ಚಂದ್ರನ ಮೇಲ್ಮೈಯಲ್ಲಿರುವ ಮುಖ್ಯ ಬಾಂಬುಕುಳಿಗಳು!
ಹುಣ್ಣಿಮೆಯ ರಾತ್ರಿಯಂದು, ದೂರದರ್ಶಕವಿಲ್ಲದೆ, ಬರಿಗಣ್ಣಿನಿಂದ ಚಂದ್ರನನ್ನು ನೋಡಿದರೆ, ಅದರ ಮೇಲ್ಮೈಯಲ್ಲಿ ಕಪ್ಪು ಮತ್ತು ಬೆಳಕಿನ ಕಲೆಗಳು ಕಾಣಸಿಗುತ್ತದೆ. ಈ ಕಲೆಗಳನ್ನು "ಚಂದ್ರನ ಮುಖ್ಯ ಬಾಂಬುಕುಳಿಗಳು" (Impact Lunar Craters) ಎಂದು ಕರೆಯಲಾಗುತ್ತದೆ. ಅಂತರರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಪ್ರಸ್ತುತ 9,137 ಬಾಂಬುಕುಳಿಗಳನ್ನು ಗುರುತಿಸಿದೆ; ಅವುಗಳಲ್ಲಿ 1,675ಅನ್ನು ನಾಮಕರಣಗೊಳಿಸಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಗೆಲಿಲಿಯೋ ಗೇಲಿಲಿ ತಮ್ಮ ದೂರದರ್ಶಕವನ್ನು 1609ರಲ್ಲಿ ಶೋಧಿಸಿ, ನವೆಂಬರ್ 30, 1609ರಂದು ಅದನ್ನು ಮೊದಲ ಬಾರಿಗೆ ಚಂದ್ರದತ್ತ ತಿರುಗಿಸಿದರು. ಆ ಸಮಯದಲ್ಲಿ - ಅಂದಿನ ಸಾಮಾನ್ಯ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ - ಚಂದ್ರನು ಪರಿಪೂರ್ಣ ಗೋಳವಾಗಿರಲಿಲ್ಲ ಎಂದು ಅವರು ಕಂಡುಹಿಡಿದರು; ಬದಲಾಗಿ, ಚಂದ್ರನ ಮೇಲ್ಮೈಯು ಪರ್ವತಗಳು ಮತ್ತು ಕಪ್ ತರಹದ ಬೃಹತ್ ತಗ್ಗುಗಳನ್ನು ಹೊಂದಿತ್ತು. ಈ ಬೃಹತ್ ತಗ್ಗುಗಳನ್ನು ಜೊಹಾನ್ ಹೈರೋನಿಮಸ್ ಶ್ರೋಟರ್ (Johann Hieronymus Schroeter) ಎಂಬುವರು 'ಬಾಂಬುಕುಳಿ'ಗಳು ಎಂದು ಹೆಸರಿಸಿದರು.
ತರುವಾಯ 1651ರಲ್ಲಿ, ಜಿಯೋವಾನಿ ಬಟಿಸ್ಟಾ ರಿಕಿಯೋಲಿ (Giovanni Battista Riccioli) - ಖಗೋಳಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಜೆಸ್ಯೂಟ್ ಪ್ರಾಧ್ಯಾಪಕರು - ಚಂದ್ರನ ಸಂಪೂರ್ಣ ನಕ್ಷೆಯೊಂದಿಗೆ _'Almagestum Novum'_ ("ಹೊಸ ಅಲ್ಮಾಜೆಸ್ಟ್") ಎಂಬ ಖಗೋಳಶಾಸ್ತ್ರದ ಸಮಗ್ರ ಕೃತಿಯನ್ನು ಸಿದ್ಧಪಡಿಸಿದರು. ಅವರು ಚಂದ್ರನ ಮೇಲ್ಮೈಯಲ್ಲಿ ಕಂಡುಬರುವ ಈ ಅತ್ಯದ್ಭುತ ರಚನೆಗಳನ್ನು - ಮುಖ್ಯ ಬೃಹತ್ ಒಂಬತ್ತು ಬಾಂಬುಕುಳಿಗಳನ್ನು - ಮಧ್ಯಯುಗದ ಅತ್ಯುತ್ತಮ ಮುಸ್ಲಿಂ ಖಗೋಳಶಾಸ್ತ್ರಜ್ಞರ ಕಲಿಕೊಡುಗೆಗಳನ್ನು ಎತ್ತಿ ಹಿಡಿಯುತ್ತ, ಅವರ ಶುಭನಾಮದಿಂದ ಹೆಸರಿಸಿದರು.
'ಇಬ್ನ್ ಹೈಥಮ್'ರವರ ಬಾಂಬುಕುಳಿ (Lunar Impact Crater of Ibn Haytham) : ಈ ಮುಖ್ಯ ಬಾಂಬುಕುಳಿಯನ್ನು ಅರಬ್ ಮುಸ್ಲಿಂ ವಿಜ್ಞಾನಿ ಇಬ್ನ್ ಅಲ್-ಹೈಥಮ್ ಅವರ ಶುಭನಾಮದಿಂದ ನಾಮಕರಣಗೊಳಿಸಲಾಗಿದೆ. 'ಅಲ್ ಹೈಥಮ್' ಚಂದ್ರನ ಮೇಲ್ಮೈಯಲ್ಲಿರುವ ಪ್ರಭಾವದ ಬಾಂಬುಕುಳಿಯಾಗಿದ್ದು, ಅದು ಚಂದ್ರನ ಸಮೀಪ ಭಾಗದ ಪೂರ್ವ ಅಂಗದ ಬಳಿ ಇದೆ. ಇದರ ಪಶ್ಚಿಮಕ್ಕೆ ಮೇರ್ ಕ್ರಿಸಿಯಂ (Mare Crisium) ಕಾಣಸಿಗುತ್ತದೆ. 'ಅಲ್ ಹೈಥಮ್'ನ ಗಡಿರೇಖೆ ಸುಮಾರು ವೃತ್ತಾಕಾರವಾಗಿದೆ, ಆದರೆ ಪ್ರತ್ಯೇಕತೆಯ ಕೋನದ ಕಾರಣದಿಂದಾಗಿ ಭೂಮಿಯಿಂದ ನೋಡಿದಾಗ ಅದು ಆಯತವಾಗಿ ಕಾಣುತ್ತದೆ. ಒಳಗಿನ ಗೋಡೆಗಳು ಮತ್ತು ಬಾಂಬುಕುಳಿಯ ನೆಲವು ಒರಟಾಗಿ ಅನಿಯಮಿತವಾಗಿದೆ. ನುಡಿದ ಬಾಂಬುಕುಳಿಯ ಅಡ್ಡಳತೆ ವ್ಯಾಸವು 32 ಕಿಲೋಮೀಟರು ಆಗಿದ್ದು, ಮೂರು ಕಿಲೋಮೀಟರು ಆಳವಾಗಿದೆ; ಚಂದ್ರನ Coordinates 15.9°N 71.8°E ನಲ್ಲಿ ಈ ಬಾಂಬುಕುಳಿ ನೆಲೆಗೊಳಿಸಿದೆ.
'ಇಬ್ನ್ ಫಿರ್ನಾಸ್'ರವರ ಬಾಂಬುಕುಳಿ (Lunar Impact Crater of Ibn Firnas) : ಆಧುನಿಕ ಹಾರುವ ಯಂತ್ರಗಳನ್ನು ಶೋಧಿಸಿದ್ದ, ಮತ್ತು ಗ್ರಹಗಳ ಮತ್ತು ನಕ್ಷತ್ರಗಳ ಚಲನೆಯನ್ನು ಅನುಕರಿಸಲು ಬಳಸಬಹುದಾದ ಉಂಗುರಗಳ ಸರಪಳಿಯನ್ನು ರೂಪಿಸಿದ, ಅಂದಲೂಸಿನ ವಿಜ್ಞಾನಿಯಾದ ಅಬ್ಬಾಸ್ ಇಬ್ನ್ ಫಿರ್ನಾಸ್ ಅವರ ಹೆಸರಿನಿಂದ ಹೆಸರಿಸಿದ ಈ ಮುಖ್ಯ ಬಾಂಬುಕುಳಿಯು ಚಂದ್ರನ ದೂರದ ಭಾಗದಲ್ಲಿ ('ಚಂದ್ರನ ದೂರ'ದ ಭಾಗವು ಚಂದ್ರನ ಅರ್ಧಗೋಳವಾಗಿದ್ದು, ಅದು ಯಾವಾಗಲೂ ಭೂಮಿಯಿಂದ ದೂರದಲ್ಲಿದೆ) ಇದೆ. ಅದರ ನೈಋತ್ಯ ಅಂಚಿನ ಹೊರಭಾಗಕ್ಕೆ ಲಗತ್ತಿಸಲಾಗಿದೆ ಪ್ರಮುಖ ಬಾಂಬುಕುಳಿ "ಕಿಂಗ್". 'ಕಿಂಗ್ ಬಾಂಬುಕುಳಿಯು' ಒಂದು ಪ್ರಮುಖ ಚಂದ್ರನ ಪ್ರಭಾವದ ಕುಳಿಯಾಗಿದ್ದು, ಅದು ಚಂದ್ರನ ದೂರದಲ್ಲಿದೆ ಮತ್ತು ಭೂಮಿಯಿಂದ ನೇರವಾಗಿ ವೀಕ್ಷಿಸಲು ಅಸಾಧ್ಯವಾಗಿದೆ. ಉತ್ತರಕ್ಕೆ ಕೆಲವೇ ಕಿಲೋಮೀಟರ್ ದೂರದಲ್ಲಿ, ತಿಂಗಳಿನ ಒರಟಾದ ಭೂಪ್ರದೇಶದಿಂದ ಇದು ಬೇರ್ಪಟ್ಟಿದೆ. 89 ಕಿಲೋಮೀಟರು ಉದ್ದದ ಈ ಬೃಹತ್ ಬಾಂಬುಕುಳಿಯು, Coordinates: 6.8°N 122.3°Eಯಲ್ಲಿ ನೆಲೆಯರಿಸಿದೆ.
'ಅಲ್-ಸೂಫಿ'ರವರ ಬಾಂಬುಕುಳಿ (Lunar Impact Crater of Al-Sufi) : 'ಅಝೋಫಿ' ಅಥವ 'ಅಲ್-ಸೂಫಿ'ಯು ಚಂದ್ರನ ಒಂಬತ್ತನೇ ವಿಭಾಗದಲ್ಲಿರುವ ಪ್ರಭಾವ ಬಾಂಬುಕುಳಿಯಾಗಿದ್ದು, ಅದು ಚಂದ್ರನ ಕಡಿದಾದ ದಕ್ಷಿಣ-ಮಧ್ಯ ಎತ್ತರದ ಪ್ರದೇಶದಲ್ಲಿದೆ. 10ನೇ ಶತಮಾನದ ಪರ್ಷಿಯನ್ ಖಗೋಳಶಾಸ್ತ್ರಜ್ಞ ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರ ಹೆಸರಿನಿಂದ ಈ ಬಾಂಬುಕುಳಿಯನ್ನು ಹೆಸರಿಸಲಾಗಿದೆ. 'ಅಝೋಫಿ'ಯು ಅಲ್-ಸೂಫಿಯವರ ಪಾಶ್ಚಿಮಾತ್ಯ ಹೆಸರಾಗಿದೆ. 'ಅಲ್-ಸೂಫಿ'ಯ ಅಗಲವಾದ ಹೊರ-ಅಂಚುವು, ದುಂಡಾದ ಮೂಲೆಗಳೊಂದಿಗೆ ಸ್ವಲ್ಪಮಟ್ಟಿಗೆ ಬಹುಭುಜಾಕೃತಿಯ ಆಕಾರವನ್ನು ಹೊಂದಿದೆ. ಅದರ ಅಂಚು ತುಲನಾತ್ಮಕವಾಗಿ ಚೂಪಾದ ಮತ್ತು ಸೀಳಿನಂತಿದೆ. ರಿಮ್ [Rim] ಗಮನಾರ್ಹವಾಗಿ ಸಣ್ಣ ಬಾಂಬುಕುಳಿಗಳಿಂದ ಪ್ರಭಾವಿತವಾಗಿಲ್ಲ- ಇದು ಒಳಗಿನ ಈಶಾನ್ಯ ಗೋಡೆಯ ಮೇಲೆ ಇರುತ್ತದೆ. ಒಳನಾಡಿನ ನೆಲವು ಕೇಂದ್ರ ಶಿಖರವನ್ನು ಹೊಂದಿಲ್ಲ ಮತ್ತು ಕೆಲವು ಸಣ್ಣ ಬಾಂಬುಕುಳಿಗಳಿಂದ (Craterlets) ಮಾತ್ರ ಗುರುತಿಸಲ್ಪಟ್ಟಿದೆ. 47 ಕಿಲೋಮೀಟರಿನ ಅಡ್ಡಳತೆ ಹೊಂದಿರುವ ಈ ಬಾಂಬುಕುಳಿಯು, 3.7 ಕಿಲೋಮೀಟರು ಆಳವಾಗಿದೆ. ನುಡಿದ ಬಾಂಬುಕುಳಿಯು Coordinates: 6.8°N 122.3°Eಯಲ್ಲಿ ನೆಲೆಯರಿಸಿದೆ.
'ಮಸಿಉಲ್ಲಾಹ್'ರವರ ಬಾಂಬುಕುಳಿ (Lunar Impact Crater of Messala) : 'ಮೆಸ್ಸಾಲಾ' ಚಂದ್ರನ ಹದಿಮೂರನೇ ವಲಯದಲ್ಲಿರುವ ಒಂದು ಬಾಂಬುಕುಳಿಯಾಗಿದ್ದು, 8ನೇ ಮತ್ತು 9ನೇ ಶತಮಾನದ ನಡುವೆ ವಾಸಿಸುತ್ತಿದ್ದ ಮಸಿಉಲ್ಲಾಹ್ ಇಬ್ನ್ ಅಶ್'ಅರಿ ಹೆಸರಿನ ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರ ಹೆಸರಿನಿಂದ ನಾಮಕರಣಗೊಳಿಸಲಾಗಿದೆ. 'ಮೆಸ್ಸಾಲಾ'ವು ಹಲವು ಆಯಾಮದ ಚಂದ್ರನ ಪ್ರಭಾವದ ಬಾಂಬುಕುಳಿಯಾಗಿದ್ದು, "ಗೋಡೆಯ ಬಯಲು" (Walled Plain) ಎಂದು ಕರೆಯಲ್ಪಡುವ ಪ್ರಭಾವದ ವೈಶಿಷ್ಟ್ಯಗಳ ವರ್ಗಕ್ಕೆ ಈ ಬಾಂಬುಕುಳಿ ಸೇರಿದೆ. ಇದು ಚಂದ್ರನ ಈಶಾನ್ಯ ಭಾಗದಲ್ಲಿ ನೆಲೆಗೊಂಡಿದೆ. ಒಳಪ್ರದೇಶದ ನೆಲವು ತುಲನಾತ್ಮಕವಾಗಿ ಸಮತಟ್ಟಾಗಿದೆ; ಆದರೆ, ಕೆಲವು ಸ್ಥಳಗಳಲ್ಲಿ ಮೇಲ್ಮೈಯಲ್ಲಿ ಕ್ರಮಭಮ್ಗಗಳನ್ನು ಹೊಂದಿರುತ್ತದೆ. ನೆಲದಾದ್ಯಂತ ಹಲವಾರು ಸಣ್ಣ ಬಾಂಬುಕುಳಿಗಳಿವೆ, ಅವುಗಳು ಈಗ ಮೇಲ್ಮೈಯಲ್ಲಿ ಕೆಲವು ತಗ್ಗುಗಳಿಂದ ಕೂಡಿದೆ. 1.1 ಕಿ.ಮೀ ಆಳವಿರುವ ಮತ್ತು 125 ಕಿ.ಮೀ. ಅಗಲದ ಈ ಬಾಂಬುಕುಳಿಯು, Coordinates 39.2°N 59.9°Eಯಲ್ಲಿ ಸಿಗುತ್ತದೆ.
*'ಅಲ್-ಫರ್ಘನಿ'ರವರ ಬಾಂಬುಕುಳಿ (Lunar Impact Crater of Messala) : 'ಅಲ್-ಫರ್ಘನಿ' ಚಂದ್ರನ ಎರಡನೇ ವಲಯದಲ್ಲಿರುವ ಒಂದು ಬಾಂಬುಕುಳಿಯಾಗಿದ್ದು, ಇದನ್ನು ತುರ್ಕಿ ದೇಶದ ಖಗೋಳಶಾಸ್ತ್ರಜ್ಞ 'ಅಲ್-ಫರ್ಘನಿ'ರವರ ಹೆಸರಿನಿಂದ ಹೆಸರಿಸಲಾಗಿದೆ. ('ಅಲ್-ಫರ್ಘನಿ' ಅವರು ಖಲೀಫಾ ಅಲ್-ಮಾಮುನ್'ರ ಖಗೋಳಶಾಸ್ತ್ರಜ್ಞರ ಸಂಘದ ಸದಸ್ಯರಾಗಿದ್ದರು.) 'ಅಲ್-ಫರ್ಘನಿ' ಚಂದ್ರನ ಪ್ರಭಾವದ ಬಾಂಬುಕುಳಿಯಾಗಿದ್ದು, ಇದು ಮೇರ್ ಟ್ರಾಂಕ್ವಿಲ್ಲಿಟಾಟಿಸ್‌ನ (Mare Tranquillitatis) ನೈಋತ್ಯಕ್ಕೆ ಒರಟಾದ ಎತ್ತರದ ಪ್ರದೇಶದಲ್ಲಿದೆ. ಒಳಪ್ರದೇಶದ ನೆಲವು ಬಾಂಬುಕುಳಿಯ ರಿಮ್ಮಿನ ಅರ್ಧದಷ್ಟು ವ್ಯಾಸವನ್ನು ಹೊಂದಿದೆ. ಬಾಂಬುಕುಳಿಯ ಅಗಲವು ಇಪ್ಪತ್ತು ಕಿಲೋಮೀಟರು ಆಗಿದ್ದು, 2.8 ಕಿ.ಮೀ. ಆಳವಾಗಿದ್ದು, Coordinates 5.4°S 19.0°Eಯಲ್ಲಿ ಸ್ಥಳ ನಿರ್ದೇಶನವಾಗಿದೆ.
'ಅಲ್-ಮಾಮೂನ್'ರವರ ಬಾಂಬುಕುಳಿ (Lunar Impact Crater of Al-Mamun) : 'ಅಲ್-ಮಾಮೂನ್' ಚಂದ್ರನ ಒಂಬತ್ತನೇ ವಲಯದಲ್ಲಿರುವ ಬಾಂಬುಕುಳಿಯಾಗಿದ್ದು, ಖಲೀಫಾ ಹಾರುನ್ ಅಲ್-ರಶೀದ್'ರವರ ಪುತ್ರರಾದ ಖಲೀಫಾ ಅಲ್-ಮಾಮುನ್ ಅವರ ಶುಭನಾಮದಿಂದ ನಾಮಕರಿಸಲಾಗಿದೆ. ಅಲ್-ಮಾಮೂನ್ ಅವರು ಬಾಗ್ದಾದ್‌ನಲ್ಲಿರುವ "ಬೈತ್ ಅಲ್-ಹಿಕ್ಮಾ"ದ (House of Wisdom) ಸ್ಥಾಪಕರಾಗಿದ್ದರು. 'ಅಲ್-ಮಾಮೂನ್' ಚಂದ್ರನ ದಕ್ಷಿಣ-ಮಧ್ಯ ಪ್ರದೇಶದಲ್ಲಿನ ಕಡಿದಾದ ಎತ್ತರದ ಪ್ರದೇಶದಲ್ಲಿದೆ. ಇದು ಅಬುಲ್-ಫೆದಾ ಬಾಂಬುಕುಳಿಯ ದಕ್ಷಿಣ-ಆಗ್ನೇಯಕ್ಕೆ ಇದೆ. ಒಳಾಡಳಿತದ ಗೋಡೆಯು ಪೂರ್ವ ಭಾಗದಲ್ಲಿ ಬೇರೆಡೆಗಿಂತ ವಿಶಾಲವಾಗಿದೆ. ಹೊರಗಿನ ಗೋಡೆಯು ಸಾಮಾನ್ಯವಾಗಿದೆ ಮತ್ತು ಕಿರಿ ಬಾಂಬುಕುಳಿಯ ಗರಿಗರಿಯನ್ನು ಹೊಂದಿರುವುದಿಲ್ಲ; ಆದರೆ, ನಂತರದ ಬಾಂಬುಕುಳಿಗಳಿಂದ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಒಳನಾಡಿನ ನೆಲವು ತುಲನಾತ್ಮಕವಾಗಿ ಸಮತಟ್ಟಾಗಿದೆ ಮತ್ತು ಕೆಲವು ಸಣ್ಣ ಬಾಂಬುಕುಳಿಗಳನ್ನು ಹೊರತುಪಡಿಸಿ ಗಮನಾರ್ಹ ಲಕ್ಷಣಗಳನ್ನು ಹೊಂದಿಲ್ಲ. ನುಡಿದ ಬಾಂಬುಕುಳಿಯ ಅಡ್ಡಳತೆ ವ್ಯಾಸವು 49 ಕಿ.ಮೀ, ಆಳವು 2.5 ಕಿ.ಮೀಯಾಗಿದ್ದು; Coordinates 16.8°S 15.2°Eಯಲ್ಲಿ ನೆಲೆಯರಿಸಿದೆ.
'ಅಲ್-ಬತ್ತಾನಿ'ರವರ ಬಾಂಬುಕುಳಿ (Lunar Impact Crater of Al-Albategnius) : 'ಅಲ್-ಬತ್ತಾನಿ' ತಿಂಗಳಿನ ಮೊದಲ ವಲಯದಲ್ಲಿರುವ - ಮಧ್ಯ ಎತ್ತರದ ಪ್ರದೇಶಗಳಲ್ಲಿ ನೆಲೆಗೊಂಡಿರುವ - ಬಾಂಬುಕುಳಿಯಾಗಿದ್ದು, 858ರಲ್ಲಿ ಜನಿಸಿದ ಅರಬ್ ಖಗೋಳಶಾಸ್ತ್ರಜ್ಞ ಅಲ್-ಬತ್ತಾನಿ ಅವರ ಹೆಸರಿನಿಂದ ಗುರುತಿಸಲಾಗಿದೆ. ಅಲ್-ಬತ್ತಾನಿ ಬಾಂಬುಕುಳಿಯು ಸಮತಟ್ಟಾದ ಒಳಭಾಗವನ್ನು ಹೊಂದಿದ್ದು, ಎತ್ತರದ ಮೆಟ್ಟಿಲುಗಳ ಶ್ರೇಣಿಗಳು ರಿಮ್'ನಿಂದ ಸುತ್ತುವರೆದಿರುವ ಗೋಡೆಯ ಬಯಲನ್ನು ರೂಪಿಸುತ್ತದೆ. ಹೊರಗಿನ ಗೋಡೆಯು ಸ್ವಲ್ಪಮಟ್ಟಿಗೆ ಷಡ್ಭುಜಾಕೃತಿಯ ಆಕಾರದಲ್ಲಿದೆ; ಅಪ್ಪಳಿಕೆಗಳು, ಕಣಿವೆಗಳು, ಮತ್ತು ಭೂಕುಸಿತಗಳಿಂದ ಹೆಚ್ಚು ಸವೆದುಹೋಗಿದೆ. ಇದು ಈಶಾನ್ಯ ಧ್ರುವದ ಉದ್ದಕ್ಕೂ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರವನ್ನು ತಲುಪುತ್ತದೆ. 129 ಕಿ.ಮೀ. ಅಗಲ ಮತ್ತು 4.4 ಕಿ.ಮೀ. ಆಳವಿರುವ ಅಲ್-ಬತ್ತಾನಿ ಬಾಂಬುಕುಳಿ, Coordinates 11.2°S 4.1°E ಯಲ್ಲಿ ನೆಲೆಸಿದೆ.
'ಥಾಬಿತ್'ರವರ ಬಾಂಬುಕುಳಿ (Lunar Impact Crater of Thebit) : 'ಥಾಬಿತ್' ಚಂದ್ರನ ಎಂಟನೇ ವಲಯದಲ್ಲಿರುವ ಪ್ರಸಿದ್ಧ ವೃತ್ತಾಕಾರದ ಬಾಂಬುಕುಳಿಯಾಗಿದ್ದು, ಅಬ್ಬಾಸಿದ್ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ಮೆಕ್ಯಾನಿಕ್ ಮತ್ತು ವೈದ್ಯ 'ಥಾಬಿತ್ ಇಬ್ನ್ ಖುರ್ರಾ' ಅವರ ಹೆಸರಿನಿಂದ ನಾಮಕರಣಗೊಳಿಸಲಾಗಿದೆ. ಥಾಬಿತ್ ಬಾಂಬುಕುಳಿಯು 'ಮೇರ್ ನುಬಿಯಂ'ನ (Mare Nubium) ಆಗ್ನೇಯ ತೀರದಲ್ಲಿರುವ ಚಂದ್ರನ ಬಹಳ ಪ್ರಭಾವ ಹೊಂದಿರುವ ಬಾಂಬುಕುಳಿಯಾಗಿದೆ. ನುಡಿದ ಬಾಂಬುಕುಳಿಯ ಅಗಲವು 57 ಕಿ.ಮೀ ಮತ್ತು ಆಳವು 3.3 ಕಿ.ಮೀಯಾಗಿದೆ. ಈ ಬಾಂಬುಕುಳಿಯು Coordinates 22.0°S 4.0°Wಯಲ್ಲಿ ನೆಲೆಗೊಳಿಸಿದೆ.
'ಅಲ್- ಝರ್'ಕಾಲಿ'ರವರ ಬಾಂಬುಕುಳಿ (Lunar Impact Crater of Arzachel) : 'ಅಲ್- ಝರ್'ಕಾಲಿ' ಚಂದ್ರನ ಎಂಟನೇ ವಲಯದಲ್ಲಿರುವ ಒಂದು ಬಾಂಬುಕುಳಿಯಾಗಿದ್ದು; ಇದನ್ನು ಯಹೂದಿ ಮೂಲದ ಪಾಶ್ಚಿಮಾತ್ಯ ಅರಬ್ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞರಾದ "ಅಬು ಇಸ್'ಹಾಕ್ ಇಬ್ರಾಹಿಂ ಅಲ್- ಝರ್'ಕಾಲಿ"ರವರ ಹೆಸರನ್ನು ಇಡಲಾಗಿದೆ. ಅಲ್- ಝರ್'ಕಾಲಿ ಬಾಂಬುಕುಳಿಯು ತನ್ನ ರಚನೆಯಲ್ಲಿ ಗಮನಾರ್ಹವಾಗಿ ಸ್ಪಷ್ಟವಾಗಿದೆ ಮತ್ತು ಪ್ರೌಢ ಹವ್ಯಾಸಿ ಖಗೋಳಶಾಸ್ತ್ರಜ್ಞರಿಗೆ ನೆಚ್ಚಿನ ದೂರದರ್ಶಕ ವೀಕ್ಷಣೆಯ ವಿಷಯವಾಗಿದೆ. ಅಪೊಲ್ಲೊ 16 ಗಗನನೌಕೆಯು ಇದೇ ಬಾಂಬುಕುಳಿಯ ಬಳಿ ನೆಲಕ್ಕಿಳಿದಿತ್ತು. ಈ ಬಾಂಬುಕುಳಿಯ ಬಳಿ ನೀರು ಸಿಗಬಹುದೆಂದು ನಾಸಾ ವಿಜ್ಞಾನಿಗಳ ಕಪೋಲಕಲ್ಪಿತ ಉಮೇದುಗಳಿವೆ. 96 ಕಿ.ಮೀ ಉದ್ದದ ಈ ಬಾಂಬುಕುಳಿಯು 3.6 ಕಿ.ಮೀ ಆಳವನ್ನು ಹೊಂದಿದೆ. ಪ್ರಾತಃಕಾಲದಲ್ಲಿ ಅರುಣೋದಯದ ಹೊತ್ತಿಗೆ 3° Colongitudeಯಲ್ಲಿ ಈ ಬಾಂಬುಕುಳಿಯನ್ನು ನಾವು ನೋಡಬಹುದು. Coordinates 18.2°S 1.9°Wಯಲ್ಲಿ ಈ ಬಾಂಬುಕುಳಿಯ ಸ್ಥಳ ನಿರ್ದೇಶನವಾಗಿದೆ.
ಇಸ್ಲಾಮಿನ ಸ್ವರ್ಣ ಯುಗದಲ್ಲಿ ಮುಸ್ಲಿಂ ಖಗೋಳಶಾಸ್ತ್ರಜ್ಞರು ಆಧುನಿಕ ಖಗೋಳಶಾಸ್ತ್ರಕ್ಕೆ ಕರುಣಿಸಿದ ಅಗಣಿತ ಕಲಿಕೊಡುಗೆಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಖಗೋಳಶಾಸ್ತ್ರೀಯ ಸಂಘವು ಹಲವಾರು ಆಕಾಶಕಾಯಗಳಿಗೆ, ಕ್ಷುದ್ರ ಗ್ರಹಗಳಿಗೆ, ನಕ್ಷತ್ರಗಳಿಗೆ, ತಿಂಗಳಿನ ಬಾಂಬುಕುಳಿಗಳಿಗೆ ಮುಸ್ಲಿಂ ಖಗೋಳತಜ್ಞರ ಶುಭನಾಮದಿಂದ ನಾಮಕರಣಗೊಳಿಸಿ ಅವರನ್ನು ಸನ್ಮಾನಿಸಿತು. ಅಂತರೀಕ್ಷದಲ್ಲಿ ತೇಲುತ್ತಿರುವ ಮುಸ್ಲಿಂ ವಿಜ್ಞಾನಿಗಳ ಹೆಸರುವುಳ್ಳ ಆಕಾಶಕಾಯಗಳನ್ನು ಗಮನಿಸಿ ಖ್ಯಾತ ಕವಿ ಫೈಝ್ ಅಹ್ಮದ್ ಫೈಝ್ ಅವರು _'ಚಲೋ ಅಬ್ ಐಸಾ ಕರ್ತೆ ಹೈ, ಸಿತಾರ್ ಬಾಂಟ್ ಲೇತೆ ಹೈ'_ ಎಂದು ಸೊಗಸಾಗಿ ಬರೆಯುತ್ತಾರೆ.
ಚಿತ್ರದಲ್ಲಿ: ಅಪೋಲೊ ಬಾಹ್ಯಾಕಾಶ ನೌಕೆ ಕ್ಲಿಕ್ಕಿಸಿದ ಕೆಲವು ಪ್ರಮುಖ ಚಂದ್ರನ ಬಾಂಬುಕುಳಿಗಳು
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು