ಗ್ರಾಮ ಸಮುದಾಯಕ್ಕೆ ಹೊಸ ಬದುಕು ನೀಡಿದ ಚದುರಂಗ
ಭಾರತದ ಚದುರಂಗ ಪಟುಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರೆ, ಇದು ಕೇರಳದ ಗ್ರಾಮವೊಂದರಲ್ಲಿ ಸಾಮಾಜಿಕ ಬದಲಾವಣೆ ತಂದ ಚದುರಂಗದ ಕತೆ.
ಆ ಗ್ರಾಮದ ಹೆಸರು ಮರೊಟ್ಟಿಚಾಲ್. 1960ರ ದಶಕದಲ್ಲಿ ಅಲ್ಲಿ ಹಲವಾರು ಕುಟುಂಬಗಳಲ್ಲಿ ಸಂಕಟ ತುಂಬಿತ್ತು. ಅದಕ್ಕೆ ಕಾರಣ ಕುಡಿತದ ಚಟ. ಇದು ಹಲವಾರು ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿತ್ತು. ಆ ಸಮಯದಲ್ಲಿ ಅಲ್ಲಿನ ಟೀ-ಶಾಪ್ ಮಾಲೀಕ ಸಿ. ಉನ್ನಿಕೃಷ್ಣನ್ ಇವೆಲ್ಲ ಸಮಸ್ಯೆಗಳಿಂದ ಪಾರಾಗಲು ಜನರಿಗೊಂದು ದಾರಿ ತೋರಿಸಿದರು. ಅದುವೇ ಚದುರಂಗದ ಆಟ.
ಹಳ್ಳಿಗರ ಉದ್ಧಾರಕ್ಕಾಗಿ ಏನಾದರೂ ಮಾಡಬೇಕೆಂದು ಪಣ ತೊಟ್ಟ ಉನ್ನಿಕೃಷ್ಣನ್ ಮಾಡಿದ್ದು ಇಷ್ಟೇ: ಹಳ್ಳಿಗರಿಗೆ ಚದುರಂಗ ಕಲಿಸತೊಡಗಿದರು. ಭಾರತದ ಈ ಪ್ರಾಚೀನ ಆಟ ಆ ಹಳ್ಳಿಯಲ್ಲಿ ಮ್ಯಾಜಿಕ್ ಮಾಡಿತು! ಮದ್ಯ ಕುಡಿದು “ಥ್ರಿಲ್" ಪಡೆಯುವ ಬದಲಾಗಿ ತಮ್ಮ ಬುದ್ಧಿಮತ್ತೆಗೆ ಸವಾಲೊಡ್ಡುವ ಚದುರಂಗ ಆಟವಾಡಿ ಹೆಚ್ಚೆಚ್ಚು ಹಳ್ಳಿಗರು “ಥ್ರಿಲ್" ಪಡೆಯತೊಡಗಿದರು! ಹೆಚ್ಚೆಚ್ಚು ಜನರಿಗೆ ಚದುರಂಗದ ಚಟ ಹಿಡಿದಂತೆ, ಆ ಗ್ರಾಮದಲ್ಲಿ ಕುಡಿತದ ಚಟ ಕಡಿಮೆಯಾಯಿತು.
ಚದುರಂಗದ ಆಟದಲ್ಲಿ ಪ್ರಬಲ ಎದುರಾಳಿಯನ್ನು ಸೋಲಿಸುವುದು ಮರೊಟ್ಟಿಚಾಲ್ನ ಹಳ್ಳಿಗರಿಗೆ ಪ್ರತಿಷ್ಠೆಯ ಸಂಗತಿ ಆಯಿತು. ಒಂದೊಮ್ಮೆ ಕುಡಿತದಿಂದಾಗಿ ಛಿದ್ರವಾಗಿದ್ದ ಕುಟುಂಬದ ಸದಸ್ಯರೆಲ್ಲ ಈಗ ಒಟ್ಟಾಗಿ ಕುಳಿತು ಚದುರಂಗದ ಆಟವಾಡತೊಡಗಿದರು!
