ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೧)

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೧)

ಪಡೆದ ಉಪಕಾರ ಸಾರ್ಥಕವಾಯ್ತು!

ಉರ್ವಾಸ್ಟೋರ್ಸ್ ಎಂಬ ಊರು ನಮಗೆ ಅಪರಿಚಿತ ಅನ್ನಿಸಲಿಲ್ಲ. ಕಾರಣ ಅಪ್ಪನ ಶಿಕ್ಷಕ ವೃತ್ತಿ. ಯಾವ ಕಡೆ ತಿರುಗಿದರೂ ಶಿಷ್ಯ, ಶಿಷ್ಯೆಯವರು, ಇಷ್ಟೇ ಅಲ್ಲ ಸರಕಾರಿ ವಸತಿಗೃಹಗಳಲ್ಲಿ ಇರುವವರು ಕೂಡಾ ಯಾವ ಯಾವುದೋ ಹಿನ್ನೆಲೆಯಲ್ಲಿ ಪರಿಚಿತರಾಗುತ್ತಿದ್ದರು, ಆತ್ಮೀಯರಾಗುತ್ತಿದ್ದರು. ದಾರಿಯುದ್ದಕ್ಕೂ ಮಾತಿನೊಂದಿಗೆ ಸಾಗುವ ಆ ದಿನಗಳು ಬಹುಶಃ ಇವತ್ತು ಇಲ್ಲವೆಂದಲ್ಲ. ಆದರೆ ಹಿಂದಿನಂತೆ ಕಷ್ಟ ಸುಖಗಳ ಹಂಚುವಿಕೆ ಕಡಿಮೆ ಎಂದರೂ ಸರಿಯೆ. ನಮ್ಮ ಮನೆಯ ದಾರಿಯಲ್ಲಿ ರಸ್ತೆಯ ಒಳಗಡೆ ತಿರುಗುವಲ್ಲಿ ಗಣಪತಿ ಆಚಾರ್ಯರ ಮನೆ ಇತ್ತು. ಅವರ ಮಕ್ಕಳೆಲ್ಲರೂ ನಮಗಿಂತ ಚಿಕ್ಕವರು. ಅವರು ಚಿನ್ನದ ಕೆಲಸ ಮಾಡುತ್ತಿದ್ದರು. ನಾವು ಅವರಲ್ಲಿ ಚಿನ್ನದ ಆಭರಣ ಮಾಡಿಸಿಕೊಳ್ಳುವ ಸ್ಥಿತಿಯಲ್ಲಂತೂ ಇರಲಿಲ್ಲ. ಆದರೆ ನೆರೆಯವರಾಗಿ ಆತ್ಮೀಯರಾಗಿದ್ದೆವು. ಅಂದು ಹೆಣ್ಣುಮಕ್ಕಳೆಲ್ಲಾ ಹೈಸ್ಕೂಲ್ ಮುಗಿಸಿದರೆ ಸಾಕು ಎನ್ನುವ ಆಲೋಚನೆಯೇ ಹೆತ್ತವರಲ್ಲಿ ತುಂಬಿತ್ತು. ಸರಕಾರಿ ವಸತಿಗೃಹಗಳಲ್ಲಿ ಮಹಿಳೆಯರನೇಕರು ಉದ್ಯೋಗಿಗಳಾಗಿದ್ದರೂ ಹೆತ್ತವರಿಗೆ ಕಾಲೇಜಿಗೆ ಹೋಗುವ ಮಕ್ಕಳ ಮಾದರಿ ಬೇಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಾವು ಅಕ್ಕ-ತಂಗಿಯಂದಿರು ಕಾಲೇಜಿಗೆ ವಿಶ್ವವಿದ್ಯಾನಿಲಯಕ್ಕೆ ಹೋಗುತ್ತಿದ್ದುದು ನಮ್ಮ ನೆರೆಯವರಿಗೆ ಸ್ಫೂರ್ತಿಯಾಯಿತು ಎಂದರೆ ತಪ್ಪಲ್ಲ. ಗಣಪತಿ ಆಚಾರ್ಯರ ಹೆಣ್ಣುಮಕ್ಕಳು ಪದವೀಧರರೂ, ಸ್ನಾತಕೋತ್ತರ ಪದವಿಯನ್ನು ಪಡೆದವರಾದರು. ನೆರೆಹೊರೆಯ ಇನ್ನಿತರ ಮನೆಗಳ ಹೆಣ್ಣುಮಕ್ಕಳೂ ಕಾಲೇಜು ಸೇರಿದರು. ಈಗ ನೆನಪಿಸಿಕೊಂಡರೂ ನನಗಿಂತ ಹಿರಿಯರಾಗಿ ಕಾಲೇಜಿಗೆ ಹೋಗುತ್ತಿದ್ದವರು ಯಾರೂ ಇರಲಿಲ್ಲ ಆಸುಪಾಸಿನಲ್ಲಿ. ನನ್ನ ಕಿರಿಯವರಾಗಿ ಅನೇಕರು ಸೈಂಟ್ ಆಗ್ನೆಸ್ ಕಾಲೇಜಿಗೆ, ಆಗ ತಾನೇ ಪ್ರಾರಂಭಗೊಂಡಿದ್ದ ಬೆಸೆಂಟ್ ಕಾಲೇಜ್, ಕೆನರಾ ಕಾಲೇಜ್‍ಗಳಿಗೆ ಹೆಣ್ಣುಮಕ್ಕಳು ಸೇರಿ ಮುಂದಿನ ಪೀಳಿಗೆಯವರು ಪದವೀಧರರಾದರು. ಉರ್ವಾಸ್ಟೋರ್ಸ್ ನ ರೇಷನ್ ಅಂಗಡಿಯ ಬಳಿಯಲ್ಲಿ ವಾಸವಾಗಿದ್ದ ಬಾಬು ಪಂಡಿತರ ಮಕ್ಕಳೂ ಕಾಲೇಜಿಗೆ ಸೇರಿದರು. ಹೀಗೆ ಹೆಣ್ಣುಮಕ್ಕಳು ಕಾಲೇಜಿಗೆ ಹೋಗುವುದು ಒಂದು ಪರಂಪರೆಯಾಯಿತು. ಇವರಲ್ಲಿ ಅನೇಕರು ನಮ್ಮ ಮನೆಗೆ ಮನೆ ಪಾಠಕ್ಕೆ ಬರುತ್ತಿದ್ದರು. ಹೀಗೆ ಪದವೀಧರರಾದ ಅನೇಕ ಹೆಣ್ಣುಮಕ್ಕಳು ಬ್ಯಾಂಕುಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಉದ್ಯೋಗಿಗಳಾಗುವ ಮೂಲಕ ಉರ್ವಾಸ್ಟೋರ್ಸ್ ನ ನಮ್ಮ ಮನೆಯ ಆಸುಪಾಸು ವಿದ್ಯಾವಂತರ ಊರು ಆಯಿತು. ಸರಕಾರಿ ವಸತಿಗೃಹಗಳಲ್ಲಿ, ದೇರೆಬೈಲು, ಕೊಟ್ಟಾರ, ಸರಕಾರಿ ಗುಡ್ಡೆ ಮೊದಲಾದ ಪ್ರದೇಶಗಳಲ್ಲಿಯೂ ವಿದ್ಯಾಭ್ಯಾಸದ ಅರಿವನ್ನೂ ಮೂಡಿಸಿತ್ತು ಎಂದರೆ ತಪ್ಪಲ್ಲ. ಸರಕಾರಿ ಹುದ್ದೆಗಳನ್ನು ಪಡೆಯಬೇಕು ಎಂಬ ಕನಸು ಕಾಣುವುದಕ್ಕೆ ಅವಕಾಶವಾಯಿತು ಮತ್ತು ಈ ಊರವರು ಆ ಅವಕಾಶಗಳನ್ನು ತಮ್ಮದಾಗಿಸುವಲ್ಲಿ ತಮ್ಮ ಪ್ರಯತ್ನವನ್ನು ಮೆರೆದಿದ್ದಾರೆ.

