ಚಕ್ರವ್ಯೂಹದಲ್ಲಿ ಅಭಿಮನ್ಯು!

ಚಕ್ರವ್ಯೂಹದಲ್ಲಿ ಅಭಿಮನ್ಯು!

ತಮಿಳುನಾಡಿನ ರಾಜಕಾರಣವೇ ಒಂಥರಾ ವಿಚಿತ್ರದ್ದು. 'ಪರ್ಯಾಯ ಸ್ವೀಕಾರ'ದ ರೀತಿಯಲ್ಲಿ ಅಲ್ಲಿ ಒಂದು ಅವಧಿಗೆ 'ಡಿಎಂಕೆ' ಪಕ್ಷವು ಅಧಿ ಕಾರದ ಗದ್ದುಗೆಗೆ ಏರಿದರೆ, ಮತ್ತೊಂದು ಅವಧಿಗೆ 'ಎಐಎಡಿಎಂಕೆ' ಪಕ್ಷವು ದರ್ಬಾರು ಮಾಡುವುದು ಬಹುತೇಕ ಸಾಮಾನ್ಯವಾಗಿಬಿಟ್ಟಿದೆ. 'ದ್ರಾವಿಡ ಅಸ್ಮಿತೆ'ಯನ್ನು ಎತ್ತಿಹಿಡಿದೇ ಅಲ್ಲಿನ ಜನರನ್ನು ಪ್ರೇರೇಪಿಸಿ-ಪ್ರಚೋದಿಸಿ ಅಧಿಕಾರಕ್ಕೆ ಬರುವ ಈ ಎರಡೂ ಪಕ್ಷಗಳು, ಮತ್ತೊಂದು ಪಕ್ಷವು ರಾಜ್ಯದಲ್ಲಿ ಸಿಂಹಾಸನೆ ಏರುವುದಕ್ಕೆ ಬಿಟ್ಟಿರುವ ನಿದರ್ಶನಗಳು ಕಮ್ಮಿಯೇ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳೂ ಅಲ್ಲಿ 'ಸೈಡ್‌ವಿಂಗ್ 'ನಲ್ಲಿ ನಿಂತುಕೊಂಡೇ 'ರಾಜಕೀಯ ನಾಟಕ'ವನ್ನು ನೋಡಬೇಕಾದ ಪರಿಸ್ಥಿತಿಯ ಫಲಾನುಭವಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಒಂದಿಷ್ಟು ಭರವಸೆಯನ್ನು ಮೂಡಿಸಿದ್ದರೂ, ಗದ್ದುಗೆಯನ್ನು ಏರುವ ವಿಷಯದಲ್ಲಿ ಅದಿನ್ನೂ ಸಾಕಷ್ಟು ರಾಗಿ ಬೀಸುವುದು ಬಾಕಿಯಿದೆ. ಈ ಮಧ್ಯೆ ಕಮಲಹಾಸನ್ ಸೇರಿದಂತೆ ಸಾಕಷ್ಟು ಚಿತ್ರನಟರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟಿ ದರ್ಬಾರು ನಡೆಸಲು ಹವಣಿಸಿದ್ದಿದೆ; ಆದರೆ ಅದಿನ್ನೂ ಕೈಗೂ ಡಿಲ್ಲ. ಈ ಸಾಲಿಗೆ ಹೊಸ ಸೇರ್ಪಡೆ 'ದಳಪತಿ' ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ-ಕಂ-ರಾಜಕಾರಣಿ ವಿಜಯ್. ಅವರು ಹುಟ್ಟುಹಾಕಿ ರುವ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ವವು ರಾಜಕಾರಣದ ಪಡಸಾಲೆಯಲ್ಲಿನ್ನೂ ಅಂಬೆಗಾಲು ಇಡುತ್ತಿದೆ. ಆದರೆ, ತಮ್ಮ ಮಹತ್ವಾಕಾಂಕ್ಷೆಗೆ ಈ ಅಂಶದಿಂದ ತೊಂದರೆಯೇನೂ ಆಗದು ಎಂಬುದು ವಿಜಯ್ ಅವರಲ್ಲಿ ಕೆನೆಗಟ್ಟಿರುವ ಆತ್ಮವಿಶ್ವಾಸ. ಈ ಕಾರಣದಿಂದಾಗಿಯೇ ಅವರು, "೨೦೨೬ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ಟಿವಿಕೆ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ'' ಎಂದು ಹೇಳಿಕೆ ನೀಡಿದ್ದಾರೆ. ಇದು ಕೊಂಚ 'ಅವಧಿಪೂರ್ವ ಮತ್ತು ಅತಿರೇಕದ ಆತ್ಮವಿಶ್ವಾಸವಾಯಿತು' ಎಂದು ಕೆಲವರಿಗೆ ಅನಿಸಿದರೂ, ರಾಜಕಾರಣದಲ್ಲಿ ಯಾವುದನ್ನೂ 'ಇದಮಿತ್ಥಂ' ಎನ್ನಲಾಗದು ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ ವಿಜಯ್ ಅವರ ಆತ್ಮವಿಶ್ವಾಸವನ್ನೂ ಪರಿಗಣಿಸಬೇಕಿದೆ. 'ಆಮ್ ಆದ್ದಿ' ಅರವಿಂದ ಕೇಜ್ರವಾಲರು ದೆಹಲಿಯಲ್ಲಿ ಗದ್ದುಗೆಯೇರಿದ್ದು ಬಹುತೇಕ ಹೀಗೆಯೇ ಅಲ್ಲವೇ? ಒಟ್ಟಿನಲ್ಲಿ ಕಾದುನೋಡೋಣ...

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೩-೦೮-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