ಚಂದ್ರನ ಮೇಲೆ ಜಿಗಿದ ಕಪಿಲೆ ದನ

ಚಂದ್ರನ ಮೇಲೆ ಜಿಗಿದ ಕಪಿಲೆ ದನ

ಸುಂಯ್, ಸುಂಯ್, ಸುಂಯ್ ! ಮೋಂಟು ಮೊಲ ಹೊಲದಲ್ಲಿ ಇಪ್ಪತ್ತಡಿ ಓಡಿ, ನೆಲದಿಂದ ಸೊಂಯ್ಯನೆ ಎತ್ತರಕ್ಕೆ ಜಿಗಿಯಿತು. “ನೋಡಿ, ನಾನು ಗಾಳಿಯಲ್ಲಿ ಎತ್ತರಕ್ಕೆ ಹಾರಬಲ್ಲೆ” ಎಂದು ಹೊಲದಲ್ಲಿದ್ದ ಇತರ ಪ್ರಾಣಿಗಳಿಗೆ ಕೂಗಿ ಹೇಳಿತು.

“ಓ, ಚೆನ್ನಾಗಿ ಜಿಗಿಯುತ್ತಿ” ಎಂದಿತು ಕುರಿ. “ಚೆನ್ನಾಗಿ ಜಿಗಿಯುತ್ತಿ. ಆದರೆ ನನ್ನಷ್ಟು ಚೆನ್ನಾಗಿ ಜಿಗಿಯಲು ನಿನ್ನಿಂದಾಗದು. ನಾನು ಗೇಟಿನ ಮೇಲೆ ಜಿಗಿಯ ಬಲ್ಲೆ” ಎಂದಿತು ಕಾವಲು ನಾಯಿ. ತಕ್ಷಣವೇ ಕಾವಲು ನಾಯಿ ಓಡಿ ಹೋಗಿ, ಗೇಟಿನ ಮೇಲಕ್ಕೆ ಹಾರಿ ಬಯಲಿಗೆ ಜಿಗಿಯಿತು.

“ಓಹೋ, ಇದು ಅಚ್ಚರಿಯ ಜಿಗಿತ" ಎಂದಿತು ಕುರಿ. "ಅಚ್ಚರಿಯ ಜಿಗಿತ ಹೌದು. ಆದರೆ ನನ್ನ ಜಿಗಿತದಷ್ಟು ಅಚ್ಚರಿಯ ಜಿಗಿತವಲ್ಲ. ನಾನು ಬೇಲಿಯ ಮೇಲೆ ಜಿಗಿಯ ಬಲ್ಲೆ, ನೋಡಿ” ಎಂದಿತು ಕುದುರೆ. ಹಾಗೆ ಹೇಳುತ್ತಲೇ ಕುದುರೆ ಹೊಲದಲ್ಲೊಂದು ಸುತ್ತು ಓಡಿ, ಗಾಳಿಯಲ್ಲಿ ಎತ್ತರಕ್ಕೆ ಹಾರಿ, ಬೇಲಿ ದಾಟಿ ಬಯಲಿಗೆ ಜಿಗಿಯಿತು.

“ಅಬ್ಬಾ, ಇದಂತೂ ನಂಬಲಾಗದ ಜಿಗಿತ" ಎಂದಿತು ಕುರಿ. ಅಲ್ಲಿ ಸೋಮಾರಿಯಂತೆ ಹುಲ್ಲು ಮೇಯುತ್ತಿದ್ದ ಕಪಿಲೆ ದನ,  “ನಂಬಲಾಗದ ಜಿಗಿತ ನಿಜ. ಆದರೆ ನನ್ನ ಜಿಗಿತದಂತಹ ನಂಬಲಾಗದ ಜಿಗಿತ ಅಲ್ಲವೇ ಅಲ್ಲ. ಯಾಕೆಂದರೆ ನಾನು ಚಂದ್ರನ ಮೇಲೆ ಜಿಗಿಯ ಬಲ್ಲೆ” ಎಂದಿತು.

“ಬಿಡು, ಬಿಡು. ಯಾರೂ ಚಂದ್ರನ ಮೇಲೆ ಜಿಗಿಯಲು ಸಾಧ್ಯವಿಲ್ಲ. ಅದೆಲ್ಲ ಅಜ್ಜಿಕತೆ” ಎಂದಿತು ಕುದುರೆ. “ಏನು ಹೇಳುತ್ತಿದ್ದಿ ನೀನು? ನಾನು ಚಂದ್ರನ ಮೇಲೆ ಜಿಗಿಯ ಬಲ್ಲೆ. ಅದನ್ನು ನಿಮಗೆ ತೋರಿಸ ಬಲ್ಲೆ. ಬೇಕಾದರೆ ನೀವೆಲ್ಲರೂ ನೋಡಬಹುದು” ಎಂದಿತು ಕಪಿಲೆ ದನ ಆತ್ಮವಿಶ್ವಾಸದ ಧ್ವನಿಯಲ್ಲಿ.

ಎಲ್ಲ ಪ್ರಾಣಿಗಳೂ ಒಕ್ಕೊರಲಿನಿಂದ ಕಪಿಲೆ ದನಕ್ಕೆ ಹೇಳಿದವು, “ಆಗಲಿ. ನೀನು ಚಂದ್ರನ ಮೇಲೆ ಜಿಗಿ. ನಾವು ನೋಡುತ್ತೇವೆ.” “ಹಾಗಾದರೆ ಈ ಹೊಲಕ್ಕೆ ಇವತ್ತು ರಾತ್ರಿ ನೀವೆಲ್ಲರೂ ಬನ್ನಿ - ಪೂರ್ಣಚಂದ್ರ ಬೆಳಗುವಾಗ ಮತ್ತು ನಕ್ಷತ್ರಗಳು ಮಿನುಗುವಾಗ. ನಾನಿಲ್ಲಿ ನಿಮಗಾಗಿ ಕಾದಿರುತ್ತೇನೆ” ಎಂದಿತು ಕಪಿಲೆ ದನ.  

ಅವತ್ತು ರಾತ್ರಿ ಚಂದ್ರ ಆಕಾಶದಲ್ಲಿ ಮೇಲಕ್ಕೇರಿ ಬೆಳಗುತ್ತಿದ್ದಾಗ ಅವೆಲ್ಲ ಪ್ರಾಣಿಗಳು ಉತ್ಸಾಹದಿಂದ ಹೊಲಕ್ಕೆ ಬಂದವು. ಕೋಳಿ, ಬೆಕ್ಕು, ಇಲಿ ಅವೂ ಬಂದವು. ಯಾಕೆಂದರೆ ಕಪಿಲೆ ದನ ಚಂದ್ರನ ಮೇಲೆ ಜಿಗಿಯಲಿದೆ ಅನ್ನೋದು ಸುದ್ದಿಯಾಗಿತ್ತು.

"ಕಪಿಲೆ, ಚಂದ್ರನ ಮೇಲೆ ಜಿಗಿದು ತೋರಿಸುತ್ತಿ ತಾನೇ?”ಎಂದು ಕೇಳಿತು ಕಾವಲು ನಾಯಿ. ಆಗ ಎಲ್ಲ ಪ್ರಾಣಿಗಳೂ ಜೋರಾಗಿ ನಕ್ಕು ಬಿಟ್ಟವು. ಯಾಕೆಂದರೆ ಕಪಿಲೆ ದನ ಕೇವಲ ಜಂಭದಿಂದ ಮಾತಾಡುತ್ತಿದೆ ಎಂದು ಅವು ಯೋಚಿಸಿದವು.

"ಹೌದು. ನಾನು ಅದನ್ನು ನಿಮಗೆಲ್ಲ ತೋರಿಸುತ್ತೇನೆ. ಆದರೆ ಇದು ಸರಿಯಾದ ಜಾಗವಲ್ಲ. ನೀವೆಲ್ಲ ನನ್ನೊಂದಿಗೆ ಬನ್ನಿ” ಎನ್ನುತ್ತಾ ಕಪಿಲೆ ದನ ಅವರನ್ನೆಲ್ಲ ಹೊಲದ ಅಂಚಿಗೆ ಕರೆದೊಯ್ದಿತು. ಅಲ್ಲೊಂದು ತೊರೆ ಹರಿಯುತ್ತಿತ್ತು. ಅದರಾಚೆಗೆ ಕಾಡಿತ್ತು.

"ಈಗ ಎಲ್ಲರೂ ಸ್ವಲ್ಪ ಜಾಗ ಬಿಡಿ” ಎಂದಿತು ಕಪಿಲೆ ದನ. ಎಲ್ಲ ಪ್ರಾಣಿಗಳಿಗೂ ಅದೇನು ಮಾಡುತ್ತದೆಂಬ ಕುತೂಹಲ. ಕಪಿಲೆ ದನ ಹೊಲದ ಮಧ್ಯದ ವರೆಗೆ ಹಿಂದಕ್ಕೆ ಹೋಯಿತು. ಅಲ್ಲಿಂದ ಜೋರಾಗಿ ಓಡುತ್ತ ಬಂದು, ತೊರೆಯ ಅಂಚಿನಲ್ಲಿ ಮೇಲಕ್ಕೆ ಹಾರಿ, ತೊರೆ ದಾಟಿ, ಆ ಬದಿಗೆ ಜಿಗಿಯಿತು.

"ನೋಡಿದಿರಾ? ನಾನು ಚಂದ್ರನ ಮೇಲೆ ಜಿಗಿದೇ ಬಿಟ್ಟೆ. ನೀವೆಲ್ಲರೂ ಚಪ್ಪಾಳೆ ತಟ್ಟುವುದಿಲ್ಲವೇ?” ಎಂದು ಕೇಳಿತು ಕಪಿಲೆ ದನ. ಅಲ್ಲಿದ್ದ ಪ್ರಾಣಿಗಳೆಲ್ಲವೂ ಗೊಂದಲದಿಂದ ಒಂದರ ಮುಖವನ್ನು ಇನ್ನೊಂದು ನೋಡಿದವು. “ಇದೇನಿದು? ನೀನು ಜಿಗಿದು ದಾಟಿದ್ದು ತೊರೆಯನ್ನು, ಚಂದ್ರನನ್ನಲ್ಲ” ಎಂದಿತು ಕುದುರೆ.
ತೊರೆಯ ಆ ಬದಿಯಲ್ಲಿದ್ದ ಕಪಿಲೆ ದನ ಹೇಳಿತು, “ಬನ್ನಿ, ತೊರೆಯ ಹತ್ತಿರ ಬಂದು ನೋಡಿ.” ಎಲ್ಲ ಪ್ರಾಣಿಗಳೂ ತೊರೆಯ ಅಂಚಿಗೆ ಬಂದು ತೊರೆಯ ನೀರನ್ನು ನೋಡಿದಾಗ, ಆ ನೀರಿನಲ್ಲಿ ಪೂರ್ಣಚಂದ್ರನ ಪ್ರತಿಬಿಂಬ ಹೊಳೆಯುತ್ತಿತ್ತು. ಎಲ್ಲ ಪ್ರಾಣಿಗಳೂ ಗೊಳ್ಳನೆ ನಕ್ಕವು. ಕಪಿಲೆ ದನದ ಚಾಣಾಕ್ಷತನ ಅವುಗಳಿಗೆ ಈಗ ಅರ್ಥವಾಗಿತ್ತು.

"ನೋಡಿದಿರಾ? ನಾನು ಖಂಡಿತವಾಗಿಯೂ ಚಂದ್ರನ ಮೇಲೆ ಜಿಗಿಯಬಲ್ಲೆ" ಎನ್ನುತ್ತಾ ಕಪಿಲೆ ದನ ಪುನಃ ತೊರೆಯ ಆ ಬದಿಯಿಂದ ಜಿಗಿದು ಹೊಲಕ್ಕೆ ಬಂತು. ಈಗ ಎಲ್ಲ ಪ್ರಾಣಿಗಳು ಚಪ್ಪಾಳೆ ತಟ್ಟಿದವು.

“ಪರವಾಗಿಲ್ಲ. ಇದು ಕಪಿಲೆ ದನದ ಒಳ್ಳೆಯ ತಂತ್ರ" ಎಂದಿತು ಕಾವಲು ನಾಯಿ. "ಅದ್ಭುತ. ಇದು ಹೇಗಾಯಿತೆಂದು ನನಗೆ ಯಾರಾದರೂ ವಿವರಿಸುತ್ತೀರಾ?" ಎಂದು ಮಿಕಮಿಕ ನೋಡುತ್ತಾ ಕೇಳಿತು ಕುರಿ.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