ಸರಕಾರಿ ವಸತಿಗೃಹಗಳಲ್ಲಿ ಇದ್ದ ರಾಜ್ಯದ ಇತರ ಊರುಗಳ ಅಂದರೆ ಮಂಡ್ಯ, ಮೈಸೂರು, ಮಡಿಕೇರಿ, ಹಾಸನ ಮೊದಲಾದ ಜಿಲ್ಲೆಗಳ ಜನರೂ ಕೂಡಾ ಊರಿನವರೊಂದಿಗೆ ಬೆರೆತು ಬದುಕಿದ ದಿನಗಳವು. ಹಾಗೆಯೇ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನರು ಕೂಡಾ ಮಂಗಳೂರಿನ ಪೇಟೆಗೆ ಬರುವುದಕ್ಕೆ ಉತ್ಸುಕರೇ ಆಗಿರುತ್ತಿದ್ದರು. ಹೀಗೆ ಇಲ್ಲಿದ್ದ ನಿವಾಸಿಗಳ ಮಕ್ಕಳು ಉನ್ನತ ವಿದ್ಯಾಭ್ಯಾಸದ ಅವಕಾಶವನ್ನು ಪಡೆಯಲು ಅನುಕೂಲವಾಗಿತ್ತು ಈ ಪರಿಸರ.

ಉರ್ವಾಸ್ಟೋರ್ಸ್ ಒಂದು ಅರ್ಥದಲ್ಲಿ ಪರಿಪೂರ್ಣವಾದ ವ್ಯಾಪಾರ ವ್ಯವಹಾರಗಳಿಗೆ ಯೋಗ್ಯವಾದ ಸಣ್ಣ ಪಟ್ಟಣವೇ ಆಗಿತ್ತು. ಯಾವುದೇ ವಸ್ತುಗಳಾದರೂ ಇಲ್ಲಿ ದೊರೆಯುತ್ತಿತ್ತು. ಹೊಟೇಲು, ಜವಳಿ ಅಂಗಡಿ, ಜಿನಸಿನ ಅಂಗಡಿ, ತರಕಾರಿ, ಮೀನು ಮಾರ್ಕೆಟು, ಫ್ಯಾನ್ಸಿ ಅಂಗಡಿಗಳು, ಡಾಕ್ಟರರ ಕ್ಲಿನಿಕ್‍ಗಳು, ಮೆಡಿಕಲ್ ಶಾಪ್‍ಗಳು, ಅಂಚೆ ಕಛೇರಿ, ಟೈಪ್‍ರೈಟಿಂಗ್ ಸ್ಕೂಲ್, ಟೈಲರಿಂಗ್ ಸ್ಕೂಲ್, ಬ್ಯಾಂಕುಗಳು ಹೀಗೆ ‘ಏನು ಇಲ್ಲ’ ಎಂಬ ಮಾತಿಗೆ ಅವಕಾಶವಿಲ್ಲದೆ ಎಲ್ಲವೂ ದೊರೆಯುವ ಸ್ಥಳವಾಗಿತ್ತು. ಇದರ ಜೊತೆಗೆ 1970ರ ಸುಮಾರಿಗೆ ರೇಷನ್ ವ್ಯವಸ್ಥೆ ಜಾರಿಗೆ ಬಂತು. ಸರಕಾರಿ ವಸತಿ ಗೃಹಗಳ ನಿವಾಸಿಗಳು ಸಹಕಾರಿ ಪದ್ಧತಿಯಲ್ಲಿ ಅಂಗಡಿ ಪ್ರಾರಂಭಿಸಿದರು. ಅವರಿಗಲ್ಲದೆ ಊರಿನವರಿಗೂ ಅಲ್ಲಿ ರೇಷನ್ ಪಡೆದುಕೊಳ್ಳಲು ಅವಕಾಶ ಒದಗಿಸಲಾಯಿತು. ಇಲ್ಲಿ ಸಕ್ಕರೆ, ಗೋಧಿ, ಅಕ್ಕಿ, ಸೀಮೆಎಣ್ಣೆ ಪಡೆಯಲು ಯಾವುದೇ ಮುಜುಗರವಿಲ್ಲದೆ ಸರತಿ ಸಾಲಲ್ಲಿ ನಿಂತ ಅನುಭವ ಅಪೂರ್ವವಾದುದು. ಇಂಜಿನಿಯರುಗಳು, ಉಪನ್ಯಾಸಕರು, ಕಾರ್ಮಿಕರು, ನೌಕರರು, ಅಧಿಕಾರಿಗಳು, ಹೆಂಗಸರು, ಗಂಡಸರು ಎಂಬ ಭೇದವಿಲ್ಲದೆ ಸರತಿ ಸಾಲಲ್ಲಿ ನಿಂತು ತಮ್ಮ ಗೌರವ ಕಾಪಾಡಿಕೊಂಡಿದ್ದರು. ನಮ್ಮ ಅಪ್ಪನೂ ನಿವೃತ್ತಿಯ ಬಳಿಕ ಸರತಿ ಸಾಲಲ್ಲಿ ನಿಂತದ್ದು ಇದೆ. ನಮ್ಮ ಧನಿಮಾಯಿ, ಸಿಲೆಸ್ತಿನ್ ಮಾಯಿಯೂ ಸಾಲಲ್ಲಿ ನಿಂತವರೇ. ಅಂಗಡಿಯ ಉಸ್ತುವಾರಿಯನ್ನು ಸರಕಾರಿ ವಸತಿಗೃಹದ ನಿವಾಸಿಗಳು ನಿರ್ವಹಿಸುತ್ತಿದ್ದರು. ಬಹಳಷ್ಟು ವರ್ಷಗಳ ಕಾಲ ಇಲ್ಲಿ ನೌಕರರಾಗಿ ಕೆಲಸ ಮಾಡಿದ ರತ್ನಾಕರ ಹಾಗೂ ಶೆಟ್ಟರು ಎಲ್ಲರಿಗೂ ಪ್ರೀತಿಯವರಾಗಿದ್ದರು.

