ಚರಾಚರ ಸಜೀವ ಜಾಲ
ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು ಮತ್ತೊಂದೆಡೆ. ಎರಡು ಸಜೀವಿಗಳೆ ಆದರೂ ಮೊದಲನೆಯದು ತಾನೆ ಬೇಕಾದಲ್ಲಿ ಚಲಿಸಬಹುದಾದ ಸಾಮರ್ಥ್ಯವಿರುವಂತದ್ದು; ಎರಡನೆಯದು ನಿಂತಲ್ಲೆ ಬೇರೂರಿ ಅತ್ತಿತ್ತ ತೂರಾಡಬಹುದೆ ಹೊರತು ನಿರಾಳವಾಗಿ ಚಲಿಸುವಂತಿಲ್ಲ. ಚರ ಜೀವಿಗಳಾದ ನಾವೂ ಸಹ ಮಳೆ-ಬಿಸಿಲು-ಚಳಿಯಲ್ಲಿ ಸಿಲುಕಿಕೊಂಡರೆ ಹುಷಾರು ತಪ್ಪಿತೆಂದು ಮನೆಯೊಳಗೆ ಸೇರಿಕೊಳ್ಳುತ್ತೇವೆ. ಆದರೆ ಈ ಮರಗಿಡಗಳು ಮಾತ್ರ ನಿಂತಲೆ ನಿಂತು ಚಳಿ ಮಳೆ ಗಾಳಿಗಳ ನಿರಂತರ ಧಾಳಿ ತಡೆದುಕೊಳ್ಳಬೇಕು, ಬದಲಾಗುವ ಋತು-ಘಾತವನ್ನು ತಾಳಿಕೊಂಡು ಬದುಕು ಮುಂದುವರೆಸಬೇಕು. ಈ ಮೂಲಭೂತ ವ್ಯತ್ಯಾಸವನ್ನು ತುಸು ಚಿಕಿತ್ಸಕ ದೃಷ್ಟಿಯಿಂದ ನೋಡುವ ಎರಡು ಕವನಗಳು ಈ ಕೆಳಗಿವೆ - ಮಕ್ಕಳ ಕವನಗಳಾದೀತೆಂಬ ಆಶಯದಲ್ಲಿ :-)
ಮನುಜ-ಚರ ಮರ-ಅಚರ
_________________________
ಮರಗಿಡಕಿಲ್ಲ ನೆಗಡಿ
ಮಳೆಗೆ ನೆಂದರು ನೋಡಿ
ಕಟ್ಟಿ ಹಾಕಿದ್ದರು ಕೈ ಕಾಲು
ನಿಭಾಯಿಸುವ ಬೇರುಗಳು ||
ಜಡ್ಡಾಗದೆಂದೇನಿಲ್ಲ ಸಸ್ಯಕೆ
ತಂತಾನೆ ಆಗದ ಅಳವಡಿಕೆ
ಆಗಿಸುವ ಸುತ್ತಣ ಆವರಣ
ಸರಿಯಿರಬೇಕು ವಾತಾವರಣ ||
ಯಾರಿಲ್ಲ ವೈದ್ಯ ಕಾನನಕೆ
ಪ್ರಕೃತಿಯೆ ತಿಥಿ ಶ್ರಾದ್ದಕೆ
ಸ್ವಯಂವೈದ್ಯ ಸಾಗೆ ಸಮೃದ್ಧ
ಮುರುಟುತ ಸೋತರೆ ಯುದ್ಧ ||
ಅಚ್ಚರಿಯದೆ ನಿಸರ್ಗದ ಜಾಲ
ಹುಟ್ಟು ಸಾವು ಸಮೀಕರಣ ಬಲ
ಜಿಡ್ಡೊ ಜಡ್ಡೊ ರಾಜಾರೋಷ ಪೂರ್ತಿ
ಬದುಕುವ ಛಲವಿರಬೇಕು ಸ್ಪೂರ್ತಿ ||
ಮಂಗಳಾರತಿಗುಷ್ಣ ತೀರ್ಥಕೆ ಶೀತ
ಉಸಿರಾಟಕು ಒದ್ದಾಟ ಪಡುತ
ಗುದ್ದಾಡೊ ಮನುಜ ಜೀವನವೆಲ್ಲಿ ?
ಎದುರಿಸೆ ಬದುಕೊ ಅಚರದೆದುರಲ್ಲಿ ! ||
ಅಚರ-ಸ್ನಾನ
__________________
ಗಿಡ ಮರ ವನದಚರ
ಚಲಿಸಲೆಲ್ಲಿ ಪಡೆದ ವರ
ಕರುಣಾಮಯಿ ದೇವ ಗೊತ್ತ
ಸ್ನಾನಕೆಂದು ಮಳೆ ಕೊಟ್ಟ ||
ವರೆಸಲೊಂದು ವಸ್ತ್ರ ಬೇಕು
ಅಚರಕೆಲ್ಲಿಂದ ಬರಬೇಕು ?
ಅದಕೆಂದೆ ಬೇಸಿಗೆ ಕೊಟ್ಟು
ಬಿಸಿ ಶಾಖದೆ ಮೈಯೊರೆಸಿಟ್ಟ ||
ಕರಗಿ ಶಾಖ ಬೆವರಾಗಿರೆ
ಮರುಗಿ ಋತು ತಲ್ಲಣ ಧರೆ
ಚಳಿಯ ಹೊದಿಕೆ ಹೊದಿಸಿದನೆ
ನಡುಗುದುರಿಕೆ ಮೈ ತುರಿಸಿದನೆ ||
ಕಿಲಾಡಿ ತಾತ ಜಾಣ ಗೊತ್ತ
ಅತಿರೇಕಗಳ ಪರಿಗಣಿಸುತ್ತ
ಬಂಧಿಸಿದನೆ ಋತು ಚಕ್ರದೆ
ಅಚರದೊಳಗೆ ನಿಯಮವದೆ ||
ಚರ ಜೀವಿಗಲ್ಲ ನಿಯಮಾವಳಿ
ಆದರೇಕೊ ಅವುಗಳದೆ ಹಾವಳಿ
ಅರಿತು ನಡೆಯೆ ಚಕ್ರ ಮಹತ್ವ
ಸಮತೋಲನದಲೆ ಪ್ರಕೃತಿ ಸತ್ವ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಚರಾಚರ ಸಜೀವ ಜಾಲ
ಸುಮಾರು 84 ಲಕ್ಷ ಜೀವಪ್ರಬೇಧಗಳಿವೆಯಂತೆ! ಪ್ರತಿಯೊಂದಕ್ಕೂ ತನ್ನದೇ ಆದ ಅನುಕೂಲ-ಅನಾನುಕೂಲಗಳಿವೆ. ಉದಾಹರಣೆಗೆ, ಮರ-ಗಿಡಗಳ ಕೊಂಬೆಗಳನ್ನು ಕಡಿದರೂ ಮತ್ತೆ ಚಿಗುರುತ್ತವೆ. ಪ್ರಾಣಿಗಳ ಕೈಕಾಲುಗಳು ತುಂಡಾದರೆ ಮತ್ತೆ ಚಿಗುರವು. ಸಂವೇದನಾಶೀಲತೆಯೂ ಅಷ್ಟೆ, ಚರವಾಗುತ್ತಾ, ವಿವೇಚನಾಶಕ್ತಿ ಹೆಚ್ಚುತ್ತಾ ಹೋದಂತೆ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತೇವೆ. ಸೃಷ್ಟಿಯ ರಹಸ್ಯದ ಕುರಿತು ಚಿಕಿತ್ಸಕ ದೃಷ್ಟಿ ಹರಿಸಿರುವ ನಾಗೇಶರಿಗೆ ವಂದನೆಗಳು.
In reply to ಉ: ಚರಾಚರ ಸಜೀವ ಜಾಲ by kavinagaraj
ಉ: ಚರಾಚರ ಸಜೀವ ಜಾಲ
ಕವಿಗಳೆ ನಮಸ್ಕಾರ.. ಚರಾಚರದ ನಿಗೂಢವನ್ನೆಲ್ಲ ಕಣ್ಮುಂದೆಯೆ ಕಿತ್ತಲೆ ಹಣ್ಣಂತೆ ಪ್ರದರ್ಶಿಸುತ್ತಲೆ ಮತ್ತೊಂದೆಡೆ ಅದರ ಗುಟ್ಟನ್ನು ತೊಳೆಯಂತೆ ಬಿಚ್ಚಿಡದೆ ಕಾಡುವ ಸೃಷ್ಟಿಯ ಅಂತಃಸತ್ವ ನಮಗೆಲ್ಲಿ ಎಟುಕಲು ಸಾಧ್ಯ ? ಚಿಕಿತ್ಸಕ ದೃಷ್ಟಿ ಹರಿಸಿ ಅಳತೆಗೆ ಸಿಕ್ಕಷ್ಟನ್ನು ಅಪ್ಪಿ ಅಸ್ವಾದಿಸುವುದಷ್ಟೆ ನಮ್ಮ ನಿಲುಕಿಗೆ ಸಿಗುವಂತದ್ದು. ಆ ಸೂಕ್ಷ್ಮದ ಎಳೆಯನ್ನು ಗ್ರಹಿಸಿದ ತಮ್ಮ ಕವಿ ಮನಕ್ಕೆ ಶರಣು !