ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೯)
ಊರ ಹೊರಗಿನ ಹೊಲಗೇರಿ ಊರಾಯಿತು
ಇದೀಗ ಉರ್ವಾಸ್ಟೋರ್ಸ್ ನಿಂದ ಮಿಸ್ಕತ್ ಬಸ್ನಲ್ಲಿ ನನ್ನ ನಿತ್ಯದ ಪ್ರಯಾಣ ಬಜಪೆಗೆ. ಬಂಗ್ರಕೂಳೂರಿನ ಕಬ್ಬಿನ ತೋಟ, ಪಣಂಬೂರಿನ ಗದ್ದೆಗಳು, ಸುರತ್ಕಲ್ಲಿನ ಕಾನ, ಬಾಳ, ಪದವುಗಳು, ಕಳವಾರು, ಪೇಜಾವರದ ತಗ್ಗಿನಗದ್ದೆ, ತೋಟಗಳನ್ನು ದಾಟಿ ಪೊರ್ಕೋಡಿಯಲ್ಲಿ ಬಜಪೆಯ ಎತ್ತರಕ್ಕೆ ಆ ಪುಟ್ಟದಾದ ವಿಶಿಷ್ಟವಾದ ಹಳೆಯ ಬಸ್ಸು ನನ್ನನ್ನು ಕೊಂಡೊಯ್ಯುತ್ತಿತ್ತು. ಈಗ ನನ್ನ ಜತೆಗೆ ನಮ್ಮ ಶಾಲೆಯ ನನ್ನ ಸಹೋದ್ಯೋಗಿ ಜೂಡಿತ್ ಕೂಡಾ ಜೊತೆಗಿರುತ್ತಿದ್ದರು.
ಬಜಪೆ ಎನ್ನುವುದು ದೇಶದ ನಕ್ಷೆಯಲ್ಲಿ ಗುರುತಿಸಲ್ಪಟ್ಟ ಊರು. ಕಾರಣ ಅಲ್ಲಿ ವಿಮಾನ ನಿಲ್ದಾಣ ಇದೆ. ನಿಲ್ದಾಣ ನೋಡದೆ ಇದ್ದರೂ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ಮಂಗಳೂರಿಗೆ ಬಂದಾಗ ಅವರನ್ನು ಕಾಣಲು ನಿಲ್ದಾಣದ ಒಳಗೆ ಶಾಲೆಗೆ ಶಾಲೆಯೇ ಸಾಲಾಗಿ ನಿಂತಿತ್ತು. ತೆರೆದ ವಾಹನದಲ್ಲಿ ಇಂದಿರಾಗಾಂಧಿ ಬಂದಾಗ ಶಾಲೆಯ ವತಿಯಿಂದ ವಿದ್ಯಾರ್ಥಿನಿಯೊಬ್ಬಳು ಪುಷ್ಪಗುಚ್ಛ ನೀಡಿದಳು. ಸಮೀಪದಿಂದ ಪ್ರಧಾನಮಂತ್ರಿಯನ್ನು ನೋಡಿದ ಹಿರಿಮೆ ಮಕ್ಕಳೊಂದಿಗೆ ನಮ್ಮದು ಕೂಡಾ. ಆಗ ಇಂದಿರಾಗಾಂಧಿ ಜನಪ್ರಿಯ ಪ್ರಧಾನಮಂತ್ರಿ ಆಗಿದ್ದರು. ಆಕೆಯ ಜನಪ್ರಿಯತೆ ತುರ್ತು ಪರಿಸ್ಥಿತಿಯ ಹೇರಿಕೆಯಿಂದ ಕಡಿಮೆಯಾದುದು 1975ರಲ್ಲಿ ತಾನೇ? ಇಂದು ಬಜಪೆಯಲ್ಲಿದ್ದ ವಿಮಾನ ನಿಲ್ದಾಣ ಬಜಪೆಯಿಂದ ಬಹಳ ದೂರವಾಗಿ ಮಂಗಳೂರಿಗೆ ಹತ್ತಿರವಾಗಿದೆ. ಈಗ ಅದು ಅಂತರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣವಾಗಿದೆ. ಜೊತೆಗೆ ನನಗೂ ಹತ್ತಿರವಾಗಿದೆ. ಕತಾರ್, ಕುವೈಟ್, ದುಬೈಗಳಿಗೆ ಈ ವಿಮಾನ ನಿಲ್ದಾಣದಿಂದಲೇ ವಿಮಾನದಲ್ಲಿ ಹಾರಿರುವ ನನಗೆ ಇಂತಹ ಅವಕಾಶಗಳು ದೊರೆಯುತ್ತವೆ ಎನ್ನುವ ಕನಸೂ ಬಿದ್ದಿರಲಿಲ್ಲ. ಆಗ ಬದುಕಿನಲ್ಲಿ ಹಲವೂ ಬಾರಿ ನಾವು ಕಂಡ ಕನಸು ನನಸಾಗದೇ ಇದ್ದರೂ ಕನಸಿನಲ್ಲೂ ಕಾಣದ ವಿಷಯಗಳು ನನಸಾಗುವುದು ಹೇಗೆ ಎನ್ನುವುದೇ ಆಶ್ಚರ್ಯದ ವಿಷಯ. ಇದನ್ನು ಕೆಲವರು ಅದೃಷ್ಟ ಎಂದರೆ ಇನ್ನು ಕೆಲವರು ಯೋಗ ಎನ್ನುತ್ತಾರೆ. ಏನೇ ಇರಲಿ ಅದೃಷ್ಟವೋ ಯೋಗವೋ ಅಂತೂ ವಿಮಾನದ ಪ್ರಯಾಣ ಮಾತ್ರ ವಿಸ್ಮಯ. ವಿಮಾನವನ್ನು ಕಂಡುಹಿಡಿದ ರೈಟ್ ಸಹೋದರರಿಗೆ ನನ್ನ ವತಿಯಿಂದಲೂ ಕೃತಜ್ಞತೆಗಳು. ಈ ಮಂಗಳೂರು ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಅನೇಕ ಹಿರಿಯರು ಹಿರಿಯ ಸಾಧಕರ ಹೆಸರಿಡಬೇಕೆಂದು ಆಗಾಗ ಪತ್ರಿಕೆಯ ಮೂಲಕ ಸಾಂದರ್ಭಿಕವಾಗಿ ನೆನಪಿಸುತ್ತಾರೆ. ನಾನಾದರೋ ಈ ನಿಲ್ದಾಣಕ್ಕೆ ಸೂಚಿಸುವ ಹೆಸರು, ಸ್ವಾತಂತ್ರ್ಯ ಹೋರಾಟಗಾರ್ತಿ, ದಿಟ್ಟನಿಲುವಿನ, ಕಮಲಾದೇವಿ ಚಟ್ಟೋಪಾಧ್ಯಾಯರದ್ದು. ಮಂಗಳೂರಿನ ಕಮಲಾದೇವಿ ದಿಲ್ಲಿಯನ್ನು ತಲುಪಿದ ಮೊದಲ ಮಹಿಳೆ. ಸ್ವಾತಂತ್ರ್ಯೋತ್ತರದಲ್ಲಿ ಯಾವುದೇ ಹುದ್ದೆಯನ್ನು ಅಪೇಕ್ಷಿಸದೆ, ದೇಶದ ಕರಕುಶಲ ಕಲೆಗಳಿಗೆ ಆದ್ಯತೆ ನೀಡಿ, ದೇಶದ ಬಹುಸಂಸ್ಕೃತಿಯನ್ನು ಉಳಿಸುವುದರೊಂದಿಗೆ ಮಹಿಳೆಯರ ಸಬಲೀಕರಣಕ್ಕೆ ದುಡಿದವರು ಎನ್ನುವ ಕಾರಣಕ್ಕೆ ಅವರ ಹೆಸರು ಸೂಕ್ತ ಎಂದು ಭಾವಿಸುತ್ತೇನೆ. ಈ ನಿಲ್ದಾಣ ಮಂಗಳೂರಿಗೆ ದೊರೆಯುವಲ್ಲಿ ಶ್ರೀನಿವಾಸ ಮಲ್ಯರ ಸಾಧನೆ ದೊಡ್ಡದು ಎನ್ನುವುದು ನಿಜವೇ. ನಾನು ಉರ್ವಾಸ್ಟೋರ್ ನಿಂದ ಬಜಪೆಗೆ ಹೋದುದು ಕೆಲವೇ ತಿಂಗಳು. ಮುಂದೆ ಮತ್ತೆ ವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರಿನ ಸ್ನಾತಕೋತ್ತರ ಕೇಂದ್ರಕ್ಕೆ ಸೇರಿದೆ. ಕನ್ನಡದಲ್ಲಿ ಎಂ.ಎ ಮಾಡುವುದಕ್ಕಾಗಿ.
ಉರ್ವಾಸ್ಟೋರ್ಸ್ ಎನ್ನುವುದಕ್ಕೆ ಹಿಂದೆ ಇದ್ದ ಹೆಸರು ಫಂಡ್ದಂಗಡಿ ಎಂದು. ಜತೆಗೆ ಅಲ್ಲಿಯೇ ಇದ್ದ ಗುಡ್ಡೆ ಹಾಗೂ ಅಂಗಡಿಯ ಕಾರಣದಿಂದ ಗುಡ್ಡೆ ಅಂಗಡಿ ಎಂಬ ಹೆಸರೂ ಇತ್ತು. ‘ಫಂಡ್’ ಅಂದರೆ ಅಂಗಡಿಯಲ್ಲಿ ‘ಚಿಟ್ಫಂಡ್’ ಎಂಬಂತಹ ಒಂದು ವ್ಯವಹಾರ ನಡೆಯುತ್ತಿತ್ತು. ಇದು ಒಂದರ್ಥದಲ್ಲಿ ಸ್ಥಳೀಯರ ಸಹಕಾರಿ ವ್ಯವಸ್ಥೆ. ಇಲ್ಲಿ ಫಂಡ್ ನಡೆಸುವವರು ಪ್ರಾಮಾಣಿಕ, ಸತ್ಯವಂತರಾದರೆ ಅದು ನಿಜಕ್ಕೂ ಸಹಕಾರಿಯೇ. ಇಲ್ಲಿಯ ಫಂಡ್ದಂಗಡಿಯ ಮಾಲಕರನ್ನು ನೋಡಿದ್ದೆ. ಜಿನಸಿನ ಅಂಗಡಿ ಇಟ್ಟುಕೊಂಡಿದ್ದರು. ಆದರೆ ಆಗ ‘ಫಂಡ್’ ಇರಲಿಲ್ಲ. ಯಾಕೆಂದರೆ ಊರಲ್ಲಿ ಸಾಕಷ್ಟು ಬ್ಯಾಂಕುಗಳು ಜನರ ಹಣಕಾಸಿನ ವ್ಯವಹಾರಕ್ಕೆ ಹುಟ್ಟಿಕೊಂಡಿತ್ತು. ಇನ್ನು ಸಾಮಾನ್ಯ ಜನರು ತಮ್ಮತಮ್ಮೊಳಗೆ ಇಂತಹ ಚಿಟ್ಫಂಡ್ಗಳನ್ನು ನೆರೆಹೊರೆಯಲ್ಲಿ, ದುಡಿಯುವ ಸ್ಥಳಗಳಲ್ಲಿ ಹುಟ್ಟು ಹಾಕಿಕೊಂಡಿರುವುದೂ ಇತ್ತು ಆ ದಿನಗಳಲ್ಲಿ. ಏನಿದ್ದರೂ ಇಂದು ಉರ್ವಾಸ್ಟೋರ್ ಒಂದು ಜನಭರಿತ ಹಾಗೂ ಅನೇಕ ವಿಷಯಗಳಿಂದಾಗಿ, ಸೌಲಭ್ಯಗಳಿಂದಾಗಿ ಚಿರಪರಿಚಿತ. ನಾವೂ ಉರ್ವಾಸ್ಟೋರ್ ಎನ್ನುವ ಊರಿಗೆ ಬಂದಾಗ ಅಲ್ಲಿ ಸರಕಾರಿ ನೌಕರಿಗಾಗಿ ವಸತಿಗೃಹಗಳ ನಿರ್ಮಾಣವಾಗಿತ್ತು. ಇಂದಿಗೂ ಇದೆ. ಗಣಪತಿ ದೇವಸ್ಥಾನ, ಪ್ರಜಾಪಿತ ಬ್ರಹ್ಮಕುಮಾರಿಯವರ ಈಶ್ವರೀಯ ವಿದ್ಯಾಲಯ, ಶಾರದಾ ಮಂಟಪವಿರುವ ಕಟ್ಟಡ, ಬಸ್ ನಿಲ್ದಾಣ, ಜಿಲ್ಲಾ ಪಂಚಾಯತ್ ಕಟ್ಟಡ ತುಳುಭವನ, ಮೂಡಾ ಕಟ್ಟಡಗಳು, ಇನ್ಫೋಸಿಸ್ ಇವೆಲ್ಲವೂ ಯಾವುದೂ ಇರಲಿಲ್ಲ. ಉರ್ವಾಸ್ಟೋರ್ಸ್ ನ ತರಕಾರಿ ಹಾಗೂ ಮೀನು ಮಾರ್ಕೆಟ್, ಉರ್ವಾಸ್ಟೋರ್ಸ್ ನ ಮೈದಾನ ಹಾಗೂ ರೇಡಿಯೋ ಗುಡ್ಡೆ ಇತ್ತು. ರೇಡಿಯೋ ಗುಡ್ಡೆಯಲ್ಲಿದ್ದ ಎತ್ತರದ ಗೋಪುರದಂತಹ ಕಟ್ಟಡದೊಳಗೆ ರೇಡಿಯೋ ಇದ್ದು ಸಂಜೆಯ ಹೊತ್ತು ರೇಡಿಯೋ ಕಾರ್ಯಕ್ರಮ ಕೇಳಿಸುತ್ತಿದ್ದರು. ಇಂತಹ ಉರ್ವಾಸ್ಟೋರ್ಸ್ ಹೀಗಿರುವ ಮೊದಲು ಇದನ್ನು ಊರ ಹೊರಗಿನ ಹೊಲಗೇರಿ ಎಂದೇ ಕರೆಯುತ್ತಿದ್ದರು. ತುಳುವಿನಲ್ಲಿ ‘ಪೀತಗುಡ್ಡೆ’ ಎಂದು ಕರೆಯುತ್ತಿದ್ದ ಇಲ್ಲಿ ಮಲ ತಂದು ಸುರಿಯಲಾಗುತ್ತಿತ್ತು. ಮಂಗಳೂರಿನ ಮುನಿಸಿಪಾಲಿಟಿಯೊಳಗಿನ ಪ್ರದೇಶದಲ್ಲಿದ್ದ ತೆರೆದ ಕಕ್ಕಸುಗಳಿಂದ ಮಲ ಬಾಚಿ ತಲೆಯ ಮೇಲೆ ಮಲದ ಬಾಲ್ದಿ ಹೊತ್ತು ಹೋಗುತ್ತಿದ್ದ ದೃಶ್ಯವನ್ನು ನಾವು ಬಿಜೈ ಕಾಪಿಕಾಡಿನಲ್ಲಿದ್ದಾಗಲೇ ನೋಡಿದವರು. ಆದರೂ ನಮಗೆ ಗುಡ್ಡೆಯ ಶೌಚಾಲಯವಿದ್ದು ಅದುವೇ ಆರಾಮದಾಯಕ ವಾಗಿದ್ದು ಈ ರೀತಿಯ ತೆರೆದಗುಂಡಿಯ ಕಕ್ಕಸು ಅಸಹ್ಯವೆನಿಸುತ್ತಿತ್ತು. ಜತೆಗೆ ಅದನ್ನು ಬಾಚಿಕೊಂಡು ಹೋಗುವವರ ಬಗ್ಗೆ ಕನಿಕರ ಎನಿಸುತ್ತಿತು. ಉರ್ವಾಸ್ಟೋರ್ ನ ಈ ಮನೆಗೆ ಬಂದ ನಮಗೆ ಈ ತೆರೆದ ಕಕ್ಕಸು ಹಿಂಸೆಯಾಗಿತ್ತು. ದೇರೆಬೈಲು ಮನೆಯಲ್ಲಿ ಮನೆಯ ಹೊರಗೆ ಕಕ್ಕಸು ಇದ್ದು ಅದಕ್ಕೆ ಆಳವಾದ ಮುಚ್ಚಿದ ಗುಂಡಿಗಳಿದ್ದು, ಸ್ವಚ್ಛತೆಗೆ ಆರೋಗ್ಯಕ್ಕೆ ಕಾರಣವಾಗಿತ್ತು. ಈ ರೀತಿಯ ಕಕ್ಕಸು ಇರಬೇಕು ಎನ್ನುವುದು ಆಗಷ್ಟೇ ಮುನಿಸಿಪಾಲ್ಟಿ ಆದೇಶ ನೀಡಿದ್ದರೂ ಬಹಳಷ್ಟು ಮಂದಿ ಇದನ್ನು ಪಾಲಿಸಿರಲಿಲ್ಲ. ನಾವಿದ್ದ ಮನೆಯ ಅಂಗಳ ದಾಟಿ ದೂರದ ಮಲ್ಲಿಗೆ ತೋಟದಲ್ಲಿ ಎರಡು ಬಿಡಾರದ ಮನೆಗಳಿಗೆ ಪ್ರತ್ಯೇಕವಾದ ತೆರೆದ ಕಕ್ಕಸು. ಶೌಚಕ್ಕೆ ಹೋಗಬೇಕಾಗಿದ್ದರೆ ಸಮಯ ಕಾಯಬೇಕಾಗುತ್ತಿತ್ತು. ಪಕ್ಕದ ಬಿಡಾರದಲ್ಲಿ ಗಂಡುಮಕ್ಕಳೇ ಇದ್ದುದರಿಂದ ಧಣಿಬಾಯಿಯವರಿಗೆ ಇರುವ ತನ್ನ ಮನೆಗೆ ಸಪ್ಟಿಕ್ಟ್ಯಾಂಕ್ ಸಹಿತವಾದ ಕಕ್ಕಸು ಕಟ್ಟಬೇಕೆನ್ನುವ ಆಲೋಚನೆ ಬರಲಿಲ್ಲವೋ ಏನೋ? ‘ಅಪ್ಪನೂ ಮನೆ ನೋಡಿ ಬಂದವರಿಗೆ ಈ ವಿಷಯ ಗಂಭೀರವಾಗಿ ಕಾಣಿಸಲಿಲ್ಲವೋ ಏನೋ? ಯಾಕೆಂದರೆ ಗಂಡಸರು ಯೋಚಿಸುವುದು ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿಯೇ ಇರುತ್ತದೆ. ಇದೀಗ ನಾವಿಬ್ಬರು ಬೆಳೆದ ಹುಡುಗಿಯರು ಇರುವುದನ್ನು ತಿಳಿದ ಧಣಿಬಾಯಿಗೆ ಮುಜುಗರ ಎನ್ನಿಸಿತ್ತಾದರೂ ಕಟ್ಟಿಸಿಕೊಡುವ ಬಗ್ಗೆ ಆಲೋಚನೆ ಮಾಡಿದ ಹಾಗೆ ಇರಲಿಲ್ಲ. ಆದರೆ ಪಕ್ಕದ ಮನೆಯ ಹುಡುಗನ ಕಿಡಿಗೇಡಿತನದಿಂದ ಎಚ್ಚರಗೊಂಡ ಧಣಿಬಾಯಿ ನಮ್ಮ ಅಂಗಳದಲ್ಲೇ ಒಂದು ಕಟ್ಟಡದೊಳಗೆ ಸಪ್ಟಿಕ್ ಟ್ಯಾಂಕ್ ಸಹಿತವಾದ ಎರಡು ಕಕ್ಕಸು ಕಟ್ಟಿಕೊಟ್ಟರು. ಆದರೆ ಅದು ಕೂಡಾ ಒಂದೆರಡು ವರ್ಷಗಳ ಬಳಿಕ ಮಳೆಗಾಲದಲ್ಲಿ ತುಂಬಿ ಬ್ಲಾಕ್ ಆಗಲು ಶುರುವಾಗುತ್ತಿತ್ತು. ಕಾರಣ ಆ ಕಕ್ಕಸಿನ ಬಳಿಯಲ್ಲೇ ಹರಿಯುವ ನೀರಿನ ತೋಡು. ಇನ್ನೂ ಎತ್ತರದಲ್ಲಿ ಸರಕಾರಿ ವಸತಿಗೃಹಗಳು. ಅವುಗಳ ಕಕ್ಕಸಿಗೆ ಜೋಡಿಸಿದ ಡ್ರೈನೇಜ್ಗುಂಡಿ ಅಂದರೆ ಚರಂಡಿ ಗುಂಡಿಗಳು ಇವುಗಳೆಲ್ಲಾ ತುಂಬಿ ತಗ್ಗಿನಲ್ಲಿರುವ ನಮಗೆ ಬಾಧೆ ಕೊಡುತ್ತಿತ್ತು. ಮುನಿಸಿಪಾಲಿಟಿಯ ಶುಚಿತ್ವದ ಕೆಲಸಗಾರರು ಬಂದು ಕಕ್ಕಸಿನಲ್ಲಿ ತುಂಬಿದ ಕಸಕಡ್ಡಿಗಳನ್ನೆಲ್ಲಾ ತೆಗೆದು ಲಾರಿಯಲ್ಲಿ ಕೊಂಡೊಯ್ಯುವುದು ಪ್ರತಿವರ್ಷವೂ ಸಾಮಾನ್ಯವಾದ ವಿಷಯವಾಗಿತ್ತು. ಇಂದಿಗೂ ಮಂಗಳೂರಿನಲ್ಲಿ ಈ ಕೊಳಚೆ ನೀರಿನ ಚರಂಡಿಗಳ ಗುಂಡಿಗಳು ತುಂಬಿ ಹರಿಯುತ್ತಿರುವುದನ್ನು ಮತ್ತು ಮಂಗಳೂರು ಅತ್ಯಂತ ಸ್ವಚ್ಛ ನಗರದ ಪ್ರಶಸ್ತಿಯನ್ನು ಪಡೆಯುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಏನೇ ಇರಲಿ ಈ ತಿಪ್ಪೆಗುಂಡಿಯಲ್ಲಿ ವಸತಿಗೃಹಗಳು ಬಂದ ಬಳಿಕ ಊರು ಸ್ವಚ್ಛವಾಯಿತು. ಹಾಗೆಯೇ ರಸ್ತೆ ಬದಿಯಲ್ಲಿ ನೆಟ್ಟ ಮರಗಳು ಬಹುಬೇಗನೇ ಬೆಳೆದು ದಾರಿಗೆ ನೆರಳಾದವು. ಮನೆಗಳವರು ನೆಟ್ಟ ಬಾಳೆ, ತೆಂಗು, ಮಾವು. ಹಲಸಿನಮರಗಳು ಧಾರಾಳವಾಗಿ ಫಲಗಳನ್ನು ಕೊಟ್ಟಾಗ ಮಣ್ಣಿನೊಳಗಿನ ಹೊಲಸನ್ನು