ಚರಿತ್ರೆ ಎಂದರೆ ಏನು?

ಚರಿತ್ರೆ ಎಂದರೆ ಏನು?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಇ.ಎಚ್.ಕಾರ್, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೨

ಚರಿತ್ರೆ ಎಂದರೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬ ಚರಿತ್ರೆಕಾರನಿಗೂ ಕಾಡಲೇಬೇಕಾದ ಹಾಗೂ ಎಂದೂ ಕೊನೆಯಾಗಲಾರದ ಪ್ರಶ್ನೆ. ಚರಿತ್ರೆ, ಚರಿತ್ರೆಕಾರ, ಚಾರಿತ್ರಿಕ ಸತ್ಯ ಮುಂತಾದ ಸಂಗತಿಗಳಿಗೆ ಅಂತಿಮ ಎನ್ನಬಹುದಾದ ತೀರ್ಮಾನಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಚರಿತ್ರೆ ಒಂದು ರಚನೆಯಾದರೂ ಅದು ಅಂತಿಮ ರಚನೆಯಲ್ಲ. ಆದರೆ ಚರಿತ್ರೆ ರಚನೆ ಇರುವುದೇ ಪುನಾರಚನೆಗಾಗಿ ಎನ್ನುವುದು ವಾಸ್ತವ. ಕಾರ್ ಚರಿತ್ರೆಯ ಜೀವಂತಿಕೆಯನ್ನು ಸರಿಯಾಗಿಯೇ ಗ್ರಹಿಸಿದ ಕಾರಣದಿಂದಾಗಿ ಇದನ್ನೊಂದು ನಿರಂತರ ಪ್ರಕ್ರಿಯೆ ಹಾಗೂ ಇದು ಕೊನೆಯಾಗದ ಸಂಭಾಷಣೆ ಎಂಬುದಾಗಿ ವ್ಯಾಖ್ಯಾನಿಸಿದರು. ತನಗಿಂತ ಹಿಂದಿನ ಹಾಗೂ ಸಮಕಾಲೀನ ಸಮಾಜ ವಿಜ್ಞಾನಿಗಳ ಬರಹಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ ಹೊಸ ವ್ಯಾಖ್ಯಾನದ ಮೂಲಕ ತಮ್ಮ ವಾದವನ್ನು ಮುಂದಿಟ್ಟರು.

ಕಾರ್ ಅವರ ಮೂಲ ಉದ್ದೇಶ ಚರಿತ್ರೆ ಚಾರಿತ್ರಿಕ ಸತ್ಯಗಳ ವ್ಯಾಖ್ಯಾನವೇ ಹೊರತು ಚರಿತ್ರೆಯ ದಿನಚರಿಯನ್ನು ಒಪ್ಪಿಸುವುದಲ್ಲ. ಚರಿತ್ರೆಯನ್ನು ಅರ್ಥೈಸಿಕೊಳ್ಳುವ ಚರಿತ್ರೆಕಾರನ ಚಾರಿತ್ರಿಕ ದೃಷ್ಟಿಕೋನ, ಆ ದೃಷ್ಟಿಕೋನ ಸಾಧ್ಯವಾಗುವುದಕ್ಕೆ ಕಾರಣವಾಗುವ ಸಾಮಾಜಿಕ ಪರಿಸರ ಹಾಗೂ ಮುಂದಿನ ಓದುಗರಿಗೆ ನೀಡಬಹುದಾದ ಹೊಸ ವಿಚಾರ ಈ ಮೂರು ಅಂಶಗಳು ಪ್ರಧಾನ ವಸ್ತುಗಳಾಗಿದ್ದವು. ಚರಿತ್ರೆಯ ಗ್ರಹಿಕೆ ಕಾಲದಿಂದ ಕಾಲಕ್ಕೆ ಯಾವ ರೀತಿ ಬದಲಾವಣೆ ಹೊಂದುತ್ತಾ ಬಂದಿದೆ ಹಾಗೂ ಅದಕ್ಕಿರುವ ಕಾರಣಗಳೇನು? ಎನ್ನುವ ಹುಡುಕಾಟ ನಡೆಸುವ ಈ ಕೃತಿ ಎಲ್ಲಾ ಕಾಲಕ್ಕೂ ಪ್ರಸ್ತುತ. ಇವರ ಚಿಂತನೆಗಳು ಆಧುನಿಕೋತ್ತರವಾದಿಗಳ ಕಟು ವಿಮರ್ಶೆಗೆ ಒಳಗಾದರೂ ಇಂದಿಗೂ ತನ್ನ ಮಹತ್ವವನ್ನು ಕಳೆದುಕೊಳ್ಳಲಿಲ್ಲ. ಈ ಬಗ್ಗೆ ಅವರು ವಿಷಯವನ್ನು ಸಮರ್ಥವಾಗಿ ಅವರ ಸೈದ್ಧಾಂತಿಕಅವರ ಗಟ್ಟಿತನವೇ ಕಾರಣ. ಈ ಎಲ್ಲಾ ಕಾರಣಗಳಿಂದಾಗಿ ಪ್ರಸ್ತುತ ಕೃತಿಯು ಚರಿತ್ರೆ ಪ್ರವೇಶಿಕೆ ಹಾಗೂ ಚರಿತ್ರೆ ಬರವಣಿಗೆಗೆ ತಿರುವು ತಂದುಕೊಟ್ಟ ಎಂಬುದಾಗಿ ಚಿತ್ರ ಸಂಶೋಧನಾ ಲೋಕದಲ್ಲಿ ಗುರುತಿಸಲ್ಪಟ್ಟಿದೆ. ಇಂಥ ಮಹತ್ವದ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ ಬಿ. ಸುಜ್ಞಾನಮೂರ್ತಿ ಅಭಿನಂದನಾರ್ಹರು. ಎಂದು ಪುಸ್ತಕದ ಬೆನ್ನುಡಿಯಲ್ಲಿ ಡಾ. ಕೆ. ಮೋಹನಕೃಷ್ಣ ರೈ ಅಭಿಪ್ರಾಯಪಡುತ್ತಾರೆ.