ಚಂದುವಳ್ಳಿ ತೋಟ
ಚಂದುವಳ್ಳಿ ತೋಟದ ತುಂಬೆಲ್ಲಾ
ಬರಿ ಹಾವುಗಳು!
ಮೊನ್ನೆ ನಿನ್ನೆಯವರೆಗೆ
ಜಗಮಗಿಸುತಿದ್ದವು
ಗಿಡದ ಎಡೆಯಲಿ,
ಎಲೆ ಬಳ್ಳಿಗಳ ಬಳಿಯಲಿ
ಮಿಂಚುತಾ
ಬಣ್ಣ ಬಣ್ಣದ ಹೂಗಳು
ಮುಳ್ಳುಗಳೇ ಕಾಣಿಸುತಿಲ್ಲ
ಕಾವಲಿಗೆ ಯಾರು ಇಲ್ಲ
ಮುರುಟಿ ಬಿದ್ದ ಗಿಡಗಳು
ಬಿದ್ದಿವೆ ಅಲ್ಲಲ್ಲಿ
ಕರಟಿ ಹೋದ ಎಸಳು
ಆವರಿಸಿತ್ತು
ಹಾವಿನ ಬುಸು ಬುಸು
ತುಂಬಿ ತೋಟದ ಬಯಲು
ಕೇಳಿಸುತಿಲ್ಲ
ಮೊದಲಿದ್ದ ಕಿಲ ಕಿಲ
ಹಕ್ಕಿಗಳ ಕೂಗಿನ ಬದಲು
ಗಾಳಿಯ ಗರಳದಿ ಕಲುಕಿದ
ವಿಷಮೋರಗ
ಸುಡುವ ಬಿಸಿಲಿಗೂ ಬಗ್ಗದ
ಗುಂಪು ಗುಂಪು ಉರಗ
ಹೂವ ಕೊಯ್ಯ ಬಂದ
ಕೈಗೆ ಭಯ
ಮಧುವ ಹೀರ ಬಂದ
ದುಂಬಿಗೂ ಭಯ
ಹಾಲಾಹಲ ಮನೆ ಮಾಡಿತ್ತು
ತೋಟದಿ ತುಂಬಿ ವಿಷದಿ
ನೆನಪಿನಂಗಳಕ್ಕೆ
ಬರಮಾಡಿತು
ಕೋಲಾಹಲವೆಬ್ಬಿಸಿ ಉಕ್ಕಿ
ಬರುವ ವಿಷಧಿ
ಅಂದಿತ್ತು
ತೋಟವ ನೋಡಲು,
ಉಸಿರ ಬಿಗಿಹಿಡಿದು
ನೊಡುತಿದ್ದ ಕಾಲ
ಇಂದು!
ಉಸಿರುಗಟ್ಟಿ ಕುಸಿಯುವಂತಾಯ್ತು
ನಿಂತ ನೆಲ
ಎಲ್ಲೆಲ್ಲೂ ಹಗಲನೇ ನುಂಗಿ
ಹಾಕುವಂತ ದಿಗಿಲು
ಬಿರಿದು ಬೀಳುವುದೇನೊ
ಸೂರಿನಂತೆ ಕಂಡ ಮುಗಿಲು
ಕೂಗ ಕೇಳೊ ಕಿವಿಯಿಲ್ಲ
ನೋವ ನೋಡುವ ಕಣ್ಣಿಲ್ಲ
ಕರೆದೆತ್ತುವ ಕೈಯಿಲ್ಲ
ಹೂವ ನೋಡಲೆಂತು?
ಕೊಯ್ದು ಮುಡಿಯಲೆಂತು?
ತೋಟದ ತುಂಬೆಲ್ಲ
ಬರಿ ಹಾವುಗಳು
ಹೂವುಗಳೇ ಇಲ್ಲ!