ಚಂದದ ಕೈಬರಹ - ಯಶಸ್ಸಿನ ರಹದಾರಿ

ಚಂದದ ಕೈಬರಹ - ಯಶಸ್ಸಿನ ರಹದಾರಿ

ನಾಳೆ, 16 ಮೇ 2022ರಿಂದ ಕರ್ನಾಟಕದಲ್ಲಿ ಶಾಲೆಗಳು ಶುರು. ಕಳೆದ ವರುಷ ಕೊರೋನಾ ವೈರಸ್ ದಾಳಿಯ ಎರಡನೆ ವರುಷವೂ ಶಾಲಾ ಅವಧಿ ಕಡಿಮೆ ಮಾಡಬೇಕಾಯಿತು. ಆ ಹಿನ್ನೆಲೆಯಲ್ಲಿ, ಜೂನ್ ಮೊದಲ ದಿನದ ಬದಲಾಗಿ ಈ ವರುಷ ಬೇಗನೇ ಶಾಲೆಗಳ ಪುನರಾರಂಭ.

ಶಾಲೆಗಳಲ್ಲಿ ಕಲಿಯುವ ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಬೇಕೆಂದು ಹೆತ್ತವರು ಹತ್ತುಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆ. ಆದರೆ ಹಲವು ಹೆತ್ತವರಿಗೆ ಉತ್ತಮ ಅಂಕ ಗಳಿಕೆಯಲ್ಲಿ ಚಂದದ ಕೈಬರಹದ ಪಾತ್ರದ ಅರಿವಿಲ್ಲ. ಅವರು ಒಪ್ಪಿಕೊಳ್ಳಬೇಕಾದ ಸೂತ್ರ: ಕೇವಲ ಕೈಬರಹವನ್ನು ಚಂದ ಮಾಡಿದರೆ, ಶೇಕಡಾ 25ರಷ್ಟು ಹೆಚ್ಚು ಅಂಕ ಗಳಿಸಲು ಸಾಧ್ಯ!

ಯಾಕೆಂದರೆ, ಕೈಬರಹ ಚಂದವಿಲ್ಲದಿದ್ದರೆ ಬರೆದದ್ದನ್ನು ಓದುವ ಎಲ್ಲರಿಗೂ ಕಿರಿಕಿರಿಯಾಗುತ್ತದೆ. ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವ ಶಿಕ್ಷಕರು ದಿನದಿನವೂ ನೂರಾರು ಉತ್ತರಪತ್ರಿಕೆಗಳನ್ನು ನೋಡಿನೋಡಿ ಹೈರಾಣಾಗಿರುತ್ತಾರೆ. ಚಂದವಿಲ್ಲದ, ಸುಲಭವಾಗಿ ಓದಲಾಗದ ಕೈಬರಹ ಕಂಡಾಗ ಸಹಜವಾಗಿಯೇ ಅವರಿಗೆ ಕಿರಿಕಿರಿಯಾಗುತ್ತದೆ, ಇದರಿಂದಾಗಿ ಅವರು ವಕ್ರವಕ್ರ ಕೈಬರಹದಲ್ಲಿ ಬರೆದ ಉತ್ತರಗಳಿಗೆ ನೀಡುವ ಅಂಕ ಕಡಿಮೆಯಾಗುತ್ತದೆ, ಅಲ್ಲವೇ?

ಸರಿ, ಕೈಬರಹ ಚಂದ ಮಾಡಲು ಏನು ಮಾಡಬೇಕು? ತಮ್ಮ ಮಕ್ಕಳು ಬರವಣಿಗೆ ಶುರು ಮಾಡಿದಾಗಿನಿಂದಲೇ ಅವರಿಗೆ ಕೈಬರಹ ಚಂದ ಮಾಡಬೇಕೆಂದು ಹೆತ್ತವರು ಒತ್ತಾಯಿಸುತ್ತಲೇ ಇರಬೇಕು. ಜೊತೆಗೆ, ಶಾಲೆ ಇರಲಿ, ಇಲ್ಲದಿರಲಿ; ಪ್ರತಿ ದಿನವೂ ಒಂದು ಪುಟ (ಅಥವಾ ಮೂವತ್ತು ಸಾಲು) ಕೈಬರಹದಲ್ಲಿ ಏನನ್ನಾದರೂ ಬರೆಯುವ ಶಿಸ್ತು ರೂಢಿಸಿಕೊಳ್ಳಬೇಕು.
ದಿನದಿನವೂ ಹೀಗೆ ಅಭ್ಯಾಸ ಮಾಡುತ್ತಿದ್ದರೆ, ಕೈಬರಹ ನಿಧಾನವಾಗಿ ಚಂದವಾಗುತ್ತದೆ.

ಈಗಂತೂ ಹಲವು ವಿದ್ಯಾರ್ಥಿಗಳಿಗೆ ಕೈಯಲ್ಲಿ ಬರೆಯುವುದೆಂದರೆ ಸೋಮಾರಿತನ. ತಮ್ಮ ಸಹಪಾಠಿಗಳ ನೋಟ್ಸನ್ನೇ ಫೋಟೋ ಕಾಪಿ ಮಾಡಿಸುವುದು ಸುಲಭ ಎಂಬ ಭಾವನೆ. ಅಥವಾ “ಸಂದೇಶ ಭಾಷೆ”ಯಲ್ಲಿ ಮೊಬೈಲ್ ಫೋನಿನಲ್ಲಿ ಅಥವಾ ಲಾಪ್‌ಟಾಪಿನಲ್ಲಿ ಬೆರಳಚ್ಚಿಸುವುದು ಹೆಚ್ಚುಗಾರಿಕೆ ಎಂಬ ಭ್ರಾಂತು. ಅವರೆಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸಂಗತಿ: ಚಂದದ ಕೈಬರಹ ನಮ್ಮ ಜೀವಮಾನದುದ್ದಕ್ಕೂ ನಮ್ಮೊಂದಿಗಿರುವ, ಯಾರೂ ಕದಿಯಲಾಗದ ಸೊತ್ತು ಎಂಬುದು.

ಕೈಯಲ್ಲಿ ಚಂದವಾಗಿ ಬರೆಯಲು ಕಲಿಯಬೇಕು ಎಂಬ ಆಸಕ್ತಿ ಇರುವವರಿಗೆ ಅದನ್ನು ಕಲಿಸುವ ಹಲವು ಪುಸ್ತಕಗಳೂ, ಆನ್-ಲೈನ್ ಕೋರ್ಸುಗಳೂ ಲಭ್ಯವಿವೆ. ಉದಾಹರಣೆಗೆ, ಮಾಕ್ಸ್ ಅಕಾಡೆಮಿ ಎಂಬ ಸಂಸ್ಥೆ ಕಳೆದ 25 ವರುಷಗಳಲ್ಲಿ ಒಂದು ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ತಮ್ಮ ಕೈಬರಹ ಸುಧಾರಿಸಲು ಮಾರ್ಗದರ್ಶನ ನೀಡಿದೆ. ಅದರ ವಿಳಾಸ: ನಂಬರ್ 23, ಅಂಡಾವರ್ ಸ್ಟ್ರೀಟ್, ಅಣ್ಣಾ ಹೈರೋಡ್, ಚೂಲೈಮೇಡು, ಚೆನ್ನೈ  600094. ಮೊಬೈಲ್ 9940252277

ಮಾಕ್ಸ್ ಅಕಾಡೆಮಿ ಮೂರನೆಯ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ ಎರಡು ಮಾರ್ಗದರ್ಶಿ ಪುಸ್ತಕಗಳನ್ನು ರೂಪಿಸಿದೆ. ಹಾಗೆಯೇ, 4ರಿಂದ 12ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ ಇನ್ನೆರಡು ಮಾರ್ಗದರ್ಶಿ ಪುಸ್ತಕಗಳೂ ಲಭ್ಯ. ಶಾಲಾ ಅವಧಿಯಲ್ಲಿ (ಸುಮಾರು ಹತ್ತು ತಿಂಗಳು) ಪ್ರತಿ ದಿನವೂ ಅಭ್ಯಾಸಕ್ಕೆ ಅನುಕೂಲವಾಗುವಂತೆ ಈ ಪುಸ್ತಕಗಳನ್ನು ರೂಪಿಸಲಾಗಿದೆ. ಈ ಪುಸ್ತಕಗಳಲ್ಲಿ ಕೈಬರಹದ ಅಭ್ಯಾಸಕ್ಕಾಗಿ ನಾಲ್ಕು ಸಮಾಂತರ ರೇಖೆಗಳ ಪುಟಗಳಿವೆ. ಸ್ಕೆಚ್ ಪೆನ್ನುಗಳ ಮೂಲಕ ಹಳೆಯ ದಿನಪತಿಕೆಗಳ ಪುಟಗಳಲ್ಲಿ ಬರವಣಿಗೆ ಅಭ್ಯಾಸ ಮಾಡುವ ವಿಧಾನವನ್ನೂ ಮಾಕ್ಸ್ ಅಕಾಡೆಮಿ ಕಲಿಸಿಕೊಡುತ್ತದೆ. ಜೊತೆಗೆ, “ಗ್ರೂವ್ ಪೆನ್” ಮೂಲಕ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳ ಕೈಬರಹ ಚಂದವಾಗುತ್ತದೆ. “ಅತ್ಯಂತ ಕ್ಷಿಪ್ರವಾದ ಕೈಬರಹ ಸುಧಾರಣೆ”ಯ ಲಿಂಕಾ ದಾಖಲೆ ಮತ್ತು ಮತ್ತು ಜಾಗತಿಕ ದಾಖಲೆ ಮಾಕ್ಸ್ ಅಕಾಡೆಮಿಯ ವಿದ್ಯಾರ್ಥಿಗಳ ಹೆಸರಿನಲ್ಲಿದೆ ಎಂಬುದೇ ಈ ಸಂಸ್ಥೆಯ ಕೈಬರಹ ಸುಧಾರಣೆ ವಿಧಾನ ಪರಿಣಾಮಕಾರಿ ಎಂಬುದಕ್ಕೆ ಪುರಾವೆ.

ಬಹಳ ನಿಧಾನ ಬರವಣಿಗೆ, ಅಕ್ಷರ ಸಾಲುಗಳ ಏರುಪೇರು, ಅಕ್ಷರಗಳ ನಡುವೆ ಒಂದೇ ರೀತಿಯ ಅಂತರ ಇಲ್ಲದಿರುವುದು, ಅಕ್ಷರಗಳ ಅಳತೆ (ಅಗಲ ಮತ್ತು ಎತ್ತರ)ಯಲ್ಲಿ ವ್ಯತ್ಯಾಸ, ಅಕ್ಷರಗಳ ವಕ್ರರೇಖೆಗಳು ವಿಪರೀತ ಉದ್ದವಾಗಿರುವುದು, ಬರೆಯುವಾಗ ಕಾಗದದ ಮೇಲೆ ಜಾಸ್ತಿ ಒತ್ತಡ ಹಾಕುವುದು - ಇವನ್ನು ಕೈಬರಹದ ದೋಷಗಳು ಎಂದು ಗುರುತಿಸಲಾಗಿದೆ. ಸತತ ಅಭ್ಯಾಸದಿಂದ ಇವೆಲ್ಲ ದೋಷಗಳನ್ನು ಆರು ತಿಂಗಳಲ್ಲಿ ಪರಿಹರಿಸಿಕೊಳ್ಳಲು ಸಾಧ್ಯ.

ಈಗ ಯಾರಿಗೆ ಬೇಕಾದರೂ ಮೆಸೇಜ್ ಮಾಡಬಹುದು ಅಥವಾ ಇ-ಮೆಯಿಲ್ (ಮಿಂಚಂಚೆ) ಕಳಿಸಬಹುದು. ಚಂದವಾಗಿ ಮುದ್ರಿಸಲು ಪ್ರಿಂಟರುಗಳೂ ಲಭ್ಯ. ಫೋಟೋ ಕಾಪಿ ಷಾಪ್‌ಗಳಂತೂ ಹಲವಾರು ಇವೆ. ಹಾಗಿರುವಾಗ ಚಂದದ ಕೈಬರಹ ಯಾಕೆ ಬೇಕು? ಎಂದು ತರ್ಕ ಮಾಡುವವರೂ ಇದ್ದಾರೆ. ಅಂಥವರಿಗೆ ಚಂದದ ಕೈಬರಹದ ಪ್ರಾಮುಖ್ಯತೆ ಅರ್ಥವಾಗುವಾಗ ಕಾಲ ಮಿಂಚಿರುತ್ತದೆ, ಅಲ್ಲವೇ? 

Comments

Submitted by Ashwin Rao K P Mon, 05/16/2022 - 12:14

ಕೈಬರಹದ ಕುರಿತಾದ ಮಾಹಿತಿ ಸ್ವಾಗತಾರ್ಹ

ಕೈಬರಹದ ಬಗ್ಗೆ ತಾವು ಬರೆದ ಲೇಖನ ಬಹಳ ವಾಸ್ತವ ಅಂಶಗಳಿಂದ ಕೂಡಿದೆ. ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಕ್ಷರವನ್ನು ಸುಧಾರಿಸಲು ನಮಗೆ ಪುಟಗಟ್ಟಲೇ ಕಾಪಿ ಬರೆಯಬೇಕಿತ್ತು. ಬರೆಯಲು ಕಡ್ಡಾಯವಾಗಿ ಶಾಯಿ ಪೆನ್ ಬಳಸಬೇಕಿತ್ತು. ಈಗ ಕಾಲ ಬದಲಾದಂತೆ ಸುಂದರ ಅಕ್ಷರಗಳಿಗೆ ಮಹತ್ವವೇ ಇಲ್ಲ ಅನಿಸತೊಡಗಿದೆ. ಬಹುತೇಕ ಹೆತ್ತವರು, ಶಿಕ್ಷಕರು ಈ ಬಗ್ಗೆ ಗಮನವೇ ಹರಿಸುತ್ತಿಲ್ಲ. 

ಆಗೆಲ್ಲಾ ಕೈಬರಹ ಸುಂದರವಾಗಿಲ್ಲ ಎಂದಾದರೆ ಅವರಿಗೆ 'ಕಾಗೆ ಕಾಲಿನ ಅಕ್ಷರದವ' ಎಂದೇ ಹೆಸರು ಇರುತ್ತಿತ್ತು. ಈಗ ಬಾಲ್ಯದಲ್ಲೇ ಬರವಣಿಗೆಗೆ ಗಣಕ ಯಂತ್ರ (ಕಂಪ್ಯೂಟರ್) ಸಹಾಯ ಸಿಗುವುದರಿಂದ ಕೈಬರಹದ ಮಹತ್ವ ಕಡಿಮೆಯಾಗುತ್ತಿದೆಯೋ ಅನಿಸುತ್ತಿದೆ. ಏನಾದರಾಗಲಿ ನೀವು ಬರೆದ ಕೈಬರಹವನ್ನು ಇತರರು ಸುಲಭವಾಗಿ ಓದಲು ಸುಂದರವಾದ ಕೈಬರಹದ ಅಗತ್ಯ ನಿಜವಾಗಿಯೂ ಇದೆ. ಈ ನಿಟ್ಟಿನಲ್ಲಿ ಈ ಬರಹ ಸ್ವಾಗತಾರ್ಹ.