವ್ಯಾಖ್ಯಾನಿಸಬಹುದಾಗಿದೆ. ಗ್ರಾಮಗಳು ಉಳಿದರೆ ದೇಶ ಉಳಿದೀತು, ಗ್ರಾಮೀಣ ಬದುಕಿನ ಮಟ್ಟ ಬೆಳೆದರೆ ದೇಶದ ಜೀವನ ಮಟ್ಟ ಬೆಳೆದೀತು ಎಂಬ ಮಾತಿನ ನಡುವೆ ಇಂತಹ ಬೆಳವಣಿಕೆ ನಡೆದಿರುವುದು ಸ್ವಾಗತಾರ್ಹವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೪-೦೧-೨೦೨೫

ಚಿತ್ರ: ಇಂಟರ್ನೆಟ್ ತಾಣ