ಘಟ ಉರುಳಿತು

ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ. ಸಾಮಾನ್ಯ ಘಟನೆಗಳನ್ನು ಕತೆಯಾಗಿ ನಿರೂಪಿಸುವಾಗ ಅವುಗಳಿಗೆ ಸಾಕ್ಷಿ ಚಿತ್ರದ ಸ್ವರೂಪ ಬಂದುಬಿಡುತ್ತದೆ. ಕತೆಗಳಿಗಿರುವ ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣ, ಆಕಸ್ಮಿಕ ತಿರುವು ಮತ್ತು ಅನಿರೀಕ್ಷಿತ ಮುಕ್ತಾಯ ಇರುವುದಿಲ್ಲ. ಯಥಾವತ್ತಾಗಿ ಒಂದಾದ ಮೇಲೊಂದು ಘಟನೆಗಳನ್ನು ವಾಸ್ತವಕ್ಕೆ ಕುಂದುಂಟಾಗದೆ ಜೋಡಿಸಲಾಗಿರುತ್ತದೆ. ಇಂತಹ ಸಾಕ್ಷ್ಯ ಚಿತ್ರದ ಮಿತಿಯನ್ನು ನಂದಗಾವ ಅವರು ತಮ್ಮ ಕತೆಗಳಲ್ಲಿ ಮೀರುತ್ತಾರೆ. ಘಟನೆಗಳನ್ನು ಕತೆಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಲೇಖಕರ ಮಾತಿನಲ್ಲಿ ಬರೆದ ಅನಿಸಿಕೆಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ಈ ನನ್ನ ಎಂಟನೇ ಕಥಾ ಸಂಕಲನ 'ಘಟ ಉರುಳಿತು' ಪ್ರಸಕ್ತ ವರ್ಷ ಪ್ರಕಟಣೆಯ ಭಾಗ್ಯ ಪಡೆಯುತ್ತಿರುವುದು ಒಂದು ಅನಿರೀಕ್ಷಿತವಾಗಿ ಘಟಿಸುತ್ತಿರುವ ಆಕಸ್ಮಿಕ ಸಂಗತಿಯಂತೆ ನನ್ನನ್ನು ಕಾಡುತ್ತಿದೆ. ಆಗಾಗ, ಪತ್ರಿಕೆಗಳಲ್ಲಿ, ವಾರ, ಮಾಸ ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಒಟ್ಟು ಒಂಬತ್ತು ಕತೆಗಳು ಮತ್ತು ಒಂದು ಅಪ್ರಕಟಿತ ಕತೆ ಹೀಗೆ ಒಟ್ಟು ಹತ್ತು ಕತೆಗಳು ಈ ಸಂಕಲನದಲ್ಲಿವೆ.
ಆಕಸ್ಮಿಕ ಪ್ರಕಟಣೆಯ ಭಾಗ್ಯದ ಈ ವಿದ್ಯಮಾನವನ್ನು 'ಆಕಸ್ಮಿಕ' ಎಂದು ಗುರುತಿಸಲು ನನಗೆ ಹಲವು ಕಾರಣಗಳಿವೆ. ಪ್ರಸಕ್ತ ವರ್ಷ ನನ್ನ ನೂತನ ಕಥಾ ಸಂಕಲನವೊಂದನ್ನು ಹೊರತರುವ ಯೋಚನೆ ಮನಸ್ಸಿನ ಯಾವ ಮೂಲೆಯಲ್ಲೂ ಇರಲಿಲ್ಲ. ಹಾಗೆ ಹೇಳುವುದಾದರೆ, ೨೦೨೨ರ ಈಸ್ಟರ್ ಹಬ್ಬ ಮುಗಿಯುತ್ತಿದ್ದಂತೆಯೇ ಸಣ್ಣದಾಗಿ ಕಾಲು, ತೋಳು ನೋವು ಎಂದು ಆರಂಭವಾದ ಕಾಯಿಲೆ, ನನ್ನನ್ನು ನಿಲ್ಲದಂತೆ ಮಾಡಿ, ಕೆಲವೇ ದಿನಗಳಲ್ಲಿ ನನ್ನನ್ನು ಹಾಸಿಗೆಯ ಮೇಲೆ ಮಲಗಿಸಿ ಪರಾವಲಂಬಿಯನ್ನಾಗಿ ಮಾಡಿಬಿಟ್ಟಿತ್ತು.
