ಚಂದದ ನಗುವಿನ ಚಂದಣ್ಣ ಮೊಸಳೆ

ಚಂದದ ನಗುವಿನ ಚಂದಣ್ಣ ಮೊಸಳೆ

ಚಂದಣ್ಣ ಮೊಸಳೆಯ ನಗು ಚಂದವೋ ಚಂದ. ಅದನ್ನು ಕಂಡ ವನ್ಯಮೃಗ ಫೋಟೋಗ್ರಾಫರರ ತಂಡದ ಸದಸ್ಯರು ಚಂದಣ್ಣ ಮೊಸಳೆಯ ನಗುವಿನ ಫೋಟೋ ತೆಗೆಯಲು ಬಂದರು.

“ಎಲ್ಲಿ ನೋಡೋಣ, ಚೆನ್ನಾಗಿ ನಗು" ಎಂದ ತಂಡದ ಮುಂದಾಳು. ಚಂದಣ್ಣ ಮೊಸಳೆ ಚಂದವಾಗಿ ನಗುತ್ತಿದ್ದಂತೆ ಲೈಟುಗಳು ಮಿನುಗಿದವು ಮತ್ತು ಕೆಮರಾಗಳು ಫೋಟೋ ಕ್ಲಿಕ್ಕಿಸಿದವು.

“ನೀನು ಭೂಮಿಯ ಅತ್ಯಂತ ಸುಂದರ ಪ್ರಾಣಿ” ಎಂದ ತಂಡದ ಮುಂದಾಳು. ಈ ಹೊಗಳಿಕೆ ಕೇಳಿದ ಚಂದಣ್ಣ ಮೊಸಳೆ ನದಿಯ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣುತ್ತಾ ಮುಗುಳ್ನಕ್ಕ. ಚಂದಣ್ಣ ಮೊಸಳೆಗೆ ತನ್ನ ಹರಿತವಾದ ಹಲ್ಲುಗಳ ಮತ್ತು ಮಾಟವಾದ ಮೈ ಬಗ್ಗೆ ಬಹಳ ಹೆಮ್ಮೆ. ನದಿ ದಡದಲ್ಲಿ ಅತ್ತಿತ್ತ ಓಡಾಡಿದ ಚಂದಣ್ಣ ಮೊಸಳೆ. “ನಾನೀಗ ಮಿನುಗು ತಾರೆ. ನನ್ನ ಮುಖ ಜಗತ್ತಿನಲ್ಲೆಲ್ಲ ರಾರಾಜಿಸಲಿದೆ” ಎಂದು ಬಿಂಕದಿಂದ ಬೀಗಿದ ಚಂದಣ್ಣ ಮೊಸಳೆ.

“ನಿನ್ನ ಫೋಟೋ ತೆಗೆಯಲು ಸಹಕರಿಸಿದ್ದಕ್ಕಾಗಿ ವಂದನೆಗಳು” ಎಂದು ಚಂದಣ್ಣ ಮೊಸಳೆಯನ್ನು ಅಭಿನಂದಿಸಿದ ತಂಡದ ಮುಂದಾಳು. "ನಿನಗೆ ನಮ್ಮ ಪುಟ್ಟ ಉಡುಗೊರೆ ತಗೋ - ಐನೂರು ಬಾಕ್ಸ್ ಚಾಕೋಲೇಟುಗಳು” ಎನ್ನುತ್ತಾ ಅವನ್ನು ಚಂದಣ್ಣನಿಗೆ ಕೊಟ್ಟ. “ಓ, ಎಂಥ ಸ್ವಾದ! ನಿನ್ನಿಂದ ಬಹಳ ಉಪಕಾರವಾಯಿತು” ಎಂದು ವಂದಿಸಿದ ಚಂದಣ್ಣ ಮೊಸಳೆ.

