ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೮)
ಹಳ್ಳಿಯ ಗದ್ದೆ, ಪೇಟೆಯ ಸ್ಟೇಜ್
ಮಳೆಗಾಲ ಕಳೆದು ನವರಾತ್ರಿಯೂ ಮುಗಿದು ಮತ್ತೆ ಶಾಲಾ ಕಾಲೇಜುಗಳು ಶುರುವಾಯ್ತು. ನನ್ನ ಮಗಳನ್ನು ಬಾಲವಾಡಿಗೆ ಸೇರಿಸಿದ್ದಾಯಿತು. ಅವಳಿಗೆಂದೇ ಸ್ಲೇಟು, ಕಡ್ಡಿ ಹಾಗೂ ಪೇಟೆಯಲ್ಲಿ ಮಕ್ಕಳು ಕೊಂಡು ಹೋಗುವ ಸಣ್ಣ ಸೈಜಿನ ಬ್ಯಾಗು ಕೊಂಡದ್ದಾಯಿತು. ಕಾಲಿಗೆ ಹಾಕಲು ಶೂ ಖರೀದಿಸಿದ್ದೂ ಆಯಿತು. ಕೃಷ್ಣಾಪುರ ಯುವಕ ಮಂಡಲದ ಕಟ್ಟಡದಲ್ಲಿ ನಡೆಯುತ್ತಿದ್ದ ಬಾಲವಾಡಿಗೆ ಬೆಳಗ್ಗೆ ಹಾಗೂ ಮಧ್ಯಾಹ್ನ ಕರೆದುಕೊಂಡು ಹೋಗಿ ಬರುವ ಜವಾಬ್ದಾರಿ ನನ್ನ ಮಾವ ವಹಿಸಿಕೊಂಡರು. ನಮ್ಮ ಮನೆಯಿಂದ ಸಮಾನಾಂತರವಾದ ಎರಡನೇ ರಸ್ತೆಯಲ್ಲಿ ಮುಖ್ಯ ರಸ್ತೆಯ ಸಮೀಪವಿದ್ದ ಶಾಲೆಗೆ ತನ್ನ ಪ್ರೀತಿಯ ಅಜ್ಜನೊಂದಿಗೆ ಹೋಗಲು ನನ್ನ ಮಗಳಿಗೂ ಖುಷಿ. ಬಹಳ ವ್ಯವಸ್ಥಿತವಾದ, ಉದ್ದಕ್ಕೂ, ಅಗಲಕ್ಕೂ ಇರುವ ರಸ್ತೆಗಳಲ್ಲಿ ಒಂದು ಕಡೆ ದಿಕ್ಕು ತಪ್ಪಿದರೆ ಮತ್ತೆ ಮನೆ ಸೇರುವುದು ಬಹಳ ಕಷ್ಟ. ಚಕ್ರವ್ಯೂಹದಂತೆ ಆಗಿಬಿಡುತ್ತದೆ. ಈಗ ಅಜ್ಜ, ಪುಳ್ಳಿ ಶಾಲೆಗೆ ಹೊರಟರೆ ದಾರಿ ಯುದ್ದಕ್ಕೂ ಎಲ್ಲರೂ ಮಾತನಾಡಿಸುವವರೇ. ಎಲ್ಲರನ್ನೂ ಕಂಡು ನಗುತ್ತಾ ಮಾತನಾಡಿಸುವ ಮಗಳು ಸುತ್ತಮುತ್ತಲ ಮನೆಗಳವರಿಗೆ ನಮಗಿಂತ ಹೆಚ್ಚು ಪರಿಚಿತಳಾದಳು. ಶಾಲೆಗೆ ಹೋಗುವುದೆಂದರೆ ಖುಷಿಯಲ್ಲಿ ಹೊರಡುವ ಮಗಳು ಒಂದು ದಿನ ಅಡುಗೆ ಕೋಣೆಯಿಂದ ತರಕಾರಿ ತರುವ ‘ಟಂಗೀಸ್’ ಚೀಲ ತನಗೆ ಬೇಕೆಂದಳು. ಸರಿ ತೆಗೆದುಕೋ ಎಂದವಳೇ ಯಾಕೆ ಎಂದು ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿ ಕೇಳಲಿಲ್ಲ. ಸಂಜೆ ಬಂದಾಗ ನನ್ನ ಸೊಸೆ ಹೇಳಿದ ವಿಷಯ ಕೇಳಿ ನಕ್ಕರೂ ಆಲೋಚಿಸುವ ವಿಷಯವೆಂದೇ ಅನ್ನಿಸಿತು. ನಾವು ತಂದಿದ್ದ ಸ್ಕೂಲ್ ಬ್ಯಾಗನ್ನು ಬಿಟ್ಟು ಟಂಗೀಸ್ ಚೀಲದಲ್ಲಿ ತನ್ನ ಸ್ಲೇಟು ಕಡ್ಡಿ ಹಾಕಿಕೊಂಡು ಆ ದಿನ ಶಾಲೆಗೆ ಹೋಗಿದ್ದಳಂತೆ. ತಾನು ಯಾಕೆಂದು ಕೇಳಿದರೆ ಎಲ್ಲಾ ಮಕ್ಕಳೂ ಅಂತಹ ಚೀಲವನ್ನೇ ತರುವುದು. ನನಗೆ ನೀವು ತಂದ ಸ್ಕೂಲ್ ಬ್ಯಾಗ್ ಬೇಡ. ನನಗೆ ಚೀಲವೇ ಬೇಕು ಎಂದು ಹಠ ಹಿಡಿದಳು. ಸರಿ ಆಯ್ತು ಎಂದು ಸುಮ್ಮನಾದೆ. ನೋಡಿ ಕಲಿಯುವುದು, ಅನುಕರಣೆಯಿಂದ ಕಲಿಯುವುದು ಎಂದರೆ ಇದೇ ಅಲ್ಲವೇ? ನಮ್ಮ ತಿಳುವಳಿಕೆಯಂತೆ ನಾವು ಪೇಟೆಯ ಮಕ್ಕಳನ್ನು ನೋಡಿ ಅಂತಹ ಚೀಲ ತಂದುಕೊಟ್ಟರೆ, ಈ ಶಾಲೆಯಲ್ಲಿ ಯಾರ ಬಳಿಯೂ ಅಂತಹ ಚೀಲ ಇಲ್ಲದಾಗ ತನ್ನ ಚೀಲ ಚಂದವಾದದ್ದು, ಹೆಚ್ಚು ಘನತೆಯುಳ್ಳದ್ದು, ಹೆಚ್ಚು ದುಡ್ಡಿನದ್ದು ಎನ್ನುವ ಯಾವ ವಿಷಯವೂ ಗೊತ್ತಿಲ್ಲದ ಮುಗ್ಧ ಮಕ್ಕಳ ಮನಸ್ಸು ಏನನ್ನು ಬಯಸುತ್ತದೆ? ಸಮಾನತೆ ಎಂದರೆ ಹೆಚ್ಚು ಸರಿ.
ಈ ಊರು ಮೂಲತಃ ಪೇಟೆಯಲ್ಲ ಹಳ್ಳಿ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ನಾವು ದೊಡ್ಡವರೇ ಮಕ್ಕಳ ಮನಸ್ಸಿನಲ್ಲಿ ಶ್ರೀಮಂತ, ಬಡವ, ಜಾತಿ, ಧರ್ಮಗಳ ಅಸಮಾನತೆಯನ್ನು ಹುಟ್ಟು ಹಾಕುವುದು ಎನ್ನುವುದಕ್ಕೆ ಕೂಡಾ ಇದು ಸಾಕ್ಷಿಯೇ. ಮಕ್ಕಳ ಕಣ್ಣಲ್ಲಿ ಎಲ್ಲರೂ ಸಮಾನರು. ತನ್ನನ್ನು ಇತರರಿಂದ ಪ್ರತ್ಯೇಕಿಸಲು ಅವರು ಇಷ್ಟಪಡುವುದಿಲ್ಲ. ಈ ಕಾರಣದಿಂದಲೇ ಶಾಲೆಗೆ ಸಮವಸ್ತ್ರ ಜಾರಿಗೆ ಬಂದದ್ದು ಕೂಡಾ. ಇದೇ ಸಂದರ್ಭದಲ್ಲಿ ಇನ್ನೊಂದು ನೆನಪು. ನನ್ನ ಮಗ ಸ್ವಲ್ಪ ದೊಡ್ಡವನಾದಾಗ ಅವನು ಬಾಲವಾಡಿಗೆ ಹೋಗಿ ಬಂದಾಗ ಅವನದೊಂದು ಬೇಡಿಕೆ ಹೀಗಿತ್ತು. ಆತ ಶಾಲೆಯ ದಾರಿಯಲ್ಲಿ ಹೋಗಿ ಬರುವಾಗ ಕಾಣುತ್ತಿದ್ದ ಮನೆಗಳಲ್ಲಿ ಕೆಲವು ಮನೆಗಳಿಗೆ ಗೇಟ್ ಇದ್ದು ಮನೆಗೆ ಹೆಸರುಗಳೂ ಇತ್ತು. ಅವನು ನಮ್ಮ ಮನೆಗೂ ಗೇಟ್ ಬೇಕು, ಹೆಸರು ಬೇಕು ಎಂದು ಬಯಸಿದ್ದ. ಅವನ ಆಸೆಯಂತೆ ನಾವು ಕೂಡಾ ಗೇಟು ಮಾಡಿಸಿ ದೃಶ್ಯ ಎನ್ನುವ ಹೆಸರು ಇಟ್ಟುಕೊಂಡೆವು. ಅವನಿಗೆ ಖುಷಿಯಾಯಿತು. ಒಟ್ಟಿನಲ್ಲಿ ಇಬ್ಬರಲ್ಲೂ ಅವರವರ ಗ್ರಹಿಕೆಯಂತೆ ಇದ್ದುದು ನಾವು ಕೂಡಾ ಇನ್ನೊಬ್ಬರಂತೆ ಇರಬೇಕು ಎನ್ನುವುದು. ನಾವು ಇತರರಿಗಿಂತ ಭಿನ್ನವಾಗಿರ ಬೇಕಾಗಿಲ್ಲ ಎನ್ನುವುದು ಮೂಲಗ್ರಹಿಕೆ. ಆದರೆ ಮಕ್ಕಳ ಈ ಮನಸ್ಸನ್ನು ಆರ್ಥೈಸಿಕೊಳ್ಳದ ಹೆತ್ತವರು ತಮ್ಮ ಶ್ರೀಮಂತಿಕೆಗೆ ಅಂತಸ್ತಿಗೆ ಸರಿಯಾಗಿ ತಮ್ಮ ಮಕ್ಕಳನ್ನು ಪ್ರದರ್ಶನದ ಗೊಂಬೆಗಳಂತೆ ಉಪಯೋಗಿಸಿಕೊಂಡರೆ ಮುಂದೆ ಮಕ್ಕಳು ದೊಡ್ಡವರಾದಾಗ ಅವರ ಬಯಕೆಗಳು ಅವರ ಅಂತಸ್ತನ್ನು ಮೀರಿ ಇರುತ್ತದೆ ಎನ್ನುವುದು ಕೂಡಾ ಅಷ್ಟೇ ಸತ್ಯ. ನಾವು ಇನ್ನೊಬ್ಬರಂತೆ ಇರಬೇಕು ಎನ್ನುವುದು ಅನುಕರಣೆಯೇ. ಅನುಕರಣೆಯಿಂದಲೇ ಮನುಷ್ಯ ಬದುಕು ಕಟ್ಟಿಕೊಳ್ಳುತ್ತಾನೆ ಎನ್ನುವುದು ನಿಜವೇ. ಮುಂದೆ ಮಕ್ಕಳು ಬೆಳೆಯುತ್ತಾ ಇರುವಂತೆ ಯಾವುದು ಅನುಕರಣೆಗೆ ಯೋಗ್ಯ ಯಾವುದು ಅನುಕರಣೆಗೆ ಯೋಗ್ಯವಲ್ಲ ಎನ್ನುವುದನ್ನು ಹೆತ್ತವರು, ಗುರುಹಿರಿಯರು ತಿಳಿಸಿಕೊಡಬೇಕಾದುದು ಕೂಡಾ ಕರ್ತವ್ಯ; ಯಾಕೆಂದರೆ ಸರಳವಾದ ನೆಮ್ಮದಿಯ ಬದುಕಿಗೆ ಅನಗತ್ಯವಾದವುಗಳು ಈ ಸಮಾಜದಲ್ಲಿರುವಾಗ ಅನುಕರಣೆಯ ಸರಿ ತಪ್ಪುಗಳ ಅರಿವು ಮೂಡಿಸಿ ಅವರು ಅನುಕರಣೆಯ ದಾರಿಗೆ ಹೋಗುವಂತೆ ಮಾಡಬೇಕಾದುದು ಕರ್ತವ್ಯ ಎಂದು ತಿಳಿದವಳು ನಾನು. ನನಗೆ ಹಾಗೆ ತಿಳಿಸಿದವರು ನನ್ನ ಹೆತ್ತವರು ಮತ್ತು ನನ್ನ ಶಾಲಾ ಕಾಲೇಜಿನ ಗುರುಗಳಾಗಿದ್ದವರು.
ನನ್ನ ಮಾವನಿಗಂತೂ ಈಗ ಬಹಳ ಖುಷಿ. ಸ್ವಂತಕ್ಕೆ ನೆಲೆ ಒಂದಾಯ್ತು ಎನ್ನುವುದು. ಜೊತೆಗೆ ಅವರಿಗೆ ಕೆಲಸ ಮಾಡಲು ಅವಕಾಶವೂ ಸಿಕ್ಕಿತು. ಮಾವನಿಗೆ ಆಸೆ ಇಲ್ಲದಿರುತ್ತಿದ್ದರೆ ಸ್ವಂತ ಹಿತ್ತಿಲು ಮನೆ ಕೊಳ್ಳುವ ಸಾಹಸ ನಾವು ಮಾಡುತ್ತಲೇ ಇರಲಿಲ್ಲ. ತಾನು ಕೈಯಾರೆ ಮಣ್ಣು ಮಿದಿಸಿ ಕಟ್ಟಿದ ಮನೆಯಿಂದ ತಾನೇ ಕರೆದುಕೊಂಡು ಬಂದ ತಂದೆಯನ್ನು ಕಳಕೊಂಡ ತನ್ನ ತಂಗಿಯ ಮಕ್ಕಳು ದೊಡ್ಡವರಾದಾಗ, ಚಾಡಿಮಾತು ಕೇಳಿ ಮನೆಯಿಂದ ಹೊರ ಹಾಕಿದ ಸಂದರ್ಭ ಅವರು ಮರೆತಿಲ್ಲ. ತಾನು ಕೈಯಾರೆ ನೀರು ಗೊಬ್ಬರ ಹಾಕಿ ಬೆಳೆಸಿದ ವೀಳ್ಯದೆಲೆಯ ಬುಡಗಳನ್ನೇ ಕತ್ತರಿಸಿದ ಆ ಅಳಿಯಂದಿರ ಕೃತ್ಯಕ್ಕೆ ತಾನು ಕತ್ತಿ ದೊಣ್ಣೆ ಹಿಡಿಯದೆ ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು, ಮಾತನಾಡದೆ ಮನೆ ಬಿಟ್ಟು ಬಂದವರು. ಮುಂದೆ ನನ್ನ ಮದುವೆಯಾದ ನಾಲ್ಕು ವರುಷದ ಬಳಿಕ ನಮ್ಮ ಕೊಟ್ಟಾರ ಕ್ರಾಸಿನ ಬಿಡಾರಕ್ಕೆ ಅವರ ತಂಗಿ ಮಗನಿಗೆ ಹೆಣ್ಣು ಕೊಟ್ಟ ಮಾವ ಸಂಧಾನಕಾರನೊಬ್ಬನ ಜೊತೆಗೆ ಬಂದಿದ್ದರು. ಬೆಳಗ್ಗೆ ಬಂದ ಅವರು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಕೊನೆಗೆ ಸಂಜೆಯ ಚಹಾ ಕುಡಿಯುವಷ್ಟು ಹೊತ್ತು ಮಾವನಲ್ಲಿ ಊರಿಗೆ ಬಂದು ಅಳಿಯಂದಿರನ್ನು, ಸ್ವಂತ ತಂಗಿಯನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಿದ್ದರು. ಮಾವ ಅವರನ್ನು ಕುರಿತು ತಾನು ಅವರಿಗೆ ಶಪಿಸಿಲ್ಲವೆಂದೂ, ಅವರ ಬೇಡಿಕೆಯ ಸ್ವರಕ್ಕೆ ತಕ್ಕಂತೆ ಮೃದುವಾದ ಸ್ವರದಲ್ಲೇ ತಿಳಿಸಿ ಹೇಳುತ್ತಿದ್ದರು. ಬಂದವರು ನನ್ನವರಲ್ಲಿಯೂ ಬೇಡಿಕೊಂಡರು. ಭಾವಂದಿರ ತೊಂದರೆಯಿಂದ ಬೇಸರಗೊಂಡಿದ್ದ ನನ್ನವರು “ನಾವ್ಯಾರೂ ಕ್ಷಮಿಸುವಂತಹ ತಪ್ಪು ಆ ನನ್ನ ಭಾವಂದಿರು, ಅತ್ತೆ ಮಾಡಿಲ್ಲ” ಎನ್ನುವುದರ ಜೊತೆಗೆ “ಕ್ಷಮಿಸುವುದಕ್ಕೆ ನಾವು ದೇವರಲ್ಲವಲ್ಲ” ಎಂದರು. ನನ್ನಲ್ಲಿ ಬೇಡಿಕೊಂಡಾಗ ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ, ಮಾವನವರ ಮಾತೇ ನಮ್ಮ ಮಾತು ಎಂದು ಹೇಳಿದೆ. ಕೊನೆಗೆ ಮಾವ “ನೀವು ಹೋಗುತ್ತೀರಾ ಇಲ್ಲವಾ? ನನಗೆ ನನ್ನ ಮಗ ಒಂದು ಮುಷ್ಟಿ ಗಂಜಿ ತಿಳಿ ಕೊಡ್ತಾನೆ ಎನ್ನುವ ನಂಬಿಕೆ ಇದೆ. ಬಂದ ದಾರಿಗೆ ಸುಂಕವಿಲ್ಲ. ಹೋಗಿ” ಎಂದು ಹೇಳಿದ ಮೇಲೆ ಇನ್ನು ಪೂರೈಸುವುದಿಲ್ಲ ಎಂದು ತಿಳಿದು ಹೊರಟುಬಿಟ್ಟರು. ಈ ಘಟನೆಯ ಬಳಿಕ ನನಗೂ ನನ್ನ ಮಾವನ ಆಸೆ ಪೂರೈಸಬೇಕೆಂಬ ಆಸೆ ಉಂಟಾದುದು ಸಹಜ. ಅಂತೂ ಅವರ ಕೊನೆಗಾಲದ ಆಸೆ ಈಡೇರಿಸಿದ ಸಂತೃಪ್ತಿ ನಮ್ಮದು.
ಮಾವ ಬೆಳಗ್ಗೆ ಎದ್ದವರೇ ನಿತ್ಯಕರ್ಮ ಮುಗಿಸಿ ಹಾರೆ ಪಿಕ್ಕಾಸು ಹಿಡಿದು ಹಿತ್ತಲಿ ನೊಳಗಿನ ಗುಡ್ಡ ಕಡಿದು ಮಣ್ಣುರಾಶಿ ಹಾಕುತ್ತಿದ್ದರು. ಬಿಸಿಲೇರಿದಂತೆ ಸ್ನಾನ ಮಾಡಿ ಚಹಾ ತಿಂಡಿಗೆ ಬರುವಷ್ಟರಲ್ಲಿ ನಾವು ಕಾಲೇಜಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಮಗಳನ್ನೂ ಶಾಲೆಗೆ ಹೊರಡಿಸುತ್ತಿದ್ದೆವು. ನಾವು ಹೊರಟಂತೆಯೇ ಶಾಲೆಗೆ ಹೊರಡಲು ತುದಿಗಾಲಲ್ಲಿ ನಿಂತ ಮೊಮ್ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದರು. ಬಂದವರು ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಮತ್ತೆ ಮಧ್ಯಾಹ್ನ ಶಾಲೆ ಬಿಡುವುದಕ್ಕೆ ಸರಿಯಾಗಿ ಹೋಗಿ ಮೊಮ್ಮಗಳನ್ನು ಕರೆದು ತರುತ್ತಿದ್ದರು. ಮಧ್ಯಾಹ್ನ ಊಟ ಮಾಡಿ ಮಲಗಿದರೆ ಮತ್ತೆ ಬಿಸಿಲು ಅಡ್ಡವಾದಾಗ ಎದ್ದು ಚಹ ತಿಂಡಿ ಸೇವಿಸಿ ಮತ್ತೆ ಹಾರೆ ಪಿಕ್ಕಾಸು ಹಿಡಿದುಕೊಂಡು ಕತ್ತಲಾಗುವವರೆಗೆ ಗುಡ್ಡ ಜರಿದು ರಾಶಿ ಹಾಕುತ್ತಿದ್ದರು. ಹೀಗೆ ಸಮತಟ್ಟು ಮಾಡಿದ ಜಾಗದಲ್ಲಿ ತೊಂಡೆ ಬಳ್ಳಿ ನೆಟ್ಟು ಚಪ್ಪರ ಹಾಕಿದರು. ತೊಂಡೆ ಬಳ್ಳಿ ಹುಡುಕಿಕೊಂಡು ಹೋದವರು ಕೃಷ್ಣಾಪುರದ ಒಳಗಡೆ ಇರುವ ಪುನರ್ವಸಿತ ವಲಯವಲ್ಲದ ಅಲ್ಲಿಯವರೇ ಆದ ಹಳ್ಳಿಯವರ ಪರಿಚಯ ಮಾಡಿಕೊಂಡಿದ್ದರು. ಅವರ ಪರಿಚಯದಿಂದ ಆ ಗದ್ದೆ, ತೋಟದಿಂದ ನಮಗೆ ಅಕ್ಕಿ ಮುಡಿ, ತೆಂಗಿನಕಾಯಿಯನ್ನು ಖರೀದಿಸುವ ಮೂಲಕ ಹಳ್ಳಿಯ ಸೊಗಡು ನಮ್ಮ ಮನೆ ಸೇರಿದಂತಾಯಿತು. ಹಾಗೆಯೇ ಬೆಳಗ್ಗೆ ಸಂಜೆ ದನದ ಹಾಲು ತಂದು ಕೊಡುತ್ತಿದ್ದರು. ಅಪರೂಪಕ್ಕೆ ಒಮ್ಮೊಮ್ಮೆ ಮಗಳೊಂದಿಗೆ ಆ ಕಡೆ ತಿರುಗಾಡುತ್ತಾ ಅವರ ಭತ್ತದ ಗದ್ದೆ ತೆಂಗಿನತೋಟ ನೋಡಿ ಖುಷಿಪಡುತ್ತಿದ್ದೆವು. ನಮ್ಮ ‘ಬಿಸು’ ಹಬ್ಬಕ್ಕೆ ಪ್ರತೀ ವರ್ಷವೂ ಮಾವ ಅವರ ಮನೆಯಿಂದ ತೆನೆ ತಂದು ಹಬ್ಬ ಆಚರಿಸುವುದು ಖುಷಿಯ ವಿಷಯವಾಗಿತ್ತು. ಅವರ ಹಿರಿಯ ಹುಡುಗಿ ಹೈಸ್ಕೂಲು ಮುಗಿಸಿದಂತೆಯೇ, ಅವಳಿಗೆ ಮದುವೆ ನಿಶ್ಚಯವಾಯಿತು. ಯೋಗಾಯೋಗಾವೆಂಬಂತೆ ಮದುಮಗ ಗಣಪತಿ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಯಾಗಿದ್ದವನು. ಇದು ತಿಳಿದ ಮೇಲಂತೂ ಅವರ ಮನೆಯವರಿಗೆ ನಮ್ಮ ಮೇಲೆ ಮೊದಲೇ ಇದ್ದ ಪ್ರೀತಿ ವಿಶ್ವಾಸಗಳು ಇನ್ನಷ್ಟು ಹೆಚ್ಚಾಯಿತು. ನಾವು ಅವರ ಮನೆಗೆ ಹೋಗಿ ಮದುಮಕ್ಕಳಿಗೆ ಶುಭಾಶಯ ಕೋರಿದಂತೆಯೇ, ನಮ್ಮ ಮನೆಗೆ ಬರಲು ಆಹ್ವಾನಿಸಿದೆವು. ಅವರು ನಮ್ಮಲ್ಲಿಗೆ ಬಂದು ನಮ್ಮ ಸಂತೋಷ ಹೆಚ್ಚಿಸಿದರು. ಅವರ ಮನೆಯ ಸ್ನೇಹದಿಂದ ಮಾವನವರಂತೂ ಪೂರ್ಣ ಕೃಷಿಕರೇ ಆದರು. ಬೆಂಡೆ, ಅಲಸಂಡೆ, ಮುಳ್ಳುಸೌತೆ, ಬಸಳೆ, ಬದನೆ ಹೀಗೆ ಅಲ್ಲಿಂದ ಬೀಜ, ಗಿಡಗಳನ್ನು ತಂದು ಅಂಗಳದಲ್ಲಿ ಮಣ್ಣಿನ ಮಡಿ ಹಾಕಿ ತರಕಾರಿ ಬೆಳೆಸುವುದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಈ ದುಡಿಮೆಯಿಂದ ಅವರ ಆರೋಗ್ಯವೂ ಚೆನ್ನಾಗಿತ್ತು. ನಮಗೆ ತಾಜಾ ತರಕಾರಿಯ ರುಚಿಕರ ಅಡುಗೆಯೂ ಆಗುತ್ತಿತ್ತು. ಮೊದಲ ವರ್ಷದ ಮಳೆಗಾಲದಲ್ಲಿ ಹೆಚ್ಚಾದ ಮಣ್ಣನ್ನು ನೀರಿನೊಂದಿಗೆ ತೇಲಿ ಬಿಡುತ್ತಿದ್ದರು. ನಮ್ಮ ಹಿತ್ತಿಲಿನ ಮೇಲಿನ ಹಿತ್ತಿಲಿಂದ ರಭಸವಾಗಿ ಬೀಳುವಾಗಿನ ಸದ್ದು ಜಲಪಾತದ ಸದ್ದಿನಂತೆ ಇದ್ದುದಲ್ಲದೆ, ಹಿತ್ತಿಲಿನ ಬದಿಯಿಂದ ಮಾರ್ಗಕ್ಕೆ ನೀರು ಹರಿಯುವ ಜಾಗದಲ್ಲಿ ಮಳೆ ನಿಂತ ಮೇಲೆ ನೋಡಿದರೆ ಆಳವಾದ ಕಣಿಯೇ ಆಗಿತ್ತು. ಮಳೆ ನಿಂತ ಮೇಲೆ ಆ ಕಣಿಯ ಜಾಗದಲ್ಲಿ ಮಣ್ಣಿನಿಂದಲೇ ದರೆ ಕಟ್ಟಿಸಬೇಕೆಂದು ಯೋಚನೆ ಮಾಡಿದರೆ ಅದು ಮಾವನಿಂದ ಸಾಧ್ಯವಿಲ್ಲ ಎನ್ನುವುದೂ ಗೊತ್ತಿತ್ತು. ಆಗ ಹಿಂದಿನ ಮನೆಯ ಶೀನ ದೇವಾಡಿಗರನ್ನು ಕೇಳಿಕೊಂಡಾಗ ಅವರು ತನ್ನ ಹಿಂದಿನ ಮನೆಯ ಹಿರಿಯರೊಬ್ಬರು ಈ ಕೆಲಸದಲ್ಲಿ ನುರಿತವರು ಇದ್ದಾರೆ ಎಂದು ತಿಳಿಸಿದವರು. ಈಗ ಮಾವನಿಗೆ ಮಣ್ಣು ಅಗೆಯುವ ಕೆಲಸ, ಶೀನಣ್ಣನಿಗೆ ಮಣ್ಣು ಕಲಸಿ ಒಯ್ದು ಕೊಡುವ ಕೆಲಸ, ಹಿರಿಯರಾದ ಅಜ್ಜನಿಗೆ ಗೋಡೆ ಕಟ್ಟುವ ಕೆಲಸ, ನನ್ನ ಮಕ್ಕಳಿಗೆ ಹಳ್ಳಿಯ ಜೀವನದ ಪ್ರಾತ್ಯಕ್ಷಿಕೆ. ಹೀಗೆ ಎದುರು ಮನೆಯ ಅಜ್ಜಿಯ ಸುಪರ್ವಿಶನ್. ಯಾಕೆಂದರೆ ಅವರ ಹಿತ್ತಲಿನ ಒಂದಿಂಚೂ ನಾವೂ ಉಪಯೋಗಿಸದಂತೆ ಎಚ್ಚರದಿಂದ ನೋಡುತ್ತಿದ್ದರು. ನಮಗಂತೂ ನಮ್ಮ ಹಿತ್ತಲಿನ ಮಣ್ಣು ವ್ಯರ್ಥವಾಗದೆ ಉಪಯೋಗಕ್ಕೆ ಒದಗಿದ್ದು ಸಂತೋಷವಾಯಿತು. ಆದರೆ ಹಿತ್ತಲಿನ ಒಳಗಿನ ಎತ್ತರದ ಗುಡ್ಡ ಇನ್ನೂ ಜರಿದುಹಾಕಲು ಬಾಕಿ ಇತ್ತು. ಇಷ್ಟು ಮಣ್ಣನ್ನು ಹಾಳು ಮಾಡುವುದು ಕೂಡಾ ಬೇಸರದ ವಿಷಯವೇ. ಅಷ್ಟರಲ್ಲಿ ನಮ್ಮ ಗುಡ್ಡೆ ಜರಿದು ಹಾಕಿದ ಮಣ್ಣು ಇನ್ನೂ ಇದೆ ಎಂದು ಗೊತ್ತಾದಾಗ ಕೃಷ್ಣಾಪುರ ಯುವಕ ಮಂಡಲದವರು ಸ್ಟೇಜ್ ಕಟ್ಟಲು ಮಣ್ಣು ಸಿಗಬಹುದೇ ಎಂದು ಕೇಳಲು ನಮ್ಮ ಮನೆಗೆ ಅದರ ಪದಾಧಿಕಾರಿಗಳು ಬಂದರು. ಎಲ್ಲರ ಹೆಸರು ಇಂದು ನೆನಪಿಲ್ಲ. ಒಂದೆರಡು ಹೆಸರುಗಳು ನೆನಪಿನಲ್ಲಿವೆ. ಅವುಗಳೇ ಸುಧಾಕರ್ ಕಾಮತ್ ಮತ್ತು ಶ್ರೀಧರ ಹೊಳ್ಳ ಇವರದ್ದು. ಸರಿ ಆಗಬಹುದು ಎಂಬ ನಮ್ಮ ಮಾತು ಕೇಳಿ ಸಂತೋಷಗೊಂಡರು. ಈಗ ನಾವು ಈ ಯುವಕ ಮಂಡಲದ ಮೂಲಕ ಇನ್ನಷ್ಟು ಜನರಿಗೆ ಪರಿಚಿತರಾದೆವು.
(‘ನನ್ನೂರು ನನ್ನ ಜನ' ಕೃತಿಯಿಂದ ಆಯ್ದ ಅಧ್ಯಾಯ)
ಚಿತ್ರ ಕೃಪೆ: ಇಂಟರ್ನೆಟ್ ತಾಣ