ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೫)

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೫)

ಹೊಸ ಸಂಸಾರದ ಸುತ್ತ ಮುತ್ತ

ಈಗ ನಾನು ಕೋಟೆಕಾರಿನ ಸೋವೂರಿನ ಸೊಸೆಯಾಗಿ ಬಂದರೂ, ಪೇಟೆಯಲ್ಲಿ ಹುಟ್ಟಿ ಬೆಳೆದ ನನಗಾಗಿ ಹಳ್ಳಿಯ ಹುಲ್ಲಿನ ಮನೆ, ‘ಕೈಸಾಂಗ್’ ಇಲ್ಲದೆ ತೋಡು ದಾಟಬೇಕಾದ ಸ್ಥಿತಿ, ವಿದ್ಯುತ್ ಇಲ್ಲ, ಅಲ್ಲದೆ ಸ್ವಂತದ್ದಲ್ಲದ ಮನೆ ಹೀಗೆ ಅನೇಕ ಕಾರಣಗಳಿಂದ ನೆರವಿತ್ತ ನಾಯಕರ ಮನೆಯನ್ನು ಬಿಡುವ ನಿರ್ಧಾರ ಆಗಿತ್ತು. ಆದ್ದರಿಂದ ಕೋಟೆಕಾರು ಬಾಂಬೆ ಸಾ ಮಿಲ್ಲಿನ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿದ ಕಾಳಿಕಾಂಬಾ ದೇವಸ್ಥಾನ, ಆ ಸ್ಥಳಕ್ಕೆ ನೆಲ್ಲಿಸ್ಥಳ ಎಂಬ ಹೆಸರೂ ಬಂದು, ದೇವಸ್ಥಾನಕ್ಕೆ ಸೇರಿದ ಸಾಲು ಮನೆಗಳಲ್ಲಿ ಒಂದನ್ನು ಬಾಡಿಗೆಗೆ ಪಡೆದಿದ್ದರು. ಮದುಮಗಳಾಗಿಯೇ ಆ ಮನೆಗೆ ಪ್ರವೇಶ ಮಾಡಬೇಕಾಗಿದ್ದವಳು ಸೋವೂರಿನ ಹುಲ್ಲಿನ ಮನೆಗೆ ಕಷ್ಟಪಟ್ಟು ತೋಡು ದಾಟಿ ಪ್ರವೇಶ ಮಾಡಿದ್ದೆ. ಆ ದಿನಗಳಲ್ಲಿ ದೇವಸ್ಥಾನದ ಈ ಮನೆಗಳಲ್ಲಿ ಬ್ರಹ್ಮಕಲಶದ ಹಿನ್ನೆಲೆಯಲ್ಲಿ ಅತಿಥಿಗಳು ತಂಗಿದ್ದರು. ಸೋವೂರಿನ ಮನೆಯ ಧಣಿಗಳಾದ ನಾಯಕರ ಮನೆಗೆ ಮದು ಮಕ್ಕಳು ಹೋಗಿ ಬನ್ನಿ ಎಂದು ಹಿರಿಯರ ಆದೇಶ. ಈ ನಾಯಕರೂ ನನ್ನ ಅಪ್ಪನಿಗೆ ಚಿರಪರಿಚತರೇ. ಕೋಟೆಕಾರು ಬೀದಿಯಲ್ಲಿ ಅವರಿಗೆ ಜಿನಸಿನ ಅಂಗಡಿಯಿತ್ತು. ಬೀರಿಯಿಂದ ಕೊಂಡಾಣದ ಮನೆಗೆ ಹೋಗುವಾಗ ಮಾತನಾಡಿಸುತ್ತಿದ್ದ ಅಂಗಡಿಯಲ್ಲಿ ಇದೂ ಒಂದು. ಆದ್ದರಿಂದ ನಾನು ಇಲ್ಲಿಯೂ ಕೊಂಡಾಣ ವಾಮನ ಮಾಸ್ಟ್ರ ಮಗಳೇ. ಜೊತೆಗೆ ಅವರ ಮನೆಯ ಇಬ್ಬರು ಮಕ್ಕಳು ಈಗಾಗಲೇ ನನ್ನ ವಿದ್ಯಾರ್ಥಿಗಳು. ಅಲ್ಲದೆ ಕಾಲೇಜಿನ ಇನ್ನೊಬ್ಬಳು ಹುಡುಗಿಗೆ ನನ್ನವರು ಕಷ್ಟದ ಪಠ್ಯಗಳಿಗೆ ಪಾಠ ಮಾಡುತ್ತಿದ್ದರಂತೆ. ಹೀಗೆ ಅವರಿಗೆ ನಮ್ಮಿಬ್ಬರ ಬಗ್ಗೆ ಗೌರವ ಇದ್ದುದೇ ಆಗಿತ್ತು. ಆದರೆ ನನ್ನ ಮಾವ ದಿಕ್ಕಿಲ್ಲದೆ ಆ ಊರಿಗೆ ಬಂದಾಗ ನೆರವು ನೀಡಿದ ಧಣಿಗಳು ಅವರು.