ವನ್ಯಮೃಗ ಫೋಟೋಗ್ರಾಫರರ ತಂಡದವರೆಲ್ಲ ಹೊರಟು ಹೋದ ಬಳಿಕ ನದಿ ದಡದಲ್ಲಿ ಎಳೆ ಬಿಸಿಲಿನಲ್ಲಿ ಅಡ್ಡಾದ ಚಂದಣ್ಣ ಮೊಸಳೆ. ತನ್ನ ಅದೃಷ್ಠ ಮತ್ತು ಪ್ರಸಿದ್ಧಿಯ ಬಗ್ಗೆ ಹಗಲುಗನಸು ಕಾಣುತ್ತಾ, ಚಾಕೋಲೇಟುಗಳನ್ನು ಒಂದೊಂದಾಗಿ ತನ್ನ ಅಗಲಿಸಿದ ದೊಡ್ಡ ಬಾಯೊಳಗೆ ಎಸೆಯುತ್ತಾ ಆನಂದಿಸ ತೊಡಗಿದ.

ಆಗ ಅಲ್ಲಿಗೆ ಬಂದ ಬಣ್ಣದ ಹಾವು. “ಇದೇನಿದು? ಮೊಸಳೆ ಚಾಕೋಲೇಟು ತಿನ್ನುವುದೇ? ಎಂಥ ವಿಚಿತ್ರ” ಎಂದಿತು. "ಹಾಗೇನಿಲ್ಲ. ಎಲ್ಲ ಮೊಸಳೆಗಳಿಗೂ ಚಾಕೋಲೇಟ್ ಎಂದರೆ ಇಷ್ಟ. ಆದರೆ ಬಹುಪಾಲು ಮೊಸಳೆಗಳು ಚಾಕೋಲೇಟ್ ಗಿಟ್ಟಿಸಲು ಏನು ಮಾಡಬೇಕೆಂದು ತಿಳಿಯುವಷ್ಟು ಜಾಣರಲ್ಲ” ಎಂದ ಚಂದಣ್ಣ ಮೊಸಳೆ.

“ಓಹೋ, ನೀನು ಅಷ್ಟು ಜಾಣ ಎಂದಾದರೆ, ಅತಿಯಾಗಿ ಚಾಕೋಲೇಟ್ ತಿಂದರೆ ನಿನ್ನ ಹಲ್ಲುಗಳು ಬಿದ್ದು ಹೋಗುತ್ತವೆಂದು ತಿಳಿದಿರಬೇಕಾಗಿತ್ತು" ಎಂದಿತು ಬಣ್ಣದ ಹಾವು. “ಎಂಥ ಅಸಂಬದ್ಧ ಮಾತು! ನಿನಗೆ ತಿಳಿದಿರಲಿ, ನನ್ನ ಹಲ್ಲುಗಳು ಭಾರೀ ಗಟ್ಟಿಯಾಗಿವೆ" ಎಂದಿತು ಚಂದಣ್ಣ ಮೊಸಳೆ.

"ನೋಡೋಣ, ನೋಡೋಣ" ಎನ್ನುತ್ತಾ ಬಣ್ಣದ ಹಾವು ಪಕ್ಕದ ಪೊದೆಯಲ್ಲಿ ನುಸುಳಿ ಮರೆಯಾಯಿತು. ಚಂದಣ್ಣ ಮೊಸಳೆ ಚಾಕೋಲೇಟ್ ತಿನ್ನತ್ತಲೇ ಇತ್ತು - ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತಿನಲ್ಲೂ ಚಾಕೋಲೇಟೇ ಅದರ ಆಹಾರ!

ತನ್ನ ತುಟಿಗಳನ್ನು ನೆಕ್ಕುತ್ತಾ, “ಓ, ಎಂಥ ಸವಿಯಾದ ಚಾಕೋಲೇಟುಗಳು! ನನಗೆ ಸ್ವರ್ಗದಲ್ಲಿ ಇದ್ದಂತೆ ಅನಿಸುತ್ತಿದೆ” ಎಂದು ತನಗೆ ತಾನೇ ಉದ್ಗರಿಸಿತು ಚಂದಣ್ಣ ಮೊಸಳೆ. ಆಗ, ಹತ್ತಿರದ ಮರದಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಗಿಳಿ ಹೇಳಿತು, “ಚಂದಣ್ಣ, ನೀನು ನದಿಯಲ್ಲಿ ತೇಲಾಡಲು ಸಾಧ್ಯವಾಗದಷ್ಟು ದಪ್ಪಗಾದಾಗ ಹೀಗೆ ಹೇಳುವುದಿಲ್ಲ.”