ಮರೊಟ್ಟಿಚಾಲ್ ಎಂಬ ಗ್ರಾಮದ ಪರಿವರ್ತನೆ ಚದುರಂಗದ ತಾಕತ್ತಿನ ಪುರಾವೆ. ಚದುರಂಗ ಮರೊಟ್ಟಿಚಾಲ್ಗೆ ಒಂದು ಹೊಸ ಐಡೆಂಟಿಟಿ ನೀಡಿದೆ. ಅದೀಗ ಮರೊಟ್ಟಿಚಾಲ್ ಗ್ರಾಮವಾಸಿಗಳ ಬದುಕಿನ ಅವಿಭಾಜ್ಯ ಅಂಗವಾಗಿದೆ. "ನಮ್ಮ ಗ್ರಾಮದ ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಠ ಒಬ್ಬರಿಗಾದರೂ ಚದುರಂಗ ಗೊತ್ತಿದೆ” ಎನ್ನುತ್ತಾರೆ ಉನ್ನಿಕೃಷ್ಣನ್.
ಮರೊಟ್ಟಿಚಾಲ್ ಗ್ರಾಮದ ಹೆಸರು ಸಾಗರಗಳನ್ನು ದಾಟಿ ವಿದೇಶಗಳನ್ನು ತಲಪಿದೆ. ಜರ್ಮನಿ ಮತ್ತು ಯುಎಸ್ಎ ದೇಶದ ಕೆಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ - ಈ "ಚದುರಂಗ ಗ್ರಾಮ"ದ ಚಮತ್ಕಾರವನ್ನು ಕಣ್ಣಾರೆ ಕಾಣಲಿಕ್ಕಾಗಿ!
ಚದುರಂಗ ಎಂಬುದು ಕಪ್ಪು-ಬಿಳುಪಿನ 64 ಚೌಕಗಳ ಹಾಸಿನಲ್ಲಿ, 32 ಯುದ್ಧಾಳುಗಳನ್ನು (ಒಬ್ಬ ಆಟಗಾರನ 16 ಬಿಳಿ ಯುದ್ಧಾಳುಗಳು ಮತ್ತು ಇನ್ನೊಬ್ಬ ಆಟಗಾರನ 16 ಕಪ್ಪು ಯುದ್ಧಾಳುಗಳು) ಚಲಿಸುತ್ತಾ ಆಡುವ ಆಟ. ಇದರ ಚಲನೆಗಳು ಅನಂತ! ಇದು ಪ್ರತಿ ಕ್ಷಣದಲ್ಲೂ ಆಟಗಾರರಿಗೆ ಸವಾಲುಗಳನ್ನು ಎಸೆಯುತ್ತಾ, ನೋಡುಗರಿಗೆ ಮನೋರಂಜನೆ ನೀಡುತ್ತದೆ ಎಂಬುದೇನೋ ನಿಜ. ಜೊತೆಗೆ, ವಿಶ್ವನಾಥನ್ ಆನಂದ್, ರಮೇಶ್ಬಾಬು ಪ್ರಗ್ಗಾನಂದಾ, ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್ಬಾಬು ಇನ್ನಿತರ ಜಾಗತಿಕ ಮಟ್ಟದ "ಹೀರೋ"ಗಳನ್ನು ಭಾರತದ ಯುವಜನತೆಗೆ ಪರಿಚಯಿಸಿದ ಆಟ. ಅದಕ್ಕಿಂತ ಮಿಗಿಲಾಗಿ, ಚದುರಂಗ ಹೊಸ ಮೌಲ್ಯಗಳನ್ನು ಕಲಿಸಿ, ಸಾಮಾಜಿಕ ಬಂಧಗಳನ್ನು ಬಲಪಡಿಸಿ, ಸಮುದಾಯದ ಬದುಕನ್ನೇ ಬದಲಾಯಿಸಬಲ್ಲದು ಎಂದು ಮರೊಟ್ಟಿಚಾಲ್ ಜಗತ್ತಿಗೆ ತೋರಿಸಿಕೊಟ್ಟಿದೆ.
ಫೋಟೋ 1: ಮರೊಟ್ಟಿಚಾಲ್ನಲ್ಲಿ ಬಸ್ ನಿಲ್ದಾಣದಲ್ಲೇ ಚದುರಂಗ ಆಟದಲ್ಲಿ ತಲ್ಲೀನರಾದವರು
ಫೋಟೋ 2: ಮರೊಟ್ಟಿಚಾಲ್ನಲ್ಲಿ ಶಾಲಾ ಬಾಲಕನೊಂದಿಗೆ ಚದುರಂಗ ಆಡುತ್ತಿರುವ ವಯಸ್ಕ
ಫೋಟೋ ಕೃಪೆ: ಜ್ಯಾಕ್ ಪಾಲ್ಫ್ರೇ