ಚಂದಿರಗೊಂದು ಕಾಗದ
ಬರಹ
ಚಂದಿರಗೊಂದು ಕಾಗದ
************
ಅಮ್ಮಾ,
ಚಂದಿರಗೊಂದು ಕಾಗದ
ಬರೆಯುವೆ ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು
ತಿನ್ನುವೆ ಮೊಗವನು ತೋರೆಂದು.
ಉರಿವ ಸೂರ್ಯನ ಹೇಗೆ
ನೋಡಲೇ ನೀನು ಉಣಿಸುವಾಗ ?
ತಾರೆಯ ಜೊತೆಯಲಿ ಚಂದಿರ
ನಿಂತಿರೆ ಊಟಕೆ ರುಚಿ ಆಗ.
ನನ್ನಯ ಕಾಗದ ಓದಲು
ಅವನಿಗೆ ಬರುವುದೇ ಕನ್ನಡ ?
ಬಾರದೆ ಇದ್ದರೆ ನೀನೇ
ಕಲಿಸೇ ನನ್ನಯ ಸಂಗಡ.
ಹುಣ್ಣಿಮೆ ಬಂದರೆ ಬಾನಿನ
ಬಣ್ಣವು ಬಿಳುಪಾಯಿತು ಹೇಗೇ !?
ಚಂದ್ರನೂ ನನ್ನಂತೆ ಬಟ್ಟಲ
ಹಾಲನು ಚೆಲ್ಲಿಕೊಂಡನೇನೇ
ಅಮ್ಮಾ , ಚೆಲ್ಲಿಕೊಂಡನೇನೇ !?
- ೦ -