ಅವರ ಮನೆಯ ಕೃಷಿಗಳಿಗೆ ಕರೆದಾಗ ಹೋಗುವವರು ಅತ್ತೆ, ಅತ್ತಿಗೆ, ನಾದಿನಿಯರು. ಅವರ ಮನೆಗೆ ಹೋಗಬೇಕಾದ ಸಂದರ್ಭ ಇದ್ದಲ್ಲಿ ಜಗಲಿಯಲ್ಲಿ ಕುಳಿತು ಬಂದಿರಬಹುದೇ ಹೊರತು ಒಳಗೆ ಚಾವಡಿಗೆ ಹೋಗಿ ಕುರ್ಚಿಯಲ್ಲಿ ಕುಳಿತವರಲ್ಲ. ಈ ಹಿನ್ನೆಲೆಯಲ್ಲಿ ನನ್ನ ದೊಡ್ಡ ಅತ್ತಿಗೆ ಅವರಲ್ಲಿಗೆ ಹೊರಟಾಗ ಕಿವಿಮಾತು ಹೇಳಿದರು. ಆದರೆ ನನಗೆ ನನ್ನ ತಂದೆಯ ಕಾರಣದಿಂದ ಗಳಿಸಿದ ಗೌರವದ ಕಲ್ಪನೆ ಈ ಮೊದಲೇ ಇತ್ತಲ್ಲವೆ? ಹಾಗೆ ಅವರು ಒಳಗೆ ಕರೆಯುವುದಿಲ್ಲವೆಂದಾದರೆ ನಾನಂತೂ ಹೋಗಲಾರೆ ಎಂದು ಖಡಾಖಂಡಿತವಾಗಿ ಹೇಳಿದೆ. ಅಂತೂ ಪರಿಸ್ಥಿತಿಯನ್ನು ನಿಭಾಯಿಸು ಎಂದು ಅವರು ಎಚ್ಚರಿಕೆ ನೀಡಿದ್ದರು. ಆದರೆ ಹಾಗೇನೂ ಆಗಲಿಲ್ಲ. ಮನೆಯ ಹೆಂಗಸರು ಮಕ್ಕಳಿಗೆಲ್ಲ ನನ್ನನ್ನು ನೋಡಲು ಕುತೂಹಲ. ನನ್ನವರ ಮನೆಯ ಹಿನ್ನೆಲೆ ಏನೇ ಇದ್ದರೂ ಅವರ ಕಣ್ಣೆದುರೇ ಶಾಲೆಕಾಲೇಜಿಗೆ ಹೋಗಿ ಅಧ್ಯಾಪಕನಾದ ಬಗ್ಗೆ ಅವರಿಗೂ ಸಂತೋಷ ಇದ್ದಿರಬಹುದಲ್ಲವೇ? ಖಂಡಿತಾ ಇತ್ತು. ನಮ್ಮನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಸತ್ಕರಿಸಿದರು. ಹಿಂದಿರುಗಿ ಬಂದಾಗ ನನ್ನ ಅತ್ತಿಗೆ ನಾದಿನಿಯರಿಗೆ ಕುತೂಹಲ. ವಿಷಯ ತಿಳಿಸಿದಾಗ ಆಶ್ಚರ್ಯವೂ ಆಯಿತು. ಇದೀಗ ಅವರ ಗೌರವದ ಒಂದು ತೂಕ ಹೆಚ್ಚಾದುದು ನಿಜವೇ. ಜೊತೆಗೆ ಧಣಿ ಒಕ್ಕಲಲ್ಲಿ ಒಂದು ಅಸಮಾಧಾನದ ವಿಷಯವೂ ಇತ್ತು. ಅದು ‘ಉಳುವವನೇ ಹೊಲದೊಡೆಯ’ ಎಂಬ ಭೂಸುಧಾರಣೆಯ ಜೊತೆಗೆ ಹಳ್ಳಿಯಲ್ಲಿ ಗೇಣಿಗೆ ಇದ್ದ ಜಾಗಕ್ಕೆ ಸ್ವಂತ ಮನೆ ಇಲ್ಲದವರು ‘ಡಿಕ್ಲರೇಷನ್’ ಕೊಡಬಹುದಾದ ಕಾನೂನು ಜಾರಿಗೆ ಬಂದಿತ್ತು. ಹಾಗೆ ಇವರು ಇದ್ದ ಮನೆ ಜಾಗಕ್ಕೆ ಡಿಕ್ಲರೇಷನ್ ಕೊಟ್ಟಿದ್ದರು. ಪೇಟೆಯಲ್ಲೂ ಈ ಕಾನೂನು ಸ್ವಲ್ಪ ಭಿನ್ನ ರೀತಿಯಲ್ಲಿ ಜಾರಿಯಲ್ಲಿತ್ತು. ಪೇಟೆಯಲ್ಲಿ ತಾವೇ ಕಟ್ಟಿಸಿದ ಮನೆಗಳನ್ನು ತಿಂಗಳ ಬಾಡಿಗೆ ಲೆಕ್ಕದಲ್ಲಿ ಕೊಡುತ್ತಿದ್ದರು. ಅಂತಹ ಬಾಡಿಗೆದಾರರನ್ನು ಎಬ್ಬಿಸುವಂತಿರಲಿಲ್ಲ. ಕೋರ್ಟ್ ಗೆ ಹೋದರೆ ಬಾಡಿಗೆದಾರರಿಗೆ ಮನೆ ಸಿಗುತ್ತಿತ್ತು. ನ್ಯಾಯ ತೀರ್ಪಿನಲ್ಲಿ. ಇದರಿಂದ ಬಾಡಿಗೆಯ ದುಡ್ಡಿನಿಂದಲೇ ಬದುಕುವ ಕೆಲವರಿಗೆ ತೊಂದರೆಯಾದುದನ್ನು ನೋಡಿದ್ದೇನೆ. ಕಾಪಿಕಾಡಿನಲ್ಲಿ ನಾವು ಫೆರ್ನಾಂಡಿಸ್‍ರ ಮನೆ ಬಿಡಬೇಕಾದಾಗ ಕೋರ್ಟ್ ಗೆ ಹೋಗಿ ಅಂದವರೂ ಇದ್ದರು. ಇಲ್ಲ ರಾಜಿಯಲ್ಲಿ ಧಣಿಗಳಿಂದ ಹಣವನ್ನಾದರೂ ಪಡಕೊಳ್ಳಿ ಎಂದವರೂ ಇದ್ದರು. ಈ ಬಗ್ಗೆ ಮನೆಯಲ್ಲಿ ಆಡಿಕೊಳ್ಳುತ್ತಿದ್ದ ಮಾತುಗಳು ಕಿವಿಗಳಿಗೆ ಬೀಳುತ್ತಿತ್ತಲ್ಲವೆ? ಆದರೆ ನನ್ನ ಅಪ್ಪ ಅಮ್ಮ ಇನ್ನೊಬ್ಬರ ಆಸ್ತಿಗೆ, ಹಣಕ್ಕೆ ಯಾವಾಗಲೂ ಆಸೆ ಪಡಬಾರದು ಎಂದೇ ಹೇಳುತ್ತಿದ್ದರು. ಅದರಂತೆ ಅವರು ಕೋರ್ಟ್ ಗೆ ಹೋದುದು ಇಲ್ಲ. ಎಷ್ಟು ಬಾಡಿಗೆ ಮನೆ ಬದಲಾಯಿಸಿದರೂ ಧಣಿಗಳಿಂದ ದುಡ್ಡು ಬೇಡಿದವರಲ್ಲ, ಪಡೆದವರೂ ಅಲ್ಲ. ನನ್ನ ಮಾವನೂ ಹೀಗೆ ನಾಯಕರ ಜಾಗಕ್ಕೆ ಡಿಕ್ಲರೇಷನ್ ಕೊಟ್ಟಿದ್ದರಲ್ಲಾ? ನಾವು ಅಲ್ಲಿಂದ ಬೇರೆ ಮನೆ ಮಾಡಿ ಕೋಟೆಕಾರಲ್ಲೇ ಇರುವಾಗ ಈ ಬಗ್ಗೆ ‘ಲೋಕ ಅದಾಲತ್’ಗೆ ಕರೆ ಬಂದಾಗ ನನಗೆ ವಿಷಯ ತಿಳಿಯಿತು. ನಾನು ನನ್ನವರಲ್ಲಿ ಖಡಾಖಂಡಿತವಾಗಿ ಹೇಳಿಬಿಟ್ಟೆ. ಅಗತ್ಯಕ್ಕೆ ನೆರವಾದವರಿಗೆ ಈ ರೀತಿ ನಾವು ತೊಂದರೆ ಕೊಡುವುದು ಕಾನೂನು ಸರಿ ಎಂದು ಹೇಳಿದರೂ ಇದು ನ್ಯಾಯವಲ್ಲ. ನಮ್ಮದಲ್ಲದ ವಸ್ತುವಿಗೆ ಆಸೆ ಪಡಬಾರದು ಎನ್ನುವುದು ನನ್ನ ತಿಳುವಳಿಕೆ. ಈ ಹಿನ್ನೆಲೆಯಲ್ಲಿ ನಮ್ಮವರೂ ಮಾವನಿಗೆ “ನೀವೀಗ ನಮ್ಮ ಜೊತೆಯಲ್ಲಿರುವುದಲ್ವಾ? ನಿಮಗೆ ಯಾಕೆ ಜಾಗ? ಆದ್ದರಿಂದ ಬೇಡವೆಂದು ಸಹಿ ಹಾಕಿ ಬನ್ನಿ” ಎಂದು ಹೇಳಿದರು. ಜೊತೆಗೆ ನಾನು ಬರುವುದಿಲ್ಲ ಎಂದೂ ತಿಳಿಸಿದರು. ಮಾವನಿಗೆ ಒಳಗಿನಿಂದ ಸಣ್ಣ ಆಸೆ. ಕಾನೂನು ಪ್ರಕಾರ ಸಿಕ್ಕಿದರೆ ಸಿಗಲಿ ಎಂದು. ಆದರೆ ಅಲ್ಲಿ ಮಾತುಕತೆಯಾದಾಗ ಕಾನೂನು ಪಾಲಕರಿಗೆ ಧಣಿಗಳಾದ ನಾಯಕರು ಹೇಳಿದರಂತೆ “ಅವರ ಮಗ ಸೊಸೆ ಇಬ್ಬರೂ ಅಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಅಲ್ಲದೆ ತಿಂಗಳಿಗೆ 150 ರೂಪಾಯಿ ಬಾಡಿಗೆ ಕೊಟ್ಟು ದೊಡ್ಡ ಮನೆಯಲ್ಲಿದ್ದಾರೆ” ಎಂದು. ಅದುವರೆಗೆ ಮಾವನಿಗೆ ನಾವು ಎಷ್ಟು ಬಾಡಿಗೆ ಕೊಡುತ್ತಿದ್ದೇವೆ ಎಂದು ತಿಳಿದಿರಲಿಲ್ಲ. ಈ ಕಾರಣದಿಂದ ಮಾವನಿಗೆ ಜಾಗ ಸಿಕ್ಕಿರಲಿಲ್ಲ. ಸಿಗುವ ಅಗತ್ಯವೂ ಇರಲಿಲ್ಲ. ಯಾಕೆಂದರೆ ಅತ್ತೆ, ಮಾವ ಮದುವೆಯಾಗದ ನಾದಿನಿ ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದರಲ್ಲವೇ? ಆದರೆ ಮಾವನ ದೃಷ್ಟಿಯಲ್ಲಿ ಈಗ ಮಗ ಸೊಸೆ ಬಹಳ ಶ್ರೀಮಂತರು ಎಂಬ ಕಲ್ಪನೆ ಬಂದು ನಿಂತುಬಿಟ್ಟಿತು. ತುಂಬಾ ಸಂತೋಷದಲ್ಲಿದ್ದರೂ ಆ ಕಡೆ ಈ ಕಡೆ ಓಡಾಡಿಕೊಂಡು ಬಂದು ಅಲ್ಲೊಂದು ಜಾಗವಿದೆಯಂತೆ, ಇಲ್ಲೊಂದು ಜಾಗವಿದೆಯಂತೆ, ಖರೀದಿಸ ಬಹುದಿತ್ತು ಎನ್ನುವ ಮಾತು ಸಹಾ ಹೇಳುತ್ತಲೇ ಇರುತ್ತಿದ್ದರು. ಇದನ್ನೂ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡಬಹುದಿತ್ತು. ಆದರೆ ಊರಿನ ಮಂದಿ ನಿಮಗೆ ಮನೆ ಹಿತ್ತಲು ಬೇಕಂತೆ ಹೌದಾ? ಎಂದು ಕೇಳಿದರೆ ಏನು ಹೇಳುವುದು? ಅವರಿಗೋ ವಯಸ್ಸಿನ ಆಸೆ. ನಮಗೋ ಕೈಯಲ್ಲಿ ಕಾಸಿಲ್ಲದೆ ಪರದಾಡುವ ಸ್ಥಿತಿ. ತಿಂಗಳ ಬಾಡಿಗೆ ಕೊಡಲು ನಾವು ಕಷ್ಟಪಡುತ್ತಿದ್ದುದು ನನಗೆ ಗೊತ್ತು ಎಂದರೆ ಹೆಚ್ಚು ಸರಿ. ಯಾಕೆಂದರೆ ಮನೆ ನಡೆಸುವವಳು ಹೆಣ್ಣು ತಾನೇ?

ಕಾಳಿಕಾಂಬಾ ದೇವಸ್ಥಾನದ ನೆಲ್ಲಿಸ್ಥಳದ ಆವರಣದಲ್ಲಿದ್ದ ಸಾಲಿನ ಒಂದು ಮನೆ ನನ್ನ ಮನೆಯಾಯಿತು. ಅಡುಗೆ ಕೋಣೆ, ನಡುವಿನ ಕೋಣೆ, ಹೊರಚಾವಡಿಯ ಸಣ್ಣ ಮನೆ. ಅತ್ತೆ, ಮಾವ, ನಾದಿನಿಯರಲ್ಲದೆ ಶಾಲೆಗೆ ಹೋಗುತ್ತಿದ್ದ ಸೋದರಳಿಯ, ಸೋದರ ಸೊಸೆ. ಇಷ್ಟು ಮಂದಿಯನ್ನು ಈ ಮನೆ ಹೇಗೆ ಬಚ್ಚಿಟ್ಟುಕೊಳ್ಳಲು ಸಾಧ್ಯ? ಹೊಸ ಬಾಡಿಗೆ ಮನೆ ಮಾಡಿದ್ದೇನೆ ಎನ್ನುವ ನನ್ನವರ ಸಂತೋಷ ನನ್ನ ಕಾರಣದಿಂದ ಎರಡೇ ತಿಂಗಳಿಗೆ ದೂರವಾಯಿತು. ಬೇಗನೇ ಹತ್ತಿರದಲ್ಲಿ ಎಲ್ಲಾದರೂ ದೊಡ್ಡ ಮನೆ ಹುಡುಕಲು ಮಾವನಿಗೆ ಹೇಳಿದ್ದಾಯ್ತು. ನೆಲ್ಲಿಸ್ಥಳ ದಾಟಿ ಪೂರ್ವಕ್ಕೆ ಈ ಜಾಗಕ್ಕೆ ತಾಗಿಕೊಂಡಂತೆಯೇ ಇದ್ದ ಮನೆಯೊಂದು ಇದೆ. ಆದರೆ ಅದು ಸಾಹೇಬರ ಮನೆ. ಎದುರಲ್ಲಿಯೂ ಸಾಹೇಬರ ಮನೆ ಇದೆ ಎಂದು ಮಾವ ಬಂದು ತಿಳಿಸಿದಾಗ, ಮನೆಗೂ ಧರ್ಮಕ್ಕೂ ಸಂಬಂಧವಿಲ್ಲ ಎನ್ನುವ ನನ್ನ ತಿಳುವಳಿಕೆಯ ಜೊತೆಗೆ ಈ ಚಿಕ್ಕ ಮನೆಯ ಅಸಹನೀಯವಾದ ಎರಡು ತಿಂಗಳ ನರಕವಾಸಕ್ಕೆ ಕೊನೆ ಬೇಕಾಗಿತ್ತು ನನಗೆ. ರೂ. 150 ತಿಂಗಳ ಬಾಡಿಗೆ ಹೆಚ್ಚಾಯಿತು ಅನ್ನಿಸಿದರೂ ನಾವಿಬ್ಬರೂ ಸಾಹೇಬರ ಮನೆಗೆ ಹೋಗಿ ಮಾತನಾಡಲು ನಿರ್ಧರಿಸಿದೆವು. ಹೀಗೆ ನಾನು ವೈಯಕ್ತಿಕವಾಗಿ ಹುಟ್ಟಿನಿಂದ ಏಳು ಮನೆಗಳನ್ನು ದಾಟಿ ಎಂಟನೆಯ ಮನೆಗೆ ಬಂದ ಹಾಗಾಯ್ತು. ನೆಲ್ಲಿಸ್ಥಳದಲ್ಲಿ ಇದ್ದ ಮನೆಯಲ್ಲಿದ್ದುದು ಎರಡೇ ತಿಂಗಳಾದರೂ ಪಕ್ಕದ ಮನೆಯವರು ದೇವಸ್ಥಾನದ ಹಾಗೂ ಈ ಸಾಲು ಮನೆಗಳ ಉಸ್ತುವಾರಿ ನೋಡುತ್ತಿದ್ದವರು ಆತ್ಮೀಯರಾಗಿದ್ದೆವು. ಈ ಮನೆಯ ಧಣಿಗಳು ಮಂಗಳೂರಲ್ಲಿ ಕಾಳಿಕಾಂಬಾ ದೇವಸ್ಥಾನದ ಬಳಿಯಲ್ಲಿ ಜ್ಯುವೆಲ್ಲರ್ ಆಗಿದ್ದರು. ಅವರ ಮಗನೂ ನನ್ನ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ. ಪಕ್ಕದ ಮನೆಯ ಯಜಮಾನರೂ ಮಂಗಳೂರಿಗೆ ಅವರ ಜ್ಯುವೆಲ್ಲರಿಗೆ ಕೆಲಸಕ್ಕೆ ಬರುತ್ತಿದ್ದರು. ಅವರ ಮಡದಿ ಮೀರಕ್ಕ ಮತ್ತು ಅವರ ಚಿಕ್ಕ ಮಕ್ಕಳು ನಮಗೆ ಆತ್ಮೀಯರಾಗಿದ್ದರು. ಮುಂದೆ ಮನೆ ಬದಲಾದರೂ ಈ ಮನೆಯ ಎದುರಲ್ಲೇ ಓಡಾಡಬೇಕಾದುದರಿಂದ ಅಲ್ಲಿರುವಷ್ಟು ದಿನವೂ ಪ್ರೀತಿ ವಿಶ್ವಾಸಗಳಿಂದ ಇದ್ದುದನ್ನು ಮರೆಯಲಾರೆ. ಹಾಗೆಯೇ ದೇವಸ್ಥಾನದ ಬಳಿಯಲ್ಲೇ ಇದ್ದ ಮನೆಯ ಅಜ್ಜಮ್ಮ ಹಾಗೂ ಅವರ ಮಗಳು ಇಬ್ಬರೂ ಆ ದಾರಿಯಲ್ಲಿ ಬರುವಾಗ ಕರೆದು ಮಾತಾಡಿಸುತ್ತಿದ್ದರು. ಆ ಪರಿಸರದಲ್ಲಿ ಗಂಡ ಹೆಂಡತಿ ಹೀಗೆ ಇಬ್ಬರೂ ಜೊತೆಯಲ್ಲಿ ಕೆಲಸಕ್ಕೆ ಹೋಗುವುದು ಒಂದು ಹೊಸ ಪದ್ಧತಿಯಾಗಿ ನಾವು ಅವರಿಗೆ ಗೋಚರಿಸಿದ್ದುದೂ ಸತ್ಯ. ಈಗ ನಾವು ನೋಡಿದ ಮನೆ ಬಹಳ ದೊಡ್ಡದಾದುರಿಂದ ಅದನ್ನು ಎರಡು ಮನೆಯಾಗಿ ನೀಡುವ ಮನೆಯ ಧಣಿಗಳ ಅಭಿಪ್ರಾಯಕ್ಕೆ ಒಪ್ಪಿದೆವು. ನಮಗೋ ವಿಶಾಲವಾದ ಚಾವಡಿ, ಅದರ ಎರಡೂ ಬದಿಗಳಲ್ಲೂ ಒಳಬದಿಗೆ ಉದ್ದನೆಯ ಎರಡೂ ಕೋಣೆಗಳು, ನಡುವಿನ ಕೋಣೆ ಅದರ ಒಂದು ಬದಿಯಲ್ಲಿ ಅಡುಗೆ ಕೋಣೆ, ಪ್ರತ್ಯೇಕವಾದ ಬಚ್ಚಲು ಹಾಗೂ ಶೌಚಾಲಯಗಳಿದ್ದವು. ವಿಶಾಲವಾದ ಅಂಗಳದಲ್ಲಿ ಪುಟ್ಟ ಬಾವಿ. ಬಾವಿಯಲ್ಲಿ ಮೇಲಕ್ಕೆ ಇದ್ದ ನೀರು. ಮಳೆಗಾಲದಲ್ಲಂತೂ ಕೊಡ ಮುಳುಗಿಸಿ ನೀರು ತೆಗೆಯಬಹುದು ಎನ್ನುವಂತಹ ಬಾವಿ. ಬಾವಿಯ ಪಕ್ಕದಲ್ಲೇ ಚಕ್ಕೋತ ಮರ. ಅಂಗಳದ ನಡುವಲ್ಲಿ ತುಳಸಿಕಟ್ಟೆ. ಸಾಹೇಬರ ಮನೆಯಾದರೂ ತುಳಸಿಕಟ್ಟೆ ಇರಬಾರದು ಎಂಬ ನಿಯಮ ಇರಲಿಲ್ಲ.  ನಾವು ಹಿಂದೆ ಇದ್ದ ಬಿಜೈ ಕಾಪಿಕಾಡಿನ ಉರ್ವಾಸ್ಟೋರ್ ನ ಕ್ರಿಶ್ಚಿಯನ್ ಧಣಿಗಳ ಮನೆಯಲ್ಲೂ ತುಳಸಿ ಕಟ್ಟೆಗೆ ಅಡ್ಡಿ ಇರಲಿಲ್ಲ. ಸಾಹೇಬರ ಈ ಮನೆಯಲ್ಲಿಯೂ ಹಿಂದೆ ಇದ್ದವರು ಹಿಂದೂಗಳೇ ಇದ್ದಿರಬೇಕು. ಮನೆ ಬಿಟ್ಟು ಹೋಗು ವಾಗ ತುಳಸಿ ಕಟ್ಟೆ ಕೆಡವಬಾರದು ಎಂಬ ನಂಬಿಕೆ. ಅಂದ ಹಾಗೆ ನೆಲ್ಲಿಸ್ಥಳದ ಈ ಹಿಂದಿನ ಮನೆಯಲ್ಲೂ ಎಲ್ಲರಿಗೂ ಎಂಬಂತೆ ದೊಡ್ಡ ತುಳಸಿಕಟ್ಟೆ ಇತ್ತು. ಜಾತಿ ಭೇದವಿಲ್ಲದೆ ತುಳಸಿಗೆ ಸಂಜೆ ದೀಪವಿಡುತ್ತಿದ್ದರೆ, ಬೆಳಗ್ಗೆ ನಮ್ಮ ಮನೆಯಿಂದ ಮಾವ ತುಳಸಿಗೆ ನೀರೆರೆದು ಸೂರ್ಯನಿಗೆ ನಮಸ್ಕರಿಸಿ, ತುಳಸಿ ಕಟ್ಟೆಯ ಮಣ್ಣನ್ನೇ ಪ್ರಸಾದವೆಂದು ಹಣೆಗೆ ಹಚ್ಚಿಕೊಂಡು, ಒಳಬಂದ ಹಾಗೆ ಭಸ್ಮದ ಕರಂಡಕದಿಂದ ಹಣೆಗೆ ಮತ್ತೆ ಭಸ್ಮ ಇಟ್ಟುಕೊಳ್ಳುತ್ತಿದ್ದರು. ಈ ರೀತಿಯನ್ನು ನಾನು ಕೊಂಡಾಣದ ನನ್ನ ಅಪ್ಪನ ಮನೆಯಲ್ಲೂ ದೊಡ್ಡಜ್ಜ ಹಾಗೆ ಮಾಡುತ್ತಿದ್ದುದನ್ನು ನೋಡಿದ್ದೇನೆ.

ಹಾಗೆಯೇ ನನ್ನ ಅಪ್ಪನೂ ಈ ಕ್ರಮವನ್ನೂ ನಿರ್ವಹಿಸುತ್ತಿದ್ದುದನ್ನು ನೋಡಿದ್ದೇನೆ. ಈ ಒಂದು ವಿಧಿ ಮನೆಯ ಯಜಮಾನ ಗಂಡಸರದ್ದೇ ಆಗಿರಬೇಕು. ಮನೆಯ ಉಳಿದ ಗಂಡಸರು ಯಾರೂ ಮಾಡಿದ್ದನ್ನು ನಾನು ನೋಡಿಲ್ಲ. ಹಾಗೆಯೇ ಸಂಜೆ ದೀಪವಿಡುವುದು ಕೂಡಾ ಮನೆಯ ಯಾಜಮಾನಿತಿಯದ್ದಾಗಿದ್ದರೂ ನನ್ನ ಅತ್ತೆ ಹಾಗೆ ಮಾಡುತ್ತಿದ್ದುದನ್ನು ನೋಡಿಲ್ಲ. ಹಾಗೆಯೇ ಮನೆಯ ಹೆಂಗಸರೆಲ್ಲರೂ ತುಳಸಿಗೆ ಪ್ರದಕ್ಷಿಣೆ ಹಾಕಿದ್ದನ್ನು ನೋಡಿಲ್ಲ. ಸಾಲಿನ ಮನೆಯಲ್ಲಿದ್ದಾಗ ಮೀರಕ್ಕ ಹಾಗೂ ನಮ್ಮ ಮನೆಯಲ್ಲದೆ ಇನ್ನೊಂದು ಸಂಸಾರ, ಹೊಸ ಜೋಡಿ ಸಾಲಿನ ಇನ್ನೊಂದು ಮನೆಯಲ್ಲಿದ್ದರು. ಗಂಡ ಹೆಂಡತಿ ಇಬ್ಬರೇ ಇದ್ದ ಅವರು ಕೇರಳದವರು. ಅವರು ತುಳಸಿಕಟ್ಟೆಗೆ ಹೀಗೆ ನಡೆದುಕೊಳ್ಳುತ್ತಿರಲಿಲ್ಲ. ಮುಂದೆ ನಾನು ತಿಳಿದುಕೊಂಡ ವಿಷಯ ಕೇರಳದ ಹಿಂದೂ ಮನೆಗಳಲ್ಲಿ ತುಳಸಿಕಟ್ಟೆ ಇತ್ತೀಚೆಗೆ ಪ್ರಾರಂಭವಾದುದು ಎಂದು. ಜೊತೆಗೆ ಅಲ್ಲಿ ಮುಸ್ಸಂಜೆಯ ಹೊತ್ತಿಗೆ ದೊಡ್ಡ ಸಾನಾದಿಗೆಯನ್ನು ಚಾವಡಿಯಲ್ಲಿ ತೂಗು ಹಾಕುತ್ತಿದ್ದುದನ್ನು ನೋಡಿದ್ದೇನೆ. ಬಹುಶಃ ಹಿಂದಿನ ಕಾಲದಲ್ಲಿ ಇಂದಿನಂತೆ ವಿದ್ಯುದ್ದೀಪಗಳು ಇಲ್ಲದ ಕಾಲಕ್ಕೆ ಸಂಜೆಯ ವೇಳೆಗೆ ಮನೆ ಬಾಗಿಲಲ್ಲಿ ಅಂಗಳಕ್ಕೆ ಅಂದರೆ ಮನೆಯ ದಾರಿಗೆ ಬೆಳಕು ಬೇಕಿತ್ತಲ್ಲವೆ? ಅದಕ್ಕಾಗಿ ಪ್ರಾರಂಭಗೊಂಡ ದೀಪ ಬೆಳಗುವಿಕೆ ಹೀಗೆ ರೂಪಾಂತರಗೊಂಡಿರಬೇಕು. ಈಗ ವಿದ್ಯುದ್ದೀಪಗಳು ಬಂದ ಮೇಲೆ ತುಳಸಿಕಟ್ಟೆಯ ಮೇಲಿನ ದೀಪ ಅನಿವಾರ್ಯವಲ್ಲ ಎಂದರೂ ಒಮ್ಮೆ ಪ್ರಾರಂಭಿಸಿದ ಈ ದೀಪ ಬೆಳಗುವಿಕೆ ಇಲ್ಲದಿದ್ದರೂ ತುಳಸಿ ಗಿಡದ ಮಹತ್ವದ ಕಾರಣದಿಂದ ತುಳಸಿ ಕಟ್ಟೆ ಹಾಗೂ ದೀಪ ಉಳಿಯುವಂತಾಗಿದೆ. ಇಲ್ಲೂ ಒಂದು ತರ್ಕ ಮಾಡಬಹುದಾದುದು ಏನೆಂದರೆ ದೀಪ ಅನಿವಾರ್ಯವಲ್ಲ. ತುಳಸಿ ಗಿಡ ಒಂದೇ ಕಟ್ಟೆಯಲ್ಲಿರುವ ಬದಲು ಅಂಗಳದಲ್ಲಿ ತುಂಬಾ ನೆಡುವುದು ಸಾಧ್ಯವಾದರೆ ತುಳಸಿಕಟ್ಟೆಯ ಅಗತ್ಯವಿರುವುದಿಲ್ಲವಲ್ಲಾ? ಎನ್ನುವುದು. ಏನಿದ್ದರೂ ಅವರವರ ನಂಬಿಕೆ ಹಾಗೂ ಅವರವರ ಆಚರಣೆ. ನಮ್ಮ ಧಣಿಗಳು ಸಾಹೇಬರು ಎಂದೆನಲ್ಲಾ. ಅವರಿಗೆ ಕೋಟೆಕಾರು ಜಂಕ್ಷನ್‍ನಲ್ಲಿ ಮಹಡಿಯುಳ್ಳ ಕಟ್ಟಡವಿತ್ತು. ಅದರಲ್ಲಿ ಬೇರೆ ಬೇರೆ ರೀತಿಯ ಅಂಗಡಿಗಳಿದ್ದುವು. ಒಂದು ಅವರದ್ದೇ ಅಂಗಡಿ ಇತ್ತು ಎಂಬ ನೆನಪು. ಆದರೆ ಅದು ಯಾವ ವ್ಯವಹಾರದ್ದು ಎಂಬ ನೆನಪಿಲ್ಲ. ಮಹಡಿಯಲ್ಲಿ ಟೈಪ್‍ರೈಟಿಂಗ್ ಕ್ಲಾಸು ಇದ್ದಿರಬೇಕು ಎಂಬ ನೆನಪು. ಸಾಹೇಬರ ಮನೆಗೆ ಅವರ ಅಪೇಕ್ಷೆಯಂತೆ ನಾವಿಬ್ಬರೂ ಹೋದೆವು. ಹೊಸ ಮದುಮಕ್ಕಳು ಎಂಬ ನೆಪ. ಜೊತೆಗೆ ಕಾಲೇಜಿನಲ್ಲಿ ಲೆಕ್ಚರರ್ ಆಗಿರುವ ಹೆಣ್ಣುಮಗಳನ್ನು ನೋಡುವ ಆಸೆ ಮನೆಯ ಹೆಂಗಸರಿಗೆ. ಸಾಹೇಬರ ಮಡದಿ ಹೊರಬಂದು ನಮ್ಮನ್ನು ಮಾತನಾಡಿಸಿದರೆ ಉಳಿದ ಹೆಣ್ಣುಮಕ್ಕಳೆಲ್ಲಾ ನಡುಮನೆಯ ಬಾಗಿಲ ಬಳಿಯಲ್ಲೇ ನಿಂತು ನಗುತ್ತಾ ನೋಡುತ್ತಿದ್ದರು. ಶರಬತ್ತು, ಬಾಳೆಹಣ್ಣು ನೀಡಿ ಸತ್ಕರಿಸಿದ ಅವರನ್ನು ನಾನೂ ಕೂಡಾ ನಮ್ಮ ಮನೆಗೆ ಅಂದರೆ ಅವರದ್ದೇ ಆದ ಕಟ್ಟಡಕ್ಕೆ ಬರ ಹೇಳಿದೆ. ಅವರೂ ಕೂಡಾ ಒಂದೆರಡು ಬಾರಿ ಬಂದು ಹೋದ ನೆನಪು. ಸಾಹೇಬರು ಹಿತ್ತಲಲ್ಲಿದ್ದ ತೆಂಗಿನಕಾಯಿ ಕೀಳಿಸುವ ಸಮಯದಲ್ಲಿ ಬಂದು ಹೋಗುತ್ತಿದ್ದರು. ಹಾಗೆ ಕಾಯಿ ಕಿತ್ತಾಗ ನಾವು ಖರೀದಿಸಿದ ಕಾಯಿ ಜೊತೆಗೆ ಹೆಚ್ಚುವರಿ ಕಾಯಿಗಳೂ ಇರುತ್ತಿತ್ತು. ಹೀಗಿದ್ದರೂ ಸಾಹೇಬರ ಮನೆಯ ನೀರಿನ ಋಣವೂ ಹೆಚ್ಚು ಸಮಯವಿರಲಿಲ್ಲ. 

(ನನ್ನೂರು-ನನ್ನ ಜನ ಕೃತಿಯಿಂದ ಆಯ್ದ ಭಾಗ)