ಚಂದ್ರಯಾನ - 3 ಯಶಸ್ವಿಯಾಗಲಿ

ಈಗಾಗಲೇ ಚಂದ್ರಯಾನ 3 ತನ್ನ ಕೊನೆಯ ಹಂತದ ಕ್ಷಣಗಣನೆಯಲ್ಲಿದೆ. ಜುಲೈ 14ರಂದು ಉಡ್ಡಯನಗೊಂಡ ಈ ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ಹಂತದಲ್ಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದರೆ ಇದೊಂದು ಅತ್ಯಂತ ದೊಡ್ಡ ಮೈಲಿಗಲ್ಲಾಗಲಿದೆ ಎನ್ನುವುದು ಇಸ್ರೋ ವಿಜ್ಞಾನಿಗಳ ಮಾತು. ಏಕೆಂದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಲ್ಲಿಯ ತನಕ ಯಾವುದೇ ದೇಶದ ಉಪಗ್ರಹಗಳು ಇಳಿದಿಲ್ಲ. ಆ ಭಾಗ ನಮಗಿನ್ನೂ ಅಪರಿಚಿತವಾಗಿಯೇ ಉಳಿದಿದೆ.
ಚಂದ್ರಯಾನ 3 ಬಗ್ಗೆ ಆಲೋಚಿಸುತ್ತಾ ಇರುವಾಗಲೇ ನನಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಒಂದು ಪೋಸ್ಟ್ ಕಂಡಿತು. ಅದರ ಮಾಹಿತಿಗಳು ಬಹಳ ಅರ್ಥಪೂರ್ಣವಾಗಿದ್ದವು. ಆದರೆ ಅದನ್ನು ಹಂಚಿಕೊಳ್ಳುವವರು ಅದನ್ನು ಬರೆದ ಲೇಖಕರ ಹೆಸರನ್ನೇ ಕತ್ತರಿಸಿಬಿಟ್ಟಿದ್ದಾರೆ. ಇದು ಬಹಳ ಬೇಸರದ ಹಾಗೂ ಅಕ್ಷ್ಯಮ್ಯ ಅಪರಾಧದ ಸಂಗತಿ. ಏಕೆಂದರೆ ಬೇರೊಬ್ಬರ ಬರಹವನ್ನು ನಮ್ಮದೆಂದು ಹಂಚುವವರು ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದ್ದಾರೆ. ನನಗೆ ಬಂದ ಈ ಉತ್ತಮ ಬರಹವನ್ನು ಆ ಅಜ್ಞಾತ ಲೇಖಕರಿಗೆ ಕೃತಜ್ಞತೆ ಸಲ್ಲಿಸುತ್ತಾ ಯಥಾವತ್ತಾಗಿ ಹಂಚಿಕೊಳ್ಳುತ್ತಿರುವೆ. ಓದಿ ಮತ್ತು ಚಂದ್ರಯಾನದ ಯಶಸ್ಸಿಗಾಗಿ ಶುಭ ಹಾರೈಸಿ…
“ನಾವು ಜಾತ್ರೇಲಿ ಜಸ್ಟ್ ಹತ್ತು ರುಪಾಯಿ ಕೊಟ್ಟು ತಗೊಂಡ ಬಲೂನೊಂದನ್ನು ಮನೆಗೆ ತಗೊಂಡು ಹೋಗುವಾಗ್ಲೇ, ಎಲ್ಲಿ ನಡುದಾರೀಲೇ ಒಡೆದು ಹೋಗಿಬಿಡುತ್ತೋ ಅಂತೆಲ್ಲಾ ದಾರಿಯುದ್ದಕ್ಕೂ ಫುಲ್ ಟೆನ್ಷನ್ ಆಗ್ತಿರುತ್ತೆ.
ಅಂತಾದ್ರಲ್ಲಿ.. ನೂರಾರು ವಿಜ್ಞಾನಿಗಳು ತಂತ್ರಜ್ಞರ ತಂಡವೊಂದು, ನಾಲ್ಕು ವರ್ಷಗಳ ಕಾಲ ನೀರು ನಿದ್ರೆಯ ಪರಿವೆಯಿಲ್ಲದೆ,. ಒಂದಲ್ಲ ಎರಡಲ್ಲ ಒಟ್ಟು 615+ ಕೋಟಿ ರುಪಾಯಿಗಳನ್ನು ಖರ್ಚು ಮಾಡಿ ತಯಾರಿಸಿದ ನೌಕೆಯೊಂದನ್ನು, ಬರೋಬ್ಬರಿ 3.84 ಲಕ್ಷ ಕಿಮೀ ದೂರದ ಮಹಾಯಾತ್ರೆಯೊಂದಕ್ಕೆ ಕಳಿಸಿ, ಕಳೆದ ನಲವತ್ತು ದಿನದಿಂದ ಕಣ್ರೆಪ್ಪೆಯೂ ಮುಚ್ಚದೆ, ಯಾವುದೇ ಸಮಸ್ಯೆ ಆಗದಂತೆ ನೌಕೆಯು ತನ್ನ ಗಮ್ಯ ತಲುಪುವ ಕ್ಷಣಕ್ಕಾಗಿ ಕಾಯುತ್ತಾ ಕುಳಿತಿದ್ದಾರಲ್ಲ. ಅದಿನ್ಯಾವ ರೇಂಜಿನ ಒತ್ತಡ, ಕಾತರ, ಟೆನ್ಷನ್ನು, ಭಯ, ಆತಂಕಗಳೆಲ್ಲಾ ಅವರೊಳಗೆ ಇರಬಹುದು ಜಸ್ಟ್ ಇಮ್ಯಾಜಿನ್...
ಅದೂ ಅಲ್ಲದೆ..ಎಲ್ಲವೂ ಅಂದುಕೊಂಡಂತೆಯೇ, ಚಂದ್ರನ ಮೇಲೆ ಸೇಫಾಗಿ ಹೋಗಿ ಲ್ಯಾಂಡ್ ಆದ್ಮೇಲೂ ಕೂಡಾ, ಚಂದ್ರನ ನೆಲದಲ್ಲಿ ಸುತ್ತಾಡೋಕೆ ಸಿಗೋದಾದ್ರೂ ಎಷ್ಟು ಸಮಯ ಗೊತ್ತಾ? ಕೇವಲ ಚಂದ್ರನಲ್ಲಿನ ಒಂದು ಹಗಲು ಅಷ್ಟೇ.. (ಚಂದ್ರನ ಒಂದು ಹಗಲು ಭೂಮಿಯ ಮೇಲಿನ 14 ದಿನಗಳಿಗೆ ಸಮ) ಒಂದು ಸಲ ಚಂದ್ರನಲ್ಲಿ ಸೂರ್ಯಾಸ್ತವಾಯ್ತೋ, ನಮ್ಮ ಪ್ರಗ್ಯಾನ್ ಹಾಗೂ ರೋವರ್ ನೌಕೆಗಳ ಆಟಗಳು ಮುಗಿದುಬಿಡುತ್ತವೆ. ಯಾಕೆಂದರೆ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಉಷ್ಣಾಂಶ ಮೈನಸ್ -250 ರಿಂದ -300ರ ವರೆಗೂ ಹೋಗೋದ್ರಿಂದಾಗಿ ಈ ವಾತಾವರಣದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಸರ್ವೈವ್ ಆಗೋದೆಲ್ಲಾ ಸೀನೇ ಇಲ್ಲ.
ಖುಷಿಯ ವಿಚಾರ ಏನಂದ್ರೆ… ಚಂದ್ರನ ಒಂದು ಹಗಲು ಭೂಮಿಯಲ್ಲಿನ 14 ದಿನಗಳು. ಹಾಗಾಗಿ ನಮಗೆ ಹದಿನಾಲ್ಕು ದಿನಗಳ ಕಾಲಾವಕಾಶವಿದೆ ಚಂದ್ರನಲ್ಲಿ ಹುಡುಕಾಟ ನಡೆಸೋಕೆ. ಇಷ್ಟೊಂದೆಲ್ಲಾ ಖರ್ಚು ಮಾಡಿ, ಕಳೆದ ಸಲದ ಚಂದ್ರಯಾನ 2 ವಿಫಲವಾದ್ರೂ ಛಲ ಬಿಡದೆ ಪ್ರಯತ್ನ ಮಾಡಿ, ನಲವತ್ತು ದಿನದಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಲ್ಲವೂ ಒಳ್ಳೆಯದಾಗ್ಲಿ ಅಂತ ಆಕಾಶ ನೋಡ್ತಾ ಕೂತಿದ್ದಾರೆ ಇಸ್ರೋ ವಿಜ್ಞಾನಿಗಳು. ಇಂದು (ಆಗಸ್ಟ್ 23) ಸಂಜೆ 5.20pm ನಿಂದ ನಮ್ಮ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋಕೆ ಶುರುಮಾಡಲಿದೆ.
ಇಳಿಯುತ್ತಿದ್ದಂತೆಯೇ, ಜಗತ್ತಿನ ಭೂಪಟದಲ್ಲಿ ನಮ್ಮ ಭಾರತ ಐತಿಹಾಸಿಕ ದಾಖಲೆಯೊಂದನ್ನು ಬರೆದು ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಜಗತ್ತಿನ ಮೊದಲ ದೇಶವಾಗಿ ಎದೆಯುಬ್ಬಿಸಿ ನಿಲ್ಲಲಿದೆ. ಪ್ರತಿಯೊಂದು ಮನೆಯಲ್ಲೂ ಇಂದು ಬೆಳಿಗ್ಗಿನ ದೇವರ ದೀಪಗಳನ್ನು ಇಸ್ರೋ ಹೆಸರಲ್ಲೇ ಹಚ್ಚಿ, ಸಂಜೆಯ ಪರೀಕ್ಷೆಯಲ್ಲಿ ಇಸ್ರೋ ಗೆದ್ದು ಬೀಗಲಿ ಅಂತ ಇಷ್ಟದೈವಗಳಲ್ಲಿ ಬೇಡಿಕೊಳ್ಳೋಣ. ಒಳ್ಳೇ ಮನಸ್ಸಿಂದ ಏನೇ ಬೇಡಿಕೊಂಡ್ರೂ ಅಶ್ವಿನಿ ದೇವತೆಗಳು ಅಸ್ತು ಅಂತಾರಂತೆ. ಎಲ್ಲರೂ ಒಕ್ಕೊರಲಿನಿಂದ ಇಸ್ರೋ ಜೊತೆ ನಿಲ್ಲೋಣ. ನಮ್ಮISRO ನಮ್ಮ ಹೆಮ್ಮೆ. ಒಳಿತಿಗಾಗಿ ಪ್ರಾರ್ಥಿಸೋಣ."
ಇದನ್ನು ಓದಿದ ನಂತರ ನಿಮಗೂ ಹೌದಲ್ಲವೇ? ಎಂದು ಅನಿಸಿದರೆ ನೀವೂ ಇಸ್ರೋದ ಈ ಸಾಧನೆಗೆ ಶುಭಕೋರಿ…
(ಸಂಗ್ರಹ) ಸಂತೋಷ್ ಕುಮಾರ್, ಸುರತ್ಕಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