“ಅಸಂಬದ್ಧ ಮಾತು ನಿನ್ನದು. ನನ್ನದು ಮಾಟವಾದ ಮೈ" ಎಂದು ಎಗರಾಡಿತು ಚಂದಣ್ಣ ಮೊಸಳೆ. "ನೋಡೋಣ, ನೋಡೋಣ" ಎನ್ನುತ್ತಾ ಅಲ್ಲಿಂದ ಹಾರಿ ಹೋಯಿತು ಗಿಳಿ.

ದಿನಗಳು ಮತ್ತು ವಾರಗಳು ಸರಿದು ಹೋದವು. ಚಂದಣ್ಣ ಮೊಸಳೆ ದಿನದಿನವೂ ಚಾಕೋಲೇಟ್ ತಿನ್ನುತ್ತಲೇ ಇತ್ತು. ಕೊನೆಗೊಂದು ದಿನ ಚಾಕೋಲೇಟುಗಳೆಲ್ಲ ಮುಗಿದವು.

“ತಿನ್ನಲು ಇನ್ನಷ್ಟು ಚಾಕೋಲೇಟುಗಳು ಇದ್ದರೆ ಚೆನ್ನಾಗಿತ್ತು. ಇರಲಿ, ಇನ್ನು ನದಿಗೆ ಇಳಿಯುತ್ತೇನೆ. ಅಲ್ಲಿ ತಿನ್ನಲು ಯಾವುದಾದರೂ ಪ್ರಾಣಿಯನ್ನು ಹಿಡಿಯಬೇಕಾಗಿದೆ” ಎಂದು ಯೋಚಿಸಿತು ಚಂದಣ್ಣ ಮೊಸಳೆ.

ಚಂದಣ್ಣ ಮೊಸಳೆ ನದಿ ನೀರಿಗೆ ಇಳಿಯಿತು. ನೀರಿನಲ್ಲಿ ಅದರ ಮೈ ತೇಲಾಡುವ ಬದಲಾಗಿ, ಅದು ಒಂದೇಟಿಗೆ ನದಿಯ ತಳಕ್ಕೆ ಮುಳುಗಿತು ಮತ್ತು ಅದರ ಹೊಟ್ಟೆ ತಳದ ಕೆಸರಿನಲ್ಲಿ ಹೂತಿತು. “ಅರೆರೆ, ನದಿಗೆ ಇದೇನಾಗಿದೆ? ಇವತ್ತು ತೇಲಾಡಲು ಬಹಳ ಕಷ್ಟವಾಗುತ್ತಿದೆ” ಎಂದು ಉದ್ಗರಿಸಿತು ಚಂದಣ್ಣ ಮೊಸಳೆ.

ಇದನ್ನೆಲ್ಲ ಮರದಲ್ಲಿ ಕುಳಿತು ನೋಡುತ್ತಿದ್ದ ಗಿಳಿ ಈಗ ಮಾತಿನಲ್ಲೇ ಕುಟುಕಿತು, “ಮಾಟವಾದ ಮೈ ಹೊಂದಿರುವ ನಿನಗೂ ಹೀಗಾಗುತ್ತದೆಯೇ?” ಮೈಯ ಭಾರದಿಂದಾಗಿ ನದಿಯಲ್ಲಿ ಮತ್ತೆಮತ್ತೆ ಆಳಕ್ಕೆ ಮುಳುಗುತ್ತಿದ್ದ ಚಂದಣ್ಣ ಮೊಸಳೆ, ಕಷ್ಟ ಪಡುತ್ತಾ ತನ್ನ ಎರಡು ಕಣ್ಣುಗಳನ್ನು ನೀರಿನಿಂದ ಮೇಲೆತ್ತಿ ಗಿಳಿಯನ್ನು ದುರುಗುಟ್ಟಿ ನೋಡಿತು.