ಕೂಡಾ ಭೂಮಿತಾಯಿ ಅದು ಹೇಗೆ ಪರಿವರ್ತಿಸುತ್ತಾಳೆ? ಎಂದು ಆಶ್ಚರ್ಯವಾಗುತ್ತದೆ. ಅಮೇಧ್ಯವೂ ನೈವೇದ್ಯವಾಯಿತು, ಭೂಮಿ ತಾಯಿಯ ಕೃಪೆಯಿಂದ! ಆದರೆ ಮನುಷ್ಯನ ಮನದೊಳಗಣ ಮಲಿನ ಮನಸ್ಸು ಶುಚಿಯಾಗುವುದು ಸುಲಭದ ವಿಚಾರವಲ್ಲ, ಇರಲಿ.
ನಾನು ಹೇಳಬೇಕಾದ ಮುಖ್ಯ ವಿಷಯವನ್ನೇ ಹೇಳಿಲ್ಲ. ನಾವು ಬಿಡಾರ ಬಂದುದು ಕ್ಲೇರಾಬಾಯಿ ಎನ್ನುವವರ ಬಿಡಾರಕ್ಕೆ. ಅವರ ಮನೆಯಲ್ಲಿ ಅವರ ಒಬ್ಬ ಮಗ, ಸೊಸೆ ಹಾಗೂ ಮೊಮ್ಮಕ್ಕಳು ಇದ್ದರು. ಈ ಮಗ ಅಲ್ಲದೆ ಅವರ ಒಬ್ಬ ಮಗ ಧಾರ್ಮಿಕ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡು ಬ್ರದರ್ ಆಗಿದ್ದರು. ಒಬ್ಬ ಮಗಳು ಕೂಡಾ ಅಪೊಸ್ಟಲಿಕ್ ಕಾರ್ಮೆಲ್ ಸಂಸ್ಥೆಗೆ ಸೇರಿದ ಸಿಸ್ಟರ್ ಆಗಿದ್ದು ಶಿಕ್ಷಕಿಯೂ ಆಗಿದ್ದರು. ಇನ್ನೊಬ್ಬ ಮಗಳು ವಿವಾಹಿತೆಯಾಗಿದ್ದು ಕುವೈಟ್ನಲ್ಲಿ ಇದ್ದರು. ಕ್ಲೇರಾಬಾಯಿ ಈಗಾಗಲೇ ವಯಸ್ಸಿನಲ್ಲಿ ಹಿರಿಯರಾಗಿದ್ದು. ನಾವು ಅವರನ್ನು ‘ಮಾಯಿ’ ಎಂದೇ ಕರೆಯುತ್ತಿದ್ದೆವು. ‘ಮಾಯಿ’ಯನ್ನು ಆಸುಪಾಸಿನವರು, ಪಕ್ಕದ ಬಿಡಾರದವರು ಜೋರು ಎಂದರೂ ನನಗೆ ಆಕೆ ಜೋರು ಎನ್ನಿಸಿರಲಿಲ್ಲ. ಕಾರಣ ಅಪ್ಪ ಮಾಸ್ತರರಾಗಿದ್ದುವರಿಂದ ಆಕೆ ನಮ್ಮನ್ನು ಗೌರವದಿಂದ ಕಾಣುತ್ತಿದ್ದರು. ಹಾಗೆಯೇ ಅಮ್ಮನೂ ಅವರಲ್ಲಿ ಅವರ ಕೊಂಕಣಿ ಭಾಷೆಯಲ್ಲಿಯೇ ಮಾತನಾಡುತ್ತಿದ್ದುದರಿಂದ ಆತ್ಮೀಯರಾಗಿದ್ದರು. ಇನ್ನು ನಾವಿಬ್ಬರು ಹೆಣ್ಣುಮಕ್ಕಳಲ್ಲಿ ನಾನು ಶಿಕ್ಷಕಿ, ತಂಗಿ ಕಾಲೇಜಿಗೆ ಹೋಗುತ್ತಿರುವುದೂ ಅವರಿಗೆ ಮೆಚ್ಚುಗೆಯ ವಿಷಯವೇ. ತಮ್ಮನಂತೂ ಚಿಕ್ಕವನು. ಹೈಸ್ಕೂಲಿನಲ್ಲಿ ಮೊದಲ ತರಗತಿಯವನು. ಅವನೂ ಅವರಿಗೆ ಇಷ್ಟವೇ. ಹೀಗೆ ನಾವು ಹೆಚ್ಚು ಇಷ್ಟವಾದಾಗ ಪಕ್ಕದ ಬಿಡಾರದವರು ಹಲವು ವರ್ಷಗಳಿಂದ ಇಲ್ಲೇ ಇದ್ದವರು, ಬಾಡಿಗೆ ಹೆಚ್ಚು ಕೇಳಿದರೂ ಕೊಡದವರು ಹೀಗೆ ಮಾಯಿಯ ಅಸಮಾಧಾನಕ್ಕೆ ಹಲವು ಕಾರಣಗಳು. ನಮಗಂತೂ ರೂ. 50 ನಿಗದಿಯಾಗಿತ್ತು. ಅಪ್ಪನ ಒಬ್ಬನ ಸಂಬಳದಿಂದ ಮನೆ ನಡೆಸುವುದು ಕಷ್ಟ ಎನ್ನುವ ವಿಚಾರವೂ ಅವರಿಗೆ ತಿಳಿದದ್ದೇ ಆಗಿತ್ತು. ಆದರೂ ಹೆಣ್ಣುಮಕ್ಕಳು ಕಲಿತು ಉದ್ಯೋಗಿಗಳಾಗಬೇಕು ಎಂಬುದು ಅವರ ಆಸೆ. ಅವರಾದರೋ ಬೆಳಗ್ಗೆ 4 ಗಂಟೆಗೆ ಎದ್ದು ತೆಂಗಿನ ಮರಗಳಿಗೆ ಪೈಪ್ನ ಮೂಲಕ ನೀರು ಹಾಕುತ್ತಿದ್ದರು. ಮನೆಯಲ್ಲಿ ಅಡಿಗೆ ಕೆಲಸವನ್ನು ಮಾಡುತ್ತಾ, ತನ್ನ ಮನೆಯ ಎಲ್ಲಾ ವ್ಯವಹಾರಗಳಿಗೆ ಓಡಾಡುವಷ್ಟು ಜಾಣೆಯಾಗಿದ್ದರು. ಅದು ಮುನಿಸಿಪಾಲಿಟಿ ಕಛೇರಿಯಾಗಿರಲಿ, ವಕೀಲರ ಬಳಿಯಾಗಿರಲಿ, ಮಾರ್ಕೆಟಾಗಿರಲಿ, ಮನೆಯ ಪೂರ್ಣ ಯಾಜಮಾನಿಕೆ ಅವರದ್ದೇ. ಜೊತೆಗೆ ಸರಕಾರಿ ವಸತಿ ಗೃಹಗಳವರ ಪರಿಚಯ ಮಾಡಿಕೊಂಡು ಲೋಕಜ್ಞಾನವುಳ್ಳವರೂ ಆಗಿದ್ದರು. ನಮ್ಮ ಮನೆಯ ಪಕ್ಕದ ವಸತಿಗೃಹಗಳಲ್ಲಿ ಸರಕಾರಿ ಕಾಲೇಜು ಉಪನ್ಯಾಸಕರೇ ಹೆಚ್ಚು ಇದ್ದುದು, ನಾವು ಅವರಿಗೆ ಪರಿಚಿತರಾಗುವುದಕ್ಕೂ ಕ್ಲೇರಾಬಾಯಿ ಕಾರಣರೆಂದರೆ ತಪ್ಪಲ್ಲ. ನಮ್ಮ ಬಗ್ಗೆ ಅವರಲ್ಲಿ ಯಾವಾಗಲೂ ಮೆಚ್ಚುಗೆಯ ಮಾತುಗಳೇ ಇದ್ದುವು.
(ನನ್ನೂರು-ನನ್ನ ಜನ ಕೃತಿಯಿಂದ ಆಯ್ದ ಭಾಗ)