ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೦)

‘ನನ್ನೂರು ನನ್ನ ಜನ' ಇದು ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅವರ ಕೃತಿ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳನ್ನು ನೀವು ಈಗಾಗಲೇ (೨೦೧೯ ರ ಸಂಪದದಲ್ಲಿ) ಓದಿ, ಮೆಚ್ಚಿರುವಿರಿ. ಈ ಲೇಖನ ಮಾಲೆಯ ೧೯ನೆಯ ಕಂತು ಪ್ರಕಟವಾದದ್ದು ಸೆಪ್ಟೆಂಬರ್ ೧೩, ೨೦೧೯ರಂದು. ಅನಿವಾರ್ಯ ಕಾರಣಗಳಿಂದ ನಿಂತಿದ್ದ ಈ ಲೇಖನದ ಸರಣಿಯನ್ನು ಶ್ರೀಮತಿ ಚಂದ್ರಕಲಾ ನಂದಾವರ ಇವರ ಅನುಮತಿಯೊಂದಿಗೆ ಮುಂದುವರೆಸುತ್ತಿದ್ದೇವೆ.
ತಮ್ಮ ಊರಿನ ಬಗ್ಗೆ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಲೇಖಕಿಯವರು ಕಟ್ಟಿಕೊಡುವ ಕಥೆಗಳನ್ನು ಓದುವಾಗ ನಾವು ನಮ್ಮ ಹುಟ್ಟೂರಿನಲ್ಲಿ, ನಮ್ಮ ಬಾಲ್ಯದ ದಿನಗಳನ್ನು ಕಳೆದ ನೆನಪುಗಳು ಖಂಡಿತಾ ಮರುಕಳಿಸುತ್ತವೆ. ಸರಳ, ಸುಂದರವಾದ ಬರಹಗಳನ್ನು ಓದುವುದೇ ಖುಷಿ. ಈ ಓದುವ ಖುಷಿ ನಿಮ್ಮದಾಗಲಿ. ಬರಹಗಳನ್ನು ಪ್ರಕಟಿಸಲು ಅನುಮತಿ ನೀಡಿದ ಲೇಖಕಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಅಧ್ಯಾಯವನ್ನು ಮುಂದುವರೆಸುತ್ತಿರುವೆ. ಈ ಮಾಲಿಕೆ ಪ್ರತೀ ಶುಕ್ರವಾರದಂದು ‘ಸಂಪದ'ದಲ್ಲಿ ಪ್ರಕಟವಾಗಲಿದೆ.
***
ಪ್ರಾಮಾಣಿಕ ದುಡಿಮೆಗೆ ಯಶಸ್ಸು ಖಂಡಿತ
ಮೊನ್ನೆ ಅಡುಗೆ ಅನಿಲದ ಸಿಲಿಂಡರ್ ತರಲು ಹೋದಾಗ ಅಲ್ಲಿ `ಕದ್ರಿಪಾದೆ' ಎನ್ನುವ ದೊಡ್ಡ ಬಂಡೆಕಲ್ಲಿನ ಮೇಲೆ ಮಡಿವಾಳ ಬಾಂಧವರು ಒಣಗಿಸಿದ ಬಟ್ಟೆಗಳನ್ನು ಮಡಿಸಿ ಅಂದವಾಗಿ ದೊಡ್ಡ ದೊಡ್ಡ ಗಂಟುಗಳನ್ನಾಗಿ ಕಟ್ಟಿ ಇಡುತ್ತಿದ್ದರು. ರಸ್ತೆಯಲ್ಲಿ ದೊಡ್ಡ ಕ್ವಾಲಿಸ್ ಕಾರು ಅದನ್ನು ಸಾಗಿಸಲು ಸಿದ್ಧವಾಗಿತ್ತು. ಇದನ್ನು ನೋಡಿದ ನನಗೆ ಕದ್ರಿ, ಬಿಜೈಗಳ ಊರಿನಲ್ಲಿದ್ದ ನನ್ನ ಮಡಿವಾಳ ಸಮುದಾಯದ ಹಿರಿಯರ ನೆನಪಾಯ್ತು. ಬಿಜೈ ಹಾಗೂ ಕದ್ರಿ ನೀರಿನ ಮೂಲಸ್ಥಾನಗಳು. ಜೊತೆಗೆ ಕೊಡಿಯಾಲಬೈಲು ಕೂಡ. ಆ ಕಡೆ ಅತ್ತಾವರವು ನೀರಿನ ಆಶ್ರಯದ ಸ್ಥಳವಾಗಿತ್ತು. ಇಲ್ಲೆಲ್ಲ ಮಡಿವಾಳರ ಅನೇಕ ಕುಟುಂಬಗಳು ಇದ್ದುದು ಹಾಗೂ ಅವರೊಳಗೆ ನಂಟುತನ ಇದ್ದುದೂ ನೆನಪಾಯ್ತು. ಆದರೆ ಇಲ್ಲಿ ನಾನು ಈಗ ನಿಮ್ಮ ಮುಂದೆ ನನ್ನ ಬಿಜೈ ಊರಿನ ಮಂದಿಯನ್ನಷ್ಟೇ ಪರಿಚಯಿಸುವ ಕೆಲಸ ಮಾಡುತ್ತಿದ್ದೇನೆ. ಬಿಜೈಯ `ಬಟ್ಟಗುಡ್ಡೆ'ಯ ಬಳಿಯಲ್ಲೇ ಇರುವ `ನೋಡು' ಹಾಗೂ ಕದ್ರಿಯ `ಮುಂಡಾನ'ದ ನೀರಿನ ಆಶ್ರಯವು ಬಿಜೈಯ ಎರಡೂ ಮಗ್ಗುಲಲ್ಲಿ ಅನೇಕ ಮಡಿ ಮಾಡುವ ಜನರಿಗೆ ನೆಲೆಸಲು ಅವಕಾಶ ನೀಡಿತು. ಇಲ್ಲಿದ್ದ ಮಡಿವಾಳರು ಮೂಲತಃ ಮಡಿಮಾಡುವ ಕಾಯಕದವರಾಗಿರಲಿಲ್ಲ. ಅವರೆಲ್ಲ ಜಿಲ್ಲೆಯ ಬೇರೆ ಬೇರೆ ಹಳ್ಳಿಗಳಿಂದ ಮುಖ್ಯವಾಗಿ ಮುಲ್ಕಿ ಪರಿಸರ, ನಂದಾವರ, ಕಿನ್ನಿಗೋಳಿ, ಕಣಂತೂರು, ಕಾರ್ಕಳಗಳಲ್ಲಿ ಕೃಷಿ ಕಾರ್ಮಿಕರಾಗಿ, ಒಕ್ಕಲುಗಳಾಗಿ ಇದ್ದವರು. ತಮ್ಮದೆನ್ನುವ ಸ್ವಂತ ಭೂಮಿಯಿಲ್ಲದ, ಕೂಡು ಕುಟುಂಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವಕರು ಕೆಲಸಕ್ಕಾಗಿ ಕುಲಕಸುಬು ಎನ್ನುವ ನೆಲೆಯಲ್ಲಿ ವಲಸೆ ಬಂದು ಇಲ್ಲೇ ನೆಲೆಸಿದವರು. ಇವರು ಹೀಗೆ ಈ ಮಂಗಳೂರು ಪೇಟೆಗೆ ಬರುವುದಕ್ಕೂ ಒಂದು ಚಾರಿತ್ರಿಕ ಘಟನೆ ಇತ್ತು. ಮೂಲತಃ ಇಲ್ಲಿಯೇ ಇದ್ದ ಮಡಿವಾಳರ ಹಿರಿಯರು ವಿದ್ಯಾವಂತರಾಗಿ ಸ್ವಾತಂತ್ರ್ಯ ಪೂರ್ವದಲ್ಲೇ ಕೋರ್ಟು, ಕಚೇರಿ, ವ್ಯಾಪಾರಗಳಲ್ಲಿ ತೊಡಗಿಸಿಕೊಂಡವರು. ಇಂತಹವರಲ್ಲಿ ಕೊಡಿಯಾಲಬೈಲಿನ ಪಾಂಡು ಎನ್ನುವವರು ನನ್ನ ಅಜ್ಜ (ಅಮ್ಮನ ತಂದೆ) ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯಿಂದ ವಿದ್ಯೆ ಪಡೆದವರು. ಮಂಗಳೂರಿನ ಕೋರ್ಟ್ ನಲ್ಲಿ ಉದ್ಯೋಗಿಯಾಗಿದ್ದರು. ಅದ್ಯಾವುದೋ ಗಳಿಗೆಯಲ್ಲಿ ಬ್ರಿಟಿಷರ ಗುಲಾಮಗಿರಿಯ ಈ ನೌಕರಿಗೆ ರಾಜೀನಾಮೆ ಎಸೆದು ಸ್ವಾಭಿಮಾನಿಯಾಗಿ ತನ್ನ ಕುಲಕಸುಬನ್ನೇ ಉದ್ಯಮವಾಗಿಸಿಕೊಂಡರು. ಅವರ ಅಣ್ಣ ಕಂಪಣ ತನ್ನ ಕುಟುಂಬದವರೊಂದಿಗೆ ಮಡಿ ಮಾಡುವ ಕೆಲಸ ಮಾಡುತ್ತಿದ್ದರು. ಹಾಗೆಯೇ ಆಗ ಕುಲಕಸುಬನ್ನೇ ಮಾಡುತ್ತಿದ್ದ ಇನ್ನೊಂದು ಮನೆ ಬಾಳಿಗಾ ಸ್ಟೋರ್ಸ್ ನ ಎದುರುಗಡೆ ಇದ್ದ ರುಕ್ಕಯ್ಯ ಮತ್ತು ವೆಂಕಮ್ಮನವರದ್ದು. ಕೊಡಿಯಾಲಬೈಲು ಪಾಂಡುರವರು ತನ್ನ ನೆಂಟರು ಇಷ್ಟರ ಬಳಗದಲ್ಲಿದ್ದ ಯುವಕರನ್ನೆಲ್ಲಾ ಮಂಗಳೂರಿಗೆ ಕರೆಯಿಸಿಕೊಂಡು ಅವರಿಗೆ ಬಟ್ಟೆ ಒಗೆವ, ಉಬ್ಬೆ ಹಾಕುವ, ಒಣಗಿಸುವ ಹಾಗೂ ಇಸ್ತ್ರಿ ಮಾಡುವ ಕೆಲಸಕ್ಕೆ ತರಬೇತಿ ನೀಡಿದರು. ಒಂದೊಮ್ಮೆ ಅಜ್ಜನ ಮನೆಯಲ್ಲಿ ನೂರು ಮಂದಿ ಕೆಲಸಕ್ಕಿದ್ದರು ಎನ್ನುವುದನ್ನು ಅಮ್ಮನಿಂದ ಕೇಳಿ ತಿಳಿದಿದ್ದೇನೆ. ಲಾಲ್‍ಬಾಗ್‍ನ ಉತ್ತರಕ್ಕೆ ವಿಸ್ತರಿಸಿಕೊಂಡಿದ್ದ ಫೆರ್ನಾಂಡಿಸ್ ಕಾಂಪೌಂಡಿನಲ್ಲಿದ್ದ ಮೂಲೆ ಮನೆ ಆಗ ಅವರದಾಗಿತ್ತು. ವಿಶಾಲವಾದ ಮನೆ ಅಂಗಳ ಅವರ ಕಾಯಕಕ್ಕೆ ಯೋಗ್ಯವಾಗಿತ್ತು. ತನ್ನ ಮಡದಿಯ ತವರುಮನೆಯಾದ ಕಾರ್ನಾಡು ಮತ್ತು ಮೂಲ್ಕಿಯಿಂದ, ಮಿಜಾರಿನಿಂದ, ತನ್ನ ತಾಯಿ ಮನೆ ಕಾರ್ಕಳದಿಂದ ಅನೇಕ ಯುವಕರನ್ನು ಕರೆತಂದು ಮನೆಯಲ್ಲಿರಿಸಿಕೊಂಡರು. ಹೀಗೆ ಬಂದವರು ಮುಂದೆ ಮದುವೆ ಮಾಡಿಕೊಂಡು ಸಂಸಾರ ಹೂಡುವ ವೇಳೆಗೆ ಬಿಜೈಯ ಆಸುಪಾಸುಗಳಲ್ಲಿ ನೆಲೆಸಿದರು. ಹೀಗೆ ನೆಲೆಸಿದವರಲ್ಲಿ ಬಾಳಿಗಾ ಸ್ಟೋರ್ಸ್ ಹಿಂಬದಿಯ ಪಿಂಟೋ ಕಾಂಪೌಂಡಲ್ಲಿ ವೃತ್ತಿಯಲ್ಲಿ ಮತ್ತು ಸಮುದಾಯದಲ್ಲಿ ಪ್ರಸಿದ್ಧರಾದ ದಾಸಣ್ಣ, ಬಾಬಣ್ಣ, ಬಿಜೈ ಗುಂರ್ಪೆಯಲ್ಲಿದ್ದು ಪೇಟೆಯ ಬಹುತೇಕ ಹಾಸ್ಟೆಲ್‍ಗಳಿಗೆ ತನ್ನ ಸೇವೆ ನೀಡಿದ ಮಹಾಬಲಣ್ಣ ಮತ್ತು ಅವರ ಸಹೋದರರು, ನಂದಾವರದಿಂದ ಬಂದು ಸೇರಿಕೊಂಡು ಮುಂದೆ ಸಮುದಾಯದಲ್ಲಿ ಗುರಿಕಾರರಂತೆ ಕುಲದ ಆಚಾರ ವಿಚಾರಗಳ ಮಾರ್ಗದರ್ಶನ ಮಾಡುತ್ತಿದ್ದ ಬಿಜೈ ರಾಮದಾಸರು. ಅವರ ತಮ್ಮ ಪೊಳಲಿ ನಾರಾಯಣ, ಕದ್ರಿಯಲ್ಲಿ ಮನೆಯಳಿಯನಾಗಿದ್ದ ಬೆರ್ಮಣ್ಣ, ಬಳ್ಳಾಲ್‍ಬಾಗಲ್ಲಿ ಮನೆಮಾಡಿಕೊಂಡ ಬಾಬಣ್ಣ, ಬಟ್ಟಗುಡ್ಡೆಯಲ್ಲಿ ಮನೆಮಾಡಿಕೊಂಡ ಕಣಂತೂರಿನ ಸೋಮಯ್ಯಣ್ಣ, ಆನೆಗುಂಡಿಯಲ್ಲಿ ನೆಲೆಸಿದ ಸುಜೀರ ಸೋಮಪ್ಪ ಹೀಗೆ ಒಂದು ಮಡಿವಾಳ ಸಮುದಾಯವನ್ನು ಬಿಜೈ ಎಂಬ ನನ್ನೂರು ಆಶ್ರಯ ನೀಡಿ ಅವರನ್ನು ಬೆಳೆಸಿತು ಎಂದರೆ ತಪ್ಪಲ್ಲ. ಆ ಕಾಲದಲ್ಲಿ ಮಂಗಳೂರು ಪೇಟೆಯಾಗಿ ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಮತ್ತು ಖಾಸಗಿ ವಿದ್ಯಾರ್ಥಿ, ವಿದ್ಯಾರ್ಥಿನಿ ನಿಲಯಗಳ ವಿದ್ಯಾರ್ಥಿಗಳಿಗೆ ಬಟ್ಟೆ ಒಗೆದು ಇಸ್ತ್ರಿ ಮಾಡಿಕೊಡುವ ಕಾರ್ಯವನ್ನು ಈ ಎಲ್ಲ ಹಿರಿಯರು ಮಾಡಿದರು. ವೆನ್ಲಾಕ್, ಲೇಡಿಗೋಶನ್‍ನಂತಹ ಆಸ್ಪತ್ರೆಗಳ ಸಮವಸ್ತ್ರ, ಹಾಸು, ಹೊದಿಕೆಗಳ ಶುಚಿತ್ವದ ಕೆಲಸ ಕೆಲವರಿಗೆ ಗುತ್ತಿಗೆ ದೊರೆಯಿತು. ಮಂಗಳೂರಿನ ಡಾಕ್ಟರ್ ಗಳು, ವಕೀಲರು, ಪ್ರೊಫೆಸರ್ ಗಳು, ಉದ್ಯಮಿಗಳು, ನ್ಯಾಯಾಧೀಶರು, ಸರಕಾರಿ ಅಧಿಕಾರಿಗಳು ಮುಖ್ಯವಾಗಿ ಜಿಲ್ಲಾಧಿಕಾರಿಗಳು ನನ್ನ ಮಾವನ ಕಾಲದಲ್ಲಿ ನಮ್ಮ ಕಾಯಕದ ಸೇವೆ ಪಡೆದುಕೊಂಡುದನ್ನು ಕಣ್ಣಾರೆ ನೋಡಿದ್ದೇನೆ. ನನ್ನ ಅಜ್ಜನ ಕಾಲದಲ್ಲಿ ಫೆರ್ನಾಂಡಿಸ್ ಕಾಂಪೌಂಡಿನ ಕಾವೂರು ಕ್ರಾಸ್‍ನ ಬಳಿಯಲ್ಲಿದ್ದ ಮನೆ ನನ್ನ ಮಾವನ ಕಾಲದಲ್ಲಿ ಲಾಲ್ ಬಾಗ್‍ನ ಮುಖ್ಯರಸ್ತೆಗೆ ಬದಲಾಯಿತು. ಅದೂ ಫೆರ್ನಾಂಡಿಸ್ ಕುಟುಂಬಕ್ಕೆ ಸೇರಿದ ಮನೆಯೇ. ಅವರ ಮನೆಯವರೂ ಈ ಮಡಿಮಾಡುವ ಮನೆಯ ಗ್ರಾಹಕರಾಗಿದ್ದರು.
ಮಡಿ ಮಾಡುವ ಈ ಮಡಿವಾಳ ಸಮುದಾಯದ ಮನೆಯ ಹೆಂಗಸರು ಕೂಡ ಈ ವೃತ್ತಿಯ ಎಲ್ಲ ಹಂತದಲ್ಲೂ ನಿಪುಣರೇ ಆಗಿದ್ದರು. ಪ್ರಾರಂಭದ ಹಂತದಲ್ಲಿದ್ದ ಯುವಕರು, ಯುವತಿಯರು ಅನಕ್ಷರಸ್ಥರಾಗಿದ್ದರೆ, ಮುಂದಿನ ತಲೆಮಾರು ವಿದ್ಯಾವಂತರಾಗಿದ್ದರು. ನಮ್ಮ ಮನೆಯಲ್ಲಿ ದೊಡ್ಡಮ್ಮಂದಿರ ಜತೆಗೆ ಶಾಲೆ ಓದಿದ ನನ್ನ ಅಮ್ಮನೂ ಬಟ್ಟೆ ಒಗೆದ, ಡಬ್ಬಲ್ ಗುಡ್ಡೆಯಲ್ಲಿ ಬಟ್ಟೆ ಒಣಗಿಸಿದ ಅನುಭವಗಳನ್ನು ನಮ್ಮಲ್ಲಿ ಹಂಚಿಕೊಂಡುದು ನೆನಪಿದೆ. ಹಾಗೆಯೇ ಬಾಲ್ಯದಲ್ಲಿ ನಾನು ಈ ದೃಶ್ಯಗಳನ್ನು ಕಣ್ಣಾರೆ ನೋಡಿದ್ದೇನೆ. ಬಾಳಿಗಾ ಸ್ಟೋರ್ಸ್ ಮತ್ತು ಅಂದು ಅಲ್ಲಿಯೇ ಇದ್ದ ಮುನಿಸಿಪಲ್ ಆಸ್ಪತ್ರೆಯ ನಡುವೆ ಇದ್ದ ಉದ್ದದ ರಸ್ತೆ ಪಕ್ಕದ ಜಾಗದಲ್ಲಿ ಎರಡು ಬಿದಿರು ಕೋಲುಗಳನ್ನು ಜತೆಯಾಗಿಸಿ ಕಟ್ಟಿ, ಅಂತಹ ಅನೇಕ ಗಳಗಳನ್ನು ತಯಾರಿಸಿ ಅವುಗಳನ್ನು ಹಗ್ಗಗಳಿಂದ ಜೋಡಿಸಿ ಆ ಹಗ್ಗಗಳಲ್ಲಿ ಬಟ್ಟೆ ಒಣಗ ಹಾಕಿದಾಗ ಬಣ್ಣಬಣ್ಣದ ಬಟ್ಟೆಗಳನ್ನು, ಬಿಳಿ ಬಟ್ಟೆಗಳನ್ನು ನೋಡುವುದೇ ಒಂದು ಖುಷಿಯಾಗಿತ್ತು. ಬಹಳ ಸುಂದರವಾದ ದೃಶ್ಯ.
ಇನ್ನು ಮಲಿನವಾದ (ಮುಖ್ಯವಾಗಿ ಆಸ್ಪತ್ರೆಯ) ಕಲೆಯಾದ ಬಟ್ಟೆಗಳನ್ನು ಸ್ವಚ್ಛ ಮಾಡಲು `ಉಬೆ' ಹಾಕುವುದಕ್ಕಾಗಿ ಮನೆಗಳಲ್ಲಿ ದೊಡ್ಡ ದೊಡ್ಡ ಹಂಡೆಗಳು ಇರುತ್ತಿದ್ದುವು. (ಬಿಸಿನೀರಿನಲ್ಲಿ ಕ್ಷಾರ ಹಾಕಿ ಬೇಯಿಸುವುದು) ಈ ಕೆಲಸವನ್ನು ಕೂಡ ಹೆಂಗಸರು ಕರಾರುವಕ್ಕಾಗಿ ನಿರ್ವಹಿಸುತ್ತಿದ್ದರು. ಇಸ್ತ್ರಿ ಮಾಡಲು ಎತ್ತರದ ಹಾಗೂ ಅಗಲವಾದ ಮೇಜುಗಳು. ಅದರ ಮೇಲೆ ಸಾಕಷ್ಟು ಬಟ್ಟೆಗಳನ್ನು ಹರಡಿ ಮಾಡಿದ ಹಾಸಿಗೆ, ಗಟ್ಟಿಯಾದ ಭಾರವಾದ ಕಬ್ಬಿಣ, ತಾಮ್ರದ ಇದ್ದಲಿನ ಇಸ್ತ್ರಿಪೆಟ್ಟಿಗೆಗಳು. ಇಸ್ತ್ರಿ ಮಾಡಿದ ಬಟ್ಟೆಗಳನ್ನು ಜೋಡಿಸಿ ಇಡಲು ಅಗಲವಾದ ಬೆಂಚುಗಳು ಇರುತ್ತಿದ್ದುವು. ಹೀಗೆ ಜೋಡಿಸಿಟ್ಟ ಬಟ್ಟೆಗಳು ಕೂಡ ನೋಡಲು ಅಂದವಾಗಿ ಕಾಣುತ್ತಿದ್ದವು. ನಾನು ನನ್ನ ಅಜ್ಜಿಯ ಮನೆಗೆ ಹೋದಾಗ ಅಲ್ಲಿ ಇರುತ್ತಿದ್ದ ಆ ಸೀರೆಗಳನ್ನು ನೋಡುತ್ತಿದ್ದೆ. ಡಾಕ್ಟರರುಗಳ ಬಿಳಿ ಬಣ್ಣದ ಸಣ್ಣ ಸಣ್ಣ ಹೂವಿನ ಕಟಾವು ವಾಯಿಲ್ ಸೀರೆಗಳು, ಶ್ರೀಮಂತರ ಮನೆಯ ನಿತ್ಯ ಉಡುವ ಪ್ರಿಂಟೆಡ್ ಸಿಲ್ಕ್ ಸೀರೆಗಳು. ಮದುವೆಯ ಸಂದರ್ಭಗಳಲ್ಲಿ ಉಡುವ ಕಾಂಜೀವರಂ, ಧರ್ಮಾವರಂ, ಆರಣಿ ಸೀರೆಗಳು. ಹೀಗೆ ನನಗೆ ಸೀರೆಯ ಹುಚ್ಚು ಮತ್ತು ಸೀರೆಯ ಆಯ್ಕೆಯನ್ನು ಈ ಅನುಭವಗಳೇ ನೀಡಿರಬೇಕು ಅನ್ನಿಸುತ್ತದೆ. ಸೀರೆಯನ್ನು ಇಸ್ತ್ರಿ ಮಾಡುವ ಮೊದಲು ಅದನ್ನು ಇಬ್ಬಿಬ್ಬರು ಹಿಡಿದು ಸರಿಯಾದ ಮಡಿಕೆಯಾಗಿ ಮಡಿಚಬೇಕಾಗಿತ್ತು. ಹಾಗೆ ಮಾವ ಯಾರನ್ನಾದರೂ, ಅಂದರೆ ಕೆಲಸದವರನ್ನು ಕರೆದಾಗ ಅವರು ಯಾರೂ ಇಲ್ಲದಿದ್ದರೆ ಒಳಗಿದ್ದ ಅತ್ತೆಯೇ, ಚಿಕ್ಕಮ್ಮನೋ ಬರಬೇಕು. ಆಗ ನಾನು ಓಡಿ ಹೋಗಿ ನಾನು ಹಿಡಿಯುತ್ತೇನೆ ಎನ್ನುತ್ತಿದ್ದೆ. ಈ ಸೀರೆಗಳನ್ನು ಮುಟ್ಟಿ ನೋಡುವ ಖುಷಿಗಾಗಿ. ಆದರೆ ಚಿಕ್ಕವಳಾದ ನನ್ನ ಎತ್ತರಕ್ಕೆ ಆ ಸೀರೆ ಹಿಡಿಯಲಾಗುತ್ತಿರಲಿಲ್ಲ. ನನ್ನ ಅಜ್ಜಿ ಮನೆಯಲ್ಲಿ ದೊಡ್ಡ ಮಾವ ಅನಿವಾರ್ಯವಾಗಿ ಅಜ್ಜನ ಅಕಾಲ ಮರಣದಿಂದಾಗಿ ಎಂಟನೇ ತರಗತಿಗೆ ಶಾಲೆ ತೊರೆದು ಕುಲಕಸುಬು ಮಾಡಿದರೂ ಉಳಿದ ಮಾವಂದಿರು, ನನ್ನ ಅಮ್ಮ, ಚಿಕ್ಕಮ್ಮಂದಿರಿಗೆ ಮುಂದೆ ಇದರ ಅವಶ್ಯಕತೆ ಇರಲಿಲ್ಲ. ಹಾಗೆಯೇ ಈ ಎಲ್ಲ ಮಡಿವಾಳರ ಮನೆಯಲ್ಲೂ ಮುಂದಿನ ತಲೆಮಾರಿನ ಯುವಕ, ಯುವತಿಯರು ತಮ್ಮ ಬಾಲ್ಯದಲ್ಲಿ ಈ ವೃತ್ತಿಯಲ್ಲಿ ಸಹಕರಿಸಬೇಕಾದ ಅನಿವಾರ್ಯತೆ ಇದ್ದರೂ ಮುಂದೆ ಬೇರೆ ಬೇರೆ ವೃತ್ತಿಗಳಿಗೆ ಹೋದುದು. ವಿದ್ಯಾವಂತರಾದುದು ಮಾತ್ರವಲ್ಲ, ತಮ್ಮ ಮಕ್ಕಳನ್ನು ಇನ್ನಷ್ಟು ಓದಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ವೃತ್ತಿಯ ಕೀಳರಿಮೆಯನ್ನು ಮೀರಿ ಬೆಳೆದಿರುವುದು ಖುಷಿಯ ವಿಚಾರ. ಹಾಗೆ ನೋಡಿದರೆ, ನನ್ನ ಅಜ್ಜನ, ಮಾವನ ಕಾಲದಲ್ಲಿ ಜಾತಿಯ ಅಥವಾ ಕುಲ ಕಸುಬಿನ ಕಾರಣದಿಂದ ಯಾರೂ ಸಮಾಜದಲ್ಲಿ ಕೀಳು ಅನ್ನಿಸಿಕೊಂಡಿರಲಿಲ್ಲ. ಮಂಗಳೂರಿನ ಗಣ್ಯಾತಿಗಣ್ಯರ ಸ್ನೇಹ, ಸಂಪರ್ಕಗಳು ಅವರಿಗಿತ್ತು ಎನ್ನುವುದು ಅಷ್ಟೇ ಸತ್ಯ. ಆದರೆ ಕೆಲವೊಂದು ಬಾಂಧವರು ತಮ್ಮ ಕುಡಿತದ ಚಟದಿಂದ ತಮ್ಮ ಘನತೆಯನ್ನು ಕಳಕೊಂಡಿರ ಬಹುದು ಎಂದು ನನ್ನ ಭಾವನೆ. ಅಲ್ಲದೆ ವಿದ್ಯೆಯ ಮಹತ್ವ, ಕುಲಕಸುಬಿಗಿಂತ ಹೊರತಾದ ವೃತ್ತಿಗಳ ಸಾಧ್ಯತೆ ಮತ್ತು ಅವುಗಳಿಗಿದ್ದ ಮನ್ನಣೆಗಳಿಂದ ಬಹುತೇಕ ಬಿಜೈಯ ಮಡಿವಾಳ ಬಾಂಧವರು ಮಡಿವಾಳ ಸಮುದಾಯದಲ್ಲೇ ಗುರುತಿಸಲ್ಪಟ್ಟವರು ಎಂದರೆ ತಪ್ಪಲ್ಲ. ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಹೊಂದಿ, ದೇಶ ವಿದೇಶಗಳಲ್ಲಿ ನೆಲೆಸಿ ತಮ್ಮ ಹಿರಿಯರಿಗೆ, ಸಮುದಾಯಕ್ಕೆ ಕೀರ್ತಿ ತಂದವರಿದ್ದಾರೆ. ಈ ಅನುಭವದ ಹಿನ್ನೆಲೆಯಲ್ಲಿ ಹುಟ್ಟು ಆಕಸ್ಮಿಕ ಎಲ್ಲರ ಪಾಲಿಗೂ. ಆದರೆ ಬದುಕು ನಮ್ಮ ಯೋಚನೆಯಂತೆ, ಯೋಜನೆಯಂತೆ ಎನ್ನುವುದು ಅನುಭವದ ಸತ್ಯ. ಹಿರಿಯರ ತಿಳುವಳಿಕೆಯ ಸತ್ಯ. ಆದ್ದರಿಂದ ಯಾರೇ ಆದರೂ ತನ್ನ ಹುಟ್ಟಿಗೆ ಕೀಳರಿಮೆ ಪಡದೆ ಉತ್ತಮ ಬದುಕನ್ನು ಬದುಕುವ ಪ್ರಾಮಾಣಿಕರಾಗುವ, ಕಾಯಕ ಜೀವಿಗಳಾಗುವ, ದುಡಿದು ಉಣ್ಣುವವರಾಗುವ ಸಂಕಲ್ಪ ಮಾಡಿದರೆ ಯಶಸ್ಸು ಖಂಡಿತ ನಮ್ಮದಲ್ಲವೇ?
(ಸೂಚನೆ: ಈ ಅಧ್ಯಾಯದ ಮೊದಲ ಭಾಗಗಳು ‘ಸಂಪದ' ಜಾಲತಾಣದ ೨೦೧೯ರ ಹಳೆಯ ಪುಟಗಳಲ್ಲಿ ದೊರೆಯುತ್ತವೆ. ಹೊಸ ಓದುಗರು ಈ ವಿಷಯವನ್ನು ಗಮನಿಸಿ ಮೊದಲ ೧೯ ಅಧ್ಯಾಯಗಳನ್ನು ಓದ ಬೇಕಾಗಿ ವಿನಂತಿ)