ಕಾಯಿಲೆಯ ಆರಂಭದಲ್ಲೇ ದೊಡ್ಡ ಆಸ್ಪತ್ರೆಗೆ ಒಂದೆರಡು ದಿನ ಸೇರಿದರೂ ಅಂಥ ಪ್ರಯೋಜನ ಕಾಣಲಿಲ್ಲ. ಅಲ್ಲಿನ ಯಾವ ವೈದ್ಯರೂ ಚಿಕಿತ್ಸೆ ಫಲಕಾರಿ ಆಗುವುದು ಎಂಬ ಗುಲಗಂಜಿ ತೂಕದ ಭರವಸೆಯನ್ನು ನೀಡದೇ, ಮೊಣಕಾಲು ಚಿಪ್ಪಿಗೆ ನೇರವಾಗಿ ಚುಚ್ಚುಮದ್ದು ಹಾಕುತ್ತೇವೆ ಎಂದರು. ಕೊನೆಗೆ ಅಲ್ಲಿಂದ ಹೊರಗೆ ಬಂದು ಇನ್ನೊಂದು ಖಾಸಗಿ ಆಸ್ಪತ್ರೆಗೆ ಹೋದಾಗ, ಅಲ್ಲಿನ ವೈದ್ಯರು ದೊಡ್ಡಾಸ್ಪತ್ರೆಯ ಔಷಧಿಯನ್ನೆ ಮುಂದುವರಿಸಿದರು. ಒಂದು ಔಷಧಿಯನ್ನು ಹೆಚ್ಚವರಿಯಾಗಿ ಸೇರಿಸಿದ್ದರು. ಜೊತೆಗೆ ಆರೋಗ್ಯ ಸುಧಾರಿಸುವ ಭರವಸೆ ನೀಡಿದರು.
'ಮೂರು ಅಥವಾ ನಾಲ್ಕು ತಿಂಗಳಲ್ಲಿ ನಾನು ನಡೆಯಬಲ್ಲೆ' ಎಂಬ ವೈದ್ಯರ ಭರವಸೆಯ ನುಡಿಗಳು ನನ್ನಲ್ಲಿ ಮತ್ತೆ ಜೀವಚೈತನ್ಯ ತುಂಬಲು ಕಾರಣವಾಯಿತು. ರಾಜಾಜಿನಗರದ ವೆಸ್ಟ್ಕಾರ್ಡ್ ರಸ್ತೆಯಲ್ಲಿರುವ ಚನ್‌ರೆ ರುಮಟಾಲಜಿ ಮತ್ತು ಇಮ್ಯುನಾಲಜಿ ಸೆಂಟರ್ ಮತ್ತು ರಿಸರ್ಚ್ ಸಂಸ್ಥೆಯ ಹಿರಿಯ ವೈದ್ಯ ಡಾ.ಚಂದ್ರಶೇಖರ್ ಎಸ್ ಅವರ ಹೇಳಿಕೆಯಂತೆ, ನಾನು ಮೂರು ತಿಂಗಳಲ್ಲಿ ಮತ್ತೆ ನಿಧಾನವಾಗಿ ನಡೆಯುವಂತಾದೆ. ಒಂದು ಭಾನುವಾರ, ರೀಟಾರೀನಿ ಅವರು ಒಬ್ಬರೇ ಮನೆಗೆ ಬಂದು ಮಾತನಾಡಿಸಿದರು. ಉಭಯ ಕುಶಲೋಪರಿಯ ನಂತರ, ತಮ್ಮ 'ಸಂಚಲನ ಪ್ರಕಾಶನ'ದ ಅಡಿ ನನ್ನ ಕಥೆಗಳ 'ಕಥಾ ಸಂಕಲನ'ವೊಂದನ್ನು ಹೊರತರುವ ಇಂಗಿತ ವ್ಯಕ್ತ ಪಡಿಸಿದರು. ನಾನು ಹಿಂದೆ ಮುಂದೆ ಯೋಚಿಸದೇ 'ಹೂಂ' ಎಂದು ಬಿಟ್ಟೆ.
ನಂತರ, ನನ್ನ ಒದ್ದಾಟ ಆರಂಭವಾಯಿತು. ನನ್ನ ಎಲ್ಲಾ ಪ್ರಕಟಿತ ಕತೆಗಳನ್ನು ಹುಡುಕಿ, ಅವುಗಳ ಮೂಲ ಪಠ್ಯಗಳನ್ನು ಪತ್ತೆ ಮಾಡಿ ಕಳಿಸುವುದರಲ್ಲಿ ನಾನು ಸುಸ್ತಾಗಿದ್ದೆ. ಕಂಪ್ಯೂಟರ್ ಮುಂದೆ ಬಹಳ ಹೊತ್ತು ಕೂತುಕೊಳ್ಳಲು ಆಗುತ್ತಿರಲಿಲ್ಲ. ಅಂತು ಇಂತೂ ಅಲ್ಲಲ್ಲಿ ಪ್ರಕಟಗೊಂಡಿದ್ದ 'ಘಟ ಉರುಳಿತು', 'ಉಪದೇಶಿ ಇನ್ನಾಸಪ್ಪ ಮತ್ತು ಬಂಡೆಗಳು', 'ಪ್ರಭು ದಯಪಾಲಿಸಿದ ಅಧಿಕಾರ', 'ಉಪದೇಶಿ ಅಜ್ಜ ಬನ್ನಪ್ಪ', 'ನೋವಿನ ಪ್ರಮಾಣ ಪತ್ರ' ಮತ್ತು 'ಕೇರಿಗೆ ಬಂದಳು ಮರಿಯಮ್ಮ' - ಹೀಗೆ ಆರು ಕತೆಗಳನ್ನು ಹುಡುಕಿ, ಪ್ರಕಟಣೆಗಾಗಿ ಆರಿಸಿ ಕಳಿಸಿದ್ದೆ. ನಂತರ ಈ ಸಾಲಿನ ಫೆಬ್ರುವರಿ ತಿಂಗಳಲ್ಲಿ ಕರ್ಮವೀರ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ಹರಕೆಯ ಹಾರ' ಕತೆಯನ್ನು ಕಳುಹಿಸಿದ್ದೆ.
ಒಂದೆರಡು ತಿಂಗಳುಗಳ ನಂತರ ಪ್ರಕಟಣೆಗೆ ಬೇಕಾದ ಆಕಾರದ ಹಾಳೆಗಳಲ್ಲಿ ಅಂದವಾಗಿ ರೂಪ ತಳೆದ (ಪುಸ್ತಕದ ಪೇಜಿನೇಷನ್ ಆದ) ಕತೆಗಳ ಪ್ರತಿ, ನನ್ನ ಈ ಮೇಲ್ ಪೆಟ್ಟಿಗೆಗೆ ಬಂದು ಬಿದ್ದಿತು. ಅದರ ಪ್ರಿಂಟ್ ತೆಗೆದು ಕೊಳ್ಳುವುದರಲ್ಲೂ ನಾನು ವಿಳಂಬ ಮಾಡಿದೆ. ಕಾಗುಣಿತದ ವ್ಯತ್ಯಾಸಗಳನ್ನು ತಿದ್ದಲು, ಆಕಸ್ಮಿಕವಾಗಿ ಬಿಟ್ಟು ಹೋಗಿರಬಹುದಾದ ಸಾಲುಗಳನ್ನು ಸೇರಿಸಲು (ಪೂಫ್ ನೋಡಲು). ಪುಸ್ತಕದ ಪ್ರತಿಯನ್ನು ಕೈಯಲ್ಲಿ ಹಿಡಿದಾಗ ನನಗೇ ಪಿಚ್ಚೆನಿಸಿತು. ಒಟ್ಟು ಪುಟಗಳ ಸಂಖ್ಯೆ ನೂರರ ಗಡಿದಾಟಿರಲಿಲ್ಲ.
ನನ್ನ ನೆನಪಿನ ಶಕ್ತಿಗೆ ಏನನ್ನಬೇಕೋ? 'ಸಂತರು ಮಗನ್ನ ಕಳಿಸ್ಯಾರು' ಹೆಸರಿನ ಕತೆ ಆಗಲೇ 2022ರ ಸಾಲಿನ ಡಿಸೆಂಬರ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ತಡವಾಗಿ ನೆನಪಿಗೆ ಬಂದಿತು. ಅದನ್ನು ಪರಿಷ್ಕರಿಸಿ ಈ ಕಥಾ ಸಂಕಲನಕ್ಕೆ ಸೇರಿಸಿರುವೆ. ಅದಕ್ಕೂ ಮೊದಲು, ರೀಟಾ ರೀನಿ ಅವರೊಂದಿಗೆ ಒಮ್ಮೆ ಮಾತನಾಡುವಾಗ 'ಮತ್ತಷ್ಟು ಕತೆಗಳಿಲ್ಲವೇ?' ಎಂದು ವಿಚಾರಿಸಿದರು. 'ಇವೆ, ಅವಾವು ಇನ್ನೂ ಪ್ರಕಟಣೆಯ ಭಾಗ್ಯ ಕಂಡಿಲ್ಲ. ಸ್ವಾತಂತ್ರೋತ್ಸವದ ಒಂದೆರಡು ಕತೆಗಳಿವೆ. ಒಂದೆರಡು ವರ್ಷಗಳ ಹಿಂದೆ ಬರೆದಿದ್ದೆ, ಅವು ಇನ್ನು ಮುಂದೆ ಪ್ರಕಟಗೊಳ್ಳುವ ಸಾಧ್ಯತೆ ಇದ್ದಂತಿಲ್ಲ' ಎಂದೆ. 'ಸರಿ, ಅವನ್ನೂ ಕಳಿಸಿ' ಅಂದರು.
ಅವರು ಅಷ್ಟು ಹೇಳಿದ್ದೇ ತಡ, ಅದುವರೆಗೂ ಲ್ಯಾಪ್ಟಾಪ್ ಮುಟ್ಟಲು ಹಿಂದೇಟು ಹಾಕುತ್ತಿದ್ದ ನಾನು, ಮತ್ತೆ ಆ ಕತೆಗಳ ಹುಡುಕಾಟದಲ್ಲಿ, ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಮತ್ತೆ ನಾನೂ ಮಾಮೂಲಿ ಎಂದಿನಂತೆ ಬರಹದ ಚಟುವಟಿಕೆಗಳ ಮನುಷ್ಯನಂತಾದೆ ಎನ್ನಿಸತೊಡಗಿತು.” ಸುಮಾರು ೧೮೦ ಪುಟಗಳ ಈ ಕೃತಿಯ ಕಥೆಗಳು ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ.