ಘಜನಿ-ರಜನಿಗಳ ದಾಳಿ ಹಿಮ್ಮೆಟ್ಟಲಿ!

ಘಜನಿ-ರಜನಿಗಳ ದಾಳಿ ಹಿಮ್ಮೆಟ್ಟಲಿ!

ಬರಹ

"ಚಲನ ಚಿತ್ರ" ವೆಂಬ ಮನರಂಜನೆ, ಸರ್ವ ಜನರನ್ನೂ ಪ್ರಭಾವಕ್ಕೊಳಪಡಿಸಿರುವ ಬಹು ದೊಡ್ಡ ಮಾಧ್ಯಮ! ಹಲವು ಭಾಷೆಗಳ ಒಕ್ಕೂಟದ ಭಾರತದಲ್ಲಿ ಆಯಾ ಭಾಷೆಯ ಚಲನಚಿತ್ರಗಳು ಮನರಂಜನೆಯ ಜತೆಗೆ ಆಯಾ ರಾಜ್ಯದ ನಡೆ-ನುಡಿ-ಆಚಾರ-ವಿಚಾರ-ಸಂಪ್ರದಾಯಗಳನ್ನು ಪ್ರತಿಪಾದಿಸಿ ಜನರಲ್ಲಿ ತಮ್ಮ ಪ್ರದೇಶ-ಜನಾಂಗ-ಮತ್ತು ಭಾಷೆಯ ಬಗ್ಗೆ ಸ್ವಾಭಿಮಾನವನ್ನು ಹುಟ್ಟು ಹಾಕಿರುವ ಪ್ರಬಲ ಮಾಧ್ಯಮ. ಅಷ್ಟೇ ಅಲ್ಲದೆ ಆಯಾ ರಾಜ್ಯದ ಜನತೆಯ ಒಗ್ಗಟ್ಟನ್ನು ಬಲಪಡಿಸುತ್ತ ಇಡೀ ದೇಶವನ್ನು ಒಂದಾಗಿ ಇಟ್ಟಿರುವಂತ ಒಂದು ದೊಡ್ಡ ಸಾಧನ. ಹಾಗಾಗಿ ಭಾರತದ ಆಯಾ ರಾಜ್ಯಗಳಲ್ಲಿ ಅಲ್ಲಿನ ಭಾಷೆಯ ಮನರಂಜನೆಗೆ ಆಧ್ಯತೆ ದೊರಕಬೇಕೆಂಬುದು ನಿರ್ವಿವಾದವಾದದ್ದು.

ಆದರೆ ಕಳೆದ ಶುಕ್ರವಾರ "ಘಜನಿ" ಎಂಬ ಹಿಂದಿ ಸಿನೆಮಾವೊಂದು ಈ ಹಿಂದೆ ಕರ್ನಾಟಕದಲ್ಲಿನ ಚಲನಚಿತ್ರ ಪ್ರದರ್ಶಕರು ಮತ್ತು ಹಂಚಿಕೆದಾರರು ಮಾಡಿಕೊಂಡಿದ್ದ ನಿಯಮವನ್ನು ಗಾಳಿಗೆ ತೂರಿ, ಕೆಲವೆಡೆ ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡಿಸಿ ರಾಜ್ಯಾದ್ಯಂತ ೫೦ಕ್ಕೂ ಮೀರಿದ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ. ತಡವಾಗಿಯಾದರೂ ಎಚ್ಚರಗೊಂಡ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿ ಈ ಹಿಂದೆ ಆದ ಒಪ್ಪಂದದಂತೆ ಇಂತಿಷ್ಟೇ ಚಿತ್ರಮಂದಿರಗಳಲ್ಲಿ ಇದು ಪ್ರದರ್ಶನಗೊಳ್ಳಬೇಕು ಮತ್ತು ಬಾಕೀ ಚಿತ್ರಮಂದಿರಗಳಲ್ಲಿ "ಘಜನಿ" ಪ್ರದರ್ಶನ ರದ್ದುಗೊಳ್ಳಬೇಕು ಎಂಬ ಆದೇಶ ಜಾರಿಗೊಳಿಸಿದೆ. ಈ ದಿಟ್ಟ ನಿರ್ಧಾರ ತೆಗೆದುಕೊಂಡ ಶ್ರೀಮತಿ ಜಯಮಾಲ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪಧಾಧಿಕಾರಿಗಳಿಗೆ ಅಭಿನಂದನೆಗಳು.

ಇದು ಕೇವಲ ಒಂದು ಪರಭಾಷ ಸಿನಿಮಾ ಬಿಡುಗಡೆ ಕುರಿತಾದ ಸಣ್ಣ ವಿಚಾರವೆಂದು ಕಡೆಗಣಿಸದೆ, ಮನರಂಜನೆಯ ರೂಪದಲ್ಲಿ ಕನ್ನಡಿಗರ ಅಸ್ಥಿತ್ವದ ಮೇಲಾಗುತ್ತಿರುವ ದಾಳಿಯೆಂದು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ. ಹೀಗೆ ಹಿಂದಿ ಮತ್ತು ಪರಭಾಷೆಯ ಮನರಂಜನೆ ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ ಈ ಮೂಲಕ ನಮ್ಮನ್ನು ಆಕ್ರಮಿಸುತ್ತಿದ್ದರೆ, ಕನ್ನಡ ಮನರಂಜನೆಯ ಉದ್ಯಮವನ್ನು ಅವಲಂಭಿಸಿರುವವರ ಮತ್ತು ಕನ್ನಡ ಮನರಂಜನೆಯ ಮಾರುಕಟ್ಟೆಯ ಗತಿ ಏನು ಎಂಬುದರ ಬಗ್ಗೆ ಚಿಂತಿಸಬೇಕೆದೆ. ಕನ್ನಡ ಮನರಂಜನೆಯ ಮಾರುಕಟ್ಟೆಯನ್ನು ನಾವು ವಿಸ್ತರಿಸಿಕೊಳ್ಳುವ ಮಾತು ಹಾಗಿರಲಿ, ಅದನ್ನು ಉಳಿಸಿಕೊಳ್ಳದೆ ಇತರರಿಗೆ ಹೀಗೆ ಸಲೀಸಾಗಿ ಒಳನುಗ್ಗಲು ಅವಕಾಶ ಕಲ್ಪಿಸಿಕೊಟ್ಟಲ್ಲಿ ಕನ್ನಡ ಮನರಂಜನೆ ಹಾಗು ಆ ಮೂಲಕ ಕನ್ನಡ ಭಾಷೆಯ ವಿನಾಶ ಖಚಿತ.

ಮೊದಲಿಗೆ ಕರ್ನಾಟಕದ ಚಿತ್ರಮಂದಿರದ ಮಾಲೀಕರು, ಇಲ್ಲಿನ ಹಂಚಿಕೆದಾರರು ಹೆಚ್ಚು ಹೆಚ್ಚು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಪ್ರೋತ್ಸಾಹ ತೋರಿಸಿ ಹೆಚ್ಚಿನ ಹಣ ಸಂಪಾದನೆಗಿಂತ ನಮ್ಮ ಸ್ವಾಭಿಮಾನ ಕಾಪಾಡಿಕೊಳ್ಳುವುದು ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕಿದೆ. ಜತೆಗೆ ನಮ್ಮ ಕನ್ನಡ ಚಿತ್ರಗಳು ಸಹ ಹಿಂದಿ ಹಾಗು ಇತರ ಪರಭಾಷಾ ಚಿತ್ರಗಳಿಗೂ ಮೀರಿ ಮನರಂಜನೆಯನ್ನು ಒದಗಿಸುತ್ತಿವೆ ಎಂಬ ಸತ್ಯವನ್ನು ನಾವು ಅರಿತು ಹೆಚ್ಚಾಗಿ ಕನ್ನಡ ಚಿತ್ರಗಳನ್ನು ನೋಡುವುದರ ಮೂಲಕ ಪ್ರೋತ್ಸಾಹ ತೋರಬೇಕಿದೆ. ಹೀಗೆ ಇಲ್ಲಿನ ಚಿತ್ರ ಹಂಚಿಕೆದಾರರು, ಪ್ರದರ್ಶಕರು ಮತ್ತು ವೀಕ್ಷಕರ ಜತೆಗೆ, ಕನ್ನಡ ಚಿತ್ರರಂಗದ ಏಳಿಗೆಗಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಭಿಮಾನಿ ಕನ್ನಡಿಗರು ಸಹ ಕನ್ನಡ ಚಿತ್ರಗಳ ಬೆಳವಣಿಗೆಗಾಗಿ ಇನ್ನಷ್ಟು ಶ್ರಮಿಸಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ಈ "ಘಜನಿ" ಜತೆಗೆ "ರಜನಿ" ಗಳ ಅಬ್ಬರ ಕಡಿಮೆ ಮಾಡುವ ನೈತಿಕ ಜವಾಬ್ದಾರಿ ಹೊರುವ ಪಣ ತೊಡಬೇಕಿದೆ

*****************************************

ಸಂಪದದ ಎಲ್ಲ ಕನ್ನಡ ಮಿತ್ರರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ವರುಷ ಹೊಸ ಆಸೆ, ಆಕಾಂಕ್ಷೆಗಳನ್ನು ತರಲಿ. ನಿಮ್ಮ ಬೆಳವಣಿಗೆಗೆ ಹೊಸ ಹಾದಿಗಳು ಮೂಡಿ ಹೊಸ ಸಾಧನೆಗೆ ಅನುವು ಮಾಡಿಕೊಡಲಿ. ನಿಮ್ಮಲ್ಲರ ಬದುಕು ಹಸನಾಗಲಿ

ಕನ್ನಡ ತಾಯಿ ಭುವನೇಶ್ವರಿಯ ಹಾರೈಕೆ ಸದಾ ನಿಮ್ಮ ಮೇಲಿರಲಿ. ಹೊಸ ವರ್ಷಕ್ಕೆ ತೆಗೆದುಕೊಳ್ಳುವ ನಿರ್ಣಯಗಳಲ್ಲಿ (Resolution) "ಕನ್ನಡ ಪರವಾದ ನಿಲವು" ಸಹ ಒಂದಾಗಿರಲಿ. ೨೦೦೯ ರಲ್ಲಿ ಹೆಚ್ಚು ಹೆಚ್ಚು ಕನ್ನಡ ಕೆಲಸಗಳು ನಿಮ್ಮಿಂದ ನೆರವೇರಲಿ.

ಕನ್ನಡದ ಸಮಸ್ಯೆಗಳು ಅಳಿಯಲಿ-ಕನ್ನಡತನ ಎಲ್ಲೆಡೆ ಬೆಳೆಯಲಿ.

ಚಂ.ಶೇ. ಕಲ್ಯಾಣ ರಾಮನ್
ಬೆಂಗಳೂರು.

**ಕರ್ನಾಟಕದಿಂದ ಭಾರತವೇ ಹೊರತು, ಭಾರತದಿಂದ ಕರ್ನಾಟಕವಲ್ಲ**