ಚರಿತ್ರಾರ್ಹ ಅನಾಮಧೇಯರು

ಚರಿತ್ರಾರ್ಹ ಅನಾಮಧೇಯರು

ಸುರಿಯುವ ಮಳೆಯಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಬಹಿರಂಗ ವಾದ್ಯಗೋಷ್ಟಿಯಲ್ಲಿ ಗಿಟಾರ್ ನುಡಿಸಿದವ ಹಾಕಿದ್ದ ಅಂಗಿಯ ಕಲರ್ ಯಾವುದು? ಕೆಂಪು ಎಂದು ಥಟ್ ಅಂತ ಉತ್ತರ ಹೇಳಿ 1 ಕರೆಕ್ಟ್ ಎಂದು ಕ್ವಿಜ್ ಮಾಸ್ಟರನಿಂದ ಅಂಗೀಕಾರ ಪಡೆದವರು ಇದ್ದಾರೆ.
 
ಇಂತಹ ಜಾಣರು ಪ್ರತಿ ಕ್ವಿಜ್ ಕಾರ್ಯಕ್ರಮದಲ್ಲೂ ಅದು "ಥಟ್ ಅಂತ ಹೇಳಿ", “ಕೌನ್ ಬನೇಗ ಕರೋಡಪತಿ" ಅಥವಾ ಸಿದ್ಧಾರ್ಥ ಬಸು ಅಥವಾ ಮಿನ್ಹಾಝ್ ಮರ್ಚೆಂಟ್ ಹಿಂದೊಮ್ಮೆ ನಡೆಸುತ್ತಿದ್ದ ಪ್ರಶ್ನೋತ್ತರ ಕಾರ್ಯಕ್ರಮಗಳು ಆಗಿರಬಹುದು . ಮೂಡಿ ಬರುವ ಪ್ರಶ್ನೆಗಳಿಗೆ ಅಷ್ಟೇ ಸ್ಪೀಡಾಗಿ , ನಿಖರವಾಗಿ ಉತ್ತರ ಹೇಳುತ್ತಾರೆ . ಅಂತಹ ಮೇಧಾವಿಗಳ ಬಗ್ಗೆ ನನಗೆ ಅಸೂಯೆ, ಅಭಿಮಾನ ಒಟ್ಟಿಗೆ ಆಗುತ್ತಿದೆ . ಈ ಉತ್ತರಗಳಿಗೆ ಅವರು ಹೇಗೆ ಸಜ್ಜಾಗುತ್ತಿದ್ದರು ಎಂಬುದು ನನಗೆ ಬಿಡಿಸಲಾರದ ಪ್ರಶ್ನೆ . ಏಕೆಂದರೆ ನನ್ನ ಸಾಮಾನ್ಯ ಜ್ಞಾನ ಅಷ್ಟಕಷ್ಟೆ.
 
ಆದರೆ ಒಮ್ಮೊಮ್ಮೆ ನನಗೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ . ಉದಾಹರಣೆಗೆ ಮೊದಲು ಹಡಗು ಕಟ್ಟಿದವರು ಯಾರು? ಎಂಬ ಪ್ರಶ್ನೆಗೆ ಉತ್ತರ ತಡಕಾಡಿದರೆ ಸಿಗಬಹುದೇನೊ, ಆದರೆ, ದೋಣಿಯನ್ನ ಮೊದಲು ನಿರ್ಮಿಸಿದ ವ್ಯಕ್ತಿ ಯಾರು ಎಂಬುದಕ್ಕೆ ಎಲ್ಲಾದರೂ ಉತ್ತರ ಸಿಗಬಹುದೆ? ಅವನೊಬ್ಬ ಅನಾಮಿಕ ! ಆದರೆ ಎಂತಹ ಸಾಧನೆ ಕೊಟ್ಟುಹೋಗಿದ್ದಾನೆ ನೋಡಿ.
 
ನನಗೆ ಗೊತ್ತಿರುವಂತೆ ನಿಮಗೂ ಸಹ "ಅ ಆ ಇ ಈ " ಅಥವಾ / ಮತ್ತು " ಎ ಬಿ ಸಿ ಡಿ " ಗೊತ್ತು. ಬಳಸುತ್ತಲೂ ಇದ್ದೇವೆ. ಆದರೆ ಇದನ್ನು ಕಂಡುಹಿಡಿದವರು ಯಾರು? ಈ ಅಕ್ಷರ ಮಾಲೆಯನ್ನು ಬಳಸಿ ಲಕ್ಷಾಂತರ ಪುಸ್ತಕಗಳು ಬಂದಿವೆ, ಬರುತ್ತಿವೆ , ಬರಲಿವೆ. ಆದರೆ ವರ್ಣಮಾಲೆಯನ್ನು ರಚಿಸಿದ ವ್ಯಕ್ತಿ ಯಾರು ಎಂದು ಕೇಳಿದರೆ ಉತ್ತರ ಸತ್ಯವಾಗಿಯೂ ಗೊತ್ತಿಲ್ಲ.
 
“ಸತ್ಯ" ಎಂದಾಗ ಹರಿಶ್ಚಂದ್ರ ಥಟ್ ಅಂತ ನೆನಪಿಗೆ ಬರುತ್ತಾನೆ. ಅವನ ಸತ್ಯಾನ್ವೇಷಣೆಯ ಹಿಂದೆ ದಾರುಣ ಚರಿತ್ರೆಯೇ ಇದೆ. ಸಿನಿಮಾ ಬಂದಿದೆ, ನಾಟಕಗಳು ಆಡಿದ್ದಾಗಿದೆ. ಆದರೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸುಳ್ಳು ಹೇಳಿದವನು ಯಾರಾಗಿರಬಹುದು ? ನಿಜವಾದ ಉತ್ತರ ಯಾರಿಗಾದರೂ ಗೊತ್ತೆ? ರಾಜಕಾರಣಿಯೆ? ಸುಳ್ಳು ಹೇಳಿದರೆ ಬಚಾವಾಗಬಹುದು ಎಂದು ಮೊದಲು ಹೊಳೆದದ್ದು ಯಾರಿಗೆ? ಗೊತ್ತಿಲ್ಲ.
 
 
ಹೋಗಲಿ ಬಿಡಿ. ಆದರೆ ಹಾಲಿಗೆ ನೀರು ಬೆರೆಸಿ ಮಾರಿ ಹೆಚ್ಚೆಚ್ಚು ಲಾಭ ಪಡೆಯಬಹುದಾದ ದಂಧೆಯನ್ನು ಶುರು ಮಾಡಿದ ಮೊದಲ ಗೌಳಿಗ ಯಾರು? ಇದಾದ ನಂತರ ಅನೇಕರು ನೀರಿಗೆ ಹಾಲು ಬೆರೆಸಿ ಮಾರಿ ಕೈ ಸುಟ್ಟುಕೊಂಡರು ನಿಜ. ಆದರೆ ನೀರು ಹಾಲು ಮಾರಿದ ಮೊದಲಿಗ ಯಾರು ಎಂಬುದಕ್ಕೆ ಗೋಮಾತೆ ಆಣೆಯಾಗಿ ಉತ್ತರ ನನಗಂತೂ ಗೊತ್ತಿಲ್ಲ.
 
ಹಾಲು ನೀರಿನಿಂದ ಸ್ಫೂರ್ತಿ ಪಡೆದು ಅಕ್ಕಿಗೆ ಕಲ್ಲು ಬೆರೆಸುವ ಪ್ರವೃತ್ತಿ ಪ್ರಾರಂಭವಾಯಿತೆ? ಈ ಸ್ಫೂರ್ತಿ ಗರಿಗೆದರಿ ಮೆಣಸಿಗೆ ಪರಂಗಿ ಹಣ್ಣಿನ ಬೀಜ , ಚಾ ಪುಡಿಗೆ ಮರದ ಹೊಟ್ಟು ಬೆರೆಸುವ ತಂತ್ರಜ್ಞಾನ ಉದ್ಭವಿಸಿರಬಹುದು. ಆದರೆ ಇವುಗಳ ಕೀರ್ತಿಪುರುಷರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಚರಿತ್ರೆಯ ಪುಟಗಳು ದಿವ್ಯ ಮೌನ ವಹಿಸಿವೆ.
 
ಸಿನಿಮಾ ನೋಡೇ ಇರುತ್ತೀರಿ. ಅದನ್ನು ಯಾರು ಕಂಡುಹಿಡಿದರು ಎಂಬುದು ನಿಮಗೆ ಗೊತ್ತಿರಲೂಬಹುದು. ಭಾರತದ ಮಟ್ಟಿಗೆ ದಾದಾ ಸಾಹೆಬ್ ಫಾಲ್ಕೆ ಅವರೇ ಸಿನಿಮಾ ಪಿತಾಮಹ. ಅವರೇ ಮೊದಲ ಚಿತ್ರ ನಿರ್ಮಿಸಿದವರು. ನಿಮ್ಮ ನೆಚ್ಚಿನ ಹೀರೊ ಚಿತ್ರ ನೋಡಲು ನೀವು ಕಾಳಸಂತೆಯಲ್ಲಿ ಟಿಕೆಟ್ ಕೊಂಡಿರಲೂಬಹುದು. ಆದರೆ ಮೊದಲ ಬಾರಿಗೆ ಕಾಳಸಂತೆಯಲ್ಲಿ ಟಿಕೆಟ್ ಮಾರಿದವನು ಯಾರು? ಯಾವ ಚಿತ್ರ ಇತಿಹಾಸವೂ ಈ ದಾಖಲೆಯನ್ನು ಒದಗಿಸಿಲ್ಲ. ದೇವ್ ಆನಂದ್ ಅದರ ಬಗ್ಗೆ "ಕಾಲಾ ಬಜಾರ್" ಎಂಬ ಚಿತ್ರವನ್ನೇ ತಯಾರಿಸಿದರು . ಆದರೆ ಈ ಮೊದಲಿಗನ ಬಗ್ಗೆ ಅವರ ಸ್ಕ್ರಿಪ್ಟ್ ತಲೆಕೆಡಿಸಿಕೊಳ್ಳಲಿಲ್ಲ.
 
ಟಿಕೆಟ್ ಎಂದಾಗ ಟಿಕೆಟ್ ರಹಿತರನ್ನೂ ನೆನಪಿಸಿಕೊಳ್ಳಬೇಕಲ್ಲವೆ? ಹಾಗಿದ್ದಲ್ಲಿ , ವಿಶ್ವದ ಮೊದಲ ಟಿಕೆಟ್ ರಹಿತ ಪ್ರಯಾಣಿಕ ಯಾರು? ಥಟ್ ಅಂತ ಹೇಳಲು ಸಾಧ್ಯವಿಲ್ಲ. ಅವನು ಭಾರತೀಯನೇ ಆಗಿರಬಹುದು ಎಂಬುದು ನನ್ನ ಗುಮಾನಿ. ಆದರೆ ಪತ್ತೆ ಹಚ್ಚುವುದು ಹೇಗೆ? ನನ್ನ ಉತ್ತರದಾಹ ಇಲ್ಲಿಗೇ ಮುಗಿಯದು.
 
ಪ್ರತಿಭಟನೆಯ ರ್ಯಾಲಿಯಲ್ಲಿ ಸರ್ಕಾರಿ ಬಸ್ ಗೆ ಕಲ್ಲು ಹೊಡೆದ ಪ್ರಥಮ ಸತ್ಯಾಗ್ರಹಿ ಯಾರು ಎಂದು ಯಾವ ಚರಿತ್ರೆಯೂ ಹೇಳುವುದಿಲ್ಲ. ಅದನ್ನು ದಾಖಲು ಮಾಡಿದ್ದರೆ ಬಹುಶಃ ಆ ಪ್ರಥಮ ಕಲ್ಲನ್ನು ಮತ್ತು ಎಟು ತಿಂದ ವಾಹನವನ್ನು ಮ್ಯೂಸಿಯಂಗೆ ಸಾಗಿಸಬಹುದಾಗಿತ್ತು. ಅವು ಐತಿಹಾಸಿಕ ಸ್ಮರಣಿಕಗಳಾಗುತ್ತಿದ್ದವು.
 
ಪ್ರತಿಭಟನೆ ಎಂದಾಗ ಪ್ರತಿಕೃತಿ ದಹನವೂ ಸೇರುವುದಿಲ್ಲವೆ? ಅಂದಮೇಲೆ ಬೆಂಕಿ ಹಚ್ಚಿಸಿಕೊಂಡ ಜಗತ್ತಿನ ಪ್ರಪ್ರಥಮ ಪ್ರತಿಕೃತಿ ಯಾರದ್ದಾಗಿರಬಹುದು? ಆ ಗೌರವ ಯಾರಿಗೆ ಸಲ್ಲುತ್ತದೆ ಎಂಬುದು ತಿಳಿಯುವಂತೆಯೇ ಇಲ್ಲ. ಪ್ರತಿಕೃತಿಯಂತೂ ಪ್ರತಿಭಟನೆಯ ದಳ್ಳುರಿಯಲ್ಲಿ ದಹಿಸಿಹೋಗಿರುತ್ತದೆ ನಿಜ. ಆದರೆ ಆ ವ್ಯಕ್ತಿಯ ಹೆಸರಾದರೂ ಉಳಿಯಬೇಡವೆ? ಹಾಗೆ ಸುಟ್ಟುಹೋದ ಪ್ರಥಮ ಸರ್ಕಾರಿ ಬಸ್ ನ ಅವಶೇಷವನ್ನು ಮ್ಯೂಸಿಯಂನಲ್ಲಿ ಉಳಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
 
ಪ್ರತಿಭಟನೆ ಎಂದಮೇಲೆ ಕಲ್ಲು ಹೊಡೆಯುವುದಷ್ಟೇ ಅಲ್ಲ ತಾನೆ? ನಾಯಕನತ್ತ ಚಪ್ಪಲಿ , ಕೋಳಿಮೊಟ್ಟೆ ಮುಂತಾದವುಗಳನ್ನು ಎಸೆಯುವುದೂ ಇದೆ ಅಲ್ಲವೆ? ಅಂದಮೇಲೆ ಇದನ್ನು ಯಾರು ಪ್ರಾರಂಭಿಸಿದರು? ಎಸೆದ ಮೊದಲ ಕೋಳಿಮೊಟ್ಟೆ ಕೊಳೆತದ್ದೋ ಅಥವಾ ಆಮ್ಲೆಟ್ ಮಾಡಬಹುದಾಗಿದ್ದಂತಹ ಕ್ವಾಲಿಟಿ ಮೊಟ್ಟೆಯೊ? ಹಾಗೆಯೇ ಚಪ್ಪಲಿ ಹೊಸದೊ ಅಥವಾ ಹಳೆಯದೊ? ಗೊತ್ತಿಲ್ಲ. ಆದರೆ ಪರಂಪರೆ ಮಾತ್ರ ಮುಂದುವರೆದಿದೆ .
 
ಇಂತಹ ಪ್ರಶ್ನೆಗಳನ್ನು ಆಧರಿಸಿ "ಕೌನ್ ಬನೇಗ ಮಲ್ಟಿಕ್ರೋರ್ ಪತಿ" ಎಂಬ ಕ್ವಿಜ್ ಕಾರ್ಯಕ್ರಮವನ್ನು ಪುನೀತ್ ಅಥವಾ ಅಮಿತಾಬ್ ನಡೆಸಬಹುದು. ಆಗ ಅವರು ಚೆಕ್ ಗಳಿಗೆ ಸಹಿ ಹಾಕುವ ಪ್ರಶ್ನೆಯೇ ಇರದು. ಏಕೆಂದರೆ ಉತ್ತರಗಳೇ ಇಲ್ಲವಲ್ಲ.
 
ಅದಿರಲಿ , ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆ ಎಂದುಕೊಂಡ ಪ್ರಥಮ ವ್ಯಕ್ತಿ ಯಾರು? ನಾನೇ! ಅದಾದರೂ ನಿಮಗೆ ತಿಳಿದಿರಲಿ.