ಚಂದ್ರನಿಳಿದನೆ ಭೂಮಿಗೆ
ಕವನ
ಪೂರ್ಣ ಚಂದ್ರಮ ಬುವಿಗೆ ಇಳಿದನೆ
ಇಂದು ಬಂದಿತೆ ಹುಣ್ಣಿಮೆ
ನಿನ್ನ ಅಂದಕೆ ಮಾರುಹೋದೆನೆ
ಭ್ರಮೆಯ ತರಿಸಿದೆ ಸುಮ್ಮನೆ
ಚಂದ್ರ ಮೊಗದಲಿ ಪುಟ್ಟ ಚಂದ್ರಮ
ನೊಸಲ ಮೇಲಿನ ಕುಂಕುಮ
ಬೊಗಸೆ ಕಣ್ಗಳ ಬಾಣವೆಸೆದಿರೆ
ನಮ್ಮ ನೋಟ ಸಮಾಗಮ
ಹೊಳೆಯುತಿರುವುದು ದಂತಪಂಕ್ತಿಯು
ಮಿಂಚು ತಿಂಗಳಬೆಳಕಿದು
ನುಣುಪುಗೆನ್ನೆಯು ಕೆಂಪಗಾಗಿದೆ
ಬಣ್ಣ ಲಜ್ಜೆಯು ತಂದುದು
ಬಾಚಿ ಹೆರಳಿನ ನಡುವೆ ಬೈತಲೆ
ಸೆರಗನೆಳೆದಿಹೆ ಶಿರದಲಿ
ಹೊಳೆವ ಮುತ್ತಿನ ಸರವ ಹೊತ್ತಿದೆ
ನಿನ್ನ ಸುಂದರ ಕೊರಳಲಿ
ಸೀರೆಯುಟ್ಟಿಹೆ ಕಿವಿಗೆ ಝಮುಕಿಯು
ಮುತ್ತು ಸರವಿದೆ ಕೊರಳಲಿ
ನಾಡ ಸಂಸ್ಕೃತಿ ಮೆರೆದ ನಾರಿಗೆ
ಶುಭವ ಕೋರುವೆ ಮನದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
