ಚಪಾತಿಗೆ Curries

ಚಪಾತಿಗೆ Curries

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀಮತಿ ವಾಣಿ ರವಿಶಂಕರ್
ಪ್ರಕಾಶಕರು
ಸಂಘವಿ ಪ್ರಕಾಶನ, ಬಸವೇಶ್ವರನಗರ, ಬೆಂಗಳೂರು-೫೬೦೦೭೯
ಪುಸ್ತಕದ ಬೆಲೆ
ರೂ.೫೦.೦೦, ಮುದ್ರಣ : ೨೦೦೮

ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ.  

ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿದ್ದ ರಾಣಿ ಸತೀಶ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ ಹದವರಿತು ಅಡುಗೆ ಮಾಡುವುದು ಒಂದು ಕಲೆ. ಅಡುಗೆಯಲ್ಲಿ ವೈವಿಧ್ಯತೆಯನ್ನು ಕಾಣಿಸುವ ಕಲಾವಂತಿಕೆಯ ಜೊತೆಗೆ ಬದುಕಿಗೆ ಶಕ್ತಿ ಕೊಡುವ, ಆರೋಗ್ಯವನ್ನು ಕಾಪಾಡಿಕೊಳ್ಳುವ ಯುಕ್ತಿಯನ್ನು ಕಲಿತರೆ ‘ಊಟ ಬಲ್ಲವನಿಗೆ ರೋಗವಿಲ್ಲ' ಎನ್ನುವ ಉಕ್ತಿಯ ಶಕ್ತಿಯನ್ನು ನಮ್ಮದಾಗಿಸಿಕೊಳ್ಳಬಹುದು. 

ಈ ದಿಸೆಯಲ್ಲಿ ಮಲೆನಾಡಿನಲ್ಲಿ ಹುಟ್ಟಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತೆ ವಿವಿಧ ತರಕಾರಿಗಳ ಜೊತೆಗೆ ಜೀರಿಗೆ, ಧನಿಯ ಮಸಾಲೆಯನ್ನು ಕೊಟ್ಟು, ದಿನ ನಿತ್ಯದ ಊಟಕ್ಕೆ ಖಾದ್ಯವನ್ನು ತಯಾರಿಸಿ ಪುಸ್ತಕವನ್ನು ಬರೆದು, ಅದರ ರುಚಿಯನ್ನು ಎಲ್ಲರ ಜೊತೆ ಹಂಚಿಕೊಂಡ ಸದಭಿರುಚಿಗೆ ಶ್ರೀಮತಿ ವಾಣಿ ರವಿಶಂಕರ್ ಅವರಿಗೆ ಅಭಿಮಾನ ಪೂರ್ವಕ ಅಭಿನಂದನೆಗಳು. “ ಎಂದಿದ್ದಾರೆ. 

ಅಡುಗೆಯನ್ನು ತಯಾರಿಸಿ ಅದಕ್ಕೆ ಪುಸ್ತಕ ರೂಪ ಕೊಟ್ಟ ಲೇಖಕಿ ಶ್ರೀಮತಿ ವಾಣಿ ರವಿಶಂಕರ್ ಅವರು ತಮ್ಮ 'ಮೊದಲ ಮಾತು' ಇಲ್ಲಿ ಅನಿಸಿಕೆ ವ್ಯಕ್ತ ಪಡಿಸಿದ್ದು ಹೀಗೆ “ನಾವು ಬದುಕಿರುವವರೆಗೂ ಮೂರು ಹೊತ್ತು ದೇಹಕ್ಕೆ ಆಹಾರ ಒದಗಿಸುವುದು ಪ್ರಾಕೃತಿಕ ಕ್ರಿಯೆ ಹೀಗಾಗಿ ಏಕತಾನತೆ ಬೇಜಾರಾಗಿರುತ್ತದೆ. ರುಚಿಯಾದ, ಆರೋಗ್ಯಕ್ಕೆ ಹಿತವಾದ ಹೊಸ ಹೊಸ ಅಡಿಗೆಗಳನ್ನು ಮನಸ್ಸು ದೇಹ ಬಯಸುತ್ತಲೇ ಇರುತ್ತದೆ. ಆ ನಿಟ್ಟಿನಲ್ಲಿ ಈ ಪುಸ್ತಕವು ತನ್ನದೇ ಆದ ಸ್ಥಾನ ವಹಿಸುತ್ತದೆ ಎಂದು ನನ್ನ ಅನಿಸಿಕೆ.

ಬೆಂಗಳೂರಿನ ಜೀವನದಲ್ಲಿ ನಾನು ಕಂಡಂತೆ ಹಲವಾರು ಮನೆಗಳಲ್ಲಿ ರಾತ್ರಿ ಚಪಾತಿ ಸೇವಿಸುವ ರೂಢಿಯಿದೆ. ನನಗೆ ಗೊತ್ತಿರುವ ಸ್ನೇಹಿತರ ಮಾತಿನ ಮೂಲಕ, ನನ್ನ ಗಮನಕ್ಕೆ ಬಂದಿದ್ದು ರುಚಿಯಾಗಿ , ಹಿತವಾಗಿ ಬೇಗನೇ ಮಾಡಬಹುದಾದ, ಹೊಸ ತರಹದ ಕರೀಗಳ ಕೊರತೆ ಮತ್ತು ಅವಶ್ಯಕತೆ, ಆಗ ನನಗೆ ಈ ವಿಚಾರ ಬಂತು. ಆದರೂ ಸಹ ೪ ವರ್ಷಗಳ ಕಾಲ ನಾನು ಈ ವಿಚಾರದಲ್ಲಿ ಕೃಷಿ ಮಾಡಿ ವಿಷಯಗಳನ್ನು ಸಂಗ್ರಹಿಸಿ, ಓದಿ, ನನ್ನ ಮತ್ತು ಹಿರಿಯರ ಅನುಭವ ಮತ್ತು ವಿಚಾರಗಳನ್ನು ಸೇರಿಸಿ ಪ್ರಯೋಗ ಮಾಡಿ ಈ ಪುಸ್ತಕ ಬರೆದಿದ್ದೇನೆ. ಇಲ್ಲಿ ಕೊಟ್ಟ ಅಡಿಗೆಯ ವಿಧಾನ ಕೆಲವೊಂದು ಅಡಿಗೆಯ ವಿಧಾನಕ್ಕೆ ಸಮೀಪದಂತೆ ಇದ್ದರೂ ತರಕಾರಿಗಳ ಕಾಂಬಿನೇಷನ್ ನಲ್ಲಿ ವಿವಿಧತೆ ಇದ್ದು ರುಚಿಯಲ್ಲಿಯೂ ವಿವಿಧತೆಯಿರುತ್ತದೆ. “

ಈ ಪುಸ್ತಕದಲ್ಲಿ ಚಪಾತಿ, ಪೂರಿ, ಪರೋಟಕ್ಕೆ ಸೂಕ್ತವೆನಿಸುವ ನೂರು ಬಗೆಯ ಕರಿಗಳಿವೆ. ಹಲವಾರು ಬಗೆಯ ಕಾಳುಗಳಿಂದ ಹಿಡಿದು, ಬದನೆಕಾಯಿ, ಆಲೂಗಡ್ಡೆ, ಪಾಲಕ್, ಬೆಂಡೆಕಾಯಿ ಮುಂತಾದ ತರಕಾರಿಗಳ ಪದಾರ್ಥಗಳಿವೆ. ಆಯಾ ಪದಾರ್ಥಗಳಿಗೆ ಸೂಕ್ತವಾದ ಛಾಯಾಚಿತ್ರಗಳಿದ್ದಿದ್ದರೆ ಪುಸ್ತಕಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು. ಸುಮಾರು ನೂರು ಪುಟಗಳ ಈ ಪುಸ್ತಕವನ್ನು ಲೇಖಕಿಯವರು ತಮ್ಮ ತಂದೆಯವರಾದ ಕೆ.ಸತ್ಯನಾರಾಯಣ ಹಾಗೂ ತಾಯಿಯವರಾದ ಕಮಲ ಅವರಿಗೆ ಅರ್ಪಣೆ ಮಾಡಿದ್ದಾರೆ. ನೀವೊಮ್ಮೆ ಚಪಾತಿ ಮಾಡುವಾಗ ಈ ಪುಸ್ತಕದಲ್ಲಿನ ಕರಿಗಳನ್ನು ಮಾಡಿ ರುಚಿ ನೋಡಬಹುದು.