ಮರುದಿನ ಬೆಳಗಾಗುತ್ತಿದ್ದಂತೆ ಚಂದಣ್ಣ ಮೊಸಳೆಯ ಬಾಯಿಯಲ್ಲಿ ವಿಪರೀತ ನೋವು ಶುರುವಾಯಿತು. ಅದರ ಹಲ್ಲುಗಳನ್ನು ಯಾರೋ ಇಕ್ಕುಳದಿಂದ ತಿರುಗಿಸುತ್ತಿದ್ದಂತೆ ನೋವಾಗುತ್ತಿತ್ತು.

“ಅಯ್ಯೋ, ನನ್ನ ಹಲ್ಲುಗಳ ನೋವು ತಡೆಯಲಾಗುತ್ತಿಲ್ಲ” ಎಂದು ಚೀರಿತು ಚಂದಣ್ಣ ಮೊಸಳೆ. ಅಲ್ಲಿನ ಮರವೊಂದರಿಂದ ನೇತಾಡುತ್ತಿದ್ದ ಬಣ್ಣದ ಹಾವು ಮಾತಿನಲ್ಲೇ ಕುಟುಕಿತು, “ಸಾಧ್ಯವೇ ಇಲ್ಲ. ಯಾಕೆಂದರೆ ನಿನ್ನ ಹಲ್ಲುಗಳು ಭಾರೀ ಗಟ್ಟಿ.”

ಹಲ್ಲು ನೋವು ತಡೆಯಲಾಗದೆ ಚಂದಣ್ಣ ಮೊಸಳೆ ನದಿ ದಡದಲ್ಲಿ ನಡೆಯ ತೊಡಗಿತು - ದಂತವೈದ್ಯರ ಬಳಿಗೆ. ನಡೆದೂ ನಡೆದೂ ದಣಿದು ದಂತವೈದ್ಯರ ದವಾಖಾನೆ ತಲಪಿತು. ಇರುವೆಭಕ್ಷಕರೇ ಪ್ರಾಣಿಗಳ ಹಲ್ಲಿನ ಡಾಕ್ಟರ್. ಚಂದಣ್ಣ ಮೊಸಳೆಗೆ ಅಗಲವಾಗಿ ಬಾಯಿ ತೆರೆಯಲು ಹೇಳಿದರು. ಆ ಭಾರೀ ಬಾಯೊಳಗೆ ಕಡ್ದಿ ಹಾಕಿ ಪರೀಕ್ಷಿಸಿದರು.

“ಇದೇನಿದು? ಹಲ್ಲುಗಳೆಲ್ಲ ಹಾಳಾಗಿವೆ. ನೀನು ಏನು ತಿನ್ನುತ್ತಿದ್ದೆ? ಎಲ್ಲೆಲ್ಲಿ ನಿನಗೆ ಹಲ್ಲು ನೋಯುತ್ತಿದೆ, ತೋರಿಸು” ಎಂದರು ಡಾಕ್ಟರ್. “ಎಲ್ಲ ಹಲ್ಲುಗಳೂ ನೋಯುತ್ತಿವೆ” ಎಂದ ಚಂದಣ್ಣ ಮೊಸಳೆ. “ನಿನ್ನ ಹಲ್ಲು ನೋವು ಗುಣಪಡಿಸಲು ಯಾವುದೇ ಔಷಧಿಯಿಲ್ಲ. ಅವನ್ನೆಲ್ಲ ಕಿತ್ತು ತೆಗೆಯಬೇಕಾಗಿದೆ” ಎಂದರು ಹಲ್ಲಿನ ಡಾಕ್ಟರ್. ಹಾಗೆಯೇ ಮಾಡಿದರು.

ಅದಾಗಿ ಎರಡು ತಿಂಗಳ ನಂತರ ವನ್ಯಮೃಗ ಫೋಟೋಗ್ರಾಫರರ ಇನ್ನೊಂದು ತಂಡ ಆ ನದಿ ದಡಕ್ಕೆ ಬಂತು. ಅದರ ಮುಂದಾಳು ಚಂದಣ್ಣ ಮೊಸಳೆಯನ್ನು ಕರೆದ. ಮರದ ಮರೆಯಿಂದ ಹೊರಬಂದ ಚಂದಣ್ಣ ಮೊಸಳೆ ನಗು ಬೀರಿತು.

ಆದರೆ, ಈಗ ಲೈಟುಗಳು ಮಿನುಗಲಿಲ್ಲ, ಕೆಮರಾಗಳು ಕ್ಲಿಕ್ಕಿಸಲಿಲ್ಲ. ಬದಲಾಗಿ ಅಲ್ಲೆಲ್ಲ ಗುಲ್ಲು. ಹಲ್ಲಿಲ್ಲದ ಚಂದಣ್ಣ ಮೊಸಳೆಯ ಅಸಡ್ಡಾಳ ನಗು ಕಂಡು ಅವರಿಗೆಲ್ಲ ನಗು ತಡೆಯಲಾಗಲಿಲ್ಲ. ಅವರೆಲ್ಲ ನಕ್ಕುನಕ್ಕು ಸುಸ್ತಾದರು. ಅವರೆಲ್ಲ ಮುಂದಾಳುವನ್ನು ಛೇಡಿಸಿದರು, “ಚಂದಣ್ಣ ಮೊಸಳೆ ಮಾಟವಾದ ಮೈಯ, ಚಂದದ ನಗುವಿನ ಮೊಸಳೆ ಎಂದು ಹೇಳಿದ್ದೆಯಲ್ಲ? ಈಗ ನೋಡಿದರೆ, ಈ ಮೊಸಳೆಯನ್ನು ಬೊಚ್ಚುಬಾಯಿ ಮೊಸಳೆ ಎಂದು ಕರೆಯಬೇಕಾಗಿದೆ.”

ಚಂದಣ್ಣ ಮೊಸಳೆಗೆ ಭಾರೀ ಅವಮಾನವಾಯಿತು. ಅವರಿಗೆ ಮುಖ ತೋರಿಸಲಾಗದೆ, ಅದು ಪೊದೆಗಳ ಹಿಂದೆ ಹೋಗಿ ಅಡಗಿಕೊಂಡಿತು. ಆದರೆ, ಇದೆಲ್ಲವೂ ಅದರದ್ದೇ ತಪ್ಪಿನ ಫಲ; ಸಿಕ್ಕಾಪಟ್ಟೆ ಚಾಕೋಲೇಟ್ ತಿಂದದ್ದರ ಪರಿಣಾಮ!

ಚಂದಣ್ಣ ಮೊಸಳೆ ಪುನಃ ಹಲ್ಲಿನ ಡಾಕ್ಟರ್ ಬಳಿಗೆ ಹೋಯಿತು. ತನ್ನ ಸಂಕಟವನ್ನೆಲ್ಲ ಹೇಳಿಕೊಂಡಿತು. “ಚಿಂತೆ ಮಾಡಬೇಡ. ನಿನಗೆ ಚಂದವಾದ ಹೊಸ ಹಲ್ಲುಗಳ ಸೆಟ್ ಜೋಡಿಸೋಣ" ಎಂದು ಸಂತೈಸಿದರು ಹಲ್ಲಿನ ಡಾಕ್ಟರ್.

ತನ್ನ ತಪ್ಪಿನಿಂದ ಪಾಠ ಕಲಿತು, ಇನ್ನೆಂದೂ ಚಾಕೋಲೇಟ್ ತಿನ್ನುವುದಿಲ್ಲವೆಂದು ಶಪಥ ಮಾಡಿತು ಚಂದಣ್ಣ ಮೊಸಳೆ.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