ಚಂದ್ರನ ಚೂರು

ಆಲೂರು ದೊಡ್ಡನಿಂಗಪ್ಪನವರು ಬರೆದ ‘ಚಂದ್ರನ ಚೂರು’ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ…”ಆಲೂರು ದೊಡ್ಡನಿಂಗಪ್ಪನವರ 'ಚಂದ್ರನ ಚೂರು' ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ. ಈ ದೇಶವನ್ನು ಶಾಪದಂತೆ ಕಾಡುತ್ತಿರುವ ಜಾತೀಯತೆಯ ಸ್ವರೂಪವನ್ನು ಚಿತ್ರಿಸುತ್ತಲೇ, ಅದಕ್ಕೆ ಪ್ರತಿಯಾಗಿ ಮಾನವೀಯ ಸ್ಪಂದನಗಳನ್ನು ಕಟ್ಟಿಕೊಡುವ ಹಂಬಲ ಕಾದಂಬರಿಯ ಜೀವದ್ರವ್ಯವಾಗಿದೆ.
ಅತ್ಯಂತ ಕಡಿಮೆ ಪಾತ್ರಗಳನ್ನು ಬಳಸಿಕೊಂಡು ಕಥನವನ್ನು ನಿರೂಪಿಸಿರುವುದು ಕಾದಂಬರಿಯ ಗಮನಾರ್ಹ ಸಂಗತಿಗಳಲ್ಲೊಂದು. ಮಕ್ಕಳ ಕಣ್ಣಿನಿಂದ ಸಮಾಜವನ್ನು ನೋಡುವ, ಚಿತ್ರಿಸುವ ತಂತ್ರವನ್ನು ದೊಡ್ಡನಿಂಗಪ್ಪ ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಅಪಾರ ಜೀವನೋತ್ಸಾಹ ಮತ್ತು ಮುಗ್ಧತೆಯನ್ನು ಒಳಗೊಂಡ ತ್ಯಾಗನ ಕಣ್ಣುಗಳ ಮೂಲಕ ಊರಿನ ಜಾತೀಯತೆಯ ಸ್ವರೂಪವನ್ನು ಕಾದಂಬರಿ ಕಟ್ಟಿಕೊಡುತ್ತದೆ.
ದೊಡ್ಡನಿಂಗಪ್ಪ ಮೂಲತಃ ಕವಿ. 'ಚಂದ್ರನ ಚೂರು' ಕಾದಂಬರಿಯಲ್ಲೂ ದೊಡ್ಡನಿಂಗಪ್ಪ ಕವಿಯಾಗಿದ್ದಾರೆ. ರೂಪಕಗಳ ಮೂಲಕ ಗ್ರಾಮೀಣ ಭಾರತದ ಸಾಮಾಜಿಕ ಬಿಂಬಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ಪ್ರಾಣಿಪಕ್ಷಿಗಳನ್ನೂ, ನಿಸರ್ಗವನ್ನೂ, ಜಡವಸ್ತುಗಳನ್ನೂ ತಮ್ಮ ಜೊತೆಗೆ ಕಥೆ ಹೇಳಲು ಕೂರಿಸಿಕೊಂಡಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಅಪಸವ್ಯಗಳನ್ನು ಸಹೃದಯರ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ. ಬಾವಿಯ ನೀರನ್ನು ಗಾಳಿ ಬೆಳಕಿಗೊಡ್ಡುವ ಈ ಕೆಲಸ ಪರಿಣಾಮಕಾರಿಯಾಗಿದೆ, ಯಶಸ್ವಿಯಾಗಿದೆ ಹಾಗೂ ಕಾದಂಬರಿಕಾರರಾಗಿ ದೊಡ್ಡನಿಂಗಪ್ಪನವರ ಸಾಧ್ಯತೆಗಳ ಬಗ್ಗೆ ಅಚ್ಚರಿ ಮತ್ತು ಮೆಚ್ಚುಗೆ ಹುಟ್ಟಿಸುತ್ತದೆ. ಸಹೃದಯರು ಪ್ರೀತಿಯಿಂದ ಸ್ವಾಗತಿಸಬೇಕಾದ ಹಾಗೂ ಓದಿ ಚರ್ಚಿಸಬೇಕಾದ ಕೃತಿಯಿದು.
ಲೇಖಕರ ನುಡಿಯಲ್ಲಿ ಆಲೂರು ದೊಡ್ಡನಿಂಗಪ್ಪನವರು ತಮ್ಮ ಕಾದಂಬರಿಯ ಹುಟ್ಟಿನ ಬಗ್ಗೆ ಒಂದಿಷ್ಟು ಹೇಳಿಕೊಂಡಿದ್ದಾರೆ. “ತುಂಬಾ ಗೊಂದಲಗಳನ್ನು ಅನುಭವಿಸುತ್ತಾ ಇದ್ದ ಆ ದಿನಗಳು... ಒಂದಷ್ಟು ಊರಿನ ಪಟಾಲಂಗಳು ಚಂದಾ ಎತ್ತಲು ಬಾಗಿಲಿಗೆ ಬಂದರು. ಅದು ಗಣಪತಿ ಕೂರಿಸಲು ತಗಲುವ ಖರ್ಚಿಗೆ ಪ್ರತಿ ಮನೆಗೆ ೫೦ ರೂಪಾಯಿ ಅಥವಾ ಕೈಲಾದಷ್ಟು ಕೊಡಬೇಕು ಎಂದರು. ಐದಕ್ಕೋ ಹತ್ತಕ್ಕೋ ಕೂಲಿ ಮಾಡಿ ಬರುವ ಕಾರ್ಮಿಕ ನಾನು ಇವರು ಕೇಳುವ ಚಂದಾ ಕೊಡಲು ಸಾಧ್ಯವೆ? ಹತ್ತಾರು ಬಾರಿ ಈ ಪಟಾಲಂ ಹುರಿಯಾಳುಗಳು ಮನೆ ಬಾಗಿಲಿಗೆ ಆಗಾಗ ಎಡತಾಕಿ, ಮಾನಸಿಕವಾಗಿ ಕಿರಿಕಿರಿ ಉಂಟುಮಾಡಿ ಹೋಗುತ್ತಿದ್ದರು. ಹತ್ತಾರು ಜನ ಇದ್ದ ಈ ಗುಂಪು ಬಾಯಿಗೆ ಬಂದಂತೆ ಬೀದಿಯಲಿ ಮಾತನಾಡಿತ್ತು.
ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಹಣ ಮಾತ್ರ ಸಿಗಲೇ ಇಲ್ಲ. ಆ ಗುಂಪಿನಲ್ಲಿ ಒಬ್ಬ ಪಿತ್ತ ನೆತ್ತಿಗೇರಿಸಿಕೊಂಡು ಐವತ್ತು ರೂಪಾಯಿ ಕೊಡಕ್ಕೆ ಯೋಗ್ಯತೆ ಇಲ್ಲ, ಈ ಬೋಳಿಮಗ ಹೆಸರಿನ ಮುಂದೆ ಊರಿನ ಹೆಸರನ್ನೂ ಇರಿಸಿಕೊಂಡಿದ್ದಾನೆ. ಊರಿನ ಸಂಭ್ರಮ, ಸಡಗರಕ್ಕೆ ಕೊಡಲು ಕೈಯಲ್ಲಿ ಕಾಸಿಲ್ಲದಿದ್ದರೂ ಊರು ಮಾತ್ರ ಬೇಕು. ಆ ಮಾತಿಗೆ ಗುಂಪು ಗೊಳ್ಳೆಂದಿತ್ತು, ಅವಮಾನಿಸಿತು. ಮುಂದೆ ಏನೇನೋ ನಡೆದೇಹೋಯಿತು. ಕ್ಯಾಕರಿಸಿ ನೆಲಕ್ಕೆ ಉಗುಳಿದ ಗುಂಪಿನಲ್ಲಿದ್ದ ಮತ್ತೊಬ್ಬ, ಏನೋ ನೆನಪು ಮಾಡಿಕೊಂಡು ಧ್ವನಿ ಎತ್ತರಿಸಿ 'ನಾವೆಲ್ಲ ಹುಚ್ಚನಟ್ಟಲಿ ಹುಟ್ಟಿದವರು, ಈ ಬೋಸುಡಿ ಮಗ ಮಾತ್ರ ಊರಲ್ಲಿ ಹುಟ್ಟಿದವನು' ಎಂದು ಜೋರಾಗಿ ಕೂಗಿದ. ಬಹುಶಃ ಆಗ ನಾನು ೨೦ ರಿಂದ ೨೨ ವರ್ಷದವನಿರಬೇಕು. ಅವರ ಮಾತಿನಿಂದ ಘಾಸಿಗೊಂಡೆ. ನನಗ್ಯಾಕೋ ಊರು ಕೈ ಕೊಟ್ಟಿತು ಎಂದು ಒಳಗೊಳಗೆ ಅನಿಸಿತು. ಮೆಲ್ಲಗೆ ಊರು ಬಿಟ್ಟೆ.
ಹೊರ ಊರು, ಹೊರ ಜನರ ಸಂಪರ್ಕ ಬೆಳೆಯಿತು. ಆರಂಭದಲ್ಲಿ ಎಲ್ಲ ಚೆನ್ನಾಗಿಯೇ ಇತ್ತು. ಮುಂದೆ ಮುಂದೆ ಹೋದಂತೆ ಹೊಸದೊಂದು ವ್ಯವಸ್ಥೆಗೆ ಸಿಲುಕಿದೆ. ಎಷ್ಟೋ ಸಾರಿ ನಕ್ಕೆ, ಅತ್ತೆ, ನೊಂದೆ, ಬೆಂದೆ ಎಡತಾಕುತ್ತ ಮತ್ತೆ ನನ್ನೂರು ಬಂಧು-ಬಳಗ, ಹಸಿರು ಗಿಡಮರಗಳು, ಸೊಗಸಾಗಿ ಬೆಳೆದು ನಿಂತ ಪಚ್ಚೆ-ಪೈರು, ಗಾಳಿಗೆ ತೂಗುವ ತೆಂಗು, ಬಾಳೆ, ಹರಿವ ಹಳ್ಳ-ಕೊಳ್ಳಗಳು, ಬೆಟ್ಟ-ಗುಡ್ಡಗಳು, ಪ್ರಾಣಿ-ಪಕ್ಷಿಗಳು, ಜಡವಸ್ತುಗಳ ನೆನಪು ಪಕ್ಕೆಲುಬು ಮುರಿಯುತ್ತಲೇ ಊರಿನ ಸಾಕ್ಷಿ ನುಡಿದಿವೆ, ಎಲ್ಲೇ ಹೋದರೂ ಹಿಂದಿಂದೆ ಸುತ್ತಿ ಬರುವ ಚಂದ್ರನಂತೆ, ಕಳೆದುಹೋದ ಅಜ್ಜ ಊರುಗೋಲು ಹುಡುಕುವಂತೆ, ಇದೇ ಇರಬಹುದಾದ ಈ ಚೂರಾದ ವಸ್ತು ನಾನಿಲ್ಲದೇ ಇರೋ ವಸ್ತು.”