ಚಂಪಾರಣ್ಯ ಸತ್ಯಾಗ್ರಹ

ಚಂಪಾರಣ್ಯ ಸತ್ಯಾಗ್ರಹ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೫

“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು. ಇಲ್ಲಿನ ರೈತರ ಮತ್ತು ತಳಸಮುದಾಯದ ಅಜ್ಞಾನ, ಶೋಷಣೆ ಮತ್ತು ದಯನೀಯ ಬದುಕಿಗೆ ಬ್ರಿಟಿಷರಷ್ಟೇ ಅಲ್ಲ, ಸ್ಥಳೀಯ ಕುಲೀನರೂ ಕಾರಣವೆಂಬುದು ಅರಿವಿಗೆ ಬರುತ್ತಲೇ ಗಾಂಧೀಜಿಯವರ ಮನೋಭೂಮಿಕೆ ಬದಲಾಯಿತು. ಬ್ರಿಟಿಷ ರೊಂದಿಗೆ ಮುಖಾಮುಖಿ ಆಗಲೆಂದು ಬಂದ ಮಹಾತ್ಮನ ಆದ್ಯತೆಯೇ ಬದಲಾಯಿತು. ರಾಜಕೀಯ ಸ್ವಾತಂತ್ರ್ಯಕ್ಕೆ ಹೋರಾಡುವಷ್ಟೇ ತನ್ಮಯತೆ ಜನಸಾಮಾನ್ಯರನ್ನು ಅವರಿದ್ದ ಕತ್ತಲ ಕೂಪದಿಂದ ಮೇಲೆತ್ತಲಿಕ್ಕೂ ಬೇಕೆಂಬುದು ಅವರ ಅರಿವಿಗೆ ಬಂತು. ಅದು ಅವರ ಮುಂದಿನ ೩೦ ವರ್ಷಗಳ ನಡೆಯನ್ನು ರೂಪಿಸಿತು. ಅಂಥ ಹೊಸ ಗಾಂಧೀಜಿಯ ಉದಯಕ್ಕೆ ಕಾರಣವಾದ ಚಂಪಾರಣ್ಯ ಸತ್ಯಾಗ್ರಹದ ವಿಸ್ತ್ರತ ಚಿತ್ರಣವನ್ನು ಡಾ. ಎನ್. ಜಗದೀಶ ಕೊಪ್ಪ ಅವರು ಇಲ್ಲಿ ಬಿಡಿಸಿಟ್ಟಿದ್ದಾರೆ. ಈಗಾಗಲೇ ಗಾಂಧೀಜಿಯವರ ಬಗ್ಗೆ ಆರು ಕೃತಿಗಳನ್ನು ರಚಿಸಿದ ಇವರು ಈ ಕೃತಿಯ ಮೂಲಕ ಮಹಾತ್ಮನನ್ನು ನಮಗೆ ಇನ್ನಷ್ಟು ಹತ್ತಿರಕ್ಕೆ ತಂದಿದ್ದಾರೆ. ಗಾಂಧೀಜಿಯನ್ನು ಹೀಯಾಳಿಸುವವರನ್ನು 'ಮಾನಸಿಕ ಅಸ್ವಸ್ಥರು' ಎಂದು ಸಾತ್ವಿಕ ಕೋಪದಿಂದ ಹೀಗಳೆಯುತ್ತಲೇ ಲೇಖಕರು ನೀಲಿ ತೋಟದಲ್ಲಿ ಗಾಂಧೀಜಿಯೆಂಬ ಹೂ ಅರಳಿದ ಪರಿಯನ್ನು ಇಂದಿನ ಯುವ ಪೀಳಿಗೆಗೆ ತೋರಿಸಲು ತೋಳೇರಿಸಿದ್ದಾರೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ ನಾಗೇಶ ಹೆಗಡೆಯವರು ತಮ್ಮ ಮುನ್ನುಡಿಯಲ್ಲಿ.

ಚಂಪಾರಣ್ಯ ಸತ್ಯಾಗ್ರಹವು ಗಾಂಧೀಜಿಯವರ ಪ್ರಥಮ ಅಹಿಂಸಾತ್ಮಕ ಚಳುವಳಿ. ಈ ಚಳುವಳಿಯ ಮುಖಾಂತರ ಗಾಂಧೀಜಿ ಅಹಿಂಸಾ ಮಾರ್ಗದ ಶಕ್ತಿಯನ್ನು ದೇಶದೆಲ್ಲೆಡೆ ಹರಡುತ್ತಾರೆ. ಡಾ. ರಾಜೇಂದ್ರ ಪ್ರಸಾದ್ ಅವರು ಆಂಗ್ಲ ಭಾಷೆಯಲ್ಲಿ ಈ ಕೃತಿಯನ್ನು ಬರೆದಿದ್ದಾರೆ. ಚಂಪಾರಣ್ಯ ಸತ್ಯಾಗ್ರಹದ ಬಗೆಗಿನ ಈ ಪುಸ್ತಕವನ್ನು ಖ್ಯಾತ ಲೇಖಕರ ಜಗದೀಶ್ ಕೊಪ್ಪ ಅವರು ಕನ್ನಡದಲ್ಲಿ ಸೊಗಸಾಗಿ ಬರೆದಿದ್ದಾರೆ.