ನನ್ನ ಎರಡು ವರ್ಷಗಳ ಸ್ನಾತಕೋತ್ತರ ಪದವಿ, ಕನ್ನಡ ಎಂ.ಎ. ಕಲಿಕೆ ಮುಗಿಯಿತು. ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದೆ. ಜೊತೆಗೆ ಮದ್ರಾಸು ಹಿಂದಿ ಪ್ರಚಾರ ಸಭಾ ನಡೆಸುವ ರಾಷ್ಟ್ರ ಭಾಷಾ ಹಿಂದಿ ‘ಪ್ರವೀಣ’ ಪದವಿಯ ಪರೀಕ್ಷೆ ಮುಗಿದು ಅದನ್ನು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಳಾದೆ. ‘ಪ್ರವೀಣ’ ಪದವಿಯು ಸ್ನಾತಕೋತ್ತರ ಪದವಿಯೇ ಆಗಿದ್ದು ನಾನು ಎರಡು ಭಾಷೆಗಳಲ್ಲಿ ಉಪನ್ಯಾಸಕಳಾಗಲು ಅರ್ಹಳಾಗಿದ್ದೆ. ಈ ದಿನಗಳಲ್ಲಿ ಸರಕಾರಿ ವಸತಿಗೃಹಗಳಲ್ಲಿದ್ದ ಸರಕಾರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮಲ್ಲಪ್ಪ, ಕನ್ನಡ ಉಪನ್ಯಾಸಕರಾದ ರಂಗೇಗೌಡರು ಮತ್ತು  ಎಂ.ಎ. ಜಯಚಂದ್ರ, ಗಣಿತ ಪ್ರಾಧ್ಯಾಪಕರಾದ ಪ್ರೊ.ವಿಶ್ವನಾಥ್, ಸರಕಾರಿ ಶಿಕ್ಷಕ ಶಿಕ್ಷಣ ತರಬೇತಿ ಕಾಲೇಜಿನ ಉಪನ್ಯಾಸಕರಾದ ಅಚ್ಚಯ್ಯ ಹಾಗೂ ಅವರ ಪತ್ನಿ ಅಹಲ್ಯಾ ಇವರೆಲ್ಲರೂ ಪರಿಚಯವಾಗಿದ್ದರು. ಆತ್ಮೀಯರೂ ಆಗಿದ್ದರು. ಇವರೆಲ್ಲರಿಗೆ ನಳ್ಳಿ ನೀರಿನ ಅಭಾವವಾದರೆ ನಮ್ಮ ಧಣಿಗಳ ಮನೆಯ ಬಾವಿಗೆ, ಹಾಗೆಯೇ ನಮ್ಮ ಮನೆಯಂಗಳದ ಬಾವಿಗೆ ಬರುತ್ತಿದ್ದರು. ನಾನು ಉತ್ತೀರ್ಣಳಾದ ಸಂತೋಷವನ್ನು ನನ್ನ ನೆರೆಕರೆಯಲೆಲ್ಲಾ ಸಿಹಿ ಹಂಚಿಕೊಂಡಂತೆ ಈ ಎಲ್ಲಾ ಹಿರಿಯರನ್ನೂ ಭೇಟಿ ಮಾಡಿ ತಿಳಿಸಿದೆ. ಉರ್ವಾಸ್ಟೋರ್ಸ್ ನ ನನ್ನ ಪರಿಚಿತರೆಲ್ಲರೂ, ಅಪ್ಪನ ಬಳಗವೆಲ್ಲ ಸಂತೋಷಪಟ್ಟಿತು. ನನ್ನ ಧಣಿಮಾಯಿ ಹಾಗೂ ಡಾ. ಎಂ.ಡಿ. ಕಾಮತರಿಗೆ ಆದ ಸಂತೋಷವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾಕೆಂದರೆ ಅವರು ಮಾಡಿದ ಉಪಕಾರ ಸಾರ್ಥಕವಾಯಿತೆಂಬ ಭಾವನೆಗೆ ಮಿಗಿಲಾದ ಸಂತೋಷ ಯಾವುದಿದೆ?

ಇದೀಗ ಪತ್ರಿಕೆಗಳಲ್ಲಿ ಬರುವ ಜಾಹೀರಾತು ನೋಡಿ ಅರ್ಜಿ ಗುಜರಾಯಿಸುವ ಕೆಲಸ. ಹಾಗೆಯೇ ನನ್ನ ಹಿತೈಷಿಗಳಾದ ಉಪನ್ಯಾಸಕರ ಸಲಹೆಯಂತೆ ಕೆಲವು ಕಾಲೇಜುಗಳಿಗೆ ಸ್ವತಃ ಭೇಟಿ ಮಾಡಿ ಅರ್ಜಿ ಪತ್ರ ಕೊಡುವುದೂ ಆಯ್ತು. ಇಂತಹ ಅರ್ಜಿ ಪತ್ರ ಬರೆಯಲು ಇವರ ನೆರವು ಇಲ್ಲದೆ ಸಾಧ್ಯವಿರಲಿಲ್ಲ. ಆಗೆಲ್ಲಾ ಕಾಲೇಜುಗಳಲ್ಲಿ ಕನ್ನಡದಲ್ಲಿ ವ್ಯವಹಾರಗಳು ನಡೆಯುತ್ತಿರಲಿಲ್ಲ. ಹೀಗೆ ಅರ್ಜಿ ಹಾಕಿದ ಕಾಲೇಜುಗಳೆಷ್ಟೊ? ಹಾಗೆಯೇ ಸಂದರ್ಶನಕ್ಕೆ ಹೋದ ಕಾಲೇಜುಗಳೂ ಹಲವು. ಆಗೆಲ್ಲಾ ಮೀಸಲಾತಿ ಎನ್ನುವ ಕಾನೂನು ಇತ್ತು ಎನ್ನುವುದು ಈಗ ತಿಳಿದಿದೆ. ಆದರೆ ಅದು ಕಡ್ಡಾಯವಾಗಿ ಜಾರಿಯಲ್ಲಿ ಇರಲಿಲ್ಲ. ಕಾಲೇಜುಗಳ ಆಡಳಿತ ಮಂಡಳಿಯವರ ಅಪೇಕ್ಷೆಯಂತೆ ಅಥವಾ ಅವರ ಶಿಫಾರಸ್ಸಿನಂತೆ ನಡೆಯುತ್ತಿತ್ತು ಎನ್ನುವುದು ನನ್ನ ಅಂದಿನ ಅನುಭವ. ನನಗೆ ನನ್ನ ಅಪ್ಪನ ಶಿಫಾರಸಿಗಿಂತ ಬೇರೆ ಯಾರ ಶಿಫಾರಸು ಅಗತ್ಯವಿರಲಿಲ್ಲ. ಯಾಕೆಂದರೆ ಅಪ್ಪ ಎಲ್ಲರಿಗೂ ಒಂದಲ್ಲ ಒಂದು ಕಾರಣದಿಂದ ಪರಿಚಿತರೇ! ಇಂತಹ ದಿನಗಳಲ್ಲೇ ಮಂಗಳೂರಿನ ಗಣಪತಿ ಜೂನಿಯರ್ ಕಾಲೇಜಿಗೆ ಹೋಗಿ ಅರ್ಜಿ ಪತ್ರವೊಂದನ್ನು ಅಪ್ಪನ ಜೊತೆಗೆ ಹೋಗಿ ಕೊಟ್ಟು ಬಂದೆ. ಅದು ಚಿತ್ರಾಪುರ ಸಾರಸ್ವತರು ನಡೆಸುತ್ತಿದ್ದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿತ್ತು. 1870ರ ಕಾಲದಲ್ಲೇ ಎಲ್ಲಾ ಜಾತಿ ಧರ್ಮದವರಿಗಾಗಿ ಶಾಲೆ ಪ್ರಾರಂಭಿಸಿದ ಕೀರ್ತಿ ಇದ್ದು ಗಣಪತಿ ಹೈಸ್ಕೂಲಿಗೆ ಒಳ್ಳೆಯ ಹೆಸರು ಇತ್ತು. ಆ ಸಂಸ್ಥೆಗೆ ಸಂಬಂಧಿಸಿದಂತೆ ಎಲ್ಲೂರು ಉಮೇಶರಾಯರು, ಮುಖ್ಯೋಪಾಧ್ಯಾಯರಾಗಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೊಡಿಯಾಲ್ ಶಂಕರರಾಯರು, ರಂಗಭೂಮಿ, ರಂಗಪ್ರಸಾಧನ ಖ್ಯಾತಿಯ ಗುಲ್ವಾಡಿ ಗೋಪಿನಾಥ ಭಟ್, ಬಾಲ ಸಾಹಿತ್ಯ ಮಂಡಳಿಯ ಸುಮಿತ್ರ ಭಟ್ ಹೀಗೆ ಎಲ್ಲರೂ ಅಪ್ಪನಿಗೆ ಪರಿಚಿತರು. ಆದರೆ ಅಪ್ಪ ಬಹಳ ಸ್ವಾಭಿಮಾನಿ, ಯಾರಲ್ಲೂ ‘ನನ್ನ ಮಗಳಿಗೆ ಕೆಲಸ ಕೊಡಿ’ ಎಂದು ಬೇಡುವವರಲ್ಲ! ಆದರೆ ಅಮ್ಮನ ಒತ್ತಾಯಕ್ಕೆ ಅರ್ಜಿ ಪತ್ರ ಕೊಡಲು ನನ್ನ ಜೊತೆ ಬಂದಿದ್ದರು. ಶಂಕರರಾಯರನ್ನು ಮುಖ್ಯೋಪಾಧ್ಯಾಯರ ಕಛೇರಿಯಲ್ಲಿ ಭೇಟಿ ಮಾಡಿದೆವು. ಕಾಲೇಜು ವಿಭಾಗ ಪ್ರತ್ಯೇಕವಾಗಿದ್ದು ಅಲ್ಲಿ ಅರ್ಜಿ ಪತ್ರ ಕೊಡಲು ತಿಳಿಸಿದರು. ಕಾಲೇಜಿನಲ್ಲಿ ಪ್ರಾಂಶುಪಾಲರು ಇನ್ನೂ ನೇಮಕವಾಗಿಲ್ಲ. ಕಛೇರಿಯಲ್ಲಿ ಕ್ಲಾರ್ಕ್ ಇದ್ದಾರೆ ಎಂದು ತಿಳಿದು ನಾನು ಅರ್ಜಿ ಪತ್ರ ಕೊಡಲು ಹೋದೆ. ಅಪ್ಪ ಶಂಕರ ರಾಯರಲ್ಲಿ ಲೋಕಾಭಿರಾಮ ಮಾತನಾಡಿಕೊಂಡಿದ್ದರು. ಆಗ ಕಛೇರಿಯಲ್ಲಿ ಕ್ಲಾರ್ಕ್ ಆಗಿದ್ದವರು ದೇವದಾಸ್ ರಾವ್ ಎನ್ನುವವರು. ಕಛೇರಿಯ ಒಳಗೆ ಹೋಗಿ ಕೊಡುವ ವ್ಯವಸ್ಥೆ ಇರಲಿಲ್ಲ. ಅವರು ಕುಳಿತಿರುವಲ್ಲಿ ಕಿಟಕಿಯಿತ್ತು. ಅಲ್ಲಿ ಹೋಗಿ ಅವರನ್ನು ಮಾತನಾಡಿಸುವಷ್ಟರಲ್ಲಿ ಅವರು ನನಗೆ ಒಂದು ಫಾರ್ಮ್ ತೆಗೆದುಕೊಟ್ಟರು. ಐದು ರೂಪಾಯಿ ಎಂದರು. ನಾನು ಆ ಫಾರ್ಮ್ ನೋಡಿದರೆ ಅದು ಪಿಯುಸಿಗೆ ಸೇರಲು ತುಂಬಬೇಕಾದ ಪ್ರವೇಶಪತ್ರ. ನಾನು ಉಪನ್ಯಾಸಕ ಹುದ್ದೆಗೆ ಅರ್ಜಿ ಕೊಡಲು ಬಂದಿದ್ದೇನೆ ಎಂದು ಹೇಳಿದಾಗ ಕ್ಷಮೆ ಕೇಳಿ ನನ್ನ ಅರ್ಜಿಪತ್ರವನ್ನು ಸಂಚಾಲಕರಾದ ಸುಮಿತ್ರ ಭಟ್‍ ರಿಗೆ ನೀಡುತ್ತೇನೆ ಎಂದು ತಿಳಿಸಿ ಮತ್ತೊಮ್ಮೆ ಕ್ಷಮಾಪಣೆ ಕೇಳಿದರು. ನನ್ನ ಶರೀರ ಉಪನ್ಯಾಸಕಳಾಗಲು ಸಮರ್ಥವಲ್ಲ ಎಂಬ ಅಭಿಪ್ರಾಯವಂತೂ ಸಿಕ್ಕಿತಲ್ಲಾ. ತಮಾಷೆ ಎನ್ನಿಸಿದರೂ ಹುಡುಗರ ಕಾಲೇಜು, ಕೆಲಸ ಸಿಕ್ಕುವ ಬಗ್ಗೆ ವಿಶ್ವಾಸವೂ ಹೊರಟುಹೋಯಿತು.

ಆದರೆ ಅರ್ಜಿಪತ್ರದ ವಿಳಾಸ ನೋಡಿಕೊಂಡು ಪ್ರಾಂಶುಪಾಲರಾಗಿ ನೇಮಕಗೊಂಡ ಪಿ. ರಾಜಾರಾಮರಾಯರು ಒಂದು ಮಧ್ಯಾಹ್ನದ ವೇಳೆ ನಮ್ಮ ಮನೆಗೆ ಬಂದು ಕೆಲಸಕ್ಕೆ ಸೇರಿಕೊಳ್ಳುವಂತೆ ಸಂಚಾಲಕರು ತಿಳಿಸಿದ್ದಾರೆ ಎಂದರು. ರಾಜಾರಾಮರಾಯರು ಕೂಡಾ ಅಪ್ಪನ ಸ್ನೇಹಿತರೇ ಆಗಿದ್ದುದು, ನನ್ನ ಸೋದರಮಾವನ ಸಹಪಾಠಿಯಾಗಿದ್ದುದು ಕೂಡಾ ನೆರವಿಗೆ ಬಂತು. ಹೀಗೆ ಯಾವುದೇ ಸಂದರ್ಶನದ ಅಗತ್ಯವಿಲ್ಲದೆ ನಾನು ಉಪನ್ಯಾಸಕಿ ಹುದ್ದೆಗೆ ಸೇರಿಕೊಂಡೆ. ಕನ್ನಡ ಪಂಡಿತರ ಮಗಳು ಕನ್ನಡ ಉಪನ್ಯಾಸಕಿಯಾಗಿರುವುದೇ ನನ್ನ ಯೋಗ್ಯತೆ ಆಗಿತ್ತು. ಜೊತೆಗೆ ಅರ್ಹತೆಯೂ ಇತ್ತು ಎನ್ನುವ ಹೆಮ್ಮೆ ನನ್ನದು. ಹೀಗೆ ಅನಾಯಾಸವಾಗಿ ಕೆಲಸ ದೊರೆತ ಆ ಕಾಲ ಭ್ರಷ್ಟಾಚಾರದ ಕಾಲ ಅಲ್ಲ. ಲಂಚದ ಕಾಲ ಅಲ್ಲ ಎಂದ ಮೇಲೆ ಆ ಕಾಲದ ಜನ ಯೋಗ್ಯರೇ ಸರಿ!

(ನನ್ನೂರು-ನನ್ನ ಜನ ಕೃತಿಯಿಂದ ಆಯ್ದ ಭಾಗ)