ಚಪ್ಪಲಿ ಇಲ್ಲದ ಕಾಲ..

ಚಪ್ಪಲಿ ಇಲ್ಲದ ಕಾಲ..

ಚಪ್ಪಲಿ ಇಲ್ಲದ ಕಾಲ..
image
ಜಿಟಿ ಜಿಟಿ ಮಳೆ. ಬೆಳಗ್ಗೆ ಬಿಸಿ ಬಿಸಿ ಗಂಜಿ ಮೇಲೆ ಹಸುವಿನ ತುಪ್ಪ ಹಾಕಿದ ಗಂಜಿ ಊಟ ಮಾಡಿ ರೈನುಕೋಟು ಹಾಕಿ ಶಾಲೆಗೆ ಹೋಗುವ ರೂಢಿ. ಮಲೆನಾಡಿನ ಮಳೆಗಾಲದಲ್ಲಿ ಬಿಡುವಿಲ್ಲದ ಸೋನೆ ಮಳೆ. ವಟ ವಟ ಕಪ್ಪೆಗಳ ಸದ್ದು ಸದಾ. ತಂಪು ತಂಪು ಚಳಿ. ಆದರೆ ಚಳಿಗಾಲದ ಚಳಿಯಲ್ಲ. ಆದರೆ ಸ್ವೆಟರ್ ಮೈಮೇಲಿದ್ರೆ ಹಿತವೆನಿಸುವ ಮನಸ್ಸು ಸ್ವೆಟರ್ ಬಯಸುತ್ತಿತ್ತು. ಆದರೆ ಇರೊದೊಂದೆ ಸ್ವೆಟರ್. ಕೊಡಿಸುವಾಗಲೆ ಅಪ್ಪ ಹೇಳಿದ್ದ "ಕೂಸೆ ಸರಿ ಇಟ್ಕಳವು. ಅಲ್ಲಿ ಇಲ್ಲಿ ಒಗದರೆ ಮತ್ತ ಬೇಕೂಂದ್ರೆ ಕೊಡಿಸ್ನಿಲ್ಲೆ." ಈ ಒಕ್ಕಣೆ ಹಸಿರು ಸ್ವೆಟರ ಕಂಡಾಗೆಲ್ಲ ನನ್ನ ಹೆದರಿಸುತ್ತಿತ್ತು ಪೋಲೀಸ್ ನಾಯಿ ತರ.
ಇನ್ನು ಹಾಕಿಕೊಳ್ಳಲು ಅಂಗಿ ಎರಡು ಜೊತೆ ದಿನ ನಿತ್ಯಕ್ಕೆ ಹಾಕಲು ಹೋಪಲ್ಲಿಗೆ ಒಂದು ಸ್ವಲ್ಪ ಚಂದ ಅಂಗಿ ಅಷ್ಟೆ ವಷ೯ಕ್ಕೊಮ್ಮೆ ಕೊಡಿಸೋದು. ಅದು ಮೂರು ಜನ ಹೆಣ್ಣು ಮಕ್ಕಳಿಗೆ ಒಂದು ಥಾನ್ ಬಟ್ಟೆ ತರೋದು. ಹೊಲಿಯಲು ಯಾವಾಗಲೂ ಒಂದೆ ದಜಿ೯. ಒಂದೇ ತರ ಬಟ್ಟೆ ಪಾತ್ರೆ ಸೆಟ್ ಒಂದರೊಳಗೊಂದು ಕೂಡುವಂತೆ ವಯಸ್ಸಿಗೆ ತಕ್ಕ ಅಳತೆ ಹಾಕಿಕೊಂಡು ಹೊರಟರೆ ಓ! ಇವರೆಲ್ಲ ಒಂದೆ ಮನೆಯವರು ಅನ್ನೋದಕ್ಕೆ ಬೇರೆ ಟ್ರೇಡ್ ಮಾಕ್೯ ಬೇಡ. ನಮಗೊ ಬಲು ಖುಷಿ "ಅಪ್ಪಯ್ಯ ಹೊಸ ಬಟ್ಟೆ ತಂಜ ಅಂಗಿ ಹೊಲಿಸಲ್ಲೆ."
ಅದು ಅಡಿಕೆ ಕೊಯ್ಲು. ಕೆಂಪಡಿಕೆ, ಚಾಲಿ ಎಲ್ಲ ಸುಲಿದು ರೆಡಿ ಆದ ಮೇಲೆ ಎತ್ತಿನ ಗಾಡಿ ಕಟ್ಟಿಕೊಂಡು ಬೆಳಗಿನ ಏಳು ಗಂಟೆ ಒಳಗೆ ಮನೆಯಿಂದ ಹೊರಡಬೇಕು. ಮೊದಲಿನ ದಿನವೆ ಪ್ರತಿಯೊಂದು ತಯಾರಿ. ವಷ೯ಕ್ಕೆ ಏನೇನು ಸಾಮಾನು ಬೇಕು, ಆಯಿಗೆ, ಅಜ್ಜಿಗೆ ದಿನ ನಿತ್ಯಕ್ಕೆ, ಹೋಪಲ್ಲಿಗೆ ಸೀರೆ, ಹೋದ ವಷ೯ ತಂದಿರೋದೇನಾದರೂ ಚೆನ್ನಾಗಿ ಇದ್ದರೆ ಯಾಕೆ? ಅನ್ನೊ ಚೌಕಾಸಿಯೊಂದಿಗೆ ಅಣ್ಣನ ಅಭಿಮತದ ಹೊಂದಾಣಿಕೆಯ ಕಸರತ್ತಿನೊಂದಿಗೆ ಕೊಟ್ಟಿಗೆಯ ಕಡೆಯ ದಬಾ೯ರದ ಅಜ್ಜಿಯ ಬೇಡಿಕೆಗಳ ಪಟ್ಟಿಯೊಂದಿಗೆ "ಇದ್ಯಾಕೊ ಭಯಂಕರ ಖಚು೯" ಅನ್ನುವ ಹಣೆ ಗೆರೆಗಳು ಎದ್ದು ಕಾಣುವ ಹಂತ ಹೊತ್ತು "ಆತು ಹಂಗರೆ ಆ ಹೋಗ್ಬತಿ೯" ಹೇಳಿ ಅಪ್ಪ ಸಿಸಿ೯ ಪ್ಯಾಟೆಗೆ ಹೊರಡುತ್ತಿದ್ದ ಗತ್ತು ಇನ್ನೂ ಕಣ್ಣ ಮುಂದಿದೆ.
ನನಗೊ ಆ ಎತ್ತಿನ ಗಾಡಿ ಮೇಲೆ ಹೋಗೋದು ಬಲು ಖುಷಿ. ಹಠ ಹೊತ್ತು ಎಷ್ಟೋ ಸಾರಿ ಹೋಗಿದ್ದಿದೆ ಅಪ್ಪನ ಜೊತೆಗೆ. ಏಕೆಂದರೆ ಖಾನಾವಳಿ ಊಟ. ಮಸಾಲೆ ದೋಸೆ. ಹೊಸಾ ಬಟ್ಟೆ. ಎತ್ತಿನ ಗಾಡಿ ಸವಾರಿ. ವಾಪಸ್ಸು ಬರುವಾಗ ರಾತ್ರಿ ಕತ್ತಲಲ್ಲಿ. ಎತ್ತಿನ ಗಂಟೆ ಸದ್ದು "ಹೋ ಪಾ ಪಾ ಹೆಯ್ ಹೆಯ್ " ಅದೊಂದು ರೀತಿ ಭಾಷೆ ಗಾಡಿ ಓಡಿಸೊ ತಿಮ್ಮನದು. ಬಾಳೆ ಹಣ್ಣಿನ ಸುಕೇಳಿ ತಿಂಡಿ ಕೈಯ್ಯಲ್ಲಿ ಸದಾ ತರುತ್ತಿದ್ದ ಅಪ್ಪ ಈಗ ಇದು ಅಪರೂಪ. ಗಾಡಿ ತುಂಬ( ಮಳೆಗಾಲದ ಸಾಮಾನು ಹೇಳುವ ರೂಢಿ ಆ ಕಡೆ) ಸಾಮಾನು, ಕುಲುಕಿ ಕುಲುಕಿ ಗಾಡಿ ಪ್ರಯಾಣ. ವಾವ್!
ಆದರೆ ನಮ್ಮನೆಯಲ್ಲಿ ಚಪ್ಪಲಿ ಕಂಡಿದ್ದು ಸ್ವಲ್ಪ ಬುದ್ದಿ ಬಂದ ಮೇಲೆ. ಯಾರಾದರೂ ಹಾಕಿಕೊಂಡು ಬಂದರೆ ಅದು ಅಂಗಳದಲ್ಲಿ ಬಿಚ್ಚಿಡಬೇಕು. ವಾಪಸ್ಸು ಹೋಗುವಾಗ ಸಾಕಿದ ನಾಯಿ ದಯ ತೋರಿದರೆ ಇರುತ್ತಿತ್ತು. ಇಲ್ಲ ಅಂದರೆ ಅಷ್ಟೆ "ಅಯ್ಯ ನನ್ನ ಚಪ್ಪಲಿ ಕಾಣ್ತಿಲ್ಯಲ, ಇಲ್ಲೆ ಬಿಚ್ಚಿಟ್ಟಿದ್ದಿ, ಎಲ್ಲೋತು?" ಹೇಳಿಕೊಂಡು ಎದುರಿಗೆ ಬಯ್ಯಲು ಸಾದ್ಯವಾಗದೆ ಹೋಗಬೇಕು ಬಂದವರು. ಏಕೆಂದರೆ ಚಪ್ಪಲಿಗೆ ನಮ್ಮನೆಯಲ್ಲಿ ಯಾವ ಪ್ರಾಶಸ್ಯ ಇಲ್ಲ. "ಇಶಿಶಿ ಊರೆಲ್ಲ ಸುತ್ಯ್ಕಂಡು ಮನೀಗ ಬರದು. ದಾರೀಲಿ ಎಂತೆಂತ ಮೆಟ್ಕಂಡು ಬರತ್ವ ಏನ?" ಅಜ್ಜಿಯ ಸತ್ಯವಾದ ಬಿಚ್ಚುನುಡಿ ಆ ಕಾಲಕ್ಕೆ.
ಸಿಸಿ೯ ಮಾರಿಕಾಂಬಾ ಜಾತ್ರೆ. ವೈಭವದ ಜಾತ್ರೆ ನೋಡಲು ಅಪ್ಪ ಸಂಸಾರ ಸಮೇತ ಕರೆದುಕೊಂಡು ಹೋಗುವ ಪದ್ದತಿ. ದೇವಿಯ ಪೂಜೆ ಬೆಳಗ್ಗೆಯೆ ಮುಗಿಸಿ ಜಾತ್ರೆ ಪೇಟೆಯೆಲ್ಲ ಸುತ್ತಾಡಿ ಕೆಂಪು ರಿಬ್ಬನ್ನು, ಬಳೆ, ಬೆಂಡು, ಬತ್ತಾಸು, ಖರೀದಿಸಿ ಊಟ ತಿಂಡಿ ಖಾನಾವಳಿಯಲ್ಲಿ ಮುಗಿಸಿ ರಾತ್ರಿ ನಾಟಕ ನೋಡಿ ಹಾಗೆ ಸೀದಾ ಊರಿಗೆ ವಾಪಸ್ಸು ಬೆಳಗಿನ ಜಾವದ ಜಾತ್ರೆ ಸ್ಪೆಷಲ್ ಬಸ್ಸಿನಲ್ಲಿ. ಜಾತ್ರೆಯಲ್ಲಿ ಮಾತ್ರ ಎಲ್ಲರಿಗೂ ಫ್ರೀಡಂ. "ನಿಂಗೆ ಎಂತಾ ಬೇಕೆ, ನಿಂಗೆ ಎಂತಾ ಬೇಕೆ " ಕೇಳಿ ಕೊಡಿಸುತ್ತಿದ್ದರು. ಆದರೆ ಬಜೆಟ್ ಮೆಟ್ಟಿಲು ಮೊದಲಲ್ಲಿ ಇರಬೇಕು. ಮೇಲೇರೊ ಹಾಗಿಲ್ಲ. ಆಗಿನ ಕಾಲವೆ ಹಾಗಿತ್ತು. ಲೆಕ್ಕಾಚಾರದ ಜೀವನ ಈಗಿನಂತೆ ಐಶಾರಾಮಿ ಜೀವನ ನಡೆಸುವುದು ಕಷ್ಟವಾಗಿತ್ತು. ರೈತಾಪಿ ಜೀವನ ವಷ೯ಕ್ಕೊಮ್ಮೆ ಸಿಗುವ ಬೆಳೆಯಲ್ಲಿ ಬರುವ ದುಡ್ಡು ಇಡೀ ವಷ೯ಕಳೆಯಬೇಕಿತ್ತು. ಹಬ್ಬ ಹುಣ್ಣಿಮೆ, ಮದುವೆ ಮುಂಜಿ, ವಿದ್ಯಾಭ್ಯಾಸ ಎಲ್ಲವೂ ಇದರಲ್ಲೆ ಪೂರೈಸಬೇಕು. ಹೆಚ್ಚು ಅಂದರೆ ಪ್ರಯಾಣ ಕಾಶಿ ಯಾತ್ರೆ ಮಾತ್ರ. ಇನ್ನು ಸ್ಥಿತಿವಂತರು ಖಚ೯ ಮಾಡುತ್ತಿದ್ದರೊ ಏನೊ!
ಸರಿ ಜಾತ್ರೆಯಲ್ಲಿ ನಾವು ಮಕ್ಕಳು ಚಪ್ಪಲಿ ಬೇಡಿಕೆ ಇಟ್ವಿ. ಚಂದದ ಹಸಿರು ಚಪ್ಪಲಿ. (ಆಗ ಗೊತ್ತಿರೊ ಕಣ್ಣಿಗೆ ಕಾಣುವ ಬಣ್ಣ ಕೆಂಪು, ಹಸಿರು, ನೀಲಿ. ಬೇರೆ ಬಣ್ಣಗಳು ಬಣ್ಣವೆ ಅಲ್ಲ ಅನ್ನುವ ತೀಮಾ೯ನಕ್ಕೆ ಬಂದಂತಿತ್ತು. ) ಅದೂ ಚಮ೯ದ್ದಲ್ಲ. ಪ್ರಾಣಿ ಚಮ೯, ಅಯ್ಯೋ ಮಹಾಪಾಪ. ಮೆಟ್ಟಬಾರದು. ಹವಾಯಿ ಚಪ್ಪಲಿ. ಆಗ ಏನಿದ್ರೂ ಶಾಲೆಯಲ್ಲಿ ಸಂಭ್ರಮ ಹಂಚಿಕೊಳ್ಳಬೇಕು.
ಮಾಚ೯ ತಿಂಗಳಲ್ಲೆ ಸಿಸಿ೯ ಜಾತ್ರೆ ಬರೋದು. ಪರೀಕ್ಷೆ ಸಮಯ ಬೇರೆ. ಗಮನವೆಲ್ಲ ಚಪ್ಪಲಿ ಕಡೆಗೆ. ಶಾಲೆಯಲ್ಲಿ.ಸುಮ್ಮನೆ ಸು..ಸು.. ನೆವ ಹೇಳಿ ಎರಡು ಮೂರು ಬಾರಿ ಹೊರಗಿಟ್ಟ ಚಪ್ಪಲಿ ನೋಡಿ ಬರೋದು ಇಟ್ಟಲ್ಲೆ ಇದೆಯಾ? ಮಾಸ್ತರದು ಬಿಟ್ಟರೆ ನನ್ನ ಜೋಡಿ ಒಂದೆ ಅಲ್ಲಿರೋದು. ಮೊದಲನೆ ದಿನ ಸುರಕ್ಷಿತವಾಗಿ ಇತ್ತು. ಮಾರನೆ ದಿನ ಮೊದಲ ಬೇಟೆಯಲ್ಲೆ ಚಪ್ಪಲಿ ಇಲ್ಲ. ದುಃಖ ಒತ್ತರಿಸಿ ಬರುತ್ತಿದೆ. ಊಟದ ಗಂಟೆ ಹೊಡೆದಿದ್ದೆ ತಡ ಚಪ್ಪಲಿ ಹುಡುಕಾಟ. ನನ್ನ ಹುಡುಕಾಟ ನೋಡಿ ನನ್ನ ಕ್ಲಾಸಮೇಟ್ "ಇಲ್ಬಾ, ಯಾ ಹೇಳಿದ್ದಿ ಹೇಳಡಾ, ನಿನ್ನ ಚಪ್ಪಲಿ ಕೌಳೀ ಮಟ್ಟಿ ಹತ್ತಿರ ಹೊತಾಕಿದ್ದ ಯಾರೊ" ಯಾರು ಅಂತ ಹೇಳುತ್ತಿದ್ದನೊ ಏನೊ ಗೊತ್ತಿಲ್ಲ, ಸೀದಾ ಶಾಲೆ ಹಿಂದೆ ಇರೊ ಕೌಳೀ ಮಟ್ಟಿ ಹತ್ತಿರ ಹೋದೆ ಅಲ್ಲಿತ್ತು. ಕೈಯಲ್ಲಿ ಹಿಡಿದುಕೊಂಡು ಬಂದೆ.
ಒಂತರಾ ಆ ಚಪ್ಪಲಿ ಬಿಟ್ಟಿರೋಕೆ ಆಗಲ್ವೆ. ಮಾರನೆ ದಿನ ಮತ್ತೆ ಹಾಕಿಕೊಂಡು ಹೋದೆ. ಆಗಲೆ ಕ್ಲಾಸಲ್ಲಿ ಸಣ್ಣದಾಗಿ ಗುಸು ಗುಸು. ಪರೀಕ್ಷೆ ಬೇರೆ ನಾಲ್ಕನೆ ಕ್ಲಾಸಲ್ಲಿ ಓದುತ್ತಿದ್ದೆ. ಪರೀಕ್ಷೆ ಮುಗಿಸಿ ಹೊರಗೆ ಬಂದರೆ ಮತ್ತೆ ಚಪ್ಪಲಿ ನಾಪತ್ತೆ. ಜೋರಾಗಿ ಅಳು ಬಂತು. ಒಬ್ಬ ಹೇಳಿದ "ಯಂಗ್ಳ ಮುಂದೆ ಧಿಮಾಕ್ ಮಾಡ್ತ್ಯನೆ ಚಪ್ಪಲಿ ಹಾಕ್ಕಂಡು. ನೋಡು ಆನೆ ಒಗದ್ದಿ ಹೆಂಚಿನ ಮಾಡಿನ್ ಮ್ಯಾಲೆ. ಹಾಕ್ಕಳೆ ಈಗ. ಆನು ನೋಡ್ತಿ. ಚಪ್ಪಲಿಯಡಾ ಚಪ್ಪಲಿ. " ಹೇಳಿ ನಾ ಎಲ್ಲಿ ಮಾಸ್ತರ ಹತ್ತಿರ ಹೇಳಿದರೆ ಅಂತ ಹೆದರಿದನೊ ಏನೊ ಒಂದೆ ಏಟಿಗೆ ಓಡಿ ಹೋದ ಮನೆಗೆ. ಎಲ್ಲರೂ ನಗಲು ಶುರು ಮಾಡಿದರು. ಅಳುತ್ತ ಮನೆಗೆ ಬಂದೆ. ಅಪ್ಪ ಕೋಲು ಹಿಡಿದೆ ಶಾಲೆಗೆ ಬಂದು ಮಾಸ್ತರ್ ಹತ್ತಿರ ವರದಿ ಒಪ್ಪಿಸಿ ಚಪ್ಪಲಿ ತೆಗೆದುಕೊಟ್ಟರು. ಪರೀಕ್ಷೆನೂ ಮುಗಿತು. ನಾಲ್ಲನೆ ಕ್ಲಾಸಷ್ಟೆ ಇರುವ ಆ ಸರಕಾರಿ ಶಾಲೆ ಬಿಟ್ಟು ಸಿಸಿ೯ ಅಜ್ಜಿ ಮನೆ ಸೇರಿ ಬೇರೆ ಶಾಲೆಗೆ ನಿರಾತಂಕವಾಗಿ ಮತ್ತೆ ಚಪ್ಪಲಿ ಹಾಕಿ ಶಾಲೆಗೆ ಹೋಗುವುದು ರೂಢಿಯಾಯಿತು.