ಚಂಪಾ ಷಷ್ಠಿ ಹಿನ್ನೆಲೆ
*ಹೇ ಸ್ವಾಮಿ ಕರುಣಾಕರ ದೀನಬಂಧೋ*
*ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ*/
*ಶ್ರೀ ಶಾದಿದೇವಗಣಪೂಜಿತಪಾದಪದ್ಮ*
*ವಲ್ಲೀಶನಾಥ ಮ ದೇಹಿ ಕರಾವಲಂಬಂ//*
*ಓಂ ಶ್ರೀ ಸ್ಕಂದಾಯ ನಮ:*
*ಓಂ ಶ್ರೀ ಗುಹಾಯ ನಮ:*
*ಓಂ ಷಣ್ಮುಖಾಯ ನಮ:*
*ಓಂ ತಾರಕಾಸುರ ಸಂಹಾರಿಣೇ ನಮ:*
ಮಾರ್ಗಶಿರ ಮಾಸದ ಆರನೇ ದಿನವೇ ಸ್ಕಂದ ಅಥವಾ ಚಂಪಾಷಷ್ಠಿ ಉತ್ಸವ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾಗೂ ಹಲವಾರು ಷಣ್ಮುಖ ಸ್ವಾಮಿ ಸನ್ನಿಧಿಯಲ್ಲಿ ಜಾತ್ರೆ, ಷಷ್ಠಿ ಉತ್ಸವವಿರುತ್ತದೆ. ಪುರಾಣ ಪ್ರಸಿದ್ಧ ಹಿನ್ನೆಲೆಯೂ ಇರುವುದರಿಂದ ಧಾರ್ಮಿಕ ಶ್ರದ್ಧಾ ಕೇಂದ್ರವೆನಿಸಿದೆ. ಪೂಜೆ, ಉಪವಾಸ, ವ್ರತವನ್ನು ಭಕ್ತರು ಕೈಗೊಂಡು ಕಾರ್ತಿಕೇಯನನ್ನು ಶ್ರದ್ಧಾ ಭಕ್ತಿಯಿಂದ ನೆನೆದು ಕೃತಾರ್ಥರಾಗುತ್ತಾರೆ. ಪೌರಾಣಿಕ ಹಿನ್ನೆಲೆಯನ್ನು ನೋಡುವುದಾದರೆ ಕಾರ್ತಿಕೇಯನ ಜನುಮದ ಕಾರಣ ಖೂಳ ಖಳ ತಾರಕಾಸುರನ ವಧೆಗಾಗಿ. ತಾರಕನ ಉಪಟಳ ಸಜ್ಜನ ಬಂಧುಗಳಿಗೆ, ಸುರರಿಗೆ, ಋಷಿಮುನಿಗಳಿಗೆ ತಡೆಯದಾಯಿತು. ಶಿವ-ಪಾರ್ವತಿಯರ ಪುತ್ರ ಷಣ್ಮುಖನಿಂದ ಮಾತ್ರ ಮರಣವೆಂಬ ವರವಿತ್ತು ಆತನಿಗೆ. ಚೈತ್ರಶುದ್ಧ ಷಷ್ಠಿಯ ಪವಿತ್ರ ದಿನ ಕಾರ್ತಿಕೇಯನ ಜನನವಾಯಿತು. ಇವನಿಗೆ ನಾಮ ಹಲವಾರು.
ಪ್ರಚಲಿತ ಷಣ್ಮುಖ, ಕಾರ್ತಿಕ(ಕೇಯ), ಸ್ಕಂದ, ಸುಬ್ಬಪ್ಪ, ಸುಬ್ರಹ್ಮಣ್ಯ, ಕುಮಾರಸ್ವಾಮಿ, ಆಶ್ಲೇಷ, ಸನತ್ ಕುಮಾರ, ನಾಗೇಶ, ವಲ್ಲೀಶ, ಗುಹ, ಸುಬ್ರಾಯ ಮುಂತಾದವುಗಳು. ಹುಟ್ಟಿದ ಆರನೇ ದಿನವೇ ಲೋಕಕಂಟಕನಾದ ದುರುಳ ತಾರಕನ ವಧೆ ಮಾಡಿದ ಅತುಳ ಪರಾಕ್ರಮಿ. ಇದರಿಂದಲೇ ಶ್ರೀ ಸ್ವಾಮಿಯು ದೇವತೆಗಳ ಸೈನ್ಯದ ಮುಖ್ಯಸ್ಥನಾದನಂತೆ. ತಾರಕನು ದೇವರಿಗೆ ಮತ್ತು ಮರಣಕ್ಕೆ ಹೆದರಿ ಯುದ್ಧ ಭೂಮಿಯಲ್ಲಿ ಕೀಟದ ರೂಪವ ತಾಳಿ ಹುತ್ತದೊಳು ಹೊಕ್ಕನಂತೆ ಕುಮಾರಸ್ವಾಮಿ, ಸುಬ್ರಹ್ಮಣ್ಯನು ಸರ್ಪರೂಪ ಹೊಂದಿ ಹುತ್ತದೊಳಗೆ ಹೋದಾಗ, ಅಸುರನು ಹೊರಬಂದು ಹೋರಾಡಿ ಮಡಿದನಂತೆ.
ಕಾರ್ತಿಕೇಯ ಮನೆದೇವರಾಗಿದ್ದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.(ಸ್ಕಂದ ಪುರಾಣ). ದಂತಕಥೆಯೊಂದನ್ನು ಹೇಳುವುದಾದರೆ ಮಣಿ ಮತ್ತು ಮಲ್ಹಾ ಎನುವ ರಾಕ್ಷಸರೀರ್ವರು ಆರು ದಿನಗಳ ಕಾಲ ಶಿವ-ಶಿವೆಯ ಅವತಾರವೆನಿಸಿದ ಭೈರವ ಮತ್ತು ಶಕ್ತಿಯೊಡನೆ ಹೋರಾಡಿ ಮಡಿದರಂತೆ. ಶಿವನು ಲಿಂಗ ರೂಪಿಯಾಗಿ ಕಾಣಿಸಿಕೊಂಡನಂತೆ. ಈ ರೀತಿ ಹತನಾದ ಸ್ಮರಣಾರ್ಥ ಆಚರಣೆಯಂತೆ. ಇದು ಬಹುಶಃ ಕರ್ನಾಟಕದಲ್ಲಿ ಅಷ್ಟು ಪ್ರಚಲಿತದಲ್ಲಿಲ್ಲವೆಂದು ಕಾಣುತ್ತದೆ.
ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಟ್ ಮುಖನ ಆರಾಧನೆ ಬಹಳ ಸಂಭ್ರಮ ಸಡಗರದೊಂದಿಗೆ ನಡೆಯುತ್ತದೆ. ಇಲ್ಲಿ ವಾಸುಕಿಯು ನಾಗನ ರೂಪದಲ್ಲಿ ಪೂಜಿಸಲ್ಪಡುತ್ತಾನೆ. ಚಂಪಾ ಷಷ್ಠಿ ದಿನ ಮಹಾ ರಥೋತ್ಸವವಿದೆ. ಇಲ್ಲಿ ರಥಗಳೇ ಹೆಚ್ಚು ವಿಜೃಂಭಿಸುವ ಕಾರಣ ತೇರು ಉತ್ಸವವೆಂದೂ (ಊರಿನ ತೇರು) ಹೆಸರಿದೆ.
ತುಳುನಾಡಿನ ಧಾರ್ಮಿಕ ಹಿನ್ನೆಲೆಯ ಈ ಪವಿತ್ರ ಸನ್ನಿಧಿಗೆ ಸಾವಿರಾರು ಭಕ್ತರು ಭೇಟಿನೀಡಿ ಕೃತಾರ್ಥರಾಗುತ್ತಾರೆ. ಕೃತಯುಗದಲ್ಲಿ ಇಲ್ಲಿ ಋಷಿಮುನಿಗಳು ತಪಸ್ಸನ್ನು ಆಚರಿಸುತ್ತಿದ್ದರಂತೆ. ತ್ರೇತಾಯುಗದಲ್ಲಿ ಪರಶುರಾಮರು ತಾಯಿಯನ್ನೇ ಹತ್ಯೆಗೈದ ಮಹಾಪಾಪವನ್ನು ಇಲ್ಲಿಯ ಪುಣ್ಯನದಿಯಲ್ಲಿ ಸ್ನಾನ ಮಾಡಿ ಪರಿಹರಿಸಿಕೊಂಡರಂತೆ. ಗುಣಪಡಿಸಲಾರದ ಹಲವಾರು ಚರ್ಮ ರೋಗಗಳು ಇಲ್ಲಿ ಬಂದು ಸೇವೆ ಸಲ್ಲಿಸಿದರೆ ಇಲ್ಲವಾಗುವುದೆಂದು ಹೇಳುತ್ತಾರೆ. ಸರ್ವ ಪಾಪಗಳ ಪರಿಹಾರ, ಸಂತಾನ ಪ್ರಾಪ್ತಿ, ಕಷ್ಟಗಳ ನಿವಾರಣೆ, ಶಾಂತಿ, ನೆಮ್ಮದಿ, ಧನಾತ್ಮಕ ಭಾವನೆ, ಮನದ ಕ್ಲೇಶಗಳ ನಿವಾರಣೆ ಶ್ರೀ ಸ್ವಾಮಿಯ ಆರಾಧನೆಯಿಂದಾಗುತ್ತದೆ. ಪರಿಮಳ ಹೂವುಗಳ ಸಮರ್ಪಣೆ, ಹಾಲು, ತುಪ್ಪ, ಮೊಸರು ದೇವರಿಗೆ ನೀಡಿ ನಮಿಸುತ್ತಾರೆ.ಮಂಗಳದ ಅಧಿಪತಿಯೇ ಈತ.
ಬೆತ್ತದಿಂದ ಮಾಡಿದ ಬ್ರಹ್ಮರಥ ವಿಶೇಷ. ಸಂಗೀತ ಪ್ರಿಯನಾದ ದೇವನಿಗೆ ಭಜನೆ, ಸಂಕೀರ್ತನೆ ಸದಾ ಗೈಯುವ ಭಕುತವೃಂದವೇ ಇದೆ. ಬಂಡಿ ಉತ್ಸವ, ಹೂವಿನ ತೇರಿನ ಉತ್ಸವ, ಕಟ್ಟೆ ಸವಾರಿ, ಬೀದಿ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಪಲ್ಲಪೂಜೆ, ಕುಕ್ಕೆ ಬೆಡಿ ಪ್ರಸಿದ್ಧ ಮತ್ತು ಆಕರ್ಷಣೆಯಿಂದ ಕೂಡಿದ ಸೇವೆಗಳು. ಆಗಮ ಪಂಡಿತರ ಮಾರ್ಗದರ್ಶನದಲ್ಲಿ ಉರುಳುಸೇವೆ ಸಹ ಇದೆ.
ಹಚ್ಚ ಹಸಿರಿನ ತಾಣದಲ್ಲಿ ನೆಲೆನಿಂತ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಮಾರ ಪರ್ವತ, ಕುಮಾರಧಾರ ನದಿ, ಗುಡ್ಡಬೆಟ್ಟ ಹಳ್ಳಕೊಳ್ಳಗಳಿಂದ ಆವೃತ್ತವಾದ ಪರಿಸರ. ಈ ಸಂದರ್ಭದಲ್ಲಿ ವ್ಯಾಪಾರ ವಹಿವಾಟುಗಳು ಭರಾಟೆಯಿಂದ ನಡೆಯುತ್ತದೆ. ಝಗಮಗಿಸುವ ದೀಪಗಳ ಅಲಂಕಾರ, ವೈಭವದ ರಥೋತ್ಸವವನ್ನು ಸಹಸ್ರಾರು ಭಕ್ತಾದಿಗಳು ವೀಕ್ಷಿಸಿ, ಭೋಜನ ಪ್ರಸಾದ ಸ್ವೀಕರಿಸಿ ಧನ್ಯತಾಭಾವವನ್ನು ಹೊಂದುತ್ತಾರೆ. ಕಾರ್ತಿಕೇಯನು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ. ಲೋಕಕ್ಕೆ ಆವರಿಸಿದ ಸಂಕಷ್ಟ ದೂರವಾಗಲಿ.
*ಶರದಿಂದುಸಮಾನಷಡಾನನಾಯ ಸರಸೀರುಹಚಾರುವಿಲೋಚನಾಯಾ/*
*ನಿರುಪಾಧಿಕಾಯಾ ನಿಜಬಾಲಾಜಯಾ ಪರಿಪಾಲಕ ತಾರಕಮಾರಕಮಾಂ*//
-ರತ್ನಾ ಕೆ ಭಟ್,ತಲಂಜೇರಿ
(ಲೇಖನ ಸ್ಕಂದ ಪುರಾಣ ಮತ್ತು ವಿವಿಧ ಮೂಲಗಳಿಂದ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