ಘನತೆವೆತ್ತ ಭಾರತದ ರಾಷ್ಟ್ರಪತಿ ಹುದ್ದೆ…

ಘನತೆವೆತ್ತ ಭಾರತದ ರಾಷ್ಟ್ರಪತಿ ಹುದ್ದೆ…

ನೆಲದ ಋಣ ತೀರಿಸಲು  ಬಹುದೊಡ್ಡ ಅವಕಾಶ ದೊರೆತ ಅದೃಷ್ಟಶಾಲಿಗಳು. ಅದು ಮೇಕಪ್ ಆದ ಮುಖವಾಡವಾಗಿರದೆ ಸಹಜ ಸ್ವಾಭಾವಿಕ ಭಾರತೀಯ ವ್ಯಕ್ತಿತ್ವವಾಗಿರಲಿ ಎಂಬ ನಿರೀಕ್ಷೆಯಲ್ಲಿ...

ಡಾಕ್ಟರ್ ರಾಜೇಂದ್ರ ಪ್ರಸಾದ್, ಡಾಕ್ಟರ್ ಎಸ್ ರಾಧಾಕೃಷ್ಣನ್, ಜಾಕಿರ್ ಹುಸೇನ್, ವಿವಿ ಗಿರಿ, ಫಕ್ರುದ್ದೀನ್ ಆಲಿ ಅಹಮದ್, ನೀಲಂ ಸಂಜೀವ ರೆಡ್ಡಿ, ಗ್ಯಾನಿ ಜೇಲ್ ಸಿಂಗ್, ಆರ್. ವೆಂಕಟರಾಮನ್, ಡಾಕ್ಟರ್ ಶಂಕರ್ ದಯಾಳ್ ಶರ್ಮ, ಕೆ ಆರ್ ನಾರಾಯಣನ್, ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ, ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್, ಪ್ರಣವ್ ಮುಖರ್ಜಿ, ರಾಮನಾಥ್ ಕೋವಿಂದ್… ದ್ರೌಪದಿ ಮುರ್ಮು ಅಥವಾ ಯಶವಂತ್ ಸಿನ್ಹಾ ?

ಭಾರತದ ರಾಷ್ಟ್ರಪತಿ ಚುನಾವಣೆ ಜುಲೈನಲ್ಲಿ ನಡೆಯುವ ಸಂದರ್ಭದಲ್ಲಿ ಈ ಬಗ್ಗೆ ಒಂದಷ್ಟು ಚರ್ಚೆಗಳು ಪ್ರಾರಂಭವಾಗಿದೆ. ಭಾರತದ ಸಂವಿಧಾನದ ಪ್ರಕಾರ ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಬಹುತೇಕ ಎಲ್ಲಾ ಅಧಿಕಾರ ಪ್ರಧಾನ ಮಂತ್ರಿ ಮತ್ತು ಸಚಿವ ಸಂಪುಟ ಹಾಗು ಜನ ಪ್ರತಿನಿಧಿಗಳ ಬಳಿಯೇ ಇರುತ್ತದೆ. ಪ್ರಥಮ ಪ್ರಜೆ ಎಂದು ಕರೆಯಲ್ಪಡುವ ರಾಷ್ಟ್ರಪತಿ ಕೇವಲ ನಾಮಕಾವಸ್ತೆ ಮತ್ತು ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಉಪಯೋಗಿಸಬಹುದಾದ ಅಧಿಕಾರ ಹೊಂದಿದ್ದಾರೆ. ಆದರೂ ಪ್ರತಿಭಾವಂತ ಕ್ರಿಯಾತ್ಮಕ ರಾಷ್ಟ್ರಪತಿ ದೇಶದ ಸಾರ್ವಜನಿಕರಲ್ಲಿ ತಮ್ಮ ಜ್ಞಾನದ ಬಲದಿಂದ ಪರೋಕ್ಷವಾಗಿ ಸಾಕಷ್ಟು ಪ್ರಭಾವ ಬೀರಬಹುದು. ಉದಾಹರಣೆಗೆ ಡಾಕ್ಟರ್ ರಾಜೇಂದ್ರ ಪ್ರಸಾದ್, ಡಾಕ್ಟರ್ ಕಲಾಂ ಮತ್ತು ವೈಯಕ್ತಿಕ ನೆಲೆಯಲ್ಲಿ ಇನ್ನೊಂದಿಬ್ಬರು. ಇದನ್ನು ಅವರವರ ವಿವೇಚನೆಗೆ ಬಿಡುತ್ತಾ....

ರಾಷ್ಟ್ರಪತಿಗಳು ನಿಜಕ್ಕೂ ಇನ್ನಷ್ಟು ಕ್ರಿಯಾತ್ಮಕವಾಗಿ ದೇಶಕ್ಕೆ ಸೇವೆ ಸಲ್ಲಿಸುವ ಸಾಕಷ್ಟು ಸಾಧ್ಯತೆಗಳು ಇವೆ. ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯ ಉಂಟು ಮಾಡುತ್ತಿರುವ ಜನ ಪ್ರತಿನಿಧಿಗಳ ಕುದುರೆ ವ್ಯಾಪಾರ ನಿಲ್ಲಿಸಲು ( ಶಾಸಕರ ಖರೀದಿ ) ಒಂದು ಪ್ರಾಮಾಣಿಕ ಚರ್ಚೆ ಹುಟ್ಟುಹಾಕಿ ಬದಲಾವಣೆಗೆ ಕಾರಣವಾಗಬಹುದು.

ಕಲಬೆರಕೆ ಮತ್ತು ವಿಷಯುಕ್ತ ಆಹಾರ ಇಂದು ಭಾರತದ ಬಹಳಷ್ಟು ಜನರ ಆರೋಗ್ಯವನ್ನೇ ಕಸಿಯುತ್ತಿದೆ. ಅದರ ವಿರುದ್ಧ ಗುಡಿಗಿದರೆ ಆಡಳಿತ ಯಂತ್ರ ಆ ನಿಟ್ಟಿನಲ್ಲಿ ಚುರುಕಾಗಬಹುದು. ತಮ್ಮ ಅಧೀನದಲ್ಲಿ ಬರುವ ಸಂಸ್ಥೆಗಳ ಆಡಳಿತದಲ್ಲಿ ಮತ್ತು ಅದಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಿಕೊಳ್ಳುವಾಗ ಭ್ರಷ್ಟಾಚಾರ ರಹಿತವಾಗಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಅದರ ಪರಿಣಾಮ ಇಡೀ ದೇಶದಲ್ಲಿ ಆಗುತ್ತದೆ.

ಆಗಾಗ ಬೇರೆ ಬೇರೆ ಮಾಧ್ಯಮಗಳ ಮುಖಾಂತರ ದೇಶದ ಯುವ ಶಕ್ತಿಯನ್ನು ಸಂಪರ್ಕಿಸುವ ಮತ್ತು ಅವರನ್ನು ಉತ್ತೇಜಿಸುವ ಕೆಲಸವನ್ನು ನಿರಂತರ ಐದು ವರ್ಷವೂ ಮಾಡಬೇಕು. ಮುಖ್ಯವಾಗಿ ವಿಶ್ವವಿದ್ಯಾಲಯ ಮಟ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಎಲ್ಲಾ ಸಾಧ್ಯತೆ ಮತ್ತು ಅವಕಾಶ ರಾಷ್ಟ್ರಪತಿಗಳಿಗೆ ಇರುತ್ತದೆ. ಅದನ್ನು ಬದ್ದತೆಯಿಂದ ಮಾಡಬೇಕು.

ಕೋಮು ಸೌಹಾರ್ದತೆಗೆ ಧಕ್ಕೆ ಬಂದಾಗ ಯಾರೇ ಅಧಿಕಾರದಲ್ಲಿರಲಿ ಭಾರತದ ಸಮಗ್ರತೆಯನ್ನು ರಕ್ಷಿಸಲು ಒಂದು ಹೆಜ್ಜೆ ಮುಂದೆ ಬರಬೇಕು. ಇದು ಅತ್ಯಂತ ಪ್ರಮುಖವಾದುದು. ನಿಷ್ಪಕ್ಷಪಾತ ಎಂಬ ಪದಕ್ಕೆ ನಿಜವಾದ ಅರ್ಥ ಕೊಡಬೇಕಿರುವುದು ಭಾರತದ ಪ್ರಥಮ ಪ್ರಜೆಯ ಆದ್ಯ ಕರ್ತವ್ಯವಾಗಿರಬೇಕು. ಈ ವಿಷಯದಲ್ಲಿ ಆ ಹುದ್ದೆ ಮತ್ತು ಆ ಹುದ್ದೆಯಲ್ಲಿರುವ ವ್ಯಕ್ತಿ ರಾಜಕೀಯ ಹಿನ್ನೆಲೆಯನ್ನು ಮರೆತು ಕೆಲಸ ಮಾಡಬೇಕು. ಅದು‌ ಈ ಭಾರತದ ನೆಲಕ್ಕೆ ಸಲ್ಲಿಸಬಹುದಾದ ಬಹುದೊಡ್ಡ ಕೊಡುಗೆ.

ಇದು ಆ ಅಧಿಕಾರಕ್ಕೇರಿದ ವ್ಯಕ್ತಿಗಳಿಗೆ ತಿಳಿದಿಲ್ಲ ಎಂದಲ್ಲ, ಆದರೆ ಅವರು ತಮಗೆ ಅಧಿಕಾರ ನೀಡಿದ ವ್ಯಕ್ತಿ, ಪಕ್ಷ, ಸಿದ್ದಾಂತಗಳಿಗೆ ತಮ್ಮನ್ನು ಮಾರಿಕೊಳ್ಳುತ್ತಾರೆ. ಪಕ್ಷದ ಋಣ ತೀರಿಸಲು ಮುಂದಾಗುತ್ತಾರೆಯೇ ಹೊರತು ಈ‌ ದೇಶ ಮತ್ತು ಇಲ್ಲಿನ ಜನರ ಬಗ್ಗೆ ಅಲ್ಲ. ಅದೇ ಬಹುದೊಡ್ಡ ದುರಂತ. ಏನಾದರಾಗಲಿ ಕನಿಷ್ಠ ಮುಂದಿನ ಭಾರತದ ರಾಷ್ಟ್ರಪತಿ ಆಗುವವರಾದರೂ ಆ ಹುದ್ದೆಗೆ ದೈವಿಕ ಮಹತ್ವದ ಮಾನವೀಯ ಮುಖವಾಡ ತೊಡಿಸಲಿ ಎಂದು ಆಶಿಸುತ್ತಾ....

***

ನಿನ್ನೆ ಮಂಡ್ಯ ಜಿಲ್ಲೆಯ ‌ಶಾಸಕರು  ಅಲ್ಲಿನ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳಕ್ಕೆ ಹೊಡೆದ‌ ಘಟನೆಯ ಬಗ್ಗೆ ಬರೆದ ಲೇಖನಕ್ಕೆ ನನಗೇ ಆಶ್ಚರ್ಯಕರವಾಗುವಷ್ಟು ಅಭೂತಪೂರ್ವ ಸ್ಪಂದನೆ ರಾಜ್ಯದ ಎಲ್ಲಾ ಮೂಲೆಗಳಿಂದ ದೊರೆಯಿತು. ಬಹುತೇಕ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿ ಆರೋಪಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು ಮತ್ತು ಕೆಲವರು ಪ್ರತಿಭಟಿಸುವುದಾಗಿ ತಿಳಿಸಿದರು. ನಮ್ಮ ನಿರೀಕ್ಷೆ ಇಷ್ಟೇ....

ಆ ಶಾಸಕರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು. ಅವರ ವಿರುದ್ಧ ಅತಿಬೇಗ ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ FIR ದಾಖಲಾಗಬೇಕು. ಆ ಠಾಣೆಗೆ ಮಂಡ್ಯ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಹಾಜರಾಗಿ ಶಾಸಕರು ಮತ್ತು ಪ್ರಾಂಶುಪಾಲರು ಇಬ್ಬರನ್ನೂ ಒಟ್ಟಿಗೆ ಕರೆಸಿ ಶಾಸಕರು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಕ್ಷಮೆ ಕೇಳಬೇಕು ಮತ್ತು ಪ್ರಾಂಶುಪಾಲರು ಕ್ಷಮೆ ಸ್ವೀಕರಿಸಿ ಅವರನ್ನು ಮನ್ನಿಸಬೇಕು. ಪೋಲೀಸ್ ಅಧಿಕಾರಿ ‌ಶಾಸಕರಿಗೆ ಅಧಿಕೃತವಾಗಿ ಎಚ್ಚರಿಕೆ ಕೊಟ್ಟು ಠಾಣೆಯಲ್ಲಿಯೇ ಪ್ರಕರಣಕ್ಕೆ ಅಂತ್ಯ ಹಾಡಬೇಕು. ಒಂದು ವೇಳೆ ಶಾಸಕರು ಕ್ಷಮಾಪಣೆ ಕೇಳಲು ನಿರಾಕರಿಸಿದರೆ ಎಲ್ಲಾ ದಾಖಲೆ ಮತ್ತು ಸಾಕ್ಷಿಗಳ ಸಮೇತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು. ಇದನ್ನು ‌ಸಾಧಿಸಲು ಇಡೀ ರಾಜ್ಯದ ಪ್ರಜ್ಞಾವಂತ ಶಿಕ್ಷಕ ವೃಂದ ಮತ್ತು ಶಿಕ್ಷಕ ಸಂಘಟನೆಗಳು ಹಾಗು ಶಿಕ್ಷಕ ಜನ ಪ್ರತಿನಿಧಿಗಳು ಪ್ರಯತ್ನಿಸುತ್ತಾರೆ ಎಂದು ನಿರೀಕ್ಷಿಸುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