ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

ಬರಹ

ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ  ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ ಏನು ಎನ್ನುವ ಕಾರಣಕ್ಕೆ ಅಲ್ಲ. ಇದನ್ನು ನಾವು ಮರೆಯದಿದ್ದರೆ, ಎಷ್ಟೋ ಗೊಂದಲಗಳಿಂದ, ಗದ್ದಲಗಳಿಂದ ದೂರಾಗಬಹುದು. ಇದು ಬಸವಣ್ಣ ಒಬ್ಬರೇ ಅಲ್ಲ, ಇನ್ನ್ಯಾವ ಮಹಾಪುರುಷರಿಗೂ, ಕವಿ-ಕಲಾವಿದರಿಗೂ ಹೊಂದುವ ಮಾತೇ.

ನೆನ್ನೆ ಸುಮಾರು ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ನೋಡುತ್ತಿದ್ದೆ. ಅದರಲ್ಲಿ, ಮೈಸೂರಿನ ಹೆಸರಾಂತ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಅವರು ಬಸವಣ್ಣನವರ ವಚನವೊಂದಕ್ಕೆ ಮಾಡಿದ ನೃತ್ಯವನ್ನು ನಿಮ್ಮೊಂದಿಗೆ  ಹಂಚಿಕೊಳ್ಳಬೇಕೆನ್ನಿಸಿತು. ತಮಿಳುನಾಡಿನ ತಂಜಾವೂರಿನ ಬಳಿಯ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಾವಿದೆ, ಮೈಸೂರಿನಲ್ಲಿರುವ ಡಾ. ವಸುಂಧರಾ ಅವರು, ಕರ್ನಾಟಕದ ಉತ್ತರ ತುದಿಯ ಕಲ್ಯಾಣದ ಕ್ರಾಂತಿಯ ಕಾರಣಕರ್ತ ಬಸವಣ್ಣನವರ ವಚನಕ್ಕೆ ನೃತ್ಯ ಮಾಡಿದ್ದು ದೂರದ ಕ್ಯಾಲಿಫೋರ್ನಿಯಾದಲ್ಲಿ. ವಸುಧೈವ ಕುಟುಂಬಕಂ ಎನ್ನುವುದೀಗ ಸರಿಯಾದ ಮಾತು :)

ನೀವೂ ನೋಡಿ, ಕೇಳಿ ಆನಂದಿಸಿ

http://www.youtube.com/watch?v=KUlw3vXaK1s

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

ಅಂಬುಜಕೆ ಭಾನುವಿನ ಉದಯದ ಚಿಂತೆ

ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ

ಎನಗೆ ಎನ್ನ ಕೂಡಲಸಂಗಮದೇವನ ನೆನೆವುದೆ ಚಿಂತೆ!

ಸಾಮಾನ್ಯರ ಭಾಷೆಯಲ್ಲೇ ತಮ್ಮ ವಚನಗಳನ್ನೊರೆದು ಎಲ್ಲರಿಗೂ ಹತ್ತಿರವಾದ ಭಕ್ತಿಭಾಂಡಾರಿ ಬಸವಣ್ಣನವರು, ಸಾವಿರವರ್ಷಗಳ ಹಿಂದೆ ಈ ವಚನವನ್ನು ಹೇಳುವಾಗ ಚಕೋರ, ಭ್ರಮರ, ಅಂಬುಜ ಪರಿಮಳ, ಭಾನು,ಉದಯ ಇಂತಹ ಪದಗಳೆಲ್ಲ ಪರಭಾಷೆಯ ಪದಗಳೆಂದು ಚಿಂತಿಸಿದರೆ? ಸಾವಿರಾರು ವರ್ಷಗಳಿಂದ ನಮ್ಮವಾಗಿಸಿರುವ ಈ ಮಾತುಗಳನ್ನುಇ ಇಂದು ದ್ರಾವಿಡ ಮೂಲವಲ್ಲ ಎಂಬ ಕಾರಣಕ್ಕೆ ಹೊರಗೆಸೆಯಬೇಕೇ?  ಹಾಗೆ ಮಾಡಿದರೆ, ಈ ವಚನಗಳು ನಮ್ಮವಾಗದ ಚಿಂತೆ ನಮ್ಮದಾಗದೇ?!

http://www.youtube.com/watch?v=KUlw3vXaK1s

ಈ ವಚನವನ್ನು ಹಾಡಿರುವವರಾರೋ ನನಗೆ ತಿಳಿಯದು. ಆದರೆ ಅವರು ಉಪಯೋಗಿಸಿರುವ ರಾಗ -ಚಕ್ರವಾಕ (ಅಥವ ಅಹಿರ್ ಭೈರವ್ - ಉತ್ತರಾದಿ ಪದ್ಧತಿಯಲ್ಲಿ) ಈ ವಚನದ ಒಳಗಿನ ಧ್ವನಿಗೆ ಬಹಳ ಒಪ್ಪುತ್ತದೆ ಎಂದು ಮಾತ್ರ ಹೇಳಬಲ್ಲೆ. ಚಕೋರನಂತಹ ಒಂದು ಕಾಲ್ಪನಿಕ ಪಕ್ಷಿಯ ಬಗ್ಗೆಯ ವಚನಕ್ಕೆ ಇನ್ನೊಂದು ಕಾಲ್ಪನಿಕ(?) ಹಕ್ಕಿಯಾದ ಚಕ್ರವಾಕದ ಹೆಸರಿರುವ ರಾಗ ಉಪಯೋಗಿಸಿರುವುದು ಮಾತ್ರ ಕಾಕತಾಳೀಯ ! (ಇಲ್ಲಿ ಇನ್ನೊಂದು ಹಕ್ಕಿಯನ್ನು ನೀವು ಕಂಡಿರಬೇಕಲ್ಲ ;-) ?)

-ಹಂಸಾನಂದಿ